More

    ನನ್ನ ಕೆಲಸಗಳೇ ನನ್ನನ್ನು ಗೆಲ್ಲಿಸುತ್ತವೆ; ಮಹಿಳೆಯರು ಬಿಜೆಪಿಗೆ ಮತ ಹಾಕುತ್ತಾರೆ; ದೊಡ್ಡ ಲೀಡ್‌ನಿಂದ ಗೆಲ್ಲುವುದಾಗಿ ಬೊಮ್ಮಾಯಿ ವಿಶ್ವಾಸ

    ಹಾವೇರಿ: ಈ ಚುನಾವಣೆಯಲ್ಲಿ ನನ್ನ ಕೆಲಸಗಳು ಮಾತನಾಡುತ್ತಿವೆ. ನಾನು ಸಚಿವ, ಮುಖ್ಯಮಂತ್ರಿಯಾಗಿದ್ದಾಗ ಮಾಡಿರುವ ಕೆಲಸಗಳೇ ನನ್ನ ಗೆಲುವಿಗೆ ಸಹಕಾರಿಯಾಗಲಿವೆ. ದೊಡ್ಡ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
    ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶವನ್ನು ಸಮರ್ಥವಾಗಿ ಮುನ್ನಡೆಸುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಮುಂದುವರಿಸಲು ಜನ ನಿರ್ಧರಿಸಿದ್ದಾರೆ. ಈ ಚುನಾವಣೆಯಲ್ಲಿ ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಬೆಂಬಲ ವ್ಯಕ್ತ ಪಡಿಸುತ್ತಿದ್ದಾರೆ. ಲೋಕಸಭೆ ಚುನಾವಣೆಯ ಮಹತ್ವ ಅರಿತು ಅವರು ಬಿಜೆಪಿಗೆ ಬೆಂಬಲಿಸುತ್ತಾರೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಶೇ.35ರಷ್ಟು ಜನರಿಗೆ ಮಾತ್ರ ತಲುಪಿವೆ. ಇನ್ನು 65ರಷ್ಟು ಜನರಿಗೆ ತಲುಪಿಲ್ಲ. ಮಹಿಳೆಯರು ಪ್ರಬುದ್ಧರಿದ್ದಾರೆ. ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯ ವ್ಯತ್ಯಾಸ ಅವರಿಗೆ ಗೊತ್ತಿದೆ. ಗ್ಯಾರಂಟಿ ಯೋಜನೆಗಳ ವೈಫಲ್ಯ ನಮಗೆ ಲಾಭವಾಗುತ್ತದೆ ಎಂದರು.
    ಸುಮಾರು 350 ಗ್ರಾಮಗಳಲ್ಲಿ ನಾನು ಪ್ರಚಾರ ಮಾಡಿದ್ದೇನೆ. ಈ ಸಂದರ್ಭದಲ್ಲಿ ಪ್ರತಿ ತಾಲೂಕಿನಲ್ಲಿ ನಾವು ಮಾಡಿರುವ ಕೆಲಸ ಕಾರ್ಯಗಳನ್ನು ಜನರು ನೆನಪಿಸಿಕೊಂಡಿದ್ದಾರೆ. ಶನಿವಾರ ರಾಣೆಬೆನ್ನೂರಿನಲ್ಲಿದ್ದೆ. ‘ನಿಮ್ಮ ಪುಣ್ಯದಿಂದ ತುಂಗಾ ಮೇಲ್ದಂಡೆ ಯೋಜನೆ ಜಾರಿಯಾಗಿದ್ದು, ನಮ್ಮ ಊರಿಗೆ ನೀರಾವರಿಯಾಗಿದೆ. ನಮ್ಮ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಚೆನ್ನಾಗಿದೆ’ ಎಂದು ಅಲ್ಲಿನ ರೈತರು ಸನ್ಮಾನಿಸಿದರು. ‘ಮೇಡ್ಲೇರಿ ಕೆರೆಯನ್ನು 32 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿ ನೀರು ತುಂಬಿಸಿದ್ದೀರಿ. ಇದರಿಂದ ಅನುಕೂಲವಾಗಿದೆ’ ಎಂದು ಆ ಗ್ರಾಮದ ಜನರು ಹೇಳಿದರು. ತುಮ್ಮಿನಕಟ್ಟಿಗೆ ಹೋದಾಗ ‘ನಮ್ಮ ಅವಳಿ ಮಕ್ಕಳ ಚಿಕಿತ್ಸೆಗೆ ನಲವತ್ತು ಲಕ್ಷ ಖರ್ಚು ಮಾಡಿ ಜೀವ ಉಳಿಸಿದ್ದೀರಿ’ ಎಂದು ಆ ಕುಟುಂಬದವರು ಸಂತಸ ಹಂಚಿಕೊಂಡರು ಎಂದರು.
    ಹಾವೇರಿಯಲ್ಲಿ ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಹಾಲು ಒಕ್ಕೂಟ, ವಿಶ್ವ ವಿದ್ಯಾಲಯ ಮಾಡಿರುವದನ್ನು ಜನ ಮಾತನಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ ನಾನು ಮಾಡಿರುವ ಕೆಲಸಗಳು ಮಾತನಾಡುತ್ತಿವೆ. ಜನರ, ಹಿರಿಯರ ಅಶೀರ್ವಾದದಿಂದ ದೊಡ್ಡ ಅಂತರದಲ್ಲಿ ಗೆಲ್ಲುವ ವಿಶ್ವಾಸ ಇದೆ ಎಂದು ಹೇಳಿದರು.
    ಈ ಚುನಾವಣೆಯಲ್ಲಿ ಕುರುಬ ಸಮುದಾಯಕ್ಕೆ ಟಿಕೆಟ್ ನೀಡದಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವು ಕುರುಬ ಸಮುದಾಯಕ್ಕೆ ಅನೇಕ ಯೋಜನೆಗಳನ್ನು ಮಾಡಿದ್ದೇವೆ. ಕುರಿಗಾರರಿಗೆ 20 ಲಕ್ಷದವರೆಗೆ ಸಂಘಗಳ ಮೂಲಕ ಕುರಿ ಖರೀದಿಗೆ ಯೋಜನೆ ಮಾಡಿದ್ದೆವು. ಕಾಗಿನೆಲೆ, ಬಾಡ ಅಭಿವೃದ್ಧಿ, ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಎಲ್ಲವನ್ನೂ ಬಿಜೆಪಿ ಮಾಡಿದೆ ಎಂದರು.
    ಈ ಚುನಾವಣೆಯಲ್ಲಿ ಪ್ರಮುಖವಾಗಿ ಕೇಳಿ ಬಂದ ಸಮಸ್ಯೆ ಎಂದರೆ ಕುಡಿಯುವ ನೀರು. ಹಾವೇರಿ, ಗದಗ ನಗರಗಳಿಗೆ ಕುಡಿಯುವ ನಿರು, ಚರಂಡಿ ವ್ಯವಸ್ಥೆ ಸಮಸ್ಯೆ ಇದೆ. ನಾನು ಸಿಎಂ ಆಗಿದ್ದಾಗ 140 ಕೋಟಿ ವೆಚ್ಚದಲ್ಲಿ ಗದಗನಲ್ಲಿ ಕುಡಿಯುವ ನೀರಿನ ಯೋಜನೆ ರೂಪಿಸಿದ್ದೆವು. ಈ ಸರ್ಕಾರ ಅಭಿವೃದ್ಧಿ ಕಾಮಗಾರಿಗಳನ್ನು ನಿಲ್ಲಿಸಿದೆ. ಹಾವೇರಿ ನಗರಕ್ಕೆ ಕೇಂದ್ರ ಸರ್ಕಾರದ ಅಮೃತ ಯೋಜನೆಯಡಿ 140 ಕೋಟಿ ರೂ. ಯೋಜನೆ ರೂಪಿಸಲಾಗಿದೆ ಎಂದರು.
    ಕಾಂಗ್ರೆಸ್ ಅಭ್ಯರ್ಥಿ ಕುರಿತ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ನಾನು ಕಾಂಗ್ರೆಸ್ ಜತೆ ಸ್ಪರ್ಧೆ ಮಾಡುತ್ತಿದ್ದೇನೆ. ಕಾಂಗ್ರೆಸ್ ಕೂಡ ಪೈಪೋಟಿ ಕೊಟ್ಟಿದೆ ಎಂದರು. ಗೆಲ್ಲುವ ಅಂತರದ ಕುರಿತು ಪ್ರತಿಕ್ರಿಯಿಸಿ, ನಾನು ಎಷ್ಟು ಅಂತರದಿಂದ ಗೆಲ್ಲುತ್ತೇನೆ ಎಂದು ನಿರ್ದಿಷ್ಟ ಅಂಕಿ-ಅಂಶ ಹೇಳುವುದಿಲ್ಲ. ಆದರೆ, ನಿರೀಕ್ಷಿತ ಅಂತರದಲ್ಲಿ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ಸಿದ್ದರಾಮಯ್ಯ ಅವಧಿಯಲ್ಲಿ ಸಾಲ ಹೆಚ್ಚಳ
    ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿಯವರಿಂದ ಹಿಡಿದು 2013ರ ವರೆಗೂ ಎಲ್ಲರೂ ಸೇರಿ 1 ಲಕ್ಷ ಕೊಟಿ ಸಾಲ ಮಾಡಿದ್ದರು. ಸಿದ್ದರಾಮಯ್ಯ ಒಬ್ಬರೇ ಎರಡು ಲಕ್ಷ ಹದಿನಾಲ್ಕು ಕೋಟಿ ರೂ. ಸಾಲ ಮಾಡಿದ್ದಾರೆ. ಕೇಳಿದರೆ ಬಜೆಟ್ ಗಾತ್ರ ಹೆಚ್ಚಳವಾಗಿದೆ ಎಂದು ಹೇಳುತ್ತಾರೆ ಎಂದು ಬೊಮ್ಮಾಯಿ ಕುಟುಕಿದರು.
    ಡಿಕೆಶಿ ರಿಜೆಕ್ಟೆಡ್ ಪಾರ್ಟಿ ಅಧ್ಯಕ್ಷ
    ಡಿಸಿಎಂ ಡಿ.ಕೆ.ಶಿವಕುಮಾರ ಅವರು ತಮ್ಮನ್ನು ರಿಜೆಕ್ಟೆಡ್ ಅಭ್ಯರ್ಥಿ ಎಂದು ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ ಬೊಮ್ಮಾಯಿ, ಡಿ.ಕೆ.ಶಿವಕುಮಾರ ರಿಜೆಕ್ಟೆಡ್ ಪಾರ್ಟಿಯ ಅಧ್ಯಕ್ಷ. ದೇಶದಲ್ಲಿ ಇಡೀ ಪಕ್ಷವೇ ರಿಜಕ್ಟ್ ಆಗಿದೆ. ನಾನು ರಿಜೆಕ್ಟೆಡ್ ಅಲ್ಲ. ಶಿಗ್ಗಾಂವಿಯಲ್ಲಿ 30 ಸಾವಿರ ಮತಗಳ ಅಂತರದಿಂದ ಗೆದ್ದಿದ್ದೇನೆ. ಸ್ವತಃ ಡಿ.ಕೆ.ಶಿವಕುಮಾರ ಅವರು ದೇವೇಗೌಡರ ವಿರುದ್ಧ ಚುನಾವಣೆಯಲ್ಲಿ ಸೋತಿದ್ದಾರೆ. ನನ್ನ ವಿರುದ್ಧ ಮಾತನಾಡಲು ಅವರಿಗೆ ಏನೂ ಇಲ್ಲದಿರುವಾಗ ಈ ರೀತಿ ಹೇಳುತ್ತಿದ್ದಾರೆ. ಹಿಂದೆ ಅವರ ಪಕ್ಷವೂ ಸೋತಿತ್ತು. ಸಿಎಂಗಳೂ ಸೋತಿದ್ದಾರೆ ಎಂದು ತಿರುಗೇಟು ನೀಡಿದರು.
    ಕೋಟ್ :
    ಕಾಂಗ್ರೆಸ್‌ನವರು ಒಂದು ವರ್ಷದಲ್ಲಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಎಲ್ಲವನ್ನೂ ಗ್ಯಾರಂಟಿಗಾಗಿ ಸುರಿದಿದ್ದಾರೆ. ಹಳ್ಳಿಗಳಲ್ಲಿ ಒಂದು ವಿದ್ಯುತ್ ದೀಪ ಹಾಳಾದರೆ ಬದಲಾಯಿಸಲೂ ಸರ್ಕಾರದಲ್ಲಿ ಹಣ ಇಲ್ಲದಂತಾಗಿದೆ. ರಸ್ತೆ, ನೀರು ಕನಸಿನ ಮಾತಾಗಿದೆ. ಇದೇ ಕಾರಣಕ್ಕೆ ಕಾಂಗ್ರೆಸ್‌ನವರು ಚೊಂಬು, ಚಿಪ್ಪು ಅಂತಾ ನಕಾರಾತ್ಮಕ ಪ್ರಚಾರ ಆರಂಭಿಸಿದ್ದಾರೆ. ಇದು ಅವರಿಗೆ ರಿವರ್ಸ್ ಆಗಲಿದೆ.
    – ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ, ಹಾವೇರಿ ಬಿಜೆಪಿ ಅಭ್ಯರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts