More

    ಮೂರು ತಿಂಗಳ ಬಳಿಕ ಬ್ಯಾಟ್ ಹಿಡಿದ ಚೇತೇಶ್ವರ ಪೂಜಾರ

    ರಾಜ್‌ಕೋಟ್: ಭಾರತ ಟೆಸ್ಟ್ ತಂಡದ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಸುಮಾರು 3 ತಿಂಗಳ ಬಳಿಕ ಸೋಮವಾರ ಬ್ಯಾಟಿಂಗ್ ಅಭ್ಯಾಸ ನಡೆಸಿದರು. ರಣಜಿ ಟ್ರೋಫಿ ಚಾಂಪಿಯನ್ ಸೌರಾಷ್ಟ್ರ ತಂಡದ ಆಟಗಾರರ ಜತೆಗೆ ಅವರು ರಾಜ್‌ಕೋಟ್ ಹೊರವಲಯದ ಅಕಾಡೆಮಿಯಲ್ಲಿ ಅಭ್ಯಾಸ ನಡೆಸಿದರು. ಸೌರಾಷ್ಟ್ರ ತಂಡದ ನಾಯಕ ಜೈದೇವ್ ಉನಾದ್ಕತ್, ಬ್ಯಾಟ್ಸ್‌ಮನ್ ಅರ್ಪಿತ್ ವಸವಾಡ ಮತ್ತು ಮಧ್ಯಮ ವೇಗಿ ಪ್ರೇರಕ್ ಮಂಕಡ್ ಇದ್ದರು.

    ಮರಳಿ ಅಭ್ಯಾಸಕ್ಕಿಳಿದ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಪೂಜಾರ, ‘ಸುದೀರ್ಘ ಸಮಯದವರೆಗೆ ಅಭ್ಯಾಸದಿಂದ ದೂರ ಉಳಿದ ಅನುಭವವಾಗುತ್ತಿತ್ತು. ಆದರೆ ಬ್ಯಾಟಿಂಗ್‌ಗೆ ಸಿದ್ಧವಾಗಿ ನಿಂತಾಗ ನಿನ್ನೆಯೂ ಅಭ್ಯಾಸ ನಡೆಸಿದಂತೆ ಅನಿಸಿತು’ ಎಂದು ಹೇಳಿದ್ದಾರೆ. ಪೂಜಾರ ಮೊದಲ ದಿನ 10-15 ನಿಮಿಷಗಳ ಕಾಲ ಮಾತ್ರ ಬ್ಯಾಟಿಂಗ್ ಅಭ್ಯಾಸ ನಡೆಸಿದರು. ದಿನ ಕಳೆದಂತೆ ಈ ಅವಧಿ ಹೆಚ್ಚಾಗಲಿದೆ. ರಾಜ್‌ಕೋಟ್‌ನ ಸ್ಥಳೀಯ ಬೌಲರ್‌ಗಳು ಅಭ್ಯಾಸಕ್ಕೆ ಸಾಥ್ ನೀಡಿದ್ದರು ಎಂದು ವಸವಾಡ ತಿಳಿಸಿದ್ದಾರೆ. ಸುದೀರ್ಘ ಸಮಯದ ಬಳಿಕ ಆಟಕ್ಕೆ ಇಳಿದಾಗ ಗಾಯದ ಅಪಾಯ ಹೆಚ್ಚಿರುತ್ತದೆ. ಹೀಗಾಗಿ ವೃತ್ತಿಪರ ಕ್ರಿಕೆಟಿಗರು ಹಿಂದಿನ ಲಯ ಕಂಡುಕೊಳ್ಳಲು ಸುಮಾರು 4-6 ವಾರಗಳ ಅಭ್ಯಾಸ ಅಗತ್ಯವೆನಿಸಿದೆ.

    ಇದನ್ನೂ ಓದಿ: VIDEO| ಕರೊನಾ ಸೋಂಕಿತ ಟೆನಿಸ್ ಆಟಗಾರರ ಜತೆ ಜೋಕೊವಿಕ್ ಪಾರ್ಟಿ, ವಿಡಿಯೋ ವೈರಲ್!

    ಸೌರಾಷ್ಟ್ರ ತಂಡ ಮಾರ್ಚ್‌ನಲ್ಲಿ ಚೊಚ್ಚಲ ರಣಜಿ ಟ್ರೋಫಿ ಪ್ರಶಸ್ತಿ ಜಯಿಸಿದ ಬಳಿಕ ತಂಡದ ಆಟಗಾರರು ಅಭ್ಯಾಸವನ್ನೇ ನಡೆಸಿರಲಿಲ್ಲ. ದೇಶದ ಇತರ ನಗರಗಳಿಗೆ ಹೋಲಿಸಿದರೆ ರಾಜ್‌ಕೋಟ್‌ನಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. ಇದುವರೆಗೆ 185 ಪ್ರಕರಣ ದಾಖಲಾಗಿದೆ. ವೇಗಿ ಉನಾದ್ಕತ್ ಚೆಂಡಿಗೆ ಎಂಜಲು ಹಚ್ಚದೆ ಬೌಲಿಂಗ್ ಮಾಡಿದರು ಎಂದು ವಸವಾಡ ತಿಳಿಸಿದ್ದಾರೆ. ಆಗಸ್ಟ್‌ನಲ್ಲಿ ಶುರುವಾಗ ಬೇಕಾಗಿರುವ ದೇಶೀಯ ಕ್ರಿಕೆಟ್ ಋತು ನಿಗದಿಯಂತೆ ಆರಂಭವಾಗುವ ಬಗ್ಗೆ ಅನುಮಾನಗಳಿವೆ. ಪೂಜಾರ ಐಪಿಎಲ್‌ನಲ್ಲಿ ಯಾವುದೇ ತಂಡದಲ್ಲಿಲ್ಲ. ಹೀಗಾಗಿ ವರ್ಷಾಂತ್ಯದ ಆಸ್ಟ್ರೇಲಿಯಾ ಪ್ರವಾಸ ಅವರಿಗೆ ಮುಂದಿನ ಪ್ರಮುಖ ಟೂರ್ನಿ ಎನಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts