More

    ಅಮ್ಮನ ತ್ಯಾಗಕ್ಕಾಗಿ ಪ್ರೀತಿ ಬಲಿಕೊಟ್ಟೆ, ಆಕೆಗಾಗಿ ಮಾವನ ಮಗನ ಮದುವೆಯಾಗಿ ಮೋಸ ಹೋದೆ… ಹೇಗೆ ಬದುಕಲಿ ನಾನು?

    ಅಮ್ಮನ ತ್ಯಾಗಕ್ಕಾಗಿ ಪ್ರೀತಿ ಬಲಿಕೊಟ್ಟೆ, ಆಕೆಗಾಗಿ ಮಾವನ ಮಗನ ಮದುವೆಯಾಗಿ ಮೋಸ ಹೋದೆ... ಹೇಗೆ ಬದುಕಲಿ ನಾನು?ಪ್ರಶ್ನೆ : 21 ವರ್ಷದ ನಾನು ಚಿಕ್ಕಂದಿನಿಂದಲೇ ಅಪ್ಪನನ್ನು ಕಳೆದುಕೊಂಡವಳು. ಅಂದರೆ ಅಪ್ಪ ಮನೆಬಿಟ್ಟು ಹೋದವರು ಪತ್ತೆಯಿಲ್ಲ. ಎಲ್ಲರ ಚುಚ್ಚು ಮಾತನ್ನು ಕೇಳಲಾಗದೇ ಅಮ್ಮ ಊರು ಬಿಟ್ಟು ಕಷ್ಟಪಟ್ಟು ನನ್ನನ್ನು ಸಾಕಿ ಓದಿಸಿ ನನ್ನ ಬದುಕನ್ನು ನೇರ ಮಾಡಿದರು.

    ನಾನೊಬ್ಬ ಹುಡುಗನನ್ನು ಪ್ರೀತಿಸುತ್ತಲಿದ್ದೆ. ಮನೆಯಲ್ಲಿ ಹೇಳಿರಲಿಲ್ಲ. ಅಷ್ಟರಲ್ಲಿ ಒಂದು ಸಮಾರಂಭದಲ್ಲಿ ನನ್ನ ಮಾವ ನನ್ನನ್ನು ನೋಡಿ ’ ತಮ್ಮ ಮಗನಿಗೆ ಜೊತೆ ಸರಿಯಾಗುತ್ತಾಳೆ, ಕೊಡುತ್ತೀಯಾ ’? ಅಂತ ನಮ್ಮಮ್ಮನನ್ನು ಕೇಳಿದರು. ನಮ್ಮಮ್ಮನಿಗೆ ತುಂಬಾ ಖುಷಿಯಾಯಿತು. ನನ್ನಮ್ಮ ನ ಖುಷಿ ನೋಡಿ, ನಾನು ಪ್ರೀತಿಸುತ್ತಿದ್ದ ಹುಡುಗನನ್ನು ಮರೆತು, ಕೇವಲ ಅಮ್ಮನಿಗಾಗಿ ಮಾವನ ಮಗನ ಜೊತೆ ಮದುವೆಯಾದೆ. ನನಗಾಗಿ ಜೀವವನ್ನೇ ತೆಯ್ದ ಅಮ್ಮನಿಗಾಗಿ ನನ್ನ ಪ್ರೀತಿಯನ್ನು ಬಲಿಕೊಟ್ಟು, ಮಾವನ ಮಗನನ್ನೇ ಪ್ರೀತಿಸಲು ಶುರುಮಾಡಿದೆ. ಮದುವೆಗೆ ಮೊದಲು ಮಾವನ ಮಗ ನನಗೆ ಮೆಸೇಜ್ ಕಳಿಸುವುದು, ಫೋನ್ ಮಾಡುವುದು ಎಲ್ಲಾ ಮಾಡುತ್ತಾ ನನಗೆ ಬಹಳ ಭರವಸೆಯನ್ನು ಕೊಟ್ಟರು.

    ಆದರೆ ಮದುವೆಯಾದ ಮೇಲೆ ನನ್ನ ಬದುಕಿನ ಚಿತ್ರಣವೇ ಬೇರೆಯಾಗಿದೆ. ನನ್ನ ಅತ್ತೆ ಮಾವ ಪರವಾಗಿಲ್ಲ. ಅವರು ಎಲ್ಲರಂತೆ ಸ್ನೇಹವಾಗಿದ್ದಾರೆ. ಆದರೆ ಈ ನನ್ನ ಗಂಡನೇ ನನ್ನನ್ನು ಸದಾ ಬಯ್ಯುತ್ತಿರುತ್ತಾರೆ. ಹೊರಗಡೆ ಎಲ್ಲರೊಂದಿಗೆ ಚೆನ್ನಾಗಿರುವ ಅವರು ನನ್ನ ಹತ್ತಿರ ಮಾತ್ರ ಹೀಗೆ ಯಾಕೆ? ನನಗೆ ಅರ್ಥವೇ ಆಗುವುದಿಲ್ಲ. ತಂದೆಯಿಲ್ಲದೇ ಬೆಳೆದವಳು ನಾನು. ನನಗೂ ವಯಸ್ಸಿಗೆ ಸಹಜವಾಗಿ ಆಸೆ ಆಕಾಂಕ್ಷೆಗಳು ಇರುವುದಿಲ್ಲವಾ? ಬಾಯಿ ಬಿಟ್ಟು ಹೇಳಿದರೂ ಅವರು ಅರ್ಥ ಮಾಡಿಕೊಳ್ಳುವುದಿಲ್ಲ.

    ಯಾವುದಾದರೂ ಪುರುಷರ ಜತೆ ಮಾತನಾಡಿದರೆ ಜಗಳ ಆಡುತ್ತಾರೆ. ನಮ್ಮ ಮದುವೆಯಾಗಿ ಮೂರು ವರ್ಷವಾಗುತ್ತಾ ಬಂದಿದೆ. ನನಗೆ ಜೀವನವೇ ಸಾಕೆನಿಸಿದೆ. ಸಾಯುವುದಕ್ಕೂ ಆಗದೇ ಬದುಕುವುದಕ್ಕೂ ಆಗದೇ ತೊಳಲಾಡುತ್ತಾ ಇದ್ದೀನಿ. ಈ ನನ್ನ ಸಮಸ್ಯೆಗೆ ಏನು ಪರಿಹಾರ ದಯವಿಟ್ಟು ಹೇಳಿ.

    ಉತ್ತರ: ನಿಮ್ಮ ವಯಸ್ಸು 21 ಎಂದಿದ್ದೀರಿ. ಗಂಡನ ವಯಸ್ಸು ಬರೆದಿಲ್ಲ. ಇರಲಿ, ಅವರೂ ಇನ್ನೂ 25ರ ಯುವಕ ಇರಬಹುದು. ಬಹುಶಃ ನಿಮ್ಮಿಬ್ಬರಿಗೂ ಮನಸ್ಸು ಇನ್ನೂ ಪ್ರೌಢವಾಗಿಲ್ಲವೆನ್ನಬಹುದು. ಆದ್ದರಿಂದ ನಿಮ್ಮಿಬ್ಬರ ಸಂಬಂಧ ಗಾಢವಾಗಬೇಕಾದರೆ ತಾಳ್ಮೆಯಿಂದ ಇಬ್ಬರೂ ಇನ್ನೂ ಸ್ವಲ್ಪ ದಿನ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

    ಈಗಲೇ ’ ಸಾವು, ಜೀವನ ಬೇಜಾರು ’ ಇಂಥಾ ಮಾತುಗಳನ್ನು ಮನಸ್ಸಿಗೆ ತಂದುಕೊಳ್ಳಬಾರದು. ಪ್ರೀತಿ ಪ್ರೇಮವನ್ನು ಸ್ವಲ್ಪ ಕಾಲ ವಿರಾಮದಲ್ಲಿರಿಸಿ, ನಿಮ್ಮ ಫೈನಲ್ ಪರೀಕ್ಷೆಯ ಸಿದ್ಧತೆಯನ್ನು ಚೆನ್ನಾಗಿ ಮಾಡಿಕೊಳ್ಳಿ. ನಿಮಗೆ ಇನ್ನೂ ವಿದ್ಯೆಯನ್ನು ಮುಂದುವರೆಸಬೇಕೆಂದಿದ್ದರೆ ಅದರ ಕಡೆಗೂ ಗಮನ ಹರಿಸಬಹುದಲ್ಲ? ಅಥವಾ ಯಾವುದಾದರೂ ಉದ್ಯೋಗದ ಬಗ್ಗೆ ಚಿಂತಿಸಬಹುದಲ್ಲ? ಬದುಕು ಎನ್ನುವುದು ಪ್ರೀತಿ ಪ್ರೇಮ ಮದುವೆ ಇಷ್ಟಕ್ಕೇ ಸೀಮಿತವಲ್ಲ. ಅದರಾಚೆ ಇನ್ನೂ ತುಂಬಾ ವಿಶಾಲವಾಗಿದೆ. ಏನಾದರೂ ಸಾಧನೆ ಮಾಡುವುದರ ಕಡೆ ಗಮನ ಹರಿಸಬಹುದು. ನಿಮ್ಮ ಪತ್ರ ಓದಿದರೆ ನೀವು ತುಂಬಾ ತರ್ಕಬದ್ಧವಾಗಿ ಚೆನ್ನಾಗಿ ಮಾತಾಡುವ ಜಾಣೆಯೆನಿಸುತ್ತದೆ. ಈ ನಿಮ್ಮ ಜಾಣತನವನ್ನೇ ಉದ್ಯೋಗವಾಗಿ ಪರಿವರ್ತಿಸಿಕೊಳ್ಳಬಹುದು.

    ನಿಮ್ಮ ಗಂಡ ನಿಮ್ಮನ್ನು ಕಂಡರೆ ಮಾತ್ರ ಯಾಕೆ ಕೋಪಗೊಳ್ಳುತ್ತಾರೆ ಎನ್ನುವುದನ್ನು ನೀವು ಬರೆದಿಲ್ಲ. ಮದುವೆಗೆ ಮುಂಚೆ ಸರಸವಾಗಿದ್ದವರು ಮದುವೆಯ ನಂತರ ಯಾಕೆ ಬದಲಾಗಿದ್ದಾರೆ? ಇದನ್ನು ನೀವು ನಿಮ್ಮ ಮಾವ ಅತ್ತೆಯ ಹತ್ತಿರವೇ ಕೇಳಬೇಕು. ನಿಮ್ಮ ಅಪ್ಪ ನಿಮ್ಮನ್ನು ಬಿಟ್ಟು ಹೋದಾಗ, ನಿಮ್ಮ ತಾಯಿ ನಗರಕ್ಕೆ ಬಂದು ಕಷ್ಟದಿಂದ ನಿಮ್ಮನ್ನು ಸಾಕಿದಾಗ ಹತ್ತಿರ ಬಂದು ನಿಮ್ಮಮ್ಮನ ಕಷ್ಟ ಸುಖ ವಿಚಾರಿಸದ ನಿಮ್ಮ ಮಾವ, ಸುಂದರಳಾಗಿ ಬೆಳೆದ ನಿಮ್ಮನ್ನು ಯಾವುದೋ ಸಮಾರಂಭದಲ್ಲಿ ನೋಡಿ ಇದ್ದಕ್ಕಿದ್ದಂತೆ ಮದುವೆಗೆ ವಿಚಾರಿಸಿದರು ಅಂದರೆ ನಿಮಗಾಗಲೀ, ನಿಮ್ಮ ತಾಯಿಗಾಗಲೀ ಅನುಮಾನ ಬರಲಿಲ್ಲವೇ? ಎರಡೂವರೆ ವರ್ಷದ ಹಿಂದೆ ಎಂದರೆ ಆಗಿನ್ನೂ ನಿಮಗೆ 18 ವರ್ಷವೂ ಆಗಿರಲಿಲ್ಲವೇನೋ.

    ಅಷ್ಟು ಸಣ್ಣವಯಸ್ಸಿಗೇ ಯಾಕೆ ಮದುವೆಯಾದಿರಿ? ಇರಲಿ ಎಲ್ಲವೂ ನಡೆದುಹೋದ ಮೇಲೆ ಏನೂ ಮಾಡುವುದಕ್ಕಾಗುವುದಿಲ್ಲ. ನಿಮಗೆ ಈಗ ಎರಡು ದಾರಿಗಳಿವೆ ನಿಮ್ಮ ಅತ್ತೆ, ಮಾವ ನಿಮ್ಮ ತಾಯಿ ನಿಮ್ಮ ಗಂಡ ಎಲ್ಲರನ್ನೂ ಕೂಡಿಸಿ, ಜೊತೆಗೆ ಇನ್ನು ಯಾರಾದರೂ ಹಿರಿಯರಿದ್ದರೆ ಅವರನ್ನೂ ಕರೆದು ಎಲ್ಲರ ಎದುರಿಗೆ ನಿಮಗೆ ಆಗುತ್ತಿರುವ ಅನ್ಯಾಯವನ್ನು ಹೇಳುವುದು. ಚೆನ್ನಾಗಿ ಸಂಸಾರ ಮಾಡಲು ನಿಮ್ಮ ಗಂಡ ನಿಗೆ ಬುದ್ಧಿ ಹೇಳಿಸುವುದು. ಈ ಬಗ್ಗೆ ಮನೆಯ ಮಾನ ಮರ್ಯಾದೆ ಎಂದೆಲ್ಲಾ ಯೋಚಿಸಬಾರದು. ನಿಮಗೆ ಅನ್ಯಾಯವಾಗಿದೆ. ಮತ್ತು ಅದನ್ನು ಸರಿ ಪಡಿಸಿಕೊಳ್ಳುವ ಹಕ್ಕು ನಿಮಗಿದೆ.

    ಇಲ್ಲದಿದ್ದರೆ ನಿಮ್ಮಿಬ್ಬರ ಮನಸ್ಸೂ ಪ್ರೌಢವಾಗುವವರೆಗೆ ಅಂದರೆ ಇನ್ನೂ ಒಂದೆರಡು ವರ್ಷ ತಾಳ್ಮೆಯಿಂದ ಕಾಯಬೇಕು. ಆ ಹೊತ್ತಿಗೆ ನಿಮ್ಮ ಗಂಡನ ಗುಣ ನಿಮಗೆ, ನಿಮ್ಮ ಗುಣ ನಿಮ್ಮ ಗಂಡನಿಗೆ ಸ್ವಲ್ಪವಾದರೂ ಅರ್ಥವಾಗಿರುತ್ತದೆ. ಆ ನಂತರ ಬಹುಶಃ ನಿಮ್ಮ ದಾಂಪತ್ಯ ಜೀವನದ ಹದ ನಿಮಗೆ ಸಿಕ್ಕಬಹುದು. ಅಲ್ಲಿಯವರೆಗೆ ’ ಸಾವು ಬದುಕು ’ ಎಂದೆಲ್ಲಾ ಯೋಚಿಸ ಬೇಡಿ.

    VIDEO: ತಾನು ಬಿಡೋ ‘ವಾಯು’ ಮಾರಿ ಕೋಟಿ ಕೋಟಿ ಸಂಪಾದಿಸ್ತಿರೋ ನಟಿಗೆ ಹೃದಯಾಘಾತ- ಐಸಿಯುಗೆ ದಾಖಲು

    ಪತಿ, ಪತ್ನಿ ಮತ್ತು ಶುಭ ಮುಹೂರ್ತ: 11 ವರ್ಷವಾದ್ರೂ ಮಂಚಕ್ಕೆ ಬರದ ಹೆಂಡ್ತಿ! ಕಂಗೆಟ್ಟ ಗಂಡನಿಗೆ ಕೋರ್ಟ್‌ ನೀಡ್ತು ಡಿವೋರ್ಸ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts