More

    ಪ್ರಿಯಾಂಕಾ ಗಾಂಧಿಯನ್ನು ‘ಅಕ್ಕ’ ಎನ್ನುತ್ತಿದ್ದ ನಿದಾ ಖಾನ್‌ ಬಿಜೆಪಿಗೆ! ಕಾರಣ ಬಿಚ್ಚಿಟ್ಟ ತ್ರಿವಳಿ ತಲಾಖ್‌ ಸಂತ್ರಸ್ತೆ…

    ಲಖನೌ: ಪಂಚರಾಜ್ಯಗಳ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯದಲ್ಲಿ ಬಿರುಸಿನ ಚಟುವಟಿಕೆ ಶುರುವಾಗಿದೆ. ಅದರಲ್ಲಿಯೂ ಸದ್ಯ ಎಲ್ಲರ ಗಮನ ಸೆಳೆದಿರುವುದು ಉತ್ತರ ಪ್ರದೇಶ. ಇಲ್ಲಿಯ ರಾಜಕೀಯ ವಲಯದಲ್ಲಿ ಇದೀಗ ಭಾರಿ ಕುತೂಹಲದ ಬೆಳವಣಿಗೆ ನಡೆದಿದ್ದು, ತ್ರಿವಳಿ ತಲಾಖ್‌ ಸಂತ್ರಸ್ತೆ ನಿದಾ ಖಾನ್‌ ಬಿಜೆಪಿ ಸೇರಿದ್ದಾರೆ. ಇತ್ತಿಹಾದ್-ಎ-ಮಿತಾತ್ ಮಂಡಳಿಯ ಮುಖ್ಯಸ್ಥ ಮೌಲಾನಾ ತೌಖೀರ್ ರಾಜಾ ಖಾನ್ ಅವರ ಸೊಸೆಯಾಗಿರುವ ನಿದಾ ಬಿಜೆಪಿಯನ್ನು ಸೇರುವ ಮೂಲಕ ಕಾಂಗ್ರೆಸ್‌ಗೂ ಶಾಕ್ ಕೊಟ್ಟಿದ್ದಾರೆ.

    ಸಮಾಜ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್​ರ ಸೊಸೆ ಅಪರ್ಣಾ ಯಾದವ್ ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದಾದ ಕೆಲವೇ ದಿನಗಳಲ್ಲಿ ನಿದಾ ಖಾನ್ ಸಹ ಬಿಜೆಪಿಗೆ ಸೇರಿರುವುದು ಬಹಳ ಕುತೂಹಲ ಮೂಡಿಸಿದೆ.

    ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ನಿದಾ ಅಕ್ಕ ಎಂದೇ ಕರೆಯುತ್ತಿದ್ದರು. ಆದರೆ ಈಗ ಏಕಾಏಕಿಯಾಗಿ ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿದ್ದಾರೆ. ಅದಕ್ಕೆ ಅವರು ಕೊಟ್ಟಿರುವ ಉತ್ತರ ಏನೆಂದರೆ, ‘ಉತ್ತರ ಪ್ರದೇಶದ ಬಿಜೆಪಿ ಆಡಳಿತದಲ್ಲಿ ಮುಸ್ಲಿಂ ಮಹಿಳೆಯರಿಗೆ ಹೆಚ್ಚು ಸುರಕ್ಷೆಯಿದೆ. ತ್ರಿವಳಿ ತಲಾಖ್ ವಿರುದ್ಧ ಬಿಜೆಪಿ ತಳೆದಿರುವ ನಿಲುವು ನಾನು ಪಕ್ಷವನ್ನು ಬೆಂಬಲಿಸಲು ಮುಖ್ಯ ಕಾರಣ’ ಎಂದಿದ್ದಾರೆ.

    ಇದೇ ವೇಳೆ ಚುನಾವಣಾ ಪ್ರಚಾರದ ಸಮಯದಲ್ಲಿ ಪ್ರಿಯಾಂಕಾ ಗಾಂಧಿ ಹೇಳಿದ್ದ ‘ಲಡ್ಕಿ ಹೂಂ, ಲಡ್ ಸಕ್ತಿ ಹೂಂ’ (ನಾನು ಹುಡುಗಿ, ಹೋರಾಡಬಲ್ಲೆವು) ಎಂಬ ಘೋಷಣೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ನಿದಾ, ‘ಚುನಾವಣೆಗಾಗಿ ಕಾಂಗ್ರೆಸ್‌ ಮಾಡಿರುವ ಘೋಷಣೆಯಷ್ಟೇ ಇದು. ಇದುವರೆಗೂ ನಾನು ಕಂಡುಕೊಂಡಂತೆ ಮಹಿಳೆಯರ ರಕ್ಷಣೆಗಾಗಿ ಕಾಂಗ್ರೆಸ್‌ ಯಾವುದೇ ಕೆಲಸ ಮಾಡಿಲ್ಲ. ಮಹಿಳಾ ಸ್ವಾವಲಂಬನೆ ಮತ್ತು ಸುರಕ್ಷತೆಯ ಬಗ್ಗೆ ಬಿಜೆಪಿಯು ಸಾಕಷ್ಟು ಕೆಲಸ ಮಾಡಿದೆ. ಇದನ್ನು ನಾನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿದ್ದೇನೆ’ ಎಂದು ತ್ರಿವಳಿ ತಲಾಖ್‌ ಸಂತ್ರಸ್ತೆಯೂ ಆಗಿರುವ ನಿದಾ ಹೇಳಿದರು.

    ತಮ್ಮ ಮಾವ ಮೌಲಾನಾ ತೌಖೀರ್ ರಾಜಾ ಖಾನ್ ಎರಡು ವಾರಗಳ ಹಿಂದೆ ಕಾಂಗ್ರೆಸ್‌ ಸೇರಿದ್ದ ಬಗ್ಗೆ ಮಾತನಾಡಿದ ನಿದಾ, ‘ನನ್ನ ಮಾವ ಕಾಂಗ್ರೆಸ್ ಸೇರಿರಬಹುದು. ಆದರೆ ನಾನು ಮೊದಲಿನಿಂದಲೂ ಬಿಜೆಪಿಯನ್ನೇ ಬೆಂಬಲಿಸುತ್ತಿದ್ದೇವೆ. ಏಕೆಂದರೆ ಬಿಜೆಪಿಯು ಮುಸ್ಲಿಂ ಮಹಿಳೆಯರ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.

    ನಿದಾ ಜತೆಗೆ, ಮಾಜಿ ಸಚಿವರಾಗಿರುವ ಎಸ್‌ಪಿ ನಾಯಕ ಶಿವಚರಣ್‌ ಪ್ರಜಾಪತಿ, ಬಿಎಸ್‌ಪಿ ನಾಯಕರಾದ ಗಂಗಾರಾಮ್‌ ಅಂಬೇಡ್ಕರ್‌ ಮೊದಲಾದ ನಾಯಕರು, ಲಖನೌನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಹಿರಿಯ ನಾಯಕ ಲಕ್ಷ್ಮೀಕಾಂತ ಬಾಜಪೇಯಿ ಅವರ ಉಪಸ್ಥಿತಿಯಲ್ಲಿ ಬಿಜೆಪಿ ಸೇರ್ಪಡೆಯಾದರು.

    ಉತ್ತರ ಪ್ರದೇಶದಲ್ಲಿ 403 ಕ್ಷೇತ್ರಗಳಿದ್ದು, ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಫೆಬ್ರವರಿ 10ರಂದು ಮೊದಲ ಹಂತ, 14ರಂದು 2ನೇ ಹಂತ, 20ರಂದು 3ನೇ ಹಂತ, 23ರಂದು 4ನೇ ಹಂತ, 27ರಂದು 5ನೇ ಹಂತ, ಮಾರ್ಚ್ 3ರಂದು 6ನೇ ಹಂತ, 7ರಂದು 7ನೇ ಹಂತದ ಮತದಾನ ನಡೆಯಲಿದೆ. ಫಲಿತಾಂಶ ಮಾರ್ಚ್ 10ರಂದು ಹೊರಬೀಳಲಿದೆ.

    ಇಬ್ಬರು ಯುವತಿಯರ ಜತೆ ಕುಡಿದು ಮತ್ತೇರಿಸಿಕೊಂಡು ಕಿರಿಕ್‌! ನಟ ರಕ್ಷಿತ್‌ ಸೇರಿದಂತೆ ಏಳು ಮಂದಿ ವಿರುದ್ಧ ಎಫ್‌ಐಆರ್‌

    ಉ.ಪ್ರದೇಶದ ಸಿಎಂ ಖುರ್ಚಿ ಯಾರಿಗೆ? 2024ರ ಚುನಾವಣೆ ಭವಿಷ್ಯವೇನು? ಖ್ಯಾತ ಜ್ಯೋತಿರ್ವಿಜ್ಞಾನಿ ಅಮ್ಮಣ್ಣಾಯ ಹೇಳಿದ್ದು ಹೀಗೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts