More

    ಕಿಡಿಗೇಡಿಗಳಿಂದ ಶಾಂತಿ ಕದಡುವ ಯತ್ನ

    ಉಳ್ಳಾಲ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಮೂಲಕ ಸಂಘರ್ಷದ ವಾತಾವರಣ ಸೃಷ್ಟಿಸಲು ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಯತ್ನ ನಡೆಯುತ್ತಿರುವುದು ಮುಂದುವರಿದಿದೆ. ಈಗ ನಗರದ ಹೊರವಲಯ ಉಳ್ಳಾಲ-ಕೊಣಾಜೆ ಭಾಗದಲ್ಲಿ ಕಿಡಿಗೇಡಿಗಳ ವಿಕೃತಿ ಪ್ರದರ್ಶನವಾಗಿದೆ.
    ಉಳ್ಳಾಲ ಕೇಂದ್ರ ಬಸ್ ನಿಲ್ದಾಣದಲ್ಲಿರುವ ಕೊರಗಜ್ಜ ಮತ್ತು ಗುಳಿಗಜ್ಜನ ಕಟ್ಟೆಯ ಕಾಣಿಕೆ ಹುಂಡಿ ಹಾಗೂ ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾಲಯ ಆಡಳಿತಸೌಧ ಕಟ್ಟಡ ಬಳಿಯ ಪರಂಡೆ ಪೂರ್ಣಗಿರಿ ಮುಲಾರ ಗೋಪಾಲಕೃಷ್ಣ ಭಜನಾ ಮಂದಿರ ಅಂಗಣದಲ್ಲಿ ವಿಕೃತಿ ಕಂಡುಬಂದಿದೆ.

    ಕೊರಗಜ್ಜ ಮತ್ತು ಗುಳಿಗಜ್ಜನ ಕಟ್ಟೆಯ ಕಾಣಿಕೆ ಹುಂಡಿಯನ್ನು ಪ್ರತೀ ತಿಂಗಳ ಸಂಕ್ರಾತಿಯಂದು ತೆರೆದು ಹಣ ಎಣಿಕೆ ಮಾಡಲಾಗುತ್ತದೆ. ಈ ವರ್ಷ ಎರಡು ದಿನ ತಡವಾಗಿ ಹುಂಡಿ ತೆರೆಯಲಾಗಿದ್ದು, ಆ ವೇಳೆ ಹುಂಡಿಯಲ್ಲಿ ಕಾಂಡೋಮ್‌ಗಳು, ಬೆಂಗಳೂರಿನ ಕೆಆರ್‌ಐಡಿಎಲ್ ನಿಗಮ ಅಧ್ಯಕ್ಷ ಎಂ.ರುದ್ರೇಶ್ ಅವರಿಗೆ ಶುಭ ಕೋರಿದ ಭಿತ್ತಿಪತ್ರ ದೊರೆತಿದೆ. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಷಾ, ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿ.ವೈ.ವಿಜಯೇಂದ್ರ ಮತ್ತಿತರರರ ಭಾವಚಿತ್ರಗಳನ್ನು ವಿರೂಪಗೊಳಿಸಲಾಗಿದೆ. ಅಲ್ಲದೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಚಿತ್ರದ ಕತ್ತಿನಲ್ಲಿ ಶಿಲುಬೆ ಹಾರದ ಚಿತ್ರ ಬಿಡಿಸಲಾಗಿದೆ.

    ‘ದೇವಲೋಕದಿಂದ ಹೊರಹಾಕಲ್ಪಟ್ಟ ದ್ರೋಹಿ ದೂತರು ಸೇಡಿನ ಸ್ವಭಾವ ಹೊಂದಿದ್ದು, ವಿಗ್ರಹಗಳ ಮೂಲಕ ಭೂಲೋಕದ ಜನರನ್ನು ಭ್ರಷ್ಟರನ್ನಾಗಿಸಿ ನಕಲಿ ದೇವರಾಗಿ ಅನಾದಿ ಕಾಲದಿಂದ ಮೆರೆಯಲ್ಪಡುತ್ತಿವೆ. ಎಚ್ಚರ, ರಕ್ತ ಹೀರುವ ಸೊಳ್ಳೆಗಳಂತೆ ಜನರನ್ನು ದೋಚಿ, ಬಾಚಿ ತಿಂದು ತೇಗುವ ಈ ರಾಜಕಾರಣಿಗಳನ್ನು ಅಟ್ಟಾಡಿಸಿ ಹೊಡೆದು ಹಿಡಿದು ಕೊಲ್ಲಬೇಕಾಗಿದೆ. ಜನರೂ ಸಿದ್ಧರಾಗಬೇಕು’ ಎಂದು ಅವಾಚ್ಯ ವಾಕ್ಯಗಳನ್ನೂ ಬರೆಯಲಾಗಿದೆ.

    ಭಗವಧ್ವಜಕ್ಕೆ ಅವಮಾನ: ಮುಲಾರ ಭಜನಾ ಮಂದಿರ ಅಂಗಣದಲ್ಲಿ ಮಲ ವಿಸರ್ಜನೆ ಮಾಡಿ ಕೇಸರಿ ಭಗವಾಧ್ವಜಕ್ಕೆ ಮೂತ್ರ ವಿಸರ್ಜಿಸಿರುವುದು ಕಂಡುಬಂದಿದೆ. ಇಲ್ಲಿ ವಾರಕ್ಕೊಮ್ಮೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆ ನಡೆಯುತ್ತದೆ. ಕಿಡಿಗೇಡಿಗಳು ಶಾಖೆಗೆ ಬಳಸುವ ಭಗವಾಧ್ವಜ ಮತ್ತು ಪುಸ್ತಕಗಳನ್ನು ಪೆಟ್ಟಿಗೆಯಿಂದ ಹೊರತೆಗೆದು ಅಂಗಣದಲ್ಲಿ ಚೆಲ್ಲಿ ಅದರ ಮೇಲೆ ಮೂತ್ರ ವಿಸರ್ಜಿಸಿದ್ದಾರೆ. ಘಟನೆ ಮಂಗಳವಾರ ರಾತ್ರಿ ನಡೆದಿದ್ದು ಮಂದಿರದ ಅಧ್ಯಕ್ಷರು ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ನಗರಸಭೆ ಅಧ್ಯಕ್ಷೆ ಚಿತ್ರಕಲಾ, ಉಪಾಧ್ಯಕ್ಷ ಅಯೂಬ್ ಮಂಚಿಲ ಭೇಟಿ ನೀಡಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ.

    ಮಂಗಳೂರಿನ ವಿಕೃತರು ಇನ್ನೂ ನಾಪತ್ತೆ
    ಜ.3ರಂದು ಕೊಟ್ಟಾರದ ಬಬ್ಬುಸ್ವಾಮಿ, ಜ.14ರಂದು ಅತ್ತಾವರ ಮಂಕಿಸ್ಟಾೃಂಡ್ ಕೊರಗಜ್ಜ ಕಟ್ಟೆಯ ಕಾಣಿಕೆ ಡಬ್ಬಿಗಳಲ್ಲಿ ಕಾಂಡೋಮ್, ನಕಲಿ ನೋಟುಗಳಲ್ಲಿರುವ ಗಾಂಧೀಜಿಯ ವಿರೂಪಗೊಳಿಸಿದ ಚಿತ್ರ, ಕ್ರೈಸ್ತ ಧರ್ಮ ಪ್ರಚಾರದ ಮತ್ತು ಅವಹೇಳನಕಾರಿ ಬರಹಗಳು ಪತ್ತೆಯಾಗಿದ್ದವು. ಈವರೆಗೂ ಆರೋಪಿಗಳ ಬಂಧನವಾಗಿಲ್ಲ. ಒಂದೇ ತಂಡದ ಕೃತ್ಯ ಇದಾಗಿರಬಹುದು ಎಂದು ಶಂಕಿಸಲಾಗಿದೆ.

    ವಿಶೇಷ ತಂಡಗಳಿಂದ ತನಿಖೆ: ಉಳ್ಳಾಲ ಮತ್ತು ಕೊಣಾಜೆಯ ಧಾರ್ಮಿಕ ಸ್ಥಳಗಳಿಗೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಕೆಲಸ ಸಲ್ಲದು. ಈ ಹಿಂದೆಯೂ ನಗರದಲ್ಲಿ ಎರಡು ಘಟನೆ ನಡೆದಿದೆ. ಡಿಸಿಪಿ ಹರಿರಾಂ ಶಂಕರ್ ಮತ್ತು ಎಸಿಪಿ ರಂಜಿತ್ ಬಂಡಾರು ನೇತೃತ್ವದ ವಿಶೇಷ ತಂಡ ಕಿಡಿಗೇಡಿಗಳ ಶೀಘ್ರ ಪತ್ತೆ ಹಚ್ಚುವ ಕಾರ್ಯ ನಡೆಸುತ್ತಿದೆ. ಧಾರ್ಮಿಕ ಕ್ಷೇತ್ರದಲ್ಲಿ ಎಲ್ಲರೂ ಸಿಸಿಕ್ಯಾಮರಾ ಅಳವಡಿಸಬೇಕು ಎಂದರು.
    ಉಳ್ಳಾಲದ ಕೊರಗಜ್ಜ, ಗುಳಿಗಜ್ಜನ ಕಟ್ಟೆಯಲ್ಲಿ ಸಿಸಿಕ್ಯಾಮರಾ ಅಳವಡಿಸದ ಬಗ್ಗೆ ಆಯುಕ್ತರು ಸಮಿತಿ ಅಧ್ಯಕ್ಷ ಸುನೀಲ್ ಅವರಲ್ಲಿ ಪ್ರಶ್ನಿಸಿದರು. ಕಟ್ಟೆ ಎದುರಲ್ಲೇ ಇರುವ ನಗರಸಭೆ ಕಟ್ಟಡದಲ್ಲೇ ಸಿಸಿಕ್ಯಾಮರಾ ಅಳವಡಿಸಿಲ್ಲ. ಇದ್ದಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಆಯುಕ್ತರ ಗಮನ ಸೆಳೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts