More

    ಬಹುಮಾನಕ್ಕಾಗಿ 3 ದಶಕದ ಅಲೆದಾಟ, ಇನ್ನೂ ನಿಂತಿಲ್ಲ ಹೋರಾಟ; ಪಶ್ಚಿಮಘಟ್ಟದಲ್ಲಿ ಸೇನೆ ಹೆಲಿಕಾಪ್ಟರ್ ಹುಡುಕಿಕೊಟ್ಟ ಯುವಕ ಈಗ ವೃದ್ಧ..

    | ಮಂಜು ಬನವಾಸೆ/ಕಾಂತರಾಜು ಹೊನ್ನೆಕೋಡಿ ಸಕಲೇಶಪುರ

    ತಾಲೂಕಿನ ಪಶ್ಚಿಮಘಟ್ಟ ವ್ಯಾಪ್ತಿಯ ಅರಮನೆ ಗುಡ್ಡದಲ್ಲಿ 1991ರಲ್ಲಿ ಪತನವಾಗಿದ್ದ ನೌಕಾದಳದ ಹೆಲಿಕಾಪ್ಟರ್ ಅವಶೇಷಗಳನ್ನು ಹುಡುಕಿಕೊಟ್ಟಿದ್ದ ಯುವಕ, ಇದೀಗ ವೃದ್ಧಾಪ್ಯ ತಲುಪಿದ್ದರೂ ಸರ್ಕಾರ ಅವರಿಗೆ ನೀಡಿದ್ದ ಬಹುಮಾನದ ಭರವಸೆ ಇಂದಿಗೂ ಈಡೇರಿಲ್ಲ!

    ಮಂಗಳೂರಿನಿಂದ ಬೆಂಗಳೂರಿಗೆ ಅತ್ಯಂತ ಮಹತ್ವದ ದಾಖಲೆಗಳನ್ನು ಸಾಗಿಸುತ್ತಿದ್ದ ನೌಕಾದಳಕ್ಕೆ ಸೇರಿದ ಹೆಲಿಕಾಪ್ಟರ್ ಅರಮನೆ ಗುಡ್ಡ ತಪ್ಪಲಿನಲ್ಲಿ ಪತನಗೊಂಡಿತ್ತು. ಘಟನೆಯಲ್ಲಿ ಒಬ್ಬ ಕರ್ನಲ್ ಸೇರಿ ಅದರಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಮೃತಪಟ್ಟಿದ್ದರು. ಕೇಂದ್ರ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿ, ಎಷ್ಟೇ ವೈಜ್ಞಾನಿಕ ತಂತ್ರಜ್ಞಾನ ಬಳಸಿ ತಿಂಗಳುಗಟ್ಟಲೆ ಹುಡುಕಾಟ ನಡೆಸಿದರೂ ಹೆಲಿಕಾಪ್ಟರ್ ಪತ್ತೆ ಸಾಧ್ಯವಾಗಿರಲೇ ಇಲ್ಲ.

    ಬಹುಮಾನದ ಆಮಿಷ: ಹೆಲಿಕಾಪ್ಟರ್ ಹಾಗೂ ಬ್ಲಾ್ಯಕ್​ಬಾಕ್ಸ್ ಹುಡುಕಿಕೊಟ್ಟವರಿಗೆ ಬಹುಮಾನ ಘೊಷಿಸಿದ ಅಂದಿನ ಕೇಂದ್ರ ಸರ್ಕಾರ, ಸಾರ್ವಜನಿಕರನ್ನು ಈ ಕೆಲಸದಲ್ಲಿ ತೊಡಗಿಸಿತು. ಬಹುಮಾನದ ಆಸೆಗೆ ಬಿದ್ದ ಪಶ್ಚಿಮಘಟ್ಟದಂಚಿನ ಹತ್ತಾರು ಗ್ರಾಮಗಳ ನೂರಾರು ಯುವಕರು ವಾರಗಟ್ಟಲೆ ಮನೆಬಿಟ್ಟು ಕಾಡಿನಲ್ಲಿ ಅಲೆದಾಡಿದರೂ ಯಾವುದೇ ಪ್ರಯೋಜವಾಗಲಿಲ್ಲ. ವನಗೂರು ಗ್ರಾಮದ ಪುಟ್ಟಸ್ವಾಮಿಗೌಡ ಎಂಬ 33ರ ಯುವಕ (ಈಗ 62 ವರ್ಷ ಛಲದಂಕ ಮಲ್ಲನಂತೆ ಏಕಾಂಗಿಯಾಗಿ ದಟ್ಟಡವಿಯಲ್ಲಿ ಪ್ರಾಣದ ಹಂಗು ತೊರೆದು ಹುಡುಕಾಟ ಮುಂದುವರಿಸಿದ್ದರು. ಸತತ ಹುಡುಕಾಟದ ಫಲವಾಗಿ ಎಲ್ಲರಿಗೂ ಮರೆತೇ ಹೋಗಿದ್ದ ಕಾಪ್ಟರ್ ಪಳೆಯುಳಿಕೆಯನ್ನು 1992ರ ಅಕ್ಟೋಬರ್​ನಲ್ಲಿ ಪತ್ತೆಹಚ್ಚುವಲ್ಲಿ ಯಶಸ್ವಿಯಾದರು.

    ಬಹುಮಾನಕ್ಕಾಗಿ 3 ದಶಕದ ಅಲೆದಾಟ, ಇನ್ನೂ ನಿಂತಿಲ್ಲ ಹೋರಾಟ; ಪಶ್ಚಿಮಘಟ್ಟದಲ್ಲಿ ಸೇನೆ ಹೆಲಿಕಾಪ್ಟರ್ ಹುಡುಕಿಕೊಟ್ಟ ಯುವಕ ಈಗ ವೃದ್ಧ..
    ಹೆಲಿಕಾಪ್ಟರ್ ಬ್ಲ್ಯಾಕ್​ಬಾಕ್ಸ್​ ಹುಡುಕಿಕೊಟ್ಟ ಪುಟ್ಟಸ್ವಾಮಿಗೌಡರಿಗೆ 1992ರಲ್ಲಿ ನೌಕಾದಳದ ಅಧಿಕಾರಿ ಹಾಗೂ ಅಂದಿನ ಉಪವಿಭಾಗಾಧಿಕಾರಿ ಅತುಲ್​ಕುಮಾರ್ ತಿವಾರಿ 10 ಸಾವಿರ ರೂ. ಬಹುಮಾನದ ಚೆಕ್ ವಿತರಿಸಿದ ಸಂದರ್ಭದಲ್ಲಿ ಕ್ಲಿಕ್ಕಿಸಿದ್ದ ಫೋಟೊ.

    ಆಗ ಸಕಲೇಶಪುರ ಉಪವಿಭಾಗಾಧಿಕಾರಿಯಾಗಿದ್ದ ಅತುಲ್​ಕುಮಾರ್ ತಿವಾರಿ 10 ಸಾವಿರ ರೂ. ಬಹುಮಾನ ನೀಡಿದ್ದರು. ಆಗಿನ ಜಿಲ್ಲಾಧಿಕಾರಿ, ಪುಟ್ಟಸ್ವಾಮಿಗೌಡ ಶ್ರಮಕ್ಕೆ ಪ್ರತಿಫಲವಾಗಿ ಸರ್ಕಾರದಿಂದ 4 ಎಕರೆ ಕೃಷಿ ಭೂಮಿ, ಇಲ್ಲವೇ ಕೇಂದ್ರ ಸರ್ಕಾರದ ನೌಕರಿ ಕೊಡಿಸುವುದಾಗಿ ಭರವಸೆ ನೀಡಿದ್ದರು. ‘ದಡ ಸೇರಿದ ನಂತರ ಅಂಬಿಗನ ಹಂಗೇಕೆ’ ಎಂಬಂತೆ ಬ್ಲಾಕ್​ಬಾಕ್ಸ್ ಹುಡುಕಿಕೊಟ್ಟ ಪುಟ್ಟಸ್ವಾಮಿಗೌಡರನ್ನು ಸರ್ಕಾರ ಮರೆತೇ ಬಿಟ್ಟಿತು. ಜಿಲ್ಲೆಗೆ ಹೊಸ ಡಿಸಿ, ಸಕಲೇಶಪುರಕ್ಕೆ ಹೊಸ ಎಸಿ ಬಂದಾಗಲೆಲ್ಲ ಅವರನ್ನು ಭೇಟಿಯಾಗಿ ಬಹುಮಾನದ ಭರವಸೆ ಈಡೇರಿಸುವಂತೆ ಮನವಿ ಮಾಡುವುದು ಅವರಿಗೆ ಅಭ್ಯಾಸವಾಗಿಬಿಟ್ಟಿದೆ. ಆದರೆ ಯಾರೊಬ್ಬರೂ ಅವರ ಮನವಿಯನ್ನು ಗಂಭೀರವಾಗಿ ಪರಿಗಣಿಸುವ ಗೋಜಿಗೇ ಹೋಗುತ್ತಿಲ್ಲ.

    ನಾನು ಬೇರೆ ಯಾರೂ ಮಾಡಲು ಸಾಧ್ಯವಾಗದ ಕೆಲಸವನ್ನು ಮಾಡಿದೆ. 4 ಎಕರೆ ಜಮೀನು, ಇಲ್ಲವೇ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಆಗಿನ ಅಧಿಕಾರಿಗಳು ಹೇಳಿದ್ದರು. ಈಗಲೂ ನಾನು ಎಸಿ ಕಚೇರಿ, ತಾಲೂಕು ಕಚೇರಿಗಳಿಗೆ ಹೋಗಿ ಮನವಿ ಮಾಡುತ್ತಲೇ ಇದ್ದೇನೆ. ಈಗಲಾದರೂ ಸರ್ಕಾರ ಕೊಟ್ಟ ಭರವಸೆ ಉಳಿಸಿಕೊಳ್ಳಬೇಕು.

    | ಪುಟ್ಟಸ್ವಾಮಿಗೌಡ ಹೆಲಿಕಾಪ್ಟರ್ ಅವಶೇಷ ಹುಡುಕಿಕೊಟ್ಟಿದ್ದವರು

    ಗುಡ್ಡದ ಇಳಿಜಾರಿನಲ್ಲಿ ಹೊಳೆಯುತ್ತಿತ್ತು ಚಾಪರ್ ಬ್ಲೇಡ್

    ಬಹುಮಾನಕ್ಕಾಗಿ 3 ದಶಕದ ಅಲೆದಾಟ, ಇನ್ನೂ ನಿಂತಿಲ್ಲ ಹೋರಾಟ; ಪಶ್ಚಿಮಘಟ್ಟದಲ್ಲಿ ಸೇನೆ ಹೆಲಿಕಾಪ್ಟರ್ ಹುಡುಕಿಕೊಟ್ಟ ಯುವಕ ಈಗ ವೃದ್ಧ..
    ಸಕಲೇಶಪುರ ತಾಲ್ಲೂಕಿನ ಅರಮನೆ ಗುಡ್ಡದಲ್ಲಿ ಪತ್ತೆಯಾದ 1991ರಲ್ಲಿ ಪತನವಾಗಿದ್ದ ನೌಕಾದಳ ಹೆಲಿಕಾಪ್ಟರ್ ಅವಶೇಷ.

    1991ರಲ್ಲಿ ಪತನವಾದ ಹೆಲಿಕಾಪ್ಟರ್​ನ ಅವಶೇಷಗಳನ್ನು ವಶಕ್ಕೆ ಪಡೆದ ಕಾರ್ಯಾಚರಣೆಯ ಅನುಭವವನ್ನು ಅಂದಿನ ಪ್ರೊಬೇಷನರಿ ಐಎಎಸ್ ಅಧಿಕಾರಿ ಅತುಲ್​ಕುಮಾರ್ ತಿವಾರಿ, 2017ರ ಅಕ್ಟೋಬರ್​ನಲ್ಲಿ ಫೇಸ್​ಬುಕ್ ಪೋಸ್ಟ್​ನಲ್ಲಿ ಹೀಗೆ ಬರೆದುಕೊಂಡಿದ್ದಾರೆ; 1991ರಲ್ಲಿ ಪಶ್ಚಿಮಘಟ್ಟಗಳನ್ನು ದಾಟುತ್ತಿದ್ದ ನೌಕಾಪಡೆಯ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿತ್ತು. ನೌಕಾಪಡೆಯ ಸಿಬ್ಬಂದಿ ಹುಡುಕಾಟ ನಡೆಸಿದರೂ ಫಲ ಸಿಕ್ಕಲಿಲ್ಲ. ಆಗ ಪುಟ್ಟಸ್ವಾಮಿಗೌಡ ಎಂಬಾತ ನೀಡಿದ ಮಾಹಿತಿಯಂತೆ ನಾವು ಸ್ಥಳೀಯ ಪೊಲೀಸರೊಂದಿಗೆ ಅರಮನೆ ಗುಡ್ಡಕ್ಕೆ ಹೊರಟೆವು. ಜಿಗಣೆಗಳ ಕಾಟ ತಪ್ಪಿಸಿಕೊಳ್ಳಲು ಕಾಲುಗಳಿಗೆ ತಂಬಾಕಿನ ಎಲೆಗಳನ್ನು ಕಟ್ಟಿಕೊಂಡು ರಸ್ತೆ ಬಿಟ್ಟು ಬೆಟ್ಟ ಹತ್ತಲು ಆರಂಭಿಸಿದೆವು. ನಮ್ಮ ಸೊಂಟದೆತ್ತರವಿದ್ದ ಹುಲ್ಲಿನ ನಡುವೆ ಬೆಟ್ಟ ಹತ್ತಲು 4 ಗಂಟೆಗಳು ಬೇಕಾಯಿತು. ಪುಟ್ಟಸ್ವಾಮಿಗೌಡ ತಿಳಿಸಿದ ಸ್ಥಳ ತಲುಪಿದಾಗ, ಅರಬ್ಬಿ ಸಮುದ್ರಕ್ಕೆ ಎದುರಾಗಿರುವ ಅರಮನೆ ಗುಡ್ಡದ ಕಡಿದಾದ ಬಂಡೆಯ ಮೇಲೆ ಹೆಲಿಕಾಪ್ಟರ್ ಅವಶೇಷಗಳು ಹಾಗೂ ಎಲುಬುಗಳು ಬಿದ್ದಿದ್ದವು. ಬ್ಲಾಕ್​ಬಾಕ್ಸ್ ಇಳಿಜಾರಿನಲ್ಲಿ ಬಿದ್ದಿದ್ದರಿಂದ ಹಗ್ಗ ಬಳಸಿ ಕೆಳಗಿಳಿದು ಮೇಲೆ ತರಬೇಕಾಯಿತು. ಮರುದಿನ ಬೆಳಗ್ಗೆ ಪತ್ರಿಕೆಗಳ ಮುಖಪುಟದಲ್ಲಿ ನಮ್ಮ ಫೋಟೋಗಳು ಕಾಣಿಸಿಕೊಂಡವು. ಗೋವಾದಲ್ಲಿರುವ ಭಾರತೀಯ ನೌಕಾಪಡೆಗೆ ವಿಷಯ ತಿಳಿಸಿ, ಪುಟ್ಟಸ್ವಾಮಿಗೌಡರಿಗೆ ಬಹುಮಾನ ನೀಡಲು ಶಿಫಾರಸು ಮಾಡಿದ್ದೆ. ಪಣಜಿಯಿಂದ ಆಗಮಿಸಿದ ನೌಕಾದಳದ ಕಮಾಂಡರೊಬ್ಬರು ಪುಟ್ಟಸ್ವಾಮಿಗೌಡರಿಗೆ 10 ಸಾವಿರ ರೂ. ಬಹುಮಾನದ ಚೆಕ್ ನೀಡಿದರು.

    ಹೆಲಿಕಾಪ್ಟರ್​ ದುರಂತದಲ್ಲಿ ಹುತಾತ್ಮರಾದವರ ಪಾರ್ಥಿವ ಶರೀರ ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ಅಪಘಾತ!

    ಇಲ್ಲಿ ಹುತ್ತಕ್ಕೆ ಹಾಲೆರೆಯಲ್ಲ, ಕೋಳಿಯನ್ನೇ ಬಲಿ ಕೊಡ್ತಾರೆ!; ವಿಶಿಷ್ಟವಾಗಿ ಷಷ್ಠಿ ಆಚರಣೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts