More

    ಕೃಷಿ ಉತ್ಪನ್ನ ಮಾರುಕಟ್ಟೆ ವರ್ತಕರಿಗೆ‘ಬಾಂಡ್’ಸಂಕಷ್ಟ

    ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
    ರಾಜ್ಯ ಸರ್ಕಾರ ಕೇಂದ್ರದ ಕೃಷಿ ಕಾಯ್ದೆ ತಿದ್ದುಪಡಿ ಹಿಂಪಡೆದ ಬಳಿಕ 2020 ರ ಮೇ ತಿಂಗಳಿಗೂ ಮುನ್ನ ಇದ್ದ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ನಿಯಂತ್ರಣ ನಿಯಮಗಳ ಅನುಷ್ಠಾನಕ್ಕೆ ಕೃಷಿ ಮಾರುಕಟ್ಟೆ ಇಲಾಖೆ ಮುಂದಾಗಿದೆ.
    ಸರಕು ಖರೀದಿ, ಪರ್ಮಿಟ್, ಮಾರುಕಟ್ಟೆ ಶುಲ್ಕ ಸಂಗ್ರಹದ ನೀತಿ-ನಿಯಮಗಳನ್ನು ಕೃಷಿ ಮಾರುಕಟ್ಟೆ ಇಲಾಖೆ ಮೊದಲಿದ್ದಂತೆ ಮಾ. 14 ರಿಂದ ಅನುಷ್ಠಾನಗೊಳಿಸಿದೆ. ತಮ್ಮಲ್ಲಿರುವ ದಾಸ್ತಾನು ವಿವರವನ್ನು ಬಾಂಡ್ ಮೂಲಕ ಮಾ.26 ರೊಳಗೆ ಸಲ್ಲಿಸಬೇಕೆಂದು ತಿಳಿಸಿರುವುದು ಎಪಿಎಂಸಿ ಮಾರುಕಟ್ಟೆ ವರ್ತಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
    ಹಳೆಯ ನಿಯಮಗಳಂತೆ ಎಪಿಎಂಸಿ ಹೊರಗೆ ಅಂದರೆ ವರ್ತಕರು ರೈತರ ಮನೆ ಬಾಗಿಲಿಗೆ ತೆರಳಿ(ಯುಆರ್‌ಡಿ)ಕೃಷಿ ಉತ್ಪನ್ನಗಳನ್ನು ಖರೀದಿಸಿದರೆ ಅಥವಾ ಮಾರುಕಟ್ಟೆ ಕಮಿಷನ್ ಏಜೆಂಟರಿಂದ(ಆರ್‌ಡಿ)ಖರೀದಿಸಿದರೆ ಒಂದು ನೂರು ರೂ.ಮೊತ್ತಕ್ಕೆ 60 ಪೈಸೆ ಮಾರುಕಟ್ಟೆ ಶುಲ್ಕ ಭರಿಸಬೇಕಿದೆ. ಹಾಗೂ ರೈತರಿಂದ ಖರೀದಿಸಿದ ಸರಕಿಗೆ 24 ಗಂಟೆಯೊಳಗೆ ಶುಲ್ಕ ಪಾವತಿಸಬೇಕಾಗುತ್ತದೆ. ಈ ಹಿಂದೆ 2020 ಡಿಸೆಂಬರ್ ಮೊದಲು ಈ ಶುಲ್ಕ 1.50 ರೂ.ಇತ್ತು. ನಂತರದಲ್ಲಿ ಅದನ್ನು 60 ಪೈಸೆಗೆ ಇಳಿಸಲಾಗಿದೆ.
    ಮಾ.7 ರ ನಂತರ ವಹಿವಾಟಿಗೆ ವರ್ತಕರು ಶುಲ್ಕ ಭರಿಸಬೇಕಿದೆ ಹಾಗೂ ಮಾ.6ಕ್ಕೆ ಮುಕ್ತಾಯಗೊಂಡಿರುವಂತೆ ತಮ್ಮಲ್ಲಿರುವ ದಾಸ್ತಾನು ವಿವರವನ್ನು 100 ರೂ. ಮುಖಬೆಲೆ ಬಾಂಡ್ ಪೇಪರ್ ಮೇಲೆ ಬರೆದುಕೊಡಬೇಕಿದೆ.
    ಹಳೆಯ ನಿಯಮಗಳಂತೆ ವರ್ತಕರು ವಹಿವಾಟಿಗೆ ಸಿದ್ಧವಾಗಿದ್ದರೂ ನಿಗದಿತ ಗಡುವಿನೊಳಗೆ ಸ್ಟಾಕ್ ವಿವರವನ್ನು ಬಾಂಡ್ ಪೇಪರ್‌ನಲ್ಲಿ ಸಲ್ಲಿಸಬೇಕು ಎಂದಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ರಾಜ್ಯದ ಎಲ್ಲ ಮಾರುಕಟ್ಟೆಗಳಲ್ಲೂ ಬಾಂಡ್‌ಪೇಪರ್‌ನಲ್ಲಿ ವಿವರ ಕೇಳಿಲ್ಲ ಎಂಬುದು ಕೆಲ ವರ್ತಕರ ವಾದವಾಗಿದೆ.
    ಅಲ್ಲದೆ, ಮಾರ್ಚ್ ಕೊನೆಯಲ್ಲಿ ವಾಣಿಜ್ಯ, ಆದಾಯ ತೆರಿಗೆ ಇಲಾಖೆಗಳಿಗೆ ಲೆಕ್ಕಪತ್ರ ಸಲ್ಲಿಸಬೇಕು. ಇಂಥ ಸನ್ನಿವೇಶದಲ್ಲಿ ದಾಸ್ತಾನು ವಿವರ ಸಲ್ಲಿಸಲು ಕನಿಷ್ಠ 3 ತಿಂಗಳಾದರೂ ಸಮಯಾವಕಾಶ ಬೇಕು ಹಾಗೂ ಮಂಡಿ ಲೆಟರ್ ಹೆಡ್‌ನಲ್ಲಿ ಸ್ಟಾಕ್ ವಿವರ ಕೊಡುತ್ತೇವೆ ಎಂಬುದು ವರ್ತಕರ ಬೇಡಿಕೆಯಾಗಿದೆ.
    ರಾಜ್ಯದಲ್ಲಿ 165 ಕೃಷಿ ಉತ್ಪನ್ನ ಮಾರುಕಟ್ಟೆಗಳು ಹಾಗೂ ಎರಡು ವಿಶೇಷ ಮಾರುಕಟ್ಟೆಗಳಿವೆ (ಕಾರಟಗಿಯ ಅಕ್ಕಿ-ಭತ್ತ ಹಾಗೂ ಬೆಂಗಳೂರಲ್ಲಿ ಹಣ್ಣಿನ ಮಾರುಕಟ್ಟೆ). ಬಹುತೇಕ ರಾಜ್ಯದ ಅನೇಕ ಎಪಿಎಂಸಿಗಳ ವರ್ತಕರು ಇನ್ನೂ ಸ್ಟಾಕ್ ವಿವರ ಸಲ್ಲಿಸಿಲ್ಲ ಎನ್ನಲಾಗಿದೆ. ವರ್ತಕರ ಬೇಡಿಕೆಗಳಿಗೆ ಇಲಾಖೆ ಸ್ಪಂದಿಸುವುದೊ ಅಥವಾ 3 ತಿಂಗಳ ಬದಲು ಇನ್ನು ಕೆಲ ದಿನಗಳ ಕಾಲ ಅವಧಿ ವಿಸ್ತರಿಸಿ ದಾಸ್ತಾನು ವಿವರ ಪಡೆಯುವುದೋ ಕಾದು ನೋಡಬೇಕಿದೆ.


    ಕೋಟ್
    ಹಳೆಯ ನಿಯಮಗಳು ಮತ್ತೆ ಜಾರಿಯಾಗಿವೆಯೇ ಹೊರತು ಯಾವುದೇ ಬದಲಾವಣೆಯಾಗಿಲ್ಲ. ಮೊದಲಿದ್ದ ಹಾಗೆಯೇ ರಾಷ್ಟ್ರೀಯ ಇ- ಮಾರುಕಟ್ಟೆ ಸರ್ವೀಸ್(ಆರ್‌ಇಎಂಎಸ್) ತಂತ್ರಾಂಶದಡಿ ದಾಸ್ತಾನು ವಿವರ ನಮೂದಿಸಲು ಹಾಗೂ ಪರವಾನಗಿ ಪಡೆಯಲು ವರ್ತಕರಿಗೆ ಅವಕಾಶವಿದೆ. ಆದರೆ, ಮಾ. 6 ರೊಳಗೆ ತಮ್ಮಲ್ಲಿರುವ ದಾಸ್ತಾನು ವಿವರ ಸಲ್ಲಿಸಬೇಕಿದೆ. ಈ ಸ್ಟಾಕ್‌ಗೆ ಮಾರುಕಟ್ಟೆ ಶುಲ್ಕ ಭರಿಸಬೇಕಿಲ್ಲ, ನಂತರದ ವಹಿವಾಟಿಗೆ ಶುಲ್ಕ ಪಾವತಿ ಕಡ್ಡಾಯ.
    ಬಿ.ಎಲ್. ಕೃಷ್ಣಪ್ಪ, ಕಾರ್ಯದರ್ಶಿ, ಎಪಿಎಂಸಿ, ಚಿತ್ರದುರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts