

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2024 ಆರಂಭಕ್ಕೆ ವೇದಿಕೆ ಸಜ್ಜಾಗಿದೆ. ಈ ಮೆಗಾ ಟೂರ್ನಮೆಂಟ್ ಮಾರ್ಚ್ 22 ರಂದು ಆರಂಭವಾಗಲಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಎಂ.ಎಸ್. ಧೋನಿ ಸೇರಿದಂತೆ ಸ್ಟಾರ್ ಆಟಗಾರರಿಂದ ಐಪಿಎಲ್ ಟೂರ್ನಿಯು ಕಳೆಗಟ್ಟಲಿದೆ. ಅತಿ ದೊಡ್ಡ ಕ್ರಿಕೆಟ್ ಈವೆಂಟ್ ಕಣ್ತುಂಬಿಕೊಳ್ಳಲು ಕ್ರೀಡಾಭಿಮಾನಿಗಳು ಎದುರು ನೋಡುತ್ತಿರುವ ಈ ಸಂದರ್ಭದಲ್ಲಿ ಸ್ಫೋಟಕ ಸಂಗತಿಯೊಂದು ಬಯಲಾಗಿದೆ.
ಮುಂಬೈ ತಂಡದ ನಾಯಕತ್ವ ಸ್ಥಾನದಿಂದ ರೋಹಿತ್ ಶರ್ಮರನ್ನು ಕೆಳಗಿಳಿಸಲು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಕಾರಣ ಎಂಬ ಆರೋಪ ಕೇಳಿಬಂದಿದೆ. ಇದೀಗ ಈ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದೆ.
ರೋಹಿತ್ ಶರ್ಮಾ ಅವರು 2023ರ ಐಪಿಎಲ್ ಟೂರ್ನಿವರೆಗೂ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದರು. ತಂಡವನ್ನು ಬಹಳ ಬುದ್ಧಿವಂತಿಕೆಯಿಂದ ಮುನ್ನಡೆಸಿದರು. ರೋಹಿತ್ ನಾಯಕತ್ವದಡಿಯಲ್ಲಿ ಮುಂಬೈ ತಂಡ ಐದು ಬಾರಿ ಐಪಿಎಲ್ ಚಾಂಪಿಯನ್ ಆಗಿದೆ. ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ ಟ್ರೋಫಿ ಜಯಿಸಿರುವ ಹೆಗ್ಗಳಿಕೆಗೆ ಮುಂಬೈ ಪಾತ್ರವಾಗಿದೆ. 2023ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಟ್ರೋಫಿ ಗೆಲ್ಲುವ ಮೂಲಕ ಈ ದಾಖಲೆಯನ್ನು ಸರಿಗಟ್ಟಿತು. ಆದರೆ, ಮುಂಬೈ ತಂಡವನ್ನು ತಡೆಯಲಾಗದ ಶಕ್ತಿಯನ್ನಾಗಿ ಮಾಡಿದ ರೋಹಿತ್ ಶರ್ಮ ಅವರನ್ನು ಮುಂಬೈ ಮ್ಯಾನೇಜ್‌ಮೆಂಟ್ ನಾಯಕತ್ವದಿಂದ ದಿಢೀರ್ ವಜಾಗೊಳಿಸಿತು. ಇದು ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದಲ್ಲದೆ, ಸಾಕಷ್ಟು ಚರ್ಚೆಗೆ ಗ್ರಾಸವಾಯಿತು.
ರೋಹಿತ್ ಶರ್ಮರನ್ನು ಕೆಳಗಿಳಿಸಿ ಆ ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯರನ್ನು ಕೂರಿಸಲಾಗಿದೆ. ಹೀಗಾಗಿ ಹಾರ್ದಿಕ್ ಮೇಲೆ ರೋಹಿತ್ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಲೇ ಇದಾರೆ. ರೋಹಿತ್ ಇಲ್ಲದೆ ಮುಂಬೈ ಇಂಡಿಯನ್ಸ್ ತಂಡ ಏನೇನು ಅಲ್ಲ ಎಂದು ಅಭಿಮಾನಿಗಳು ಹೇಳಿದ್ದಾರೆ. ಇದೆಲ್ಲದರ ನಡುವೆ ಇದೀಗ ಮತ್ತೊಂದು ಸ್ಫೋಟಕ ಸಂಗತಿ ಬಯಲಾಗಿದೆ. ರೋಹಿತ್ರನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿಸಲು ಸಚಿನ್ ಕಾರಣ ಎಂದು ದೂರಲಾಗಿದೆ. ಸಚಿನ್ಗೆ ರೋಹಿತ್ ಅವರನ್ನು ಕಂಡರೆ ಆಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇದಕ್ಕೆ ಕಾರಣವನ್ನು ವಿವರಿಸಿ ಎಕ್ಸ್ ಖಾತೆದಾರರೊಬ್ಬರು ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
ಸಚಿನ್ಗೆ ಪುತ್ರ ವ್ಯಾಮೋಹ
ದೇವ್ ಹೆಸರಿನ ಎಕ್ಸ್ ಖಾತೆದಾರರೊಬ್ಬರು ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ನಾನಿದ್ದನ್ನು ಹೇಳುವಾಗ ಕೆಲ ಜನರು ನನ್ನನ್ನು ಮೂರ್ಖನೆಂದು ಹೇಳಬಹುದು, ಆದರೆ, ನಾನಿದನ್ನು ಹೇಳೇ ಹೇಳುತ್ತೇನೆ. ರೋಹಿತ್ ಶರ್ಮರನ್ನು ಮುಂಬೈ ತಂಡದ ನಾಯಕತ್ವದಿಂದ ಕೆಳಗಿಳಿಸಲು ಸಚಿನ್ ಮುಖ್ಯ ಕಾರಣ. ಕಳೆದ ಎರಡು ವರ್ಷಗಳಿಂದ ರೋಹಿತ್ ಕಂಡರೆ ಸಚಿನ್ಗೆ ಆಗುತ್ತಿಲ್ಲ. ಮುಂಬೈ ತಂಡದಲ್ಲಿ ಪುತ್ರ ಅರ್ಜುನ್ ತೆಂಡೂಲ್ಕರ್ಗೆ ಅವಕಾಶ ನೀಡದೇ ಇರುವುದು ಕಾರಣ ಇರಬಹುದು. ಇದಲ್ಲದೆ, 2 ಪಂದ್ಯಗಳ ನಂತರ ಅರ್ಜುನ್ರನ್ನು ತಂಡದಿಂದ ಕೈಬಿಡಲಾಯಿತು. ಇದು ಸಚಿನ್ ಅಸಮಾಧಾನಕ್ಕೆ ಕಾರಣ ಇರಬಹುದು.
ರೋಹಿತ್ ಬಗ್ಗೆ ಒಂದೂ ಪೋಸ್ಟ್ ಇಲ್ಲ ಕ್ರಿಕೆಟ್ನಲ್ಲಿ ಘಟಿಸುವ ಪ್ರತಿಯೊಂದರ ಬಗ್ಗೆಯೂ ನಿಯಮಿತವಾಗಿ ಪೋಸ್ಟ್ ಮಾಡುವ ಸಚಿನ್, ವಿಶ್ವಕಪ್ನಲ್ಲಿ ಬಾಂಗ್ಲಾದೇಶದ ವಿರುದ್ಧ ಅಜೇಯ 51 ರನ್ ಬಾರಿಸಿದಾಗ, ಪಾಕ್ ವಿರುದ್ಧ 86 ರನ್ ಗಳಿಸಿದಾಗ, ಇಂಗ್ಲೆಂಡ್ ವಿರುದ್ಧ 87 ಮತ್ತು ಅಫ್ಘಾನಿಸ್ತಾನದ ವಿರುದ್ಧ 133 ರನ್ ಕಲೆಹಾಕಿದಾಗ ಒಂದೇ ಒಂದು ಪೋಸ್ಟ್ ಹಾಕಲಿಲ್ಲ. ಆದರೆ, ವಿರಾಟ್ ಕೊಹ್ಲಿ ಮತ್ತು ಶುಭಮನ್ ಗಿಲ್ ವಿಚಾರದಲ್ಲಿ ಮಾತ್ರ ಐಪಿಎಲ್ನಿಂದ ಹಿಡಿದು ಎಲ್ಲ ಪಂದ್ಯಗಳಲ್ಲೂ ವಿಶೇಷ ಸಂದರ್ಭದಲ್ಲಿ ಏನಾದರೊಂದು ಪೋಸ್ಟ್ ಮಾಡಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ರೋಹಿತ್ ಕುರಿತು ಸಚಿನ್ ಒಂದೇ ಒಂದು ಪೋಸ್ಟ್ ಮಾಡಿಲ್ಲ. ವಿಶ್ವಕಪ್ ಸಂದರ್ಭದಲ್ಲಂತೂ ಹೇಳೋ ಹಾಗೇ ಇಲ್ಲ. ಸಚಿನ್ ಕೊನೆಯದಾಗಿ ರೋಹಿತ್ ಬಗ್ಗೆ ಪೋಸ್ಟ್ ಮಾಡಿದ್ದು, 2022, ಏಪ್ರಿಲ್ 30ರಂದು. ಅಂದು ರೋಹಿತ್ ಶರ್ಮಾ ಹುಟ್ಟುಹಬ್ಬ. ಆದರೆ, ರೋಹಿತ್ ಅವರು ಉತ್ತಮ ಪ್ರದರ್ಶನ ನೀಡಿದ ಪ್ರತಿ ಬಾರಿಯೂ, ತಮ್ಮ ಹಿರಿಯರನ್ನು ನೆನೆಯುತ್ತಾರೆ ಮತ್ತು ತಮ್ಮ ಸಹ ಆಟಗಾರರಿಗೆ ಗೌರವ ನೀಡುತ್ತಾರೆ. ರಾಜ್‌ಕೋಟ್ ಟೆಸ್ಟ್‌ನ ಸಮಯದಲ್ಲಿಯೂ ಜಡೇಜಾ ತಮ್ಮ 100 ಪೂರ್ಣಗೊಳಿಸುವ ಸಲುವಾಗಿ ರೋಹಿತ್ ಕಾಯುತ್ತಿದ್ದರು. ಈ ವೇಳೆ ರೋಹಿತ್ರನ್ನು ಸೇರಿಸಿ ಸಚಿನ್ ಟ್ವೀಟ್ ಮಾಡಬಹುದಿತ್ತು. ಆದರೆ ಮಾಡಲಿಲ್ಲ.
ಇನ್‌ಸ್ಟಾದಲ್ಲಿ ಅನ್ಫಾಲೋ ಸಚಿನ್ ಅವರು ಅವರವರ ಜನ್ಮದಿನದಂದು ಎಲ್ಲರಿಗೂ ಶುಭಾಶಯಗಳನ್ನು ಕೋರುತ್ತಾರೆ ಆದರೆ, ರೋಹಿತ್‌ಗೆ ಮಾತ್ರ ಕೋರಿಲ್ಲ. ಸುರೇಶ್ ರೈನಾ, ಯೂಸುಫ್, ಕೊಹ್ಲಿ, ಗಿಲ್, ಇಶಾನ್, ಎಂಎಸ್ ಧೋನಿ, ಹರ್ಭಜನ್ ಸಿಂಗ್, ಜಡೇಜಾ ಮತ್ತು ಸಿರಾಜ್ ಅವರಿಗೆ ಶುಭ ಹಾರೈಸಿದ್ದಾರೆ. ಕೊಹ್ಲಿ, ಎಬಿಡಿ, ಎಂಎಸ್ ಧೋನಿ, ಯುವರಾಜ್, ರೈನಾ, ಭಜ್ಜಿ ಅವರನ್ನು ಇನ್ಸ್ಟಾಗ್ರಾಂನಲ್ಲಿ ಹಿಂಬಾಲಿಸುವ ಸಚಿನ್, ರೋಹಿತ್ ಅವರನ್ನು ಅನುಸರಿಸುತ್ತಿಲ್ಲ. ಇನ್ನೂ ಅಚ್ಚರಿಯ ಸಂಗತಿ ಏನೆಂದರೆ, ಸಚಿನ್ ಪುತ್ರ ಅರ್ಜುನ್ ಕೂಡ ರೋಹಿತ್ರನ್ನು ಅನ್ಫಾಲೋ ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ, ಇಶಾನ್ ಸೇರಿದಂತೆ ಪ್ರತಿಯೊಬ್ಬ ಮುಂಬೈ ಇಂಡಿಯನ್ಸ್ ಆಟಗಾರರು ಮತ್ತು ಭಾರತೀಯ ಕ್ರಿಕೆಟಿಗರನ್ನು ಒಳಗೊಂಡಂತೆ 530ಕ್ಕೂ ಅಧಿಕ ಜನರನ್ನು ಅರ್ಜುನ್ ಇನ್‌ಸ್ಟಾದಲ್ಲಿ ಅನುಸರಿಸುತ್ತಾರೆ. ಆದರೆ, ರೋಹಿತ್ರನ್ನು ಮಾತ್ರ ಅನುಸರಿಸುತ್ತಿಲ್ಲ.
ಅಂದಹಾಗೆ ಈ ಎಲ್ಲ ಸಂಗತಿಗಳು ಕಾಕತಾಳೀಯವಲ್ಲ. ಈ ಬಾರಿಯ ಐಪಿಎಲ್‌ನಲ್ಲಿ ಏನಾಗುತ್ತದೆ ಎಂದು ಕಾದು ನೋಡೋಣ. ಮುಂಬೈ ಇಂಡಿಯನ್ಸ್ ಈಗಾಗಲೇ ಈ ಋತುವಿನಲ್ಲಿ ಅನೇಕ ಸ್ಟಾರ್ ಬೌಲರ್‌ಗಳನ್ನು ಹೊಂದಿದೆ. ಒಂದು ವೇಳೆ ಅರ್ಜುನ್, ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ 4 ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳನ್ನು ಆಡಿದರೆ, ಇದು ಏಕೆ ಸಂಭವಿಸಿತು ಮತ್ತು ಇದರ ಹಿಂದೆ ಯಾರಿದ್ದಾರೆ ಎಂಬುದು ಇಡೀ ಕಥೆಯನ್ನು ಬಿಚ್ಚಿಡುತ್ತದೆ ಎಂದು ದೇವ್ ಹೇಳಿದ್ದಾರೆ. (ಏಜೆನ್ಸೀಸ್)