More

    ಬೆಳೆಗಾರರಿಗೆ ಇನ್ನೂ ಸಿಕ್ಕಿಲ್ಲ ರೈತಸಿರಿ

    ತುಮಕೂರು: ಸಿರಿಧಾನ್ಯ ಬೆಳೆದು ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಿದ್ದ ಜಿಲ್ಲೆಯ 11,227 ರೈತರ ಪೈಕಿ ಬಹುತೇಕರಿಗೆ
    ಅನುದಾನ ಸಿಕ್ಕಿದೆಯಾದರೂ ಇನ್ನೂ ಸಾವಿರಾರು ಅರ್ಜಿಗಳು ಧೂಳು ತಿನ್ನುತ್ತಿವೆ.

    ಕಳೆದ ವರ್ಷ 6,393 ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯಲಾಗಿತ್ತು. ಒಂದು ಹೆಕ್ಟೇರ್‌ನಲ್ಲಿ ಬೆಳೆದರೆ 10 ಸಾವಿರ ರೂ. ಪ್ರೋತ್ಸಾಹಧನ ನೀಡುವುದಾಗಿ ಸರ್ಕಾರ ಘೋಷಿಸಿದ್ದರಿಂದ ದಾಖಲೆ ಪ್ರದೇಶದಲ್ಲಿ ಬಿತ್ತನೆಯಾಗಿತ್ತು.
    ಸರ್ಕಾರದ ಮಾತಿನಂತೆ ಜಿಲ್ಲೆ ಪಾಲಿಗೆ 6ಕೋಟಿ ರೂ. ಹೆಚ್ಚು ಸಹಾಯಧನವನ್ನು ಕಳೆದ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಿದ್ದು ಸಾವಿರಾರು ರೈತರು ಅನುಕೂಲ ಪಡೆದಿದ್ದಾರೆ. ಆದರೆ, ಕೆಲವು ತಾಂತ್ರಿಕ ಕಾರಣದಿಂದ ಅಥವಾ ಬೇರಾವುದೊ ಕಾರಣಕ್ಕೆ ಇನ್ನೂ ಸಾವಿರಕ್ಕೂ ಹೆಚ್ಚು ರೈತರಿಗೆ ಪ್ರೋತ್ಸಾಹಧನ ತಲುಪಿಲ್ಲ. ಆರ್ಥಿಕ ವರ್ಷದ ಅಂತ್ಯಕ್ಕೆ ಬರಬಹುದು ಎಂದು ಕಾದಿದ್ದ ರೈತರಿಗೆ ಈಗ ಕೃಷಿ ಅಧಿಕಾರಿಗಳನ್ನು ಕೇಳಲು ಲಾಕ್‌ಡೌನ್ ಅಡ್ಡಿಯಾಗಿದೆ.

    ಪ್ರೋತ್ಸಾಹಕ್ಕೆ ಯೋಜನೆ : ರಾಜಸ್ಥಾನ ಬಿಟ್ಟರೆ ದೇಶದಲ್ಲಿ ಅತೀ ಹೆಚ್ಚು ಬರಗಾಲಕ್ಕೆ ತುತ್ತಾಗುವ ಕರ್ನಾಟಕದಲ್ಲಿ ಕೊರಲೆ, ನವಣೆ, ಹಾರಕ, ಸಾಮೆ, ಊದಲು, ಬರಗು, ಸಜ್ಜೆಯ ಆಹಾರಗುಣ ತಿಳಿದ ನಗರವಾಸಿಗಳಿಂದ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಸರ್ಕಾರ ಸಿರಿಧಾನ್ಯ ಬೆಳೆಯಲು ಪ್ರೋತ್ಸಾಹಧನ ‘ರೈತಸಿರಿ’ ಘೋಷಿಸಿತ್ತು.

    ದಾಖಲೆಗಳನ್ನು ನೀಡಿ ಕಾಯುತ್ತಿದ್ದಾರೆ… : ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆ ಇರುವುದನ್ನು ಖಾತ್ರಿಪಡಿಸಿಕೊಂಡಿದ್ದಾರೆ. ಇನ್ನೂ ಕೆಲವು ಕಡೆ ಸ್ವಲ್ಪ ಭಾಗದಲ್ಲಿ ಬೆಳೆದು ಅರ್ಜಿ ಸಲ್ಲಿಸಿದ್ದ ರೈತರಿಗೆ ಸಹಜವಾಗಿ ಸರ್ಕಾರದ ನೆರವು ಕಡಿತವಾಗಿದೆ. ಆದರೆ, ಬೆಳೆ ಬೆಳೆದು ಎಲ್ಲ ದಾಖಲಾತಿ ನೀಡಿದ ಸಾಕಷ್ಟು ರೈತರು ಪ್ರೋತ್ಸಾಹಧನಕ್ಕೆ ಕಾದು ಕುಳಿತಿದ್ದಾರೆ.

    ಸಿರಿಧಾನ್ಯ ಬೆಳೆದು ಮಾರುಕಟ್ಟೆಯಲ್ಲಿ ಮಾರಿದರೂ ಹಾಕಿದ ಕೂಲಿ ಸಿಗಲಿಲ್ಲ, ಸಿರಿಧಾನ್ಯಗಳ ಮೇಲಿನ ಮೋಹದಿಂದ ಸರ್ಕಾರದ ಪ್ರೋತ್ಸಾಹಧನ ನಂಬಿದ್ದೆ, ಈಗ ಅದೂ ಬಂದಿಲ್ಲ. ಕೂಡಲೇ ತಾಂತ್ರಿಕ ತೊಂದರೆ ಸರಿಪಡಿಸಿ ನಮ್ಮ ಸಮಸ್ಯೆ ಬಗೆಹರಿಸಲಿ.
    ಎಸ್.ಎಂ.ಶ್ರೀನಿವಾಸ್ ಸೋರಲಮಾವು, ರೈತ

    ಸಿರಿಧಾನ್ಯ ಬೆಳೆದ ರೈತರಿಗೆ ಈಗಾಗಲೇ ಪ್ರೋತ್ಸಾಹಧನ ಬಿಡುಗಡೆಯಾಗಿದೆ. ಎಲ್ಲ ದಾಖಲೆಗಳು ಸರಿಯಾಗಿದ್ದು ಖಾತೆಗೆ ಹಣ ಬಾರದ ರೈತರು ಆಯಾ ತಾಲೂಕು ಕೃಷಿ ಅಧಿಕಾರಿ ಸಂಪರ್ಕಿಸಿ ಇಂದೇ ತಿಳಿಸಲಿ, ಪರಿಶೀಲಿಸಿ ಕ್ರಮವಹಿಸುತ್ತೇನೆ.
    ರಾಜಸುಲೋಚನ ಜಂಟಿ ಕೃಷಿ ನಿರ್ದೇಶಕಿ, ತುಮಕೂರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts