More

  ಬೆಳ್ಳುಳ್ಳಿಗೆ ಬಂತು ಬಂಗಾರದ ಬೆಲೆ!

  ತಿಪ್ಪಣ್ಣ ಅವಧೂತ ಹುಬ್ಬಳ್ಳಿ

  ಬಂಗಾರ ಬಲು ಭಾರ ಎಂಬ ಮಾತನ್ನು ಈಗ ಬೆಳ್ಳುಳ್ಳಿ ಬಲು ಭಾರ ಎಂದು ಬದಲಿಸಬೇಕಿದೆ. ಏಕೆಂದರೆ ಬಂಗಾರಕ್ಕಿಂತಲೂ ಬೆಳ್ಳುಳ್ಳಿ ಬೆಲೆ ಭಾರವಾಗುತ್ತಿದೆ.

  ಹವಾಮಾನ ವೈಪರೀತ್ಯದಿಂದ ದಿನಬಳಕೆ ವಸ್ತುಗಳ ಬೆಲೆಯಲ್ಲಿ ದಿನದಿಂದ ಏರಿಕೆಯಾಗುತ್ತಲೇ ಇದೆ. ಅದರಲ್ಲೂ ಮಸಾಲೆ ಪದಾರ್ಥಗಳ ದರ ಕೇಳಿ ಗ್ರಾಹಕರು ಗಾಬರಿಯಾಗುತ್ತಿದ್ದಾರೆ. ಅಡುಗೆ ರುಚಿ ಹೆಚ್ಚಲು, ಒಗ್ಗರಣೆ ಹಾಕಲು ಬೇಕಾಗುವ ಬೆಳ್ಳುಳ್ಳಿಗೆ ಈಗ ಬಂಗಾರದ ಬೆಲೆ ಬಂದಿದ್ದು, ಗ್ರಾಹಕರ ಜೀಬಿಗೆ ಭಾರವಾಗಿದೆ.

  ಕಳೆದ ಎರಡು ತಿಂಗಳಿಂದ ಏರಿಕೆಯತ್ತಲೇ ಸಾಗುತ್ತಿರುವ ಬೆಳ್ಳುಳ್ಳಿ ಕ್ವಿಂಟಾಲ್​ಗೆ 40 ಸಾವಿರ ರೂ. ಗಡಿ ತಲುಪಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಜವಾರಿ ಬೆಳ್ಳುಳ್ಳಿ ಕೆಜಿಗೆ 450 ರೂ. ನಂತೆ ಮಾರಾಟವಾಗಿ ದಾಖಲೆ ಬರೆದಿದೆ. ಹೈಬ್ರೀಡ್ ಬೆಳ್ಳುಳ್ಳಿಯು ಮೂರು ತಿಂಗಳ ಹಿಂದೆ 100 ರೂಪಾಯಿಗೆ 2 ಕೆಜಿಯಂತೆ ಮಾರಾಟವಾಗಿತ್ತು. ಆದರೆ, ಈಗ ಅದರ ಬೆಲೆಯೂ ಹೆಚ್ಚಳವಾಗಿದ್ದು, ಕೆಜಿಗೆ 300 ರೂಪಾಯಿಯಂತೆ ಮಾರಾಟವಾಗಿ ದಾಖಲೆ ಬರೆದಿದೆ.

  ದರ ಏರಿಕೆ ಏಕೆ?: ಬಳಕೆಗೆ ತಕ್ಕಂತೆ ಬೆಳ್ಳುಳ್ಳಿ ಉತ್ಪಾದನೆ ಇಲ್ಲದಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವೆಂದು ವ್ಯಾಪಾರಸ್ಥರು ಅಭಿಪ್ರಾಯಪಡುತ್ತಿದ್ದಾರೆ. ಕೇರಳದಲ್ಲಿ ಬೆಳ್ಳುಳ್ಳಿ ಉತ್ಪಾದನೆ ಸಂಪೂರ್ಣ ಕುಸಿದಿದೆ. ಹೆಚ್ಚಿನ ಬೆಳ್ಳುಳ್ಳಿ ತಮಿಳುನಾಡು ರಾಜ್ಯದಿಂದ ಆಮದಾಗುತ್ತಿದೆ. ಹವಾಮಾನ ವೈಪರೀತ್ಯವೂ ಈ ಬಾರಿ ಬೆಳ್ಳುಳ್ಳಿ ಉತ್ಪಾದನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

  ದರ ವ್ಯತ್ಯಾಸ: 2023ರ ಜನವರಿಯಲ್ಲಿ ಕೆಜಿ ಬೆಳ್ಳುಳ್ಳಿಗೆ 180 ರೂ. ಇದ್ದದ್ದು, ಅದೇ 2024ರ ಹೊತ್ತಿಗೆ 340 ರೂ. ಆಸುಪಾಸಿಗೆ ಬಂದು ನಿಂತಿತ್ತು. ಇನ್ನು ಫೆಬ್ರವರಿಯಲ್ಲಿ 400 ರೂ.ಗೆ ತಲುಪಿದೆ. ಹುಬ್ಬಳ್ಳಿಯ ಅಮರಗೋಳ ಎಪಿಎಂಸಿ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಆಮದು ಪ್ರಮಾಣ ತೀರಾ ಕುಸಿತ ಕಂಡಿದೆ. ಹೀಗಾಗಿ ಬೆಲೆ ಏರಿಕೆ ಅನಿವಾರ್ಯ ಎಂಬಂತ ಸ್ಥಿತಿ ನಿರ್ವಣವಾಗಿದೆ.

  ಸಾಂಬಾರ್, ರಸಮ್ೆ ಒಗ್ಗರಣೆ ಹಾಕಲು ಬೆಳ್ಳುಳ್ಳಿ ಬೇಕೆ ಬೇಕು. ಆದರೀಗ ಅದರ ಬೆಲೆ ಕೇಳಿದರೆ ಗಾಬರಿಯಾಗುತ್ತಿದೆ. ಇಷ್ಟು ದಿನ ಈರುಳ್ಳಿ, ಟೊಮ್ಯಾಟೋ ಆಯ್ತು. ಈಗ ಬೆಳ್ಳುಳ್ಳಿ ಕೆಜಿಗೆ 500ರ ಸನಿಹ ಬಂದರೂ ಅಚ್ಚರಿಪಡಬೇಕಿಲ್ಲ. ಎರಡು ತಿಂಗಳ ಹಿಂದೆ ಚಿಲ್ಲರೆ ಮಾರುಕಟ್ಟೆಯಲ್ಲಿ 25- 30 ರೂ.ಗೆ ಒಂದು ಪೊಟ್ಟಣ ಬೆಳ್ಳುಳ್ಳಿ ಕೊಡುತ್ತಿದ್ದರು. ಆದರೆ, ಈಗ 100 ರೂ. ಕೊಟ್ಟರೂ ಕೊಡುತ್ತಿಲ್ಲ. | ಸಂಜೀವ ಬಿ.ಕೆ. ಗ್ರಾಹಕ

  ಹುಬ್ಬಳ್ಳಿ ಎಪಿಎಂಸಿ ಮಾರುಕಟ್ಟೆಯಲ್ಲಿ ಸದ್ಯ 350ರಿಂದ 400 ರೂ. ರವರೆಗೆ ದರವಿದೆ. ಎಸಳು ಬೆಳ್ಳುಳ್ಳಿಯು 400ರಿಂದ 450ರೂ. ವರೆಗೂ ಮಾರಾಟವಾಗುತ್ತಿದೆ. ಹುಬ್ಬಳ್ಳಿಗೆ ಮಧ್ಯಪ್ರದೇಶದ ಜಾಮ್ಗರದಿಂದ ಬೆಳ್ಳುಳ್ಳಿ ಆಮದಾಗುತ್ತದೆ. ಆದರೆ, ಅಲ್ಲಿಯೂ ಉತ್ಪಾದನೆ ಕುಸಿತವಾಗಿರುವುದು ಹಾಗೂ ಈ ವರ್ಷ ಸಂಶಿ ಹಾಗೂ ಕುಂದಗೋಳ ಭಾಗದಲ್ಲಿ ಬೆಳ್ಳುಳ್ಳಿ ಇಲ್ಲದಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಇನ್ನು ಕೆಲ ದಿನ ದರ ಏರಿಕೆ ಆಗುತ್ತಲೇ ಇರುತ್ತದೆ. | ಕಟಲಸಾಬ್ ಮುಲ್ಲಾ, ಹುಬ್ಬಳ್ಳಿ ಎಪಿಎಂಸಿ ಬೆಳ್ಳುಳ್ಳಿ ವ್ಯಾಪಾರಸ್ಥ

  ಚಿಲ್ಲರೆ ಮಾರುಕಟ್ಟೆಯಲ್ಲಿನ ಬೆಳ್ಳುಳ್ಳಿ ದರ

  ತಿಂಗಳು -ದರ ಕೆಜಿ (ರೂ.ಗಳಲ್ಲಿ)

  • ಜನವರಿ- – 180 (2023)
  • ಮಾರ್ಚ್- 210
  • ಮೇ- 190
  • ಜುಲೈ- 230
  • ಸೆಪ್ಟೆಂಬರ್- 230
  • ನವೆಂಬರ್- 200
  • ಡಿಸೆಂಬರ್- 300
  • ಫೆಬ್ರವರಿ- 400 (2024)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts