

ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎಲ್ಲಾ ಸಮೀಕ್ಷೆಗಳನ್ನು ಬುಡಮೇಲು ಮಾಡಿ, ಎನ್ಡಿಎ ಮೈತ್ರಿಕೂಟ ಮುನ್ನಡೆ ಸಾಧಿಸುತ್ತಿದ್ದರೆ, ಅತ್ತ ಮಣಿಪುರದ ಸಿಂಗಾಟ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ನವೆಂಬರ್ 7ರಂದು ರಾಜ್ಯದ ಲಿಲಾಂಗ್, ವಾಂಗ್‌ಜಿಂಗ್ ಟೆಂತಾ ಮತ್ತು ಸೈತು ಸೇರಿದಂತೆ ಐದು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು. ಈ ಪೈಕಿ ಸಿಂಗಾಟ್ ಕ್ಷೇತ್ರದ ಮೊದಲ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಅಭ್ಯರ್ಥಿಯಾಗಿದ್ದ ಜಿನ್ಸುವಾನಹೌ ಜಯಗಳಿಸಿದ್ದಾರೆ. ಈ ಕುರಿತು ಚುನಾವಣಾ ಆಯೋಗ ಅಧಿಕೃತವಾಗಿ ಘೋಷಿಸಿದೆ.
ಈವರೆಗಿನ ಅಂಕಿ ಅಂಶಗಳ ಪ್ರಕಾರ ವಾಂಗೊಯ್ ಗಿಯ್ ಗೋಯಿ ಕ್ಷೇತ್ರದಲ್ಲಿ ಓನಮ್ ಲುಖೋಯ್ ಸಿಂಗ್ ಅವರು 268 ಮತಗಳ ಅಂತರದಿಂದ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಅಭ್ಯರ್ಥಿ ಖುರೈಜಮ್ ಲೋಕನ್ ಸಿಂಗ್ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.
ಕಾಂಗ್ರೆಸ್‌ನ ಮೊಯಿರಾಂಗ್ಥೆಮ್ ಹೇಮಂತ ಸಿಂಗ್ ಅವರು ವಾಂಗ್‌ಜಿಂಗ್ ಟೆಂತಾ ಕ್ಷೇತ್ರದಲ್ಲಿ ಬಿಜೆಪಿಯ ಪಾವೊಮ್ ಬ್ರೋಜೆನ್ ಸಿಂಗ್ ವಿರುದ್ಧ 675 ಮತಗಳ ಅಂತರದ ಮುನ್ನಡೆ ಕಾಯ್ದುಕೊಂಡಿದ್ದಾರೆ ಎಂದು ಚುನಾವಣಾ ಆಯೋಗ ಹೇಳಿದೆ.
ಬಿಹಾರ ವಿಧಾನಸಭಾ ಚುನಾವಣೆ ಹೊರತುಪಡಿಸಿದರೆ, ಮಧ್ಯಪ್ರದೇಶದ 28, ಗುಜರಾತ್‌ನ 8 ಕ್ಷೇತ್ರಗಳ ಉಪಚುನಾವಣೆ, ಕರ್ನಾಟಕ, ಉತ್ತರ ಪ್ರದೇಶದ ಏಳು, ಜಾರ್ಖಂಡ್, ನಾಗಾಲ್ಯಾಂಡ್ ಮತ್ತು ಒಡಿಶಾದ ತಲಾ ಎರಡು ಮತ್ತು ಛತ್ತೀಸಗಡ, ಹರಿಯಾಣ ಹಾಗೂ ತೆಲಂಗಾಣದ ತಲಾ ಒಂದೊಂದು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿವೆ.