More

    ಕಾಂಗ್ರೆಸ್‌ನಿಂದ ಜನ ವಿರೋಧಿ ಆಡಳಿತ

    ಸೊರಬ: ಗ್ಯಾರಂಟಿ ಯೋಜನೆ ನೀಡುವುದಾಗಿ ಹೇಳುವ ಕಾಂಗ್ರೆಸ್ ಸರ್ಕಾರ, ಮತ್ತೊಂದೆಡೆ ಜನರ ಹಣವನ್ನೇ ಕಸಿದುಕೊಳ್ಳುತ್ತಿದೆ. ರೈತ ಮತ್ತು ಜನವಿರೋಧಿಯಾಗಿ ಆಡಳಿತ ನಡೆಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

    ಲೋಕಸಭಾ ಚುನಾವಣೆ ಪ್ರಚಾರ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಸೊರಬ ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ ಬೈಕ್ ರ‌್ಯಾಲಿಯಲ್ಲಿ ಭಾಗವಹಿಸಿ ನಂತರ ಶ್ರೀ ರಂಗನಾಥ ದೇವಸ್ಥಾನದ ಎದುರು ಬಹಿರಂಗ ಸಭೆಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ದಿವಾಳಿಯತ್ತ ಸಾಗುತ್ತಿದೆ. ಆರ್ಥಿಕ ಸ್ಥಿತಿಗತಿ ಹದಗೆಟ್ಟು ಹೋಗಿದೆ ಎಂದು ತಿಳಿಸಿದರು.
    ರೈತರು ಜಮೀನುಗಳಿಗೆ ಟಿಸಿ ಹಾಕಿಸಲು ಕನಿಷ್ಟ 2 ಲಕ್ಷ ರೂ. ಖರ್ಚು ಮಾಡುವ ಸ್ಥಿತಿ ತಲುಪಿದೆ. ಜನರಿಗೆ ಒಂದು ಕೆಜಿ ಅಕ್ಕಿ ನೀಡಲು ಸಹ ರಾಜ್ಯ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೀಡುತ್ತಿರುವ ಅಕ್ಕಿಯನ್ನೇ ಜನರಿಗೆ ನೀಡಲಾಗುತ್ತಿದೆ. ಜನರಿಗೂ ವಾಸ್ತವ ವಿಷಯದ ಅರಿವಿದೆ ಎಂದರು.
    ರಾಜ್ಯ ಸರ್ಕಾರಿ ನೌಕರರಿಗೆ ವೇತನ ನೀಡಲು ಸಹ ಖಜಾನೆಯಲ್ಲಿ ಹಣ ಇರುವುದಿಲ್ಲ. ರಾಜ್ಯ ಸರ್ಕಾರ ರೈತರಿಗೆ ಹೊರೆಯಾಗಿ ಪರಿಣಮಿಸಿದೆ. ಗ್ಯಾರಂಟಿ ಯೋಜನೆಗೆ ಹಣ ವಿನಿಯೋಗಿಸಲು ಸಾಧ್ಯವಾಗದೇ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ಸಹ ಬಳಕೆ ಮಾಡಿಕೊಳ್ಳುತ್ತಿದೆ. ಇದರಿಂದ ಎಸ್‌ಸಿ, ಎಸ್‌ಟಿ ಸಮುದಾಯಗಳಿಗೂ ಅನ್ಯಾಯವಾಗುತ್ತಿದೆ ಎಂದು ಟೀಕಿಸಿದರು.
    ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಮಲೆನಾಡಿನ ಜನರ ಸಂಕಷ್ಟ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಿಲ್ಲ. ಅಭಿಮಾನಕ್ಕಾಗಿ ಮತ ಚಲಾಯಿಸದೇ ಅಭಿವೃದ್ಧಿ ಕೆಲಸಕ್ಕೆ ಮತ ನೀಡಬೇಕು. ಬಿಎಸ್‌ವೈ ಮುಖ್ಯಮಂತ್ರಿಯಾಗಿದ್ದ ಅವಧಿ ಹಾಗೂ ಬಿ.ವೈ.ರಾಘವೇಂದ್ರ ಸಂಸದರಾಗಿದ್ದ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆ ಸಮಗ್ರವಾಗಿ ಅಭಿವೃದ್ಧಿ ಪಥದಲ್ಲಿ ಮುನ್ನಡೆದಿದೆ ಎಂದು ಹೇಳಿದರು.
    ಬಹಿರಂಗ ಸಭೆಗೂ ಮುನ್ನ ಶಿರಾಳಕೊಪ್ಪ ರಸ್ತೆ ಮೆಸ್ಕಾಂ ಕಚೇರಿ ಮುಂಭಾಗದಿಂದ ಮುಖ್ಯ ರಸ್ತೆ ಮಾರ್ಗವಾಗಿ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದವರೆಗೂ ಬೈಕ್ ರ‌್ಯಾಲಿ ನಡೆಯಿತು. ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
    ಬಿಜೆಪಿ ತಾಲೂಕು ಅಧ್ಯಕ್ಷ ಟಿ.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ, ಯುವ ಮೋರ್ಚಾ ಅಧ್ಯಕ್ಷ ರಾಜು, ಪ್ರಧಾನ ಕಾರ್ಯದರ್ಶಿ ಹರೀಶ್, ಸಂಜಯ್, ಜಿಲ್ಲಾಧ್ಯಕ್ಷ ಪ್ರಶಾಂತ್ ಕುಕ್ಕೆ, ಪ್ರಧಾನ ಕಾರ್ಯದರ್ಶಿ ಅರುಣ್, ದರ್ಶನ್, ಕಾರ್ಯದರ್ಶಿ ಆಶೀಕ್ ನಾಗಪ್ಪ, ಪ್ರಮುಖರಾದ ಡಾ. ಎಚ್.ಇ.ಜ್ಞಾನೇಶ್, ವಿ.ಜಿ.ಪರಶುರಾಮ ಬಿಳವಗೋಡು, ದೇವೇಂದ್ರಪ್ಪ, ಅಭಿಷೇಕ್ ಗೌಡ, ಪ್ರವೀಣ್ ಬೆಣ್ಣೆ, ಎಂ.ಆರ್.ಪಾಟೀಲ್, ಎಂ.ನಾಗಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts