More

    ಆಟೋದಲ್ಲಿ ಬರುತ್ತೆ ಪಡಿತರ!; ಮನೆ ಬಾಗಿಲಿಗೇ ಪೂರೈಕೆ, ಆಂಧ್ರ ಮಾದರಿ ಜಾರಿಗೆ ಸಿದ್ಧತೆ

    | ಹರೀಶ್ ಬೇಲೂರು ಬೆಂಗಳೂರು

    ಅನ್ನಭಾಗ್ಯ ಯೋಜನೆಯಡಿ ಕಾರ್ಡ್​ದಾರರು ಪಡಿತರ ಪಡೆಯಲು ಇನ್ಮುಂದೆ ನ್ಯಾಯಬೆಲೆ ಅಂಗಡಿಗಳ ಮುಂದೆ ಕ್ಯೂ ನಿಲ್ಲಬೇಕಿಲ್ಲ. ಆಂಧ್ರಪ್ರದೇಶದ ಮಾದರಿಯಲ್ಲಿ ನ್ಯಾಯಬೆಲೆ ಅಂಗಡಿಗಳೇ ಪಡಿತರ ಕಾರ್ಡ್​ದಾರರ ಮನೆಗೆ ಲಗೇಜ್ ಆಟೋ ಕಳುಹಿಸಿ ರೇಷನ್ ತಲುಪಿಸಲಿವೆ. ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಸಿದ್ಧತೆ ಆರಂಭಿದೆ. ಆಂಧ್ರದ ಯೋಜನೆ ಬಗ್ಗೆ ಆಹಾರ ಇಲಾಖೆ ಅಧ್ಯಯನ ನಡೆಸುತ್ತಿದ್ದು, ಶೀಘ್ರದಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಯೋಜನೆ ರೂಪುರೇಷೆಯ ಬಗ್ಗೆ ಆಹಾರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಒಂದು ಸಭೆ ನಡೆದಿದ್ದು, ಮುಂದಿನ ನಾಲ್ಕೈದು ದಿನದಲ್ಲಿ ಸಚಿವರ ಮಟ್ಟದಲ್ಲಿ ಮತ್ತೊಂದು ಸುತ್ತಿನ ಸಭೆ ನಿಗದಿಯಾಗಿದೆ.

    ಆಂಧ್ರದಲ್ಲೇನಿದೆ?: ಆಂಧ್ರಪ್ರದೇಶದ ಜಗನ್ ಮೋಹನ್ ರೆಡ್ಡಿ ಸರ್ಕಾರ ಅಲ್ಲಿನ ಕಾರ್ಡ್​ದಾರರಿಗೆ ನ್ಯಾಯಬೆಲೆ ಅಂಗಡಿಗಳಿಂದ ಲಗೇಜ್ ಆಟೋದಲ್ಲಿ ಪಡಿತರ ಪದಾರ್ಥಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೇ ತಲುಪಿಸುತ್ತಿದೆ. ಪ್ರತಿ ಲಗೇಜ್ ಆಟೋಕ್ಕೆ ಇಬ್ಬರು ಸಿಬ್ಬಂದಿಯಿದ್ದು, ಇದರಲ್ಲಿ ಒಬ್ಬ ಸಿಬ್ಬಂದಿ ಸರ್ಕಾರದಿಂದಲೇ ನೇಮಕವಾಗಿರುತ್ತಾನೆ. ಲಗೇಜ್ ವಾಹನಗಳಲ್ಲೇ ತೂಕದ ಯಂತ್ರ ಅಳವಡಿಸಿದ್ದು, ಸ್ಥಳದಲ್ಲೇ ಪಡಿತರವನ್ನು ತೂಕ ಮಾಡಿ ವಿತರಿಸಲಾಗುತ್ತದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ರೇಷನ್ ಹಂಚಿಕೆ ಮಾಡುವ ಬಗ್ಗೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆ ಬಾಗಿಲಿಗೇ ಪಡಿತರ ತಲುಪಿಸುವ ಯೋಜನೆ ಜಾರಿ ಬಗ್ಗೆ ಈಚೆಗೆ ಮಾತನಾಡಿದ್ದರು.

    ಸಂಪೂರ್ಣ ಗಣಕೀಕರಣ: ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ವಯ ಗಣಕೀಕರಣದಡಿ ಪಡಿತರ ಚೀಟಿದಾರರ ದತ್ತಾಂಶವನ್ನು ಸಿದ್ಧಪಡಿಸಲಾಗುತ್ತಿದೆ. ಪ್ರತಿ ಫಲಾನುಭವಿಯ ಆಧಾರ್ ಸಂಖ್ಯೆಯನ್ನು ಕಾರ್ಡ್​ಗೆ ಜೋಡಣೆ ಮಾಡಲಾಗಿದೆ. ಹೊಸ ರೇಷನ್ ಕಾರ್ಡ್​ಗಾಗಿ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸುವ ವ್ಯವಸ್ಥೆ, ಗೋದಾಮುಗಳಲ್ಲಿ ಗಣಕಯಂತ್ರಗಳ ಅಳವಡಿಕೆ, ಆನ್​ಲೈನ್ ಬಿಲ್ಲಿಂಗ್ ಮತ್ತು ನ್ಯಾಯಬೆಲೆ ಅಂಗಡಿಗಳಲ್ಲಿ ಪಿಒಎಸ್ ಯಂತ್ರ ಅಳವಡಿಸಲಾಗಿದೆ.

    ಎಷ್ಟು ಕಾರ್ಡ್​ಗಳಿವೆ?: ರಾಜ್ಯದಲ್ಲಿ ಸದ್ಯ 10,89,445 ಅಂತ್ಯೋ ದಯ, 1,15,02,798 ಬಿಪಿಎಲ್ ಹಾಗೂ 21,44,006 ಎಪಿಎಲ್ ಸೇರಿ ಒಟ್ಟಾರೆ 1,47,36,249 ರೇಷನ್ ಕಾರ್ಡ್​ಗಳಿವೆ.

    19,963 ನ್ಯಾಯಬೆಲೆ ಅಂಗಡಿಗಳಿಂದ ಪ್ರತಿ ತಿಂಗಳು ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್​ದಾರರಿಗೆ ಉಚಿತ ರೇಷನ್ ಹಂಚಿಕೆ ಮಾಡಲಾಗುತ್ತಿದೆ. ಅದೇರೀತಿ, ಎಪಿಎಲ್ ಕಾರ್ಡ್​ಗೆ ಪ್ರತಿ ಕೆಜಿಗೆ 15 ರೂ.ನಂತೆ 10 ಕೆಜಿ ಅಕ್ಕಿಯನ್ನು ನೀಡಲಾಗುತ್ತಿದೆ. ಹೊಸ ಯೋಜನೆ ಅನುಷ್ಠಾನವಾದರೆ ಈ ಎಲ್ಲ ಫಲಾನುಭವಿಗಳ ಮನೆ ಬಾಗಿಲಿಗೇ ರೇಷನ್ ತಲುಪಲಿದೆ.

    ಆಂಧ್ರ ಯೋಜನೆ ಹೇಗೆ?

    • ಪಡಿತರ ವಿತರಣೆಗಾಗಿ 539 ಕೋಟಿ ರೂ. ವೆಚ್ಚದಲ್ಲಿ 9260 ಮೊಬೈಲ್ ವಾಹನಗಳ ಖರೀದಿ
    • ಉದ್ಯೋಗ ಖಾತ್ರಿ ಯೋಜನೆಯಡಿ ನಿರುದ್ಯೋಗಿ ಯುವಕರಿಗೆ ಶೇ.60 ಸಬ್ಸಿಡಿ ದರದಲ್ಲಿ ವಾಹನ ನೀಡಿಕೆ
    • ಮರುಬಳಕೆ ಚೀಲದಲ್ಲಿ ಪಡಿತರ ಪ್ಯಾಕ್ ಮಾಡಿ, ಸೀಲ್ ಹಾಗೂ ಯೂನಿಕ್ ಕೋಡ್ ಅಳವಡಿಕೆ
    • ಫಲಾನುಭವಿಗಳ ಮನೆಗೇ ತೆರಳಿ ಅವರ ಬೆರಳಚ್ಚು ಪಡೆದು ಪಡಿತರ ವಿತರಿಸಲಾಗುತ್ತದೆ
    • ಅಕ್ರಮ ತಡೆಯುವ ಉದ್ದೇಶದಿಂದ ವಾಹನಗಳಿಗೆ ಜಿಪಿಎಸ್ ತಂತ್ರಜ್ಞಾನ ಅಳವಡಿಕೆ
    • ಪ್ರತಿವಾಹನ ಪ್ರತಿತಿಂಗಳ 18 ದಿನದ ಒಳಗಾಗಿ ಕಾರ್ಡ್​ದಾರರಿಗೆ ಪಡಿತರ ತಲುಪಿಸುವ ವ್ಯವಸ್ಥೆ
    • ವಾಹನ ಹಾಗೂ ಪಡಿತರ ವಿತರಣೆ ವಿವರ ತಿಳಿಯಲು ಪ್ರತ್ಯೇಕ ಮೊಬೈಲ್ ಆಪ್ ಅಭಿವೃದ್ಧಿ

    ಯೋಜನೆ ಜಾರಿಗೆ ಸರ್ಕಾರಕ್ಕೆ ಸಲ್ಲಿಸಲು ಪ್ರಸ್ತಾವನೆ ಸಿದ್ಧವಾಗಿದೆ. ಮುಂದಿನ ವಾರ ಅಂತಿಮ ತೀರ್ವನವಾಗಲಿದೆ. ಯೋಜನೆಯಿಂದ ಕಾರ್ಡ್​ದಾರರಿಗೆ ಸಾಕಷ್ಟು ಅನುಕೂಲವಾಗಲಿದೆ.

    | ಶಮ್ಲಾ ಇಕ್ಬಾಲ್ ಆಹಾರ ಇಲಾಖೆ ಆಯುಕ್ತೆ.

    ಕಮಿಷನ್ ಇರುತ್ತೆ: ಹೊಸ ಯೋಜನೆ ಜಾರಿಯಿಂದ ನ್ಯಾಯಬೆಲೆ ಅಂಗಡಿ ಮಾಲೀಕರು ಆತಂಕಪಡಬೇಕಿಲ್ಲ. ಸದ್ಯ ಪ್ರತಿ ತಿಂಗಳು ಕಾರ್ಡ್​ದಾರರಿಗೆ ರೇಷನ್ ಹಂಚಿಕೆ ಮಾಡುವ ಸಂಬಂಧ ಪ್ರತಿ ಕ್ವಿಂಟಾಲ್​ಗೆ 100 ರೂ. ನಂತೆ ಸರ್ಕಾರ, ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಕಮಿಷನ್ ನೀಡುತ್ತಿದೆ. ಹೊಸ ಯೋಜನೆ ಜಾರಿಯಾದರೂ ಮಾಲೀಕರಿಗೆ ಕಮಿಷನ್ ನಿಲ್ಲುವುದಿಲ್ಲ.

    ಅನ್ನಭಾಗ್ಯ ಯೋಜನೆಯಡಿ ಕಾರ್ಡ್​ದಾರರ ಮನೆ ಬಾಗಿಲಿಗೇ ಪಡಿತರ ತಲುಪಿಸುವ ಯೋಜನೆ ಜಾರಿಗೆ ಪೂರ್ವ ಸಿದ್ಧತೆ ನಡೆಯುತ್ತಿದೆ. ಶೀಘ್ರದಲ್ಲೇ ಅಧಿಕಾರಿಗಳ ಸಭೆ ನಡೆಸಲಿದ್ದೇನೆ. ಈ ಸಭೆಯಲ್ಲಿ ಹೊಸ ಯೋಜನೆ ಅನುಷ್ಠಾನಕ್ಕೆ ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ವಿಸõತ ಚರ್ಚೆ ನಡೆಯಲಿದೆ. ಆನಂತರ ಯೋಜನೆಗೆ ಒಂದು ರೂಪ ಸಿಗಲಿದೆ.

    | ಉಮೇಶ್ ಕತ್ತಿ ಆಹಾರ ಸಚಿವ

    ಹೇಗಿರುತ್ತೆ ಹೊಸ ವ್ಯವಸ್ಥೆ?

    • ಆಯಾ ನ್ಯಾಯಬೆಲೆ ಅಂಗಡಿಗಳಿಂದ ಲಗೇಜ್ ಆಟೋ ಮೂಲಕ ಪಡಿತರ ಸಾಗಾಟ
    • ಮನೆಮನೆಗೆ ಹೋಗಿ ಪಡಿತರ ವಿತರಿ ಸಲು ಇಬ್ಬರು ಸಿಬ್ಬಂದಿ ನೇಮಕ
    • ಆಟೋದಲ್ಲೇ ತೂಕದ ಯಂತ್ರದ ಸೌಲಭ್ಯ

    ಅನುಕೂಲಗಳೇನು?

    • 2-3 ಕಿ.ಮೀ. ದೂರ ಹೋಗಿ ಪಡಿತರ ಪಡೆಯುವ ಕಾರ್ಡ್​ದಾರರು ಇನ್ನುಮುಂದೆ ನಿರಾಳ
    • ಬೆಟ್ಟ ಗುಡ್ಡ ಪ್ರದೇಶಗಳಲ್ಲಿ ವಾಸಿಸುತ್ತಿರುವ ಕಾರ್ಡ್​ದಾರರು ಪರದಾಡಬೇಕಿಲ್ಲ
    • ರೇಷನ್ ಪಡೆಯಲು ಆ ದಿನದ ಕೆಲಸ ಬಿಟ್ಟು ತಾಸುಗಟ್ಟಲೆ ಕ್ಯೂ ನಿಲ್ಲಬೇಕಿಲ್ಲ
    • ಅಂಗವಿಕಲರಿಗೆ ಸಹಾಯ, ಅನಧಿಕೃತ ಪಡಿತರ ಕಾರ್ಡ್​ಗೆ ರೇಷನ್ ವಿತರಣೆಗೆ ತಡೆ
    • ನ್ಯಾಯಬೆಲೆ ಅಂಗಡಿಗಳ ಮಾಲೀಕರ ದಬ್ಬಾಳಿಕೆಗೆ ಕಡಿವಾಣ ಬೀಳಲಿದೆ
    • ಸಮರ್ಪಕವಾಗಿ ರೇಷನ್ ಹಂಚಿಕೆ, ಮೋಸ ಮಾಡಿದರೆ ಸಿಕ್ಕಿಬೀಳೋದು ಗ್ಯಾರಂಟಿ
    • ಸಿಬ್ಬಂದಿ ನೇಮಕದ ಮೂಲಕ ಹಲವು ನಿರುದ್ಯೋಗಿಗಳಿಗೆ ಉದ್ಯೋಗ
    • ತೂಕದಲ್ಲಿ ಮೋಸ, ಹಣ ವಸೂಲಿ, ಕಿರುಕುಳ ಪ್ರಕರಣಗಳಿಗೂ ಕಡಿವಾಣ

    ಮನೆಯಲ್ಲೇ ವ್ಯಾಪಾರ ಮಾಡುವ ಮಹಿಳೆಯರೇ ಎಚ್ಚರ ಎಚ್ಚರ; ರಾಣಿಪೇಟೆಯಲ್ಲಿ ಭೀಕರ ಕೊಲೆ!

    ಚಲಿಸುತ್ತಿದ್ದ ಬೈಕ್​ನಿಂದಲೇ ಹಣದ ಕಟ್ಟು ಎಗರಿಸಿದ ಕಳ್ಳ; ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಯ್ತು ಕಳ್ಳನ ಕರಾಮತ್ತು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts