More

    ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲೇ ಸಿಗಲಿ: ಪ್ರೊ.ಸಿ.ಪಿ.ಸಿದ್ಧಾಶ್ರಮ

    ಮೈಸೂರು: ರಾಜ್ಯದಲ್ಲಿ 1ರಿಂದ 7ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ನೀಡಬೇಕು ಎಂದು ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ.ಸಿ.ಪಿ.ಸಿದ್ಧಾಶ್ರಮ ಆಗ್ರಹಿಸಿದರು.


    ವಿಜಯನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್‌ನ 109ನೇ ಸಂಸ್ಥಾಪನಾ ದಿನಾಚರಣೆ, ಸನ್ಮಾನ, ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು.


    ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ನೀಡಬೇಕು ಎಂಬುದು ಕನ್ನಡಿಗರ ಒತ್ತಾಯ. ಈ ಕುರಿತು ಸಾಹಿತಿಗಳು ಸಹ ಧ್ವನಿಗೂಡಿಸಿದ್ದಾರೆ. ಆದಾಗ್ಯೂ, ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಕೆ ಇನ್ನೂ ಜಾರಿಗೆ ಬಂದಿಲ್ಲ. ಆಡಳಿತ ಭಾಷೆಯಾಗಿಯೂ ಕನ್ನಡ ಪೂರ್ಣಪ್ರಮಾಣದಲ್ಲಿ ಅನುಷ್ಠಾನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.


    ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಡ ಸಾಹಿತ್ಯ, ಜನರ ಅಸ್ಮಿತೆಗಾಗಿ 1915ರ ಮೇ 5ರಂದು ಕರ್ನಾಟಕ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು. 1930ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಎಂದು ಮರುನಾಮಕರಣ ಮಾಡಲಾಯಿತು. ಇದೀಗ ಕಸಾಪ ವಿಸ್ತಾರವಾಗಿ ಬೆಳೆದಿದೆ. ಕನ್ನಡ ನಾಡು-ನುಡಿ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡಿದೆ ಎಂದರು.


    ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗಿದ್ದ ದೂರದೃಷ್ಟಿಯನ್ನು ಈಗಿನ ರಾಜಕಾರಣಿಗಳು ಬೆಳೆಸಿಕೊಳ್ಳಬೇಕು. ಅವರನ್ನು ಸ್ಮರಿಸದೆ ರಾಜ್ಯದ ಶಿಕ್ಷಣ, ಅಭಿವೃದ್ಧಿ, ಕೃಷಿ, ಕೈಗಾರಿಕೆ ಬೆಳವಣಿಗೆ, ಸಾಮಾಜಿಕ ಸುಧಾರಣೆಯ ಕುರಿತು ಮಾತನಾಡಲು ಆಗುವುದಿಲ್ಲ. ಭಾಷೆ, ಸಾಹಿತ್ಯ, ಸಂಸ್ಕೃತಿ, ಜಾನಪದ, ಕಲೆ, ನೆಲ, ಜಲದ ಸಂರಕ್ಷಣೆಗಾಗಿ ಕಸಾಪ ಸ್ಥಾಪನೆ ಮಾಡಿದರು ಎಂದು ಸ್ಮರಿಸಿದರು.


    ಸಾಮಾಜಿಕ ಸಮಸ್ಯೆಗಳಾದ ದೇವದಾಸಿ, ಗೆಜ್ಜೆಪೂಜೆ ಇನ್ನಿತರ ಕೆಟ್ಟ ಪದ್ಧತಿಗಳನ್ನು ರದ್ದುಗೊಳಿಸಿ ಮಹಿಳೆಯರು ಗೌರವದಿಂದ ಬದುಕಲು ನಾಲ್ವಡಿಯವರು ಅನುಕೂಲ ಕಲ್ಪಿಸಿಕೊಟ್ಟರು. ರಾಜಪ್ರಭುತ್ವದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಲ್ವಡಿ ಅನುಷ್ಠಾನಕ್ಕೆ ತಂದಿದ್ದರು. ಮೈಸೂರು ಮಾದರಿ ರಾಜ್ಯ ಆಗಲು ಅವರ ದೂರದೃಷ್ಟಿಯೇ ಕಾರಣ. ಆ ರೀತಿ ದೃಷ್ಟಿಕೋನ ಈಗಿನ ರಾಜಕಾರಣಿಗಳಿಗೆ, ಕನ್ನಡಿಗರಿಗೆ ಬರಬೇಕಿದೆ ಎಂದರು.


    ಲೇಖಕರಾದ ಪ್ರೊ.ಎಸ್.ರಾಮಪ್ರಸಾದ್, ಟಿ.ಎನ್.ನಾಗರತ್ನ, ಸಿ.ಚಾಮಶೆಟ್ಟಿ, ಇಂದಿರಾ ಪಾಟೀಲ ಅವರನ್ನು ಸನ್ಮಾನಿಸಲಾಯಿತು.


    ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಪ್ರೊ.ವಿಜಯಕುಮಾರಿ ಎಸ್.ಕರಿಕಲ್, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಪದಾಧಿಕಾರಿಗಳಾದ ಮ.ನ.ಲತಾ ಮೋಹನ್, ತ್ಯಾಗರಾಜು, ಪರಮೇಶ್ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts