More

    21 ದಿನಗಳಲ್ಲಿ 551 ಕೋಟಿ ರೂ. ಬೆಳೆ ಪರಿಹಾರ ವಿತರಣೆ; 1,281 ಕೋಟಿ ರೂಪಾಯಿ ನೆರವು ಕೋರಿ ಕೇಂದ್ರಕ್ಕೆ ಪ್ರಸ್ತಾವನೆ: ಸಚಿವ ಅಶೋಕ್ ಮಾಹಿತಿ

    ಬೆಂಗಳೂರು: ಅತಿವೃಷ್ಟಿ, ನೆರೆ ಹಾವಳಿಯಿಂದ ಬೆಳೆ ಕಳೆದುಕೊಂಡ ರೈತರಿಗೆ ಕೇವಲ 21 ದಿನಗಳಲ್ಲಿ 551 ಕೋಟಿ ರೂ. ಪರಿಹಾರ ವಿತರಣೆ (ಇನ್ಪುಟ್ ಸಬ್ಸಿಡಿ) ಮಾಡಿ ಹೊಸ ದಾಖಲೆ ಸೃಷ್ಟಿಸಿದ್ದೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು ಸೆ.2 ರಿಂದ ಡಿ.8ರವರೆಗೆ ಒಟ್ಟು 10,62,237 ಸಂತ್ರಸ್ತ ರೈತರಿಗೆ 681.90 ಕೋಟಿ ರೂ. ಇನ್ಪುಟ್ ಸಬ್ಸಿಡಿ ಪಾವತಿಸಲಾಗಿದೆ ಎಂಬ ಮಾಹಿತಿ ನೀಡಿದರು.

    ಬೆಳೆ ನಷ್ಟ ಸಮೀಕ್ಷೆ, ಪರಿಹಾರದ ಮೊತ್ತ, ಸಂತ್ರಸ್ತ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಪರಿಹಾರ ಜಮಾ ವ್ಯವಸ್ಥೆಯನ್ನು ಕಾಲೋಚಿತಗೊಳಿಸಲಾಗಿದೆ. ಹಿಂದೆಲ್ಲ ಸಮೀಕ್ಷೆ ವರದಿ ಬಂದ ನಂತರ ಸಂತ್ರಸ್ತ ರೈತರ ದತ್ತಾಂಶ ತರಿಸಿಕೊಂಡು ಪರಿಹಾರ ವಿತರಿಸಲಾಗುತ್ತಿತ್ತು. ನೊಂದ ರೈತರಲ್ಲಿ ಕೆಲವರು ತಕ್ಷಣಕ್ಕೆ ಮಾಹಿತಿ ನೀಡಿದರೆ, ಇನ್ನೂ ಹಲವು 2-3 ತಿಂಗಳು ಬಳಿಕ ವಿವರ ಒದಗಿಸುತ್ತಿದ್ದರು. ಇದರಿಂದಾಗಿ ಪರಿಹಾರ ವಿತರಣೆ ವಿಳಂಬ, ನೊಂದ ರೈತರು ಕಚೇರಿಗೆ ಅಲೆಯುತ್ತಿದ್ದರು. ಅಷ್ಟೇ ಅಲ್ಲ, ಅದೆಷ್ಟೋ ರೈತರು ಅಲೆದು, ಕಾದು ಸುಸ್ತಾಗಿ ಪರಿಹಾರದ ಸಹವಾಸ ಬೇಡವೆಂದು ಅಸಹಾಯಕತೆಯಿಂದ ಕೈಚೆಲ್ಲಿದ ನಿದರ್ಶನಗಳಿವೆ. ಸಕಾಲಕ್ಕೆ ಪರಿಹಾರ ನೀಡಿದರೆ ಸಂತ್ರಸ್ತ ರೈತರಿಗೆ ನೆರವಾಗುತ್ತದೆ ಎಂದು ತಿಳಿದು, ಬೆಳೆ ನಷ್ಟದ ವರದಿ ಅಪ್​ಡೇಟ್ ಆದ ಬೆನ್ನಲ್ಲೇ ರೈತರ ಬ್ಯಾಂಕ್ ಖಾತೆಗೆ ಇನ್ಪುಟ್ ಸಬ್ಸಿಡಿ ಪಾವತಿಸಲಾಗುತ್ತಿದ್ದು, ಬಹು ದೊಡ್ಡ ಸುಧಾರಣೆಯಾಗಿದೆ ಎಂದು ಆರ್.ಅಶೋಕ್ ಹೇಳಿಕೊಂಡರು.

    ಕೇಂದ್ರಕ್ಕೆ ಪ್ರಸ್ತಾವನೆ: ಕಳೆದ ಎರಡು ತಿಂಗಳಲ್ಲಿ ಸಂಭವಿಸಿದ ಅತಿವೃಷ್ಟಿ, ಪ್ರವಾಹದಿಂದ ಬೆಳೆ, ಖಾಸಗಿ ಹಾಗೂ ಸರ್ಕಾರಿ ಆಸ್ತಿಪಾಸ್ತಿ ಸೇರಿ ಆರೇಳು ಸಾವಿರ ಕೋಟಿ ರೂ. ನಷ್ಟವಾಗಿರುವ ಅಂದಾಜಿದೆ. ರಾಷ್ಟ್ರೀಯ ನೈಸರ್ಗಿಕ ವಿಪತ್ತು ಪರಿಹಾರ ನಿಧಿ (ಎನ್​ಡಿಆರ್​ಎಫ್) ನಿಯಮಾವಳಿ ಪ್ರಕಾರ 1,281 ಕೋಟಿ ರೂ. ಪರಿಹಾರ ಬಿಡುಗಡೆಗೆ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರ ತಂಡ ವಸ್ತುಸ್ಥಿತಿ ಅಧ್ಯಯನಕ್ಕೆ ಬಂದಾಗ ಹಾನಿಯ ನೈಜ ಚಿತ್ರಣ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ವಿಡಿಯೋ ಮಾಡಿಟ್ಟುಕೊಳ್ಳಲಾಗಿದೆ. ವಿಡಿಯೋ, ಛಾಯಾಚಿತ್ರದಿಂದ ನಷ್ಟದ ತೀವ್ರತೆ, ವಾಸ್ತವಾಂಶ ಕೇಂದ್ರ ತಂಡಕ್ಕೆ ಗೊತ್ತಾಗಲಿದ್ದು, ಸ್ಥಳ ಸಮೀಕ್ಷೆಯಿಂದ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ನೆರವಾಗಲಿದೆ ಎಂದರು. ಎನ್​ಡಿಆರ್​ಎಫ್ ನಿಯಮಾವಳಿ ಪ್ರಕಾರ ಬೆಳೆ ನಷ್ಟ 619 ಕೋಟಿ ರೂ., ತೋಟಗಾರಿಕೆ- 143 ಕೋಟಿ ರೂ., ಬಹು ವಾರ್ಷಿಕ ಬೆಳೆ- 89 ಕೋಟಿ ರೂ., 20,083 ಮನೆಗಳಿಗೆ ಹಾನಿಯಿಂದ 79 ಕೋಟಿ ರೂ., ರಸ್ತೆ- 147, ಸರ್ಕಾರಿ ಕಟ್ಟಡ- 154, ಗ್ರಾಮೀಣ ರಸ್ತೆ- 58, ಇತರ ಸಂಪರ್ಕ ರಸ್ತೆಗಳು- 10 ಕೋಟಿ ರೂ. ಇತ್ಯಾದಿ ಸ್ವತ್ತುಗಳ ನಷ್ಟದ ಬಾಬತ್ತು 1,281 ಕೋಟಿ ರೂ.ಗಳಲ್ಲಿ ಸೇರಿದೆ ಎಂದು ಆರ್.ಅಶೋಕ್ ವಿವರಿಸಿದರು.

    ಕರೊನಾ ಪರಿಹಾರಕ್ಕೆ 15,999 ಅರ್ಜಿಗಳು: ಕರೊನಾದಿಂದ ಮೃತಪಟ್ಟವರಿಗೆ ಪರಿಹಾರ ಬಯಸಿ ಈವರೆಗೆ ಒಟ್ಟು 15,999 ಅರ್ಜಿಗಳು ಸ್ವೀಕೃತವಾಗಿದ್ದು, ಇದರಲ್ಲಿ 9,080 ಅರ್ಜಿಗಳು ಬಿಪಿಎಲ್ ಕುಟುಂಬಗಳಿಗೆ ಸೇರಿವೆ ಎಂದು ಆರ್.ಅಶೋಕ್ ತಿಳಿಸಿದರು. ಬಿಪಿಎಲ್ ಕುಟುಂಬದಲ್ಲಿ ಮೃತರ ಪೈಕಿ ಒಬ್ಬರಿಗೆ ರಾಜ್ಯ ಸರ್ಕಾರ ಒಂದು ಲಕ್ಷ ರೂ. ಪರಿಹಾರ ನೀಡಲಿದ್ದು, ಸಾಂಕೇತಿಕವಾಗಿ ಕೆಲವರ ಬ್ಯಾಂಕ್ ಖಾತೆಗೆ ಪರಿಹಾರ ಜಮೆ ಮಾಡಲಾಗಿದೆ. ಒಟ್ಟಾರೆ ಸ್ವೀಕೃತ ಅರ್ಜಿಗಳ ಪೈಕಿ ಬಿಪಿಎಲ್ ಕುಟುಂಬದ 6,736 ಮತ್ತು ಎಪಿಎಲ್ ಕುಟುಂಬದ 5,242 ಅರ್ಜಿಗಳು ಜಿಲ್ಲಾಧಿಕಾರಿ ಹಂತದಲ್ಲಿ ಅನುಮೋದನೆ ಪಡೆದುಕೊಂಡಿವೆ. ಅಲ್ಲದೆ, ಕರೊನಾದಿಂದ ಮೃತಪಟ್ಟ ಎಲ್ಲರಿಗೂ ಕೇಂದ್ರ ಸರ್ಕಾರ ತಲಾ 50,000 ರೂ. ಪರಿಹಾರ ನೀಡುತ್ತಿದ್ದು, ಒಟ್ಟು 9,647 ಅರ್ಜಿದಾರರಿಗೆ ಪರಿಹಾರಧನ ಪಾವತಿಯಾಗಿದೆ ಎಂದು ಆರ್.ಅಶೋಕ್ ಅಂಕಿ-ಅಂಶಗಳನ್ನು ವಿವರಿಸಿದರು.

    ಮತ್ತೊಮ್ಮೆ ಅದೇ ಬಟ್ಟೆ ಧರಿಸಿ ಸಿಕ್ಕಿಬಿದ್ದ ಕಳ್ಳ; ಕದಿಯಲು ಯತ್ನಿಸಿ ಬರಿಗೈಲಿ ವಾಪಸ್ ಆದವ ಈಗ ಪೊಲೀಸರ ವಶಕ್ಕೆ..

    ಇಲ್ಲಿ ಹುತ್ತಕ್ಕೆ ಹಾಲೆರೆಯಲ್ಲ, ಕೋಳಿಯನ್ನೇ ಬಲಿ ಕೊಡ್ತಾರೆ!; ವಿಶಿಷ್ಟವಾಗಿ ಷಷ್ಠಿ ಆಚರಣೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts