More

    ಇ-ಟೆಂಡರ್​ನಿಂದ ಮೆಕ್ಕೆಜೋಳ ಖರೀದಿ

    ಹಾವೇರಿ: ಸ್ಥಳೀಯ ಎಪಿಎಂಸಿಯಲ್ಲಿ ಇ-ಟೆಂಡರ್ ಮೂಲಕ ಮೆಕ್ಕೆಜೋಳ, ಜೋಳ, ಸೋಯಾಬೀನ್ ಖರೀದಿ ಪ್ರಕ್ರಿಯೆಗೆ ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ಗುರುವಾರ ಚಾಲನೆ ನೀಡಿದರು. ಟೆಂಡರ್​ಗಿಟ್ಟಿದ್ದ ಮೆಕ್ಕೆಜೋಳದ ಚೀಲಗಳಿಗೆ ಪೂಜೆ ಸಲ್ಲಿಸಿದರು.

    ಈವರೆಗೆ ಎಪಿಎಂಸಿಯಲ್ಲಿ ಪರಸ್ಪರ ಒಪ್ಪಂದದ ಮೂಲಕ ಧಾನ್ಯ ಮಾರಾಟವಾಗುತ್ತಿತ್ತು. ಗುರುವಾರದಿಂದ ಇ-ಟೆಂಡರ್ ಮೂಲಕ ಆರಂಭಗೊಂಡಿದ್ದು, ಸ್ಪರ್ಧಾತ್ಮಕ ಬೆಲೆ ದೊರೆಯುವ ನಿರೀಕ್ಷೆ ರೈತರದು.

    ಈಗಾಗಲೇ ಹತ್ತಿ ಹಾಗೂ ಶೇಂಗಾ ಫಸಲನ್ನು ಟೆಂಡರ್ ಮೂಲಕ ಹರಾಜು ಮಾಡಿ ಮಾರಾಟ ಮಾಡಲಾಗುತ್ತಿದೆ. ಮೆಕ್ಕೆಜೋಳ, ಸೋಯಾಬೀನ್ ಹಾಗೂ ಜೋಳ ಬೆಳೆ ಸೇರಿರಲಿಲ್ಲ. ಇದರಿಂದ ಬೇಸತ್ತ ರೈತರು ತಮಗೆ ಅನುಕೂಲಕರ ಬೆಲೆ ಸಿಕ್ಕ ಕಡೆ ಮಾರಾಟ ಮಾಡುತ್ತಿದ್ದರು. ಅಲ್ಲದೆ, ಕೆಲವರು ಮಾರುಕಟ್ಟೆಗಿಂತ ಹೆಚ್ಚಿನ ಬೆಲೆ ನೀಡುವುದಾಗಿ ರೈತರಿಗೆ ಆಮಿಷವೊಡ್ಡಿ ಮೆಕ್ಕೆಜೋಳ ಖರೀದಿಸಿ ಹಣ ಕೊಡದೇ ವಂಚಿಸುತ್ತಿದ್ದ ಪ್ರಕರಣಗಳೂ ಬೆಳಕಿಗೆ ಬಂದಿವೆ.

    ಇದನ್ನು ಗಮನಿಸಿದ್ದ ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಅವರು ದಾವಣಗೆರೆ ಎಪಿಎಂಸಿಯಲ್ಲಿನ ಮಾದರಿಯನ್ನು ಇಲ್ಲಿಯೂ ಅಳವಡಿಸಿಕೊಳ್ಳಲು ಇತ್ತೀಚೆಗೆ ದಲ್ಲಾಳಿಗಳು ಹಾಗೂ ಖರೀದಿದಾರರ ಸಭೆ ನಡೆಸಿ ಮಾಹಿತಿ ನೀಡಿದ್ದರು. ಅದಕ್ಕೆ ಎಲ್ಲರೂ ಸಮ್ಮತಿಸಿದ್ದರು.

    ರೈತರಿಗೆ ಅನುಕೂಲಗಳೇನು…?: ಇ- ಟೆಂಡರ್ ಪದ್ಧತಿಯಲ್ಲಿ ಜಿಲ್ಲೆಯಷ್ಟಲ್ಲದೆ, ಅನ್ಯ ಜಿಲ್ಲೆಯ ಖರೀದಿದಾರರೂ ಭಾಗವಹಿಸಬಹುದು. ಇದರಿಂದ ರೈತರ ಉತ್ಪನ್ನಕ್ಕೆ ಸ್ಪರ್ಧಾತ್ಮಕ ಬೆಲೆ ದೊರೆಯುತ್ತದೆ. ಉತ್ತಮ ಬೆಲೆ ಸಿಕ್ಕಾಗ ರೈತರು ಮಾರಾಟ ಮಾಡಬಹುದು. ಎಪಿಎಂಸಿಯ ಪಾಲುದಾರಿಕೆಯಲ್ಲಿಯೇ ಮಾರಾಟ ಪ್ರಕ್ರಿಯೆ ನಡೆಯುವುದರಿಂದ ಹಣವು ಉತ್ಪನ್ನ ಮಾರಾಟವಾದ 24 ತಾಸಿನೊಳಗೆ ರೈತರ ಕೈ ಸೇರುತ್ತದೆ. ಎಪಿಎಂಸಿಯಲ್ಲಿಯೇ ತೂಕದ ಯಂತ್ರಗಳಿರುವುದರಿಂದ ತೂಕದಲ್ಲಿಯೂ ಮೋಸವಾಗುವ ಸಾಧ್ಯತೆ ಕಡಿಮೆ.. ಎಲ್ಲ ಪ್ರಕ್ರಿಯೆಗಳು ಪಾರದರ್ಶಕವಾಗಿರುವುದರಿಂದ ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗುವುದಿಲ್ಲ.

    ಅಧಿಕ ಲಾಭ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯಿಂದ ಎಪಿಎಂಸಿಗೆ ರೈತರ ಉತ್ಪನ್ನಗಳು ಬರುವುದು ಗಣನೀಯವಾಗಿ ಇಳಿಕೆಯಾಗಿದೆ. 2019-20ರಲ್ಲಿ ಹಾವೇರಿ ಎಪಿಎಂಸಿಗೆ 6.15ಲಕ್ಷ ಕ್ವಿಂಟಾಲ್, 2020-21ರಲ್ಲಿ 6.57ಲಕ್ಷ ಕ್ವಿಂಟಾಲ್ ಮೆಕ್ಕೆಜೋಳ ಆವಕವಾಗಿತ್ತು. ಆದರೆ ಪ್ರಸಕ್ತ ವರ್ಷದಲ್ಲಿ ಈವರೆಗೆ ಕೇವಲ 36,602ಕ್ವಿಂಟಾಲ್ ಆವಕವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ ಎಪಿಎಂಸಿಯ ಹೊರಗಡೆಯೇ ಮಾರಾಟವಾಗುತ್ತಿದೆ. ಇದರಿಂದ ಎಪಿಎಂಸಿ ಆದಾಯಕ್ಕೂ ಕೊಕ್ಕೆ ಬಿದ್ದಿದೆ. ಇ-ಟೆಂಡರ್ ಪದ್ಧತಿ ಜಾರಿಯಾದರೆ ರೈತರು ಎಪಿಎಂಸಿಯತ್ತ ಮರಳುವ ನಿರೀಕ್ಷೆಯೂ ಹೆಚ್ಚಿದೆ.

    ಮೊದಲ ದಿನವೇ ಬಂಪರ್ ದರ: ಸ್ಥಳೀಯ ಎಪಿಎಂಸಿ ಮಾರುಕಟ್ಟೆಯಲ್ಲಿ ಈವರೆಗೆ ಪ್ರತಿ ಕ್ವಿಂಟಾಲ್​ಗೆ 1,911ರಿಂದ 1,930ರವರೆಗೆ ದರ ಸಿಕ್ಕಿದೆ. ಇದಕ್ಕೂ ಮುನ್ನ ಪ್ರತಿ ಕ್ವಿಂಟಾಲ್ 1,800ರೂ.ವರೆಗೆ ದರ ಲಭಿಸಿತ್ತು. ಇ-ಟೆಂಡರ್ ಮೂಲಕ ಖರೀದಿ ಆರಂಭದ ಮೊದಲ ದಿನವೇ ಬಂಪರ್ ದರ ಲಭಿಸಿದೆ. ಸೋಯಾಬೀನ್ 5,600ರಿಂದ 6,359ರೂ., ಹಾಗೂ ಜೋಳ 2,169ರಿಂದ 2,391ರೂ.ಗೆ ಮಾರಾಟವಾಗಿದೆ.

    ರೈತರಿಗೆ ಸ್ಪರ್ಧಾತ್ಮಕ ಬೆಲೆ ಸಿಗಲಿ ಎಂಬ ಉದ್ದೇಶದಿಂದ ಇ-ಟೆಂಡರ್ ಮೂಲಕ ಖರೀದಿ ಪ್ರಕ್ರಿಯೆ ಆರಂಭಿಸಲಾಗಿದೆ. ಇದರಿಂದ ರೈತರಿಗೆ ಉತ್ತಮ ದರ ಲಭಿಸಲಿದೆ ಹಾಗೂ ವಂಚನೆಯೂ ತಪ್ಪಲಿದೆ. ಜಿಲ್ಲೆಯ ಅನೇಕ ಕಡೆಗಳಲ್ಲಿ ಅಪರಿಚಿತರು ಹೆಚ್ಚಿನ ಬೆಲೆಯ ಆಸೆ ತೋರಿಸಿ ಅಲ್ಪಸ್ವಲ್ಪ ಹಣ ಕೊಟ್ಟು ಬಾಕಿ ಹಣ ನಂತರ ಕೊಡುವುದಾಗಿ ಹೇಳಿ ಮೋಸ ಮಾಡಿರುವ ಘಟನೆಗಳು ಸಾಕಷ್ಟಿವೆ. ಈ ಬಗ್ಗೆ ರೈತರು ದೂರು ಸಲ್ಲಿಸಿದ್ದರು. ಹೀಗಾಗಿ ಇ- ಟೆಂಡರ್ ಪದ್ಧತಿಯನ್ನು ಅಳವಡಿಸಲಾಗಿದೆ. ತೂಕದಲ್ಲಿ ಕಟಾವು, ಮೋಸ ತಪ್ಪುತ್ತದೆ. ಸಕಾಲದಲ್ಲಿ ಹಣ ಸಿಗುತ್ತದೆ.

    | ಮಲ್ಲಿಕಾರ್ಜುನ ಹಾವೇರಿ, ಎಪಿಎಂಸಿ ಅಧ್ಯಕ್ಷ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts