ಮಗನನ್ನು ಕರೆತರಲು 1400 ಬೈಕ್​ ಓಡಿಸಿದ್ದ ಅಮ್ಮ ಮತ್ತೆ ಸುದ್ದಿಯಲ್ಲಿ! ಆಗ ಕರೊನಾ, ಈಗ ಯೂಕ್ರೇನ್​!

rajiya
Published on

ತೆಲಂಗಾಣ: ಕೋವಿಡ್​ ಮೊದಲನೆಯ ಅಲೆಯಲ್ಲಿ ಅಂದರೆ 2020ರ ಮಾರ್ಚ್​ ತಿಂಗಳಿನಲ್ಲಿ, ತೆಲಂಗಾಣದ ರಜಿಯಾ ಬೇಗಂ ಎಂಬ ಮಹಿಳೆ ಭಾರಿ ಸುದ್ದಿಯಾಗಿದ್ದರು. ಇದಕ್ಕೆ ಕಾರಣ, ಲಾಕ್​ಡೌನ್​ ಉಂಟಾಗಿದ್ದರಿಂದ ಸಾರಿಗೆ ಸೌಕರ್ಯ ಇಲ್ಲದಿದ್ದ ಹಿನ್ನೆಲೆಯಲ್ಲಿ, ನೆಲ್ಲೂರಿನಲ್ಲಿ ಸಿಲುಕಿದ್ದ ಮಗ ನಿಜಾಮುದಿನ್ ಅಮಾನ್​ನನ್ನು ಕರೆದುಕೊಂಡು ಬರುವ ಸಲುವಾರು 1,400 ಕಿ.ಮೀ ದೂರ ಬೈಕ್​ನಲ್ಲಿ ಹೋಗಿದ್ದರು ಎಂಬ ಸುದ್ದಿಯಾಗಿತ್ತು. ಈ ಸುದ್ದಿಯ ಬಗ್ಗೆ ಹಲವಾರು ಮಂದಿ ಹಲವಾರು ರೀತಿಯಲ್ಲಿ ಅನುಮಾನ ವ್ಯಕ್ತಪಡಿಸಿದ್ದರೂ ಆ ಸುದ್ದಿ ಮಾತ್ರ ಬಹಳ ವೈರಲ್​ ಆಗಿತ್ತು.

ಅವರೇ ಈಗ ಮತ್ತೆ ಸುದ್ದಿಯಲ್ಲಿ ಇದ್ದಾರೆ. ಈಗ ಸುದ್ದಿಯಾಗಿರುವುದಕ್ಕೆ ಕಾರಣ, ಯೂಕ್ರೇನ್​ನಲ್ಲಿ ಅವರ 19 ವರ್ಷದ ಮಗ ನಿಜಾಮುದಿನ್ ಅಮಾನ್​ನನ್ನು ಸಿಲುಕಿದ್ದಾನೆ. ಆಗ ಕೋವಿಡ್​ನಲ್ಲಿ ಸಿಲುಕಿದ್ದ ಪುತ್ರ ಈಗ ಯುದ್ಧದ ಸಮಯದಲ್ಲಿ ಯೂಕ್ರೇನ್​ನಲ್ಲಿ ಸಿಲುಕಿದ್ದು, ಇದುವರೆಗೆ ಭಾರತಕ್ಕೆ ಮರಳಿಲ್ಲ. ಎಂಬಿಬಿಎಸ್​ ಓದಲು ಯೂಕ್ರೇನ್​ಗೆ ತೆರಳಿದ್ದ ನಿಜಾಮುದೀನ್​.

ತೆಲಂಗಾಣದ ನಿಜಾಮಾಬಾದ್‌ನ ಶಾಲಾ ಶಿಕ್ಷಕಿಯಾಗಿರುವ ರಜಿಯಾ, ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್, ಗೃಹ ಸಚಿವ ಮೊಹಮ್ಮದ್ ಅಲಿ ಮತ್ತು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಮಗನನ್ನು ಭಾರತಕ್ಕೆ ಸ್ಥಳಾಂತರಿಸಲು ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಈಶಾನ್ಯ ಯೂಕ್ರೇನ್‌ನಲ್ಲಿರುವ ಸುಮಿ ಎಂಬ ನಗರದಲ್ಲಿ ಮಗ ಇರುವುದಾಗಿ ಅವರು ಹೇಳಿದ್ದಾರೆ.

ಇತರ ಭಾರತೀಯ ವಿದ್ಯಾರ್ಥಿಗಳೊಂದಿಗೆ ನನ್ನ ಮಗನನ್ನು ರಕ್ಷಿಸುವಂತೆ ರಜಿಯಾ ಬೇಗಂ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಮನವಿ ಮಾಡಿಕೊಂಡಿದ್ದಾರೆ. 15 ವರ್ಷಗಳ ಹಿಂದೆಯೇ ತಮ್ಮ ಪತಿಯನ್ನು ಕಳೆದುಕೊಂಡಿರುವ ರಜಿಯಾ, ಇರುವ ಒಬ್ಬನೇ ಮಗನಿಗಾಗಿ ಕಣ್ಣೀರಿಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net