More

    ಕೃಷಿಗೆ ಬಿಡಾಡಿ ದನಗಳ ಕಾಟ: ಫಸಲು ಮೇಯುವುದರಿಂದ ನಷ್ಟ

    ನರೇಂದ್ರ ಎಸ್.ಮರಸಣಿಗೆ ಹೆಬ್ರಿ
    ಹೆಬ್ರಿ ತಾಲೂಕಿನ ಬಹುತೇಕ ಕಡೆಗಳಲ್ಲಿ ಭತ್ತದ ಬೇಸಾಯಕ್ಕೆ ಬಿಡಾಡಿ ದನಗಳ ಹಾವಳಿ ವಿಪರೀತವಾಗಿದ್ದು, ರೈತರಲ್ಲಿ ಚಿಂತೆ ಉಂಟು ಮಾಡಿದೆ. ಬಯಲು ಪ್ರದೇಶಗಳಲ್ಲಿ ಕೆಲವರು ಭತ್ತದ ಕೃಷಿ ಮಾಡಿದ್ದು, ಇನ್ನು ಕೆಲವರು ಕೃಷಿ ಮಾಡದೆ ಖಾಲಿ ಬಿಟ್ಟಿರುವುದರಿಂದ ಬಿಡಾಡಿ ದನಗಳು ಸಲೀಸಾಗಿ ಗದ್ದೆಗಳಿಗೆ ಬಂದು ಮೇಯುತ್ತಿವೆ.

    ಅಕಾಲಿಕ ಮಳೆಯಿಂದ ನಷ್ಟ

    ಒಂದೆಡೆ ಅಕಾಲಿಕ ಮಳೆಯ ತೊಂದರೆ, ಇನ್ನೊಂದೆಡೆ ಒಂದೇ ಬೆಳೆಯನ್ನು ಬೆಳೆಯುವ ರೈತರಿಗೆ ಎರಡನೇ ಬೆಳೆ ಬೆಳೆಯಲು ಅವಕಾಶವಿಲ್ಲ. ಗದ್ದೆಗೆ ಸೂಕ್ತ ರಕ್ಷಣೆ ಇಲ್ಲದಿರುವುದೇ ಕಾರಣವಾಗಿದೆ. ದನಗಳು ಸಣ್ಣ ಬೇಲಿಗಳನ್ನು ಹಾರಿ ಗದ್ದೆಗೆ ಹಿಂಡು ಹಿಂಡಾಗಿ ನುಗ್ಗುವುದೇ ತಲೆನೋವಾಗಿದೆ.

    ಬಿಡಾಡಿ ದನಗಳ ವಿರುದ್ಧ ಕ್ರಮಕ್ಕೆ ಆಗ್ರಹ

    ಬಹುತೇಕರು ದನಗಳನ್ನು ಹೊರಗೆ ಬಿಟ್ಟು ಬಿಡುತ್ತಾರೆ. ಕರು ಹಾಕಿದಾಗ ಮಾತ್ರ ತಮ್ಮ ದನ ಎಂದು ವಾದಿಸುತ್ತಾರೆ. ಬೀಡಾಡಿ ದನಗಳ ಬಗ್ಗೆ ಪಂಚಾಯಿತಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

    ನಷ್ಟವಿದ್ದರೂ ಕೃಷಿ ಚಟುವಟಿಕೆ ಮುಂದುವರಿಕೆ

    ಬಹುತೇಕ ರೈತರು ಕೃಷಿ ಚಟುವಟಿಕೆ ನಿಲ್ಲಬಾರದೆಂಬ ಇರಾದೆಯಿಂದ ನಷ್ಟವಿದ್ದರೂ ಕೃಷಿ ಮುಂದುವರಿಸುತ್ತಿದ್ದಾರೆ. ಕಳೆದ ವರ್ಷ ಭತ್ತದ ಗದ್ದೆ ನೀರಿಲ್ಲದ ಒಣಗಿತ್ತು. ಈ ವರ್ಷ ಸಮರ್ಪಕ ಮಳೆ ಇಲ್ಲದಿರುವುದರಿಂದ ರೈತರಿಗೆ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಗೋಚರಿಸಿದೆ. ಸಣ್ಣ ಪುಟ್ಟ ತೋಡುಗಳಲ್ಲಿ ನೀರಿಲ್ಲ, ಬಾವಿಯಲ್ಲಿ ನೀರು ಬತ್ತುತ್ತಿದೆ, ಕೊಳವೆ ಬಾವಿಗಳಲ್ಲಿ ನೀರಿಲ್ಲದ ಪರಿಸ್ಥಿತಿ ಎದುರಾಗಿದೆ. ಆ ನಿಟ್ಟಿನಲ್ಲಿ ನಿರೀಕ್ಷೆಯಷ್ಟು ಲಾಭವಿಲ್ಲದಿದ್ದರೂ ಅಂತರ್ಜಲದ ಮಟ್ಟವನ್ನು ಕಾಪಾಡಿಕೊಳ್ಳಲು ಕೆಲವರು ಕೃಷಿ ಮಾಡುತ್ತಾರೆ.

    ಕೆಲವು ರೈತರು ಕೃಷಿ ಮಾಡಿ, ಇನ್ನು ಕೆಲವರು ಮಾಡದೇ ಇರುವುದರಿಂದ ರೈತರಿಗೆ ಸಮಸ್ಯೆಯಾಗುತ್ತಿದೆ. ಇಲಾಖೆಯ ವತಿಯಿಂದ ಬೀಡಾಡಿ ದನಗಳಿಂದ ಹಾನಿಗೊಳಗಾದ ಬೆಳೆಗೆ ಪರಿಹಾರ ನೀಡುವ ನಿಯಮವಿಲ್ಲ.
    -ಚಂದ್ರಶೇಖರ್, ಉಪನಿರ್ದೇಶಕ, ಕೃಷಿ ಇಲಾಖೆ ಉಡುಪಿ.

    ಭತ್ತದ ಕೃಷಿಯಲ್ಲಿ ನಷ್ಟವಾಗುತ್ತಿದ್ದರೂ, ಕೃಷಿ ಚಟುವಟಿಕೆ ನಿಲ್ಲಬಾರದೆಂದು ಮಾಡುತ್ತಿದ್ದೇವೆ. ಗದ್ದೆಗೆ ರಕ್ಷಣೆ ನೀಡಬೇಕಾದರೆ ಬೇಲಿ ನಿರ್ಮಾಣಕ್ಕೆ ಮತ್ತಷ್ಟು ಖರ್ಚಾಗುತ್ತದೆ. ಒಟ್ಟಿನಲ್ಲಿ ನಷ್ಟದೊಂದಿಗೆ ಕೃಷಿ ಮಾಡುತ್ತಿದ್ದೇವೆ.
    -ಬಾಬಣ್ಣ, ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts