ನವೀಕರಣ ಆಗದಿದ್ದರೆ ಠೇವಣಿ ಇಡಲಾಗಿದ್ದ ಬಂದೂಕು ನೀಡಲ್ಲ

1 Min Read
ನವೀಕರಣ ಆಗದಿದ್ದರೆ ಠೇವಣಿ ಇಡಲಾಗಿದ್ದ ಬಂದೂಕು ನೀಡಲ್ಲ

ಕಾರವಾರ: ಚುನಾವಣೆ ಸಂದರ್ಭದಲ್ಲಿ ಪೊಲೀಸ್ ಠಾಣೆಗಳಲ್ಲಿ ಠೇವಣಿ ಇಡಲಾಗಿದ್ದ ಬಂದೂಕುಗಳನ್ನು ಅವುಗಳ ಮಾಲೀಕರಿಗೆ ವಾಪಸ್ ನೀಡಲಾಗುತ್ತಿದೆ. ಆದರೆ, ಸಾಕಷ್ಟು ಬಂದೂಕುಗಳ ನವೀಕರಣ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಾಕಿ ಇದ್ದು, ಅಂಥ ಮಾಲೀಕರಿಗೆ ಬಂದೂಕು ಸಿಗುತ್ತಿಲ್ಲ.


ಜಿಲ್ಲೆಯಲ್ಲಿ ಬೆಳೆ ರಕ್ಷಣೆಗಾಗಿ ಪಡೆದ 5,600ಕ್ಕೂ ಅಧಿಕ ಬಂದೂಕುಗಳಿವೆ. ಸಾಕಷ್ಟು ಬಂದೂಕುಗಳ ಲೈಸೆನ್ಸ್ ಅವಧಿ ಮುಕ್ತಾಯವಾಗಿದ್ದು, ಅವರು ನವೀಕರಣಕ್ಕೆ ಹಣ ತುಂಬಿ ಅರ್ಜಿ ಸಲ್ಲಿಸಿದ್ದಾರೆ. ಪೊಲೀಸ್ ವೆರಿಫಿಕೇಶನ್ ಆಗಿ ಅರ್ಜಿಗಳು ತಹಸೀಲ್ದಾರ್ ಕಚೇರಿಗಳಿಂದ ಜಿಲ್ಲಾಧಿಕಾರಿ ಕಚೇರಿಗೆ ತಲುಪಿವೆ. ಆದರೆ, ಜಿಲ್ಲಾಧಿಕಾರಿ ಕಚೇಯಲ್ಲಿ ಡಿಸೆಂಬರ್​ನಿಂದಲೇ ಬಂದಿರುವ ಅರ್ಜಿಗಳು ಇದುವರೆಗೂ ನವೀಕರಣವಾಗಿಲ್ಲ. ಇಂಥ ಸಾವಿರಾರು ಅರ್ಜಿಗಳು ಡಿಸಿ ಕಚೇರಿಯಲ್ಲಿವೆ. ಚುನಾವಣೆ ನೀತಿ ಸಂಹಿತೆ ಮುಗಿಯಿತು, ಬಂದೂಕು ಪಡೆಯೋಣ ಎಂದು ಪೊಲೀಸ್ ಠಾಣೆಗಳಿಗೆ ತೆರಳಿದವರಿಗೆ ನವೀಕೃತ ಲೈಸನ್ಸ್ ಪಡೆದು ಬನ್ನಿ ಎಂದು ವಾಪಸ್ ಕಳಿಸುತ್ತಿದ್ದಾರೆ.


ಜಿಲ್ಲಾಧಿಕಾರಿ ಕಚೇರಿಗೆ ಕರೆ ಮಾಡಿದರೆ, ನಿಮ್ಮ ಅರ್ಜಿಗಳು ಬಂದಿವೆ. ಮೇಡಂ ಸಹಿ ಹಾಕಬೇಕಿದೆ. ಆದ ತಕ್ಷಣ ಕಳಿಸಿಕೊಡುತ್ತೇವೆ
ಎಂಬ ಉತ್ತರ ದೊರೆಯುತ್ತಿದೆ. ಆಡಳಿತ ವ್ಯವಸ್ಥೆಯ ಈ ಸಮಸ್ಯೆಯಿಂದ ಶಿರಸಿ, ಸಿದ್ದಾಪುರ, ಯಲ್ಲಾಪುರ, ಜೊಯಿಡಾ ಭಾಗದ ಸಾಕಷ್ಟು ಕೃಷಿಕರು ಸಮಸ್ಯೆಗೆ ಒಳಗಾಗಿದ್ದಾರೆ.


ಕಾಡು ಪ್ರಾಣಿಗಳ ಹಾವಳಿ: ಅಡಕೆ, ಭತ್ತ, ಬಾಳೆ, ತೆಂಗು ಬೆಳೆಗಾರರು ಕಾಡು ಪ್ರಾಣಿಗಳ ಹಾವಳಿಯಿಂದ ಬೇಸತ್ತಿದ್ದಾರೆ. ಮಂಗ, ಕೆಂಪು ಅಳಿಲು, ಕಾಡು ಹಂದಿ, ಕಾಡು ಕೋಣ ಮುಂತಾದ ಕಾಡು ಪ್ರಾಣಿಗಳ ಹಾವಳಿ ವ್ಯಾಪಕವಾಗಿದೆ. ಮುಖ್ಯವಾಗಿ ಮಂಗನ ಹಾವಳಿಯಿಂದ ಅಡಕೆ ಬೆಳೆಗಾರರು ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ. ಅವುಗಳನ್ನು ಹೊಡೆಯಲು ಅವಕಾಶ ಇಲ್ಲದಿದ್ದರೂ ಹೆದರಿಸಲಾದರೂ ಬಂದೂಕುಗಳು ಬೇಕು ಎಂಬುದು ರೈತರ ಆಗ್ರಹ.


ರೈತರು ಬೆಳೆ ರಕ್ಷಣೆಗಾಗಿ ಪಡೆದ ಬಂದೂಕುಗಳನ್ನು ವಾಪಸ್ ನೀಡಲಾಗುತ್ತಿದೆ. ಆದರೆ, ಪರವಾನಗಿ ನವೀಕರಣ ವಿಳಂಬವಾಗುತ್ತಿರುವ ಬಗ್ಗೆ ದೂರಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಅವರ ಬಳಿ ಮಾತನಾಡಿ, ಶೀಘ್ರ ಲೈಸನ್ಸ್ ನವೀಕರಣ ಮಾಡಿಕೊಡುವಂತೆ ಸೂಚನೆ ನೀಡಿದ್ದೇನೆ. | ವಿಶ್ವೇಶ್ವರ ಹೆಗಡೆ ಕಾಗೇರಿ
ಸಂಸದ, ಉತ್ತರ ಕನ್ನಡ


See also  ಕಲ್ಲಂಗಡಿ ಖರೀದಿಸಿ ಬೆಳೆಗಾರರಿಗೆ ನೆರವು
Share This Article