More

    ರಾಮ ಮಂದಿರ ಕುರಿತು ಸ್ಯಾಮ್​ ಪಿತ್ರೋಡಾ ಹೇಳಿಕೆ ವಿವಾದ: ಕಾಂಗ್ರೆಸ್​ ನೀಡಿದ ಸ್ಪಷ್ಟನೆ ಏನು?

    ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಮಹತ್ವವನ್ನು ಪ್ರಶ್ನಿಸುವ ಕಾಂಗ್ರೆಸ್​ನ ಹಿರಿಯ ನಾಯಕ ಸ್ಯಾಮ್ ಪಿತ್ರೋಡಾ ಅವರ ಇತ್ತೀಚಿನ ಹೇಳಿಕೆಯಿಂದ ಕಾಂಗ್ರೆಸ್ ಶುಕ್ರವಾರ ಅಂತರವನ್ನು ಕಾಯ್ದುಕೊಂಡಿದೆ. ಈ ವಿಷಯದಲ್ಲಿ ಸ್ಯಾಮ್ ಪಿತ್ರೋಡಾ ಅವರ ಅಭಿಪ್ರಾಯಗಳು ಪಕ್ಷದ ನಿಲುವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ಸ್ಪಷ್ಟಪಡಿಸಿದ್ದಾರೆ.

    ಗುರುವಾರ ಪಿತ್ರೋಡಾ ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳು ಅವರ ಸ್ವಂತದ್ದಾಗಿದ್ದು, ಪಕ್ಷದ ಅಧಿಕೃತ ಅಭಿಪ್ರಾಯಗಳನ್ನು ಪ್ರತಿನಿಧಿಸುವುದಿಲ್ಲ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

    “ಪಿತ್ರೋಡಾ ಅವರು ಕಾಂಗ್ರೆಸ್ ದೃಷ್ಟಿಕೋನವನ್ನು ಪ್ರತಿನಿಧಿಸುವುದಿಲ್ಲ, ಅದು ಅವರ ವೈಯಕ್ತಿಕ ದೃಷ್ಟಿಕೋನ, ಪಿತ್ರೋಡಾ ಅವರು ಕಾಂಗ್ರೆಸ್ ಪಕ್ಷದ ಪರವಾಗಿ ಮಾತನಾಡುವುದಿಲ್ಲ” ಎಂದೂ ಅವರು ಹೇಳಿದ್ದಾರೆ.

    ಭಾರತೀಯ ಸಾಗರೋತ್ತರ ಕಾಂಗ್ರೆಸ್‌ನ ಪ್ರಸ್ತುತ ಅಧ್ಯಕ್ಷರಾಗಿರುವ ಪಿತ್ರೋಡಾ ಅವರು ನಿರುದ್ಯೋಗದಂತಹ ಸಮಸ್ಯೆಗಳನ್ನು ಬದಿಗಿಟ್ಟು ರಾಮ ಮಂದಿರದ ಮೇಲೆ ಗಮನ ಕೇಂದ್ರೀಕರಿಸುವುದು ತಮಗೆ ಬೇಸರ ಉಂಟು ಮಾಡುತ್ತದೆ ಎಂದು ಹೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದರು.

    ಜನವರಿ 22 ರಂದು ನಡೆಯಲಿರುವ ರಾಮ ಮಂದಿರದ ಉದ್ಘಾಟನೆಗೆ ಕೆಲವೇ ದಿನಗಳ ಮೊದಲು ಅವರು ಈ ಹೇಳಿಕೆ ನೀಡಿದ್ದಾರೆ, ಅಂದು ಪ್ರಧಾನಿ ನರೇಂದ್ರ ಮೋದಿ ಅವರು ದೇವಾಲಯದ ಗರ್ಭಗುಡಿಯಲ್ಲಿ ರಾಮ ಲಲ್ಲಾ ವಿಗ್ರಹವನ್ನು ಸ್ಥಾಪಿಸಲಿದ್ದಾರೆ.

    ಮುಂಬರುವ 2024 ರ ಲೋಕಸಭೆ ಚುನಾವಣೆ ಮತ್ತು ರಾಜಕೀಯದಲ್ಲಿ ಧರ್ಮಕ್ಕೆ ಹೆಚ್ಚಿನ ಒತ್ತು ನೀಡುವ ಬಗ್ಗೆ ಪಿತ್ರೋಡಾ ಆತಂಕಗಳನ್ನು ವ್ಯಕ್ತಪಡಿಸಿದ್ದರು.

    “ಧರ್ಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದರ ಬಗೆಗೆ ನಾನು ಆತಂಕ ಹೊಂದಿದ್ದೇನೆ. ಪ್ರಜಾಪ್ರಭುತ್ವವನ್ನು ದುರ್ಬಲ ಮಾಡುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ನಾವು ತಪ್ಪು ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎಂಬ ಸಂಕೇತಗಳು ನನಗೆ ಸಿಗುತ್ತಿವೆ. ಇಡೀ ರಾಷ್ಟ್ರವು ರಾಮನ ಮೇಲೆ ದೇವಸ್ಥಾನ ಮತ್ತು ರಾಮಜನ್ಮಭೂಮಿ ಗಮನ ನೆಟ್ಟಿರುವುದು ನನಗೆ ಬೇಸರ ತರಿಸುತ್ತದೆ” ಎಂದು ಅವರು ಹೇಳಿದರು.

    ವೈಯಕ್ತಿಕ ಧಾರ್ಮಿಕ ನಂಬಿಕೆಗಳು ಶಿಕ್ಷಣ, ಉದ್ಯೋಗ, ಆರ್ಥಿಕ ಬೆಳವಣಿಗೆ, ಹಣದುಬ್ಬರ, ಆರೋಗ್ಯ, ಪರಿಸರ ಕಾಳಜಿ ಮತ್ತು ಮಾಲಿನ್ಯದಂತಹ ರಾಷ್ಟ್ರೀಯ ಸಮಸ್ಯೆಗಳನ್ನು ಮರೆಮಾಡಬಾರದು ಎಂದೂ ಪಿತ್ರೋಡಾ ಹೇಳಿದ್ದರು.

    ಪಿತ್ರೋಡಾ ಅವರ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ, “ಭಗವಾನ್ ರಾಮನು ಕೇವಲ ಕಾಲ್ಪನಿಕ ಪಾತ್ರ ಎಂದುಕೊಂಡ ಜನರು ಇವರಾಗಿದ್ದಾರೆ. ಸ್ಯಾಮ್ ಪಿತ್ರೋಡಾ ಅವರಂತಹ ಜನರು ಈ ದೇಶದಿಂದ, ಈ ದೇಶದ ನೈತಿಕತೆ ಮತ್ತು ಮೌಲ್ಯಗಳಿಂದ ಸಂಪರ್ಕ ಕಡಿತ ಮಾಡಿಕೊಂಡಿದ್ದಾರೆ. ಅವರು ಸಂಪರ್ಕ ಹೊಂದಿದ್ದರೆ, ರಾಮಾಯಣ ನಮಗೆ ಏನು ಕಲಿಸಿದೆ ಎಂಬುದು ಅವರಿಗೆ ತಿಳಿಯುತ್ತಿತ್ತು, ಅವರು ರಾಮರಾಜ್ಯದ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳುತ್ತಿದ್ದರು” ಎಂದು ಹೇಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts