More

    ಕಾವೇರಿ ಮೂಲಸ್ಥಾನದಲ್ಲಿಯೇ ಬತ್ತಿ ಹೋಗುತ್ತಿರುವುದು ಆತಂಕಕಾರಿ

    ಕುಶಾಲನಗರ: ಜೀವನದಿ ಕಾವೇರಿ ಮೂಲಸ್ಥಾನದಲ್ಲಿಯೇ ಬತ್ತಿ ಹೋಗುತ್ತಿರುವುದು ಆತಂಕಕಾರಿ ಬೆಳವಣಿಗೆ ಆಗಿದೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ರಾಜ್ಯ ಸಂಚಾಲಕ ಎಂ.ಎನ್.ಚಂದ್ರಮೋಹನ್ ಆತಂಕ ವ್ಯಕ್ತಪಡಿಸಿದ್ದಾರೆ.

    ಕುಶಾಲನಗರ ಕಾವೇರಿ ಆರತಿ ಕ್ಷೇತ್ರದಲ್ಲಿ ಹುಣ್ಣಿಮೆ ಅಂಗವಾಗಿ ಇತ್ತೀಚೆಗೆ ಆಯೋಜಿಸಿದ್ದ 158ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಬಾರಿ ಕಾವೇರಿ ಮೂಲ ಸ್ಥಾನದಲ್ಲಿಯೇ ಕಾವೇರಿ ಸಂಪೂರ್ಣ ಬತ್ತಿ ಹೋಗಿದ್ದು, ಕಳೆದ ಒಂದು ತಿಂಗಳಿನಿಂದ ನದಿಯಲ್ಲಿ ನೀರಿನ ಹರಿವು ಸ್ಥಗಿತಗೊಂಡಿದೆ. ಜಲಚರಗಳು ಸಂಪೂರ್ಣ ನಾಶಗೊಂಡಿವೆ. ಜತೆಗೆ ನದಿ ತಟದ ಗ್ರಾಮ, ಪಟ್ಟಣಗಳ ಜನತೆಗೆ ಕುಡಿಯುವ ನೀರಿಗೆ ಸಮಸ್ಯೆ ತಲೆದೋರಿದ್ದು, ಜಿಲ್ಲಾಡಳಿತ ಹಾಗೂ ಸರ್ಕಾರ ಈ ಬಗ್ಗೆ ವಾಸ್ತವ ಸ್ಥಿತಿ ಅಧ್ಯಯನ ಮಾಡುವುದರೊಂದಿಗೆ ಕಾವೇರಿ ಸಂರಕ್ಷಣೆಗಾಗಿ ಮುಂದಿನ ದಿನಗಳಲ್ಲಿ ಅಗತ್ಯ ಕಾರ್ಯ ಯೋಜನೆಗಳನ್ನು ರೂಪಿಸಬೇಕಾಗಿದೆ ಎಂದರು.

    ಆರತಿ ಕಾರ್ಯಕ್ರಮ ಅಂಗವಾಗಿ ಅರ್ಚಕ ಕೃಷ್ಣಮೂರ್ತಿ ಭಟ್ ಅವರು ಕುಂಕುಮಾರ್ಚನೆ, ಅಷ್ಟೋತ್ತರ ನಂತರ ನದಿಗೆ ಸಾಮೂಹಿಕವಾಗಿ ಆರತಿ ಬೆಳಗಿದರು.
    ನದಿಯಲ್ಲಿ ನೀರಿನ ಹರಿವು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಪೂಜಾ ಕಾರ್ಯಕ್ರಮಗಳಿಗೆ ಈ ಬಾರಿ ಅಗತ್ಯವಾದ ಗಂಗಾಜಲಕ್ಕೆ ನದಿ ತಟದ ಕೊಳವೆ ಬಾವಿಯನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿತ್ತು. ಆರತಿ ಕಟ್ಟೆಯ ವ್ಯಾಪ್ತಿಯ ನದಿಯಲ್ಲಿ ಕಲುಷಿತ ನೀರು ಹಾಗೂ ಸಂಪೂರ್ಣವಾಗಿ ಕಲ್ಲು ಬಂಡೆಗಳ ದೃಶ್ಯ ಹೊರತಾಗಿ ಸ್ವಚ್ಛವಾದ ನೀರಿನ ಕೊರತೆ ಎದ್ದು ಕಾಣುತ್ತಿತ್ತು.

    ಕಳೆದ 13 ವರ್ಷಗಳಿಂದ ಹುಣ್ಣಿಮೆ ದಿನ ನಿರಂತರವಾಗಿ ಈ ಪ್ರದೇಶದಲ್ಲಿ ಕಾವೇರಿಗೆ ಆರತಿ ಕಾರ್ಯಕ್ರಮ ನಡೆಯುತ್ತಿದ್ದು ಇದೇ ಪ್ರಥಮ ಬಾರಿಗೆ ಈ ರೀತಿಯ ದೃಶ್ಯ ಕಾಣುವಂತಾಗಿದೆ ಎಂದು ಡಿ.ಆರ್.ಸೋಮಶೇಖರ್ ಆತಂಕ ವ್ಯಕ್ತಪಡಿಸಿದರು.
    ಕಾರ್ಯಕ್ರಮದಲ್ಲಿ ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಬಳಪಂಡ ಪೊನ್ನು, ಚೈತನ್ಯ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts