More

    VIDEO| ಕರೊನಾ ಸೋಂಕಿತ ಟೆನಿಸ್ ಆಟಗಾರರ ಜತೆ ಜೋಕೊವಿಕ್ ಪಾರ್ಟಿ, ವಿಡಿಯೋ ವೈರಲ್!

    ಬೆಲ್‌ಗ್ರೇಡ್ (ಸೆರ್ಬಿಯಾ): ವೃತ್ತಿಪರ ಟೆನಿಸ್ ಆಟಗಾರರಾದ ಗ್ರಿಗೋರ್ ಡಿಮಿಟ್ರೋವ್ ಮತ್ತು ಬೋರ್ನಾ ಕೋರಿಕ್‌ಗೆ ಕರೊನಾ ಸೋಂಕು ದೃಢಪಟ್ಟ ಬೆನ್ನಲ್ಲೇ ಟೆನಿಸ್ ವಲಯದಲ್ಲಿ ಕಳವಳ ಹೆಚ್ಚಾಗಿದೆ. ಈ ಇಬ್ಬರು ಆಟಗಾರರ ಜತೆಗೆ ಟೂರ್ನಿಯ ಆಯೋಜಕ ಮತ್ತು ವಿಶ್ವ ನಂ. 1 ಆಟಗಾರ ನೊವಾಕ್ ಜೋಕೊವಿಕ್ ನೈಟ್‌ಕ್ಲಬ್ ಪಾರ್ಟಿಯಲ್ಲಿ ಕುಣಿದಾಡಿದ್ದ ವಿಡಿಯೋ ಈಗ ವೈರಲ್ ಆಗಿದ್ದು, ಕರೊನಾ ಆತಂಕ ಮತ್ತಷ್ಟು ಹೆಚ್ಚಾಗಿದೆ.

    ಇದನ್ನೂ ಓದಿ: ಡಬ್ಲ್ಯುಡಬ್ಲ್ಯುಇ ದಿಗ್ಗಜ ಅಂಡರ್‌ಟೇಕರ್ ನಿವೃತ್ತಿ

    ಜೋಕೊವಿಕ್ ಸೆರ್ಬಿಯಾ ಮತ್ತು ಕ್ರೊವೇಷಿಯಾದಲ್ಲಿ ಆಡ್ರಿಯಾ ಟೂರ್ ಎಂಬ ಪ್ರದರ್ಶನ ಟೆನಿಸ್ ಟೂರ್ನಿ ಆಯೋಜಿಸಿದ್ದರು. ಇದರಲ್ಲಿ ಆಡಿದ್ದ ವಿಶ್ವ ನಂ. 19 ಬಲ್ಗೇರಿಯಾ ಆಟಗಾರ ಗ್ರಿಗೋರ್ ಡಿಮಿಟ್ರೋವ್‌ಗೆ ಕರೊನಾ ಸೋಂಕು ದೃಢಪಟ್ಟ ಬೆನ್ನಲ್ಲೇ 2ನೇ ಚರಣದ ಟೂರ್ನಿಯ ಫೈನಲ್ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಟೂರ್ನಿಯಲ್ಲಿ ಡಿಮಿಟ್ರೋವ್ ವಿರುದ್ಧ ಆಡಿದ್ದ ವಿಶ್ವ ನಂ. 33 ಕ್ರೊವೇಷಿಯಾ ಆಟಗಾರ ಬೋರ್ನಾ ಕೋರಿಕ್‌ಗೆ ಲಕ್ಷಣಗಳಿಲ್ಲದಿದ್ದರೂ ಕರೊನಾ ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.

    ಇದನ್ನೂ ಓದಿ: ಬೆಂಗಳೂರಲ್ಲೇ ಇದ್ದರೂ ಮೂರೂವರೆ ತಿಂಗಳ ಬಳಿಕ ಮಗಳ ನೋಡಿದ ಎಸ್‌ವಿ ಸುನೀಲ್

    ಟೂರ್ನಿ ಆಯೋಜಿಸಿದ್ದ ಜೋಕೊವಿಕ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶವೂ ವ್ಯಕ್ತವಾಗುತ್ತಿದೆ. ಬೆಲ್‌ಗ್ರೇಡ್ ಚರಣದ ಟೂರ್ನಿಯಲ್ಲಿ 4 ಸಾವಿರ ಪ್ರೇಕ್ಷಕರೂ ಹಾಜರಾಗಿದ್ದರು. ಇನ್ನು ಟೂರ್ನಿಯ ವೇಳೆ ಯಾರೂ ಸಾಮಾಜಿಕ ಅಂತರವನ್ನು ಕಾಪಾಡಿರಲಿಲ್ಲ. ಸೆರ್ಬಿಯಾ ಸರ್ಕಾರದ ಕೆಲ ಮಾರ್ಗಸೂಚಿಗಳನ್ನೂ ಗಾಳಿಗೆ ತೂರಲಾಗಿತ್ತು. ಕಳೆದ ಮಾರ್ಚ್‌ನಿಂದ ಯಾವುದೇ ವೃತ್ತಿಪರ ಟೆನಿಸ್ ಟೂರ್ನಿ ನಡೆಯದಿರುವ ನಡುವೆ ಜೋಕೊವಿಕ್ ಸ್ವಯಂ ಈ ಪ್ರದರ್ಶನ ಟೂರ್ನಿ ಆಯೋಜಿಸಿದ್ದರು.

    ಇದನ್ನೂ ಓದಿ: ದೇಶ ಕ್ರಿಕೆಟ್ ಆಡುವ ಸ್ಥಿತಿಯಲ್ಲಿಲ್ಲ; ದಿಗ್ಗಜ ರಾಹುಲ್ ದ್ರಾವಿಡ್ ಅಭಿಮತ

    ವೈರಲ್ ಆಗಿರುವ ವಿಡಿಯೋದಲ್ಲಿ ಜೋಕೊವಿಕ್ ಜತೆಗೆ ಸೋಂಕು ದೃಢಪಟ್ಟಿರುವ ಆಟಗಾರರಾದ ಡಿಮಿಟ್ರೋವ್ ಕೂಡ ಇದ್ದರು. ಆಸ್ಟ್ರಿಯಾದ ಡೊಮಿನಿಕ್ ಥೀಮ್ ಮತ್ತು ಜರ್ಮನಿಯ ಅಲೆಕ್ಸಾಂಡರ್ ಜ್ವರೇವ್ ಕೂಡ ಟೂರ್ನಿಯಲ್ಲಿ ಆಡಿದ್ದಾರೆ. ಕರೊನಾ ಹಾವಳಿಯ ನಡುವೆ ಯುಎಸ್ ಓಪನ್‌ನಲ್ಲಿ ಆಡಲು ಹಿಂದೇಟು ಹಾಕುವ ಸೂಚನೆ ನೀಡಿದ್ದ ಜೋಕೊವಿಕ್, ಅದರ ನಡುವೆ ಈ ಎಡವಟ್ಟು ಮಾಡಿಕೊಂಡಿದ್ದಾರೆ. ಈ ಘಟನೆಯಿಂದಾಗಿ ಎಟಿಪಿ ಮತ್ತು ಡಬ್ಲ್ಯುಟಿಎ ಟೂರ್ನಿಗಳ ಪುನರಾರಂಭವೂ ವಿಳಂಬಗೊಳ್ಳಬಹುದು ಎನ್ನಲಾಗಿದೆ. ಸದ್ಯಕ್ಕೆ ಆಗಸ್ಟ್‌ನಲ್ಲಿ ವೃತ್ತಿಪರ ಟೆನಿಸ್ ಚಟುವಟಿಕೆ ಆರಂಭಿಸುವ ಯೋಜನೆ ಹಾಕಿಕೊಳ್ಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts