More

    ವಿದ್ಯುತ್ ಮಾರ್ಗದ ಭೂಮಿಗೆ ಪರಿಹಾರ ಕೊಡಿ

    ಹಿರಿಯೂರು: ತಾಲೂಕಿನ ಹರಿಯಬ್ಬೆ- ಹಿರಿಯೂರು ಮಾರ್ಗದಲ್ಲಿ ವಿದ್ಯುತ್ ತಂತಿ ಹಾದು ಹೋಗಿರುವ ಜಮೀನಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ರೈತರು ತಾಲೂಕಿನ ಹರಿಯಬ್ಬೆಯ ಬೆಸ್ಕಾಂ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

    ಹಿರಿಯೂರು- ಪಿ.ಡಿ.ಕೋಟೆ ವರೆಗೂ 220/66/11ಕೆ.ವಿ. ವಿದ್ಯುತ್ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದ್ದು, ರೈತರಿಗೆ ಪರಿಹಾರ ನೀಡದೆ ಅಧಿಕಾರಿಗಳು ವಂಚಿಸುತ್ತಿದ್ದಾರೆ ಎಂದು ದೂರಿದರು. ಪರಿಹಾರಕ್ಕೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ 65ನೇ ದಿನ ಪೂರೈಸಿದೆ. ಆದರೂ ಸಂಬಂಧಿತ ಅಧಿಕಾರಿಗಳು ಬೇಡಿಕೆ ಈಡೇರಿಸಲು ಪ್ರಯತ್ನ ನಡೆಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ತಾಪಂ ಮಾಜಿ ಅಧ್ಯಕ್ಷ ಬಿ.ಎಚ್.ವೆಂಕಟೇಶಪ್ಪ ಮಾತನಾಡಿ, ಹಿರಿಯೂರಿನಿಂದ ಹರಿಯಬ್ಬೆ ಮತ್ತು ಪಿ.ಡಿ.ಕೋಟೆ ವರೆಗೆ 41 ಕಿ.ಮೀ. ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗದ ಕೆಲಸ ನಡೆಯುತ್ತಿದೆ. ಇದರಲ್ಲಿ ಗೋಪುರ ಮತ್ತು ಕಾರಿಡಾರ್ ಭೂಮಿಗೆ ರೈತರಿಗೆ ಪರಿಹಾರ ನೀಡಬೇಕಿದೆ. ಜಿಲ್ಲಾಧಿಕಾರಿಗಳು ಗೋಪುರ ನಿರ್ಮಾಣಕ್ಕೆ ಮಾತ್ರ ಆದೇಶ ನೀಡಿದ್ದಾರೆ. ಕಾರಿಡಾರ್ ಭೂ ಪರಿಹಾರ ನಿರ್ಮಾಣಕ್ಕೆ ಯಾವುದೇ ಆದೇಶ ನೀಡಿಲ್ಲ. ಆದರೂ, ಅಧಿಕಾರಿಗಳು ರೈತರಿಗೆ ನೋಟಿಸ್ ನೀಡದೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.

    ರೈತ ಮುಂಗುಸುವಳ್ಳಿ ಬಂಗಾರಪ್ಪ ಮಾತನಾಡಿ, ವಿದ್ಯುತ್ ಮಾರ್ಗ ಕಾಮಗಾರಿಯಲ್ಲಿ ಕೆಪಿಟಿಸಿಎಲ್ ಅಧಿಕಾರಿಗಳು ಸೋಲಾರ್ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡು ರೈತರಿಗೆ ಮೋಸ ಮಾಡುತ್ತಿದ್ದಾರೆ. ಅಲ್ಪ ಸ್ವಲ್ಪ ಜಮೀನಿರುವ ರೈತರು ಈಗ ಸಂಪೂರ್ಣವಾಗಿ ಭೂಮಿ ಕಳೆದುಕೊಳ್ಳುತ್ತಿದ್ದು, ಇತ್ತ ಸರಿಯಾದ ಪರಿಹಾರವಿಲ್ಲದೆ ಬೀದಿಗೆ ಬೀಳುವಂತಾಗಿದೆ ಎಂದು ಅಳಲು ತೋಡಿಕೊಂಡರು.

    ರೈತ ಮುಖಂಡರಾದ ಹರಿಯಬ್ಬೆ ಶಶಿಧರ, ಚಂದ್ರಪ್ಪ, ಗುಂಡಪ್ಪ, ಹನುಮಂತರಾಯ, ರಂಗನಾಥ್, ಲೋಕೇಶ್, ತಿಪ್ಪೇಸ್ವಾಮಿ, ಮಾರುತಿ, ವೀಣಾ, ರಾಮಣ್ಣ, ತಿಮ್ಮಜ್ಜ, ಶೇಖರಪ್ಪ ಇತರರಿದ್ದರು.

    ಹರಿಯಬ್ಬೆ-ಪಿ.ಡಿ.ಕೋಟೆ ವರೆಗೆ 12 ಕಿ.ಮೀ. ಕಾಮಗಾರಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಕೆಲ ರೈತರಿಗೆ ಪರಿಹಾರದ ಮೊತ್ತವಾಗಿ ನೀಡಿದ್ದ ಚೆಕ್ ಬೌನ್ಸ್ ಆಗಿವೆ. ಜತೆಗೆ ಗುತ್ತಿಗೆದಾರರು ಕಾಮಗಾರಿ ಮಾಡಲು ಬರುತ್ತಿದ್ದು, ನಮಗೆ ಪರಿಹಾರದ ಮೊತ್ತ ಬರುವವರೆಗೂ ಕೆಲಸ ಮಾಡಲು ಬಿಡುವುದಿಲ್ಲ.
    ಶಶಿಧರ ರೈತ, ಹರಿಯಬ್ಬೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts