ಶಿರಸಿ: ರಾಜ್ಯ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆ ಏರಿಸಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಇಲ್ಲಿಯ ಅಂಚೆ ವೃತ್ತದಲ್ಲಿ ಸೇರಿದ್ದ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಘೊಷಣೆ ಕೂಗಿದರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ರಾಜ್ಯದ ಜನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ್ದಾರೆ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜನರ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಜನರ ಭಾವನೆಯನ್ನು ಅಗೌರವದಿಂದ ನೋಡುತ್ತಿದೆ. ಒಂದೆಡೆ ಅಭಿವೃದ್ಧಿ ಕಾರ್ಯಗಳೆಲ್ಲ ನಿಂತು ಹೋಗಿದ್ದರೆ, ಇನ್ನೊಂದೆಡೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಭ್ರಷ್ಟಾಚಾರ ರಾಜ್ಯದಲ್ಲಿ ಮಿತಿ ಮೀರಿದೆ. ರಾಜ್ಯದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನೂ ಚುನಾವಣೆ ಎಟಿಎಂನಂತೆ ಬಳಸಿ ಹೊರ ರಾಜ್ಯಕ್ಕೆ ಸಾಗಿಸಲಾಗಿದೆ. ಅಲ್ಪ ಸಂಖ್ಯಾತರ ಓಲೈಕೆಯಲ್ಲಿ ರಾಜ್ಯ ಸರ್ಕಾರ ನಿರತವಾಗಿದೆ. ಹಿಂದುಗಳು ಜೈ ಶ್ರೀರಾಮ ಎನ್ನುವಂತಿಲ್ಲ, ಆದರೆ, ಮುಸ್ಲಿಮರು ರಸ್ತೆಯಲ್ಲಿ ನಮಾಜ್ ಮಾಡಬಹುದು. ಅಪರಾಧಿಗಳಿಗೆ ರಕ್ಷಣೆ ಮನೋಸ್ಥಿತಿ ಕಾಂಗ್ರೆಸ್ ಹೊಂದಿರುವುದರಿಂದಲೇ ಜನರ ಜೀವನಕ್ಕೆ ಬೆಲೆ ಇಲ್ಲದಂತಾಗಿದೆ. ಆಡಳಿತ ಕುಸಿದ ಈ ಸಂದರ್ಭದಲ್ಲಿ ಬೆಲೆ ಏರಿಕೆ ಮಾಡಿದೆ. ಪ್ರಾಪರ್ಟಿ ದರ ಏರಿಸಿ ಜನರ ಸುಲಿಗೆ ಮಾಡುತ್ತಿದ್ದಾರೆ. ಸಣ್ಣ ಕೈಗಾರಿಕೆಗಳು ಮುಚ್ಚುವ ಸ್ಥಿತಿ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿ, ಉಚಿತ ಯೋಜನೆಗಳ ಆಮಿಷ ಮುಂದಿಟ್ಟ ಸಿದ್ದರಾಮಯ್ಯ ಈಗ ರಾಜ್ಯದ ಜನತೆಯನ್ನೇ ಬಲಿ ಕೊಡಲು ಹೊರಟಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಧನ ಬೆಲೆ ಏರಿಕೆಯಾದಾಗ ಸೈಕಲ್ ಮೇಲೆ ಆಗಮಿಸಿ ಫೋಸ್ ಕೊಟ್ಟಿದ್ದ ಸಿದ್ದರಾಮಯ್ಯ ಈಗ ತಮ್ಮ ಅಧಿಕಾರಾವಧಿಯಲ್ಲಿಯೇ ಇಂಧನ ಬೆಲೆ ಏರಿಸಿದ್ದಾರೆ. ಸಿಮೆಂಟ್, ಜೆಲ್ಲಿ ಕಲ್ಲು, ದೈನಂದಿನ ಅಗತ್ಯ ವಸ್ತುಗಳ ಬೆಲೆ ಏರಿಸುವ ಮೂಲಕ ಜನಸಾಮಾನ್ಯರ ಜೀವನದ ಜತೆಗೆ ಆಟವಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜೆಡಿಎಸ್ ಪ್ರಮುಖ ಉಪೇಂದ್ರ ಪೈ ಮಾತನಾಡಿ, ಇಂಧನ ದರ ಏರಿಸಿದರೆ ಅಗತ್ಯ ವಸ್ತುಗಳ ದರ ಏರಿಕೆಯಾಗಿ ಜನಸಾಮಾನ್ಯರ ಬದುಕು ಕಷ್ಟವಾಗುತ್ತದೆ ಎಂಬ ಸಾಮಾನ್ಯ ಜ್ಞಾನವೂ ಮುಖ್ಯಮಂತ್ರಿಗಿಲ್ಲ ಎಂದರು. ಎನ್.ಎಸ್. ಹೆಗಡೆ, ಕೆ.ಜಿ. ನಾಯ್ಕ, ಶ್ರೀನಿವಾಸ ಹೆಬ್ಬಾರ್, ಅನಂತಮೂರ್ತಿ ಹೆಗಡೆ, ಗೋವಿಂದ ನಾಯ್ಕ, ಉಷಾ ಹೆಗಡೆ, ಶೋಭಾ ನಾಯ್ಕ, ಗಣಪತಿ ನಾಯ್ಕ, ಅಶೋಕ ಚಲುವಾದಿ, ಪವಿತ್ರ ಹೊಸೂರು, ಗಣೇಶ ಸಣ್ಣಲಿಂಗಣ್ಣ ಇತರರಿದ್ದರು.