More

    ಜೀರ್ಣಕ್ರಿಯೆಯನ್ನು ವೃದ್ಧಿಸುವ 10 ಉದರ ಸ್ನೇಹಿ ಆಹಾರಗಳಿವು…

    ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಮಾತು ಸದಾ ಕಾಲ ಮನುಷ್ಯರನ್ನು ಎಚ್ಚರಿಸುತ್ತದೆ. ಮನುಷ್ಯ ಇಂದು ಆಧುನಿಕವಾಗಿ ಎಷ್ಟೆ ಮುಂದುವರಿದಿದ್ದರೂ ಕೂಡ ಅಷ್ಟೇ ಕಾಯಿಲೆಗಳನ್ನು ಮನೆಗೆ ಆಹ್ವಾನ ಮಾಡಿಕೊಂಡಿದ್ದಾನೆ. ಅದರಲ್ಲಿ ಜೀರ್ಣಕ್ರಿಯೆ ಸಮಸ್ಯೆಯು ಪ್ರಮುಖವಾದ್ದುದ್ದು. ಕಡಿಮೆ ಫೈಬರ್ ಅಂಶವಿರುವ ಆಹಾರ, ಕರುಕಲು ತಿನಿಸುಗಳು ಹಾಗೂ ಸಂಸ್ಕರಿಸದ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ದಿನನಿತ್ಯದ ಆಹಾರ ಕ್ರಮಗಳಲ್ಲಿ ಬಳಸುತ್ತಿರುವುದು ಜೀರ್ಣ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದಾಗಿ ಆಸಿಡಿಟಿ, ಹೊಟ್ಟೆ ಉಬ್ಬುವುದು, ಮಲಬದ್ಧತೆ ಮತ್ತು ವಾಕರಿಕೆಯಂತಹ ಅನೇಕ ಸಮಸ್ಯೆಗಳು ಇಂದು ಸಾಮಾನ್ಯವಾಗಿವೆ. ಆದರೆ, ಇವುಗಳನ್ನು ನಿವಾರಿಸಲು ಅನೇಕ ರಾಮಬಾಣಗಳು ಸಹ ಮಾರುಕಟ್ಟೆಗಳ ಕಪಾಟುಗಳಲ್ಲಿ ಇವೆ. ಹೀಗಾಗಿ ಅವುಗಳನ್ನು ನಮ್ಮ ಆಹಾರ ಕ್ರಮದಲ್ಲಿ ನಿಯಮಿತವಾಗಿ ಸೇರಿಸಿಕೊಂಡರೆ ಜೀರ್ಣಕ್ರಿಯೆ ಸಮಸ್ಯೆ ಬಹುದೂರ ಸಾಗುತ್ತದೆ. ನಮ್ಮ ಜೀರ್ಣಕ್ರಿಯೆಗೆ ನೆರವಾಗುವ 10 ಪ್ರಮುಖ ಆಹಾರ ಪದಾರ್ಥಗಳು ಇಲ್ಲಿವೆ.

    1. ಧಾನ್ಯಗಳು
    ಕೆಂಪಕ್ಕಿ (ಬ್ರೌನ್​ ರೈಸ್​), ಓಟ್ಸ್​ ಮತ್ತು ಎಲ್ಲ ರೀತಿಯ ಧಾನ್ಯಗಳು ಯಥೇಚ್ಚ ಪ್ರಮಾಣದಲ್ಲಿ ಫೈಬರ್​ ಅಂಶವನ್ನು ಒಳಗೊಂಡಿದ್ದು, ಜೀರ್ಣಕ್ರಿಯೆ ಸಮಸ್ಯೆಗಳಿಗೆ ತುಂಬಾ ಪರಿಣಾಮಕಾರಿಯಾಗಿವೆ. ಹೊಟ್ಟೆ ಉಬ್ಬರ, ವಾಕರಿಕೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿವಾರಿಸುತ್ತದೆ. ಆದರೆ, ನಿಮಗೆ ಮೊದಲೇ ಉದರ ಸಂಬಂಧಿ ಕಾಯಿಲೆಯಿದ್ದರೆ, ನೀವು ಇವುಗಳನ್ನು ತೆಗೆದುಕೊಳ್ಳಲೇಬಾರದು.

    2. ಮೊಸರು
    ನೀವು ಗಮನಿಸಿರಬಹುದು ಹೋಟೆಲ್​ಗಳಿಗೆ ಹೋದಾಗ ಪ್ರತಿ ಊಟದ ಜತೆ ಮೊಸರು ಕೂಡ ಅಡಕವಾಗಿರುತ್ತದೆ. ಮೊಸರಿನಲ್ಲಿ ಲಕ್ಷಾಂತರ ಬ್ಯಾಕ್ಟೀರಿಯಗಳಿದ್ದು, ಅದು ನಿಮ್ಮ ಕರುಳಿಗೆ ಸಹಕಾರಿಯಾಗಿದೆ. ಜೀರ್ಣಾಂಗವ್ಯೂಹಕ್ಕೆ ಅಗತ್ಯವಾಗಿ ಬೇಕಾದ ಖನಿಜಾಂಶವನ್ನು ಒದಗಿಸಿ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ. ಹೀಗಾಗಿ ಮೊಸರನ್ನು ನಿಮ್ಮ ಆಹಾರ ಕ್ರಮದಲ್ಲಿ ಅಳವಡಿಸಿಕೊಂಡರೆ ಉತ್ತಮ.

    3. ಬಾಳೇಹಣ್ಣು
    ಬಾಳೇಹಣ್ಣು ಜೀರ್ಣಕ್ರಿಯೆಗೆ ಉತ್ತಮ ಎಂಬುದು ಸರ್ವರಿಗೂ ತಿಳಿದೇ ಇದೆ. ಹೀಗಾಗಿ ಇದು ನಿಮ್ಮ ಆಹಾರ ಕ್ರಮದಲ್ಲಿದ್ದರೆ ಉದರ ಸಮಸ್ಯೆಯಿಂದ ದೂರ ಇರಬಹುದು. ಕರುಳಿನ ಕಾರ್ಯವನ್ನು ಸಮತೋಲನದಲ್ಲಿ ಇಡುವ ಮೂಲಕ ಗ್ಯಾಸ್ಟ್ರಿಕ್​ ಸಮಸ್ಯೆ ನಿವಾರಣೆಗೆ ಬಾಳೇಹಣ್ಣು ಸಹಕಾರಿಯಾಗಿದೆ. ಅಲ್ಲದೆ, ಅತಿಸಾರಕ್ಕೂ ಇದು ಒಳ್ಳೆಯ ಮದ್ದು. ಬಾಳೇಹಣ್ಣಿನಲ್ಲಿ ಎಲೆಕ್ಟ್ರೋಲೈಟ್ಸ್​ ಮತ್ತು ಪೊಟ್ಯಾಸಿಯಂ ಹೇರಳವಾಗಿದ್ದು, ಉತ್ತಮ ಜೀರ್ಣಕಾರಿ ಆರೋಗ್ಯವನ್ನು ಮರುಸ್ಥಾಪಿಸಲು ಸಹಾಯ ಮಾಡುತ್ತದೆ.

    4. ಸೇಬು
    ಮೊಸರಿನಂತೆಯೇ ಸೇಬು ಕೂಡ ಸಮೃದ್ಧಿ ಬ್ಯಾಕ್ಟೀರಿಯಾಗಳನ್ನು ಹೊಂದಿದ್ದು, ಕರುಳಿನ ಆರೋಗ್ಯವನ್ನು ನಿರ್ವಹಣೆ ಮಾಡುತ್ತದೆ. ಸೇಬಿನಲ್ಲಿ ವಿಟಮಿನ್​ ಎ ಮತ್ತು ಸಿ ಹಾಗೂ ಪೋಷಕಾಂಶಗಳು ಮತ್ತು ಫೋಲೇಟ್​, ಪೊಟ್ಯಾಸಿಯಂ ಮತ್ತು ಫಾಸ್ಪರಸ್​ನಂತಹ ಮಿನರಲ್ಸ್​ಗಳಿದ್ದು, ಇವು ಉತ್ತಮ ಜೀರ್ಣಕ್ರಿಯೆಯನ್ನು ಮರುಸ್ಥಾಪಿಸಲು ಮತ್ತು ಕರುಳಿನ ಸರಿಯಾದ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.

    5. ಅವಕಾಡೋ
    ಹಣ್ಣುಗಳಲ್ಲಿ ಅತ್ಯುತ್ತಮ ಫೈಬರ್​ ಅಂಶವನ್ನು ಅವಕಾಡೋ ಹೊಂದಿರುವುದಲ್ಲದೆ, ಆರೋಗ್ಯಕರ ಕೊಬ್ಬಿನಾಂಶ ಕೂಡ ಇದರಲ್ಲಿದೆ. ಇದು ಬೀಟಾ-ಕ್ಯಾರೋಟಿನ್ ಅನ್ನು ವಿಟಮಿನ್ ಎ ಆಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ಹೀಗಾಗಿ ಜೀರ್ಣಾಂಗವ್ಯೂಹದ ಲೋಳೆಪೊರೆಯ ಒಳಪದರವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯ ಪ್ರಕ್ರಿಯೆಗಳಿಗೆ ನೆರವು ನೀಡುತ್ತದೆ.

    6. ಸೌತೆಕಾಯಿ
    ಆರೋಗ್ಯಕರ ಜೀವನಕ್ಕೆ ಸೌತೆಕಾಯಿಯು ಕೂಡ ಪ್ರಮುಖ ಆಹಾರ. ಇದರಲ್ಲಿ ಕ್ಯಾಲ್ಸಿಯಂ, ಫೋಲೇಟ್, ಕೊಬ್ಬು, ವಿಟಮಿನ್ ಸಿ ಮತ್ತು ಎರೆಪ್ಸಿನ್‌ನಂತಹ ಮಿನರಲ್ಸ್​ ಮತ್ತು ಪೋಷಕಾಂಶಗಳು ಹಾಗೂ ಖನಿಜಗಳ ಜೊತೆಗೆ ಫೈಬರ್‌ನಲ್ಲಿ ಸಮೃದ್ಧವಾಗಿದ್ದು, ಇವು ಸರಿಯಾದ ಜೀರ್ಣಕ್ರಿಯೆಗೆ ಬಹಳ ಪರಿಣಾಮಕಾರಿಯಾಗಿದೆ. ಗ್ಯಾಸ್ಟ್ರಿಕ್​, ಆಸಿಡಿಟಿ, ಎದೆಯುರಿ ಮತ್ತು ಜಠರದ ಹುಣ್ಣುಗಳಂತಹ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ.

    7. ಬೀಟ್​ರೂಟ್​
    ಫೈಬರ್, ಪೊಟ್ಯಾಷಿಯಂ ಮತ್ತು ಮೆಗ್ನಿಷಿಯಂ​ ಅಂಶ ಸಮೃದ್ಧಿಯಾಗಿರುವ ಒಂದು ಅತ್ಯುತ್ತಮ ಆಹಾರವೆಂದರೆ ಅದು ಬೀಟ್​ರೂಟ್​. ಆರೋಗ್ಯಕಾರಿ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಮರುಸ್ಥಾಪಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಮಲಬದ್ದತೆ ನಿವಾರಣೆಯಲ್ಲಿ ಪ್ರಮುಖವಾಗಿ ಕೆಲಸ ಮಾಡುತ್ತದೆ. ಸಲಾಡ್​ನಲ್ಲಿ ಹಸಿಯಾಗಿ ಬಳಸಿದರೆ ಒಳ್ಳೆಯ ಫಲಿತಾಂಶ ದೊರೆಯಲಿದೆ.

    8. ಶುಂಠಿ
    ಈ ಒಂದು ಮಸಾಲೆ ಪದಾರ್ಥದಲ್ಲಿ ಅನೇಕ ಜೀರ್ಣಕ್ರಿಯೆ ಆರೋಗ್ಯಕರ ಲಾಭಗಳಿವೆ. ಬೇದಿ, ವಾಕರಿಕೆ, ಗ್ಯಾಸ್ಟ್ರಿಕ್ ಮತ್ತು ಹಸಿವು ಆಗದಿರುವುದನ್ನು ಗುಣಪಡಿಸುತ್ತದೆ. ಆದರೆ, ಶುಂಠಿಯನ್ನು ಮಿತವಾಗಿ ಬಳಸಬೇಕು. ದಿನವೊಂದಕ್ಕೆ 2 ರಿಂದ 3 ಗ್ರಾಂ ಬಳಸಬೇಕು. ಅದಕ್ಕಿಂತ ಹೆಚ್ಚು ಬಳಸಿದರೆ ಎದೆಯುರಿಗೆ ಕಾರಣವಾಗುತ್ತದೆ.

    9. ನಿಂಬೆ ರಸ
    ನಿಂಬೆಹಣ್ಣು ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ ಮತ್ತು ನೀರು ಜೀರ್ಣಕ್ರಿಯೆಯನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ. ಹೀಗಾಗಿ ಎರಡನ್ನು ಮಿಶ್ರಣ ಮಾಡಿ ಸೇರಿಸಿದಾಗ ದೇಹದ ಜೀರ್ಣಕ್ರಿಯೆ ಪರಿಣಾಮಕಾರಿಯಾಗಿರುತ್ತದೆ. ಉಗುರುಬೆಚ್ಚನೆಯ ನೀರಿಗೆ ನಿಂಬೆರಸವನ್ನು ಬೆರೆಸಿ ಪ್ರತಿದಿನ ಬೆಳಗ್ಗೆ ಸೇವಿಸಿದರೆ ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಬಹುದು.

    10. ಸೂಪ್​ಗಳು
    ಜೀರ್ಣಕ್ರಿಯೆಗೆ ಸೂಪ್​ಗಳು ಕೂಡ ತುಂಬಾ ಸಹಕಾರಿ. ಪೌಷ್ಟಿಕಾಂಶಯುಕ್ತ ತರಕಾರಿಗಳು ಮತ್ತು ಮಾಂಸದಿಂದ ಸೂಪ್ ಕೂಡಿರುತ್ತದೆ. ಏಕೆಂದರೆ, ಅವುಗಳಲ್ಲಿನ ಪೌಷ್ಟಿಕಾಂಶದ ಮೌಲ್ಯವನ್ನು ಉಳಿಸಿಕೊಳ್ಳಲು ನಿಧಾನವಾಗಿ ಬೇಯಿಸಲಾಗುತ್ತದೆ. ಹೀಗಾಗಿ ಜೀರ್ಣಿಸಿಕೊಳ್ಳಲು ಸುಲಭವಾದ ಹಾಗೂ ಹಸಿವನ್ನುಂಟುಮಾಡುವ ಮತ್ತು ತೂಕ ಇಳಿಸಲು ಉಪಕಾರಿಯಾಗಿದೆ.

    ಹೀಗೆ ಸಾಕಷ್ಟು ಆಹಾರಗಳು ಜೀರ್ಣಕ್ರಿಯೆಗೆ ಸಹಕಾರಿಯಾಗಿದ್ದು, ನಿಯಮಿತವಾಗಿ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಉದರಸಂಬಂಧಿ ಕಾಯಿಲೆಯಿಂದ ದೂರ ಇರಬಹುದು. ಬಿಸಿ ನೀರು ಕೂಡ ಜೀರ್ಣಕ್ರಿಯೆಗೆ ಪ್ರಯೋಜನಕಾರಿಯಾಗಿದೆ. ಏನೇ ಇರಲಿ ನಮ್ಮ ಆರೋಗ್ಯವು ನಮ್ಮ ಆಹಾರ ಕ್ರಮದ ಮೇಲೆ ಅವಲಂಬನೆಯಾಗಿರುತ್ತದೆ. ಅದಕ್ಕೆ ಹೇಳೋದು ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ.

    21 ದಿನಗಳಲ್ಲಿ 551 ಕೋಟಿ ರೂ. ಬೆಳೆ ಪರಿಹಾರ ವಿತರಣೆ; 1,281 ಕೋಟಿ ರೂಪಾಯಿ ನೆರವು ಕೋರಿ ಕೇಂದ್ರಕ್ಕೆ ಪ್ರಸ್ತಾವನೆ: ಸಚಿವ ಅಶೋಕ್ ಮಾಹಿತಿ

    ಬಹುಮಾನಕ್ಕಾಗಿ 3 ದಶಕದ ಅಲೆದಾಟ, ಇನ್ನೂ ನಿಂತಿಲ್ಲ ಹೋರಾಟ; ಪಶ್ಚಿಮಘಟ್ಟದಲ್ಲಿ ಸೇನೆ ಹೆಲಿಕಾಪ್ಟರ್ ಹುಡುಕಿಕೊಟ್ಟ ಯುವಕ ಈಗ ವೃದ್ಧ..

    ಜನಜಂಗುಳಿಗೆ ಬೇಕು ಬ್ರೇಕ್: ಕರೊನಾ ತಡೆಗೆ ತಜ್ಞರ ಸಲಹೆ; ಮದುವೆ, ಹಬ್ಬ, ಸಮಾರಂಭಗಳಿಗೆ ನಿರ್ಬಂಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts