ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ನಾಲ್ಕು ಸ್ಥಾನಗಳಿಗೆ ಐವರು ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಕಾಂಗ್ರೆಸ್ (03), ಬಿಜೆಪಿ (01), ಜೆಡಿಎಸ್ (01) ಅಭ್ಯರ್ಥಿ ಕಣದಲ್ಲಿದ್ದಾರೆ. ಇನ್ನು ಚುನಾವಣೆಯ ವಿಚಾರಕ್ಕೆ ಬರುವುದಾದರೆ ಓರ್ವ ಶಾಸಕ ಮತದಾನ ಮಾಡಿಲ್ಲವೆಂದು ತಿಳಿದು ಬಂದಿದೆ.
223 ಶಾಸಕರ ಪೈಕಿ 222 ಮಂದಿ ಮತ ಚಲಾಯಿಸಿದ್ದು, ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಮತದಾನ ಮಾಡದೆ ಗೈರು ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ.
ನಿರೀಕ್ಷೆಯಂತೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮೂರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಬಿಜೆಪಿಯಿಂದ ಅಖಾಡಕ್ಕೆ ಇಳಿದಿದ್ದ ಓರ್ವ ಅಭ್ಯರ್ಥಿಗೆ ಗೆಲುವಾಗಿದೆ. ಬಿಜೆಪಿ ಶಾಸಕರಾದ ಎಸ್.ಟಿ. ಸೋಮಶೇಖರ್ ಅಡ್ಡ ಮತದಾನ ಮಾಡಿದರೆ ಮತ್ತೋರ್ವ ಶಾಸಕ ಶಿವರಾಂ ಹೆಬ್ಬಾರ್ ಗೈರಾಗಿದ್ದಾರೆ. ಈ ಮೂಲಕ ನಿರೀಕ್ಷೆಯಂತೆ ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ ಸೋಲಾಗಿದೆ.
ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ; ಎಂಟನೇ ಬಾರಿ ಅರವಿಂದ್ ಕೇಜ್ರಿವಾಲ್ಗೆ ಸಮನ್ಸ್ ಜಾರಿ ಮಾಡಿದ ED
ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ ಅಜಯ್ ಮಕನ್ ಗೆ 47, ಸೈಯದ್ ನಾಸಿರ್ ಹುಸೇನ್ ಗೆ 47 ಹಾಗೂ ಜಿ.ಸಿ. ಚಂದ್ರಶೇಖರ್ಗೆ 45 ಮತಗಳು ಬಿದ್ದಿವೆ. ಇನ್ನು ಬಿಜೆಪಿ ಅಭ್ಯರ್ಥಿ ನಾರಾಯಣ ಸಾ ಭಾಂಡಗೆಗೆ 47 ಮತಗಳು ಬಿದ್ದಿದ್ದು ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ 36 ಮತಗಳು ಸಿಕ್ಕಿವೆ.
ವಿಧಾನಸೌಧದಲ್ಲಿ ಕಾಣಿಸಿಕೊಂಡ ಹೆಬ್ಬಾರ್ ಅಡ್ಡಮತದಾನ ಮಾಡುವ ಸಾಧ್ಯತೆ ಹೆಚ್ಚಿತ್ತು. ಈ ಸಂಬಂಧ ವಿಧಾನಸೌಧದಲ್ಲಿರುವ ಅವರ ಕೊಠಡಿಗೆ ವಿಪ್ ಅಂಟಿಸಿ ಬಿಜೆಪಿಗೆ ಮತ ಚಲಾಯಿಸುವಂತೆ ಸೂಚಿಸಲಾಗಿತ್ತು.