More

    ಧಾರವಾಡದಲ್ಲಿ ದಾಖಲೆ ಬರೆವ ಉಮೇದಿಯಲ್ಲಿ ಜೋಶಿ

    | ಪ್ರಕಾಶ ಎಸ್. ಶೇಟ್ ಹುಬ್ಬಳ್ಳಿ

    ಶಿರಹಟ್ಟಿ ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಶಸ್ತ್ರತ್ಯಾಗ ಮಾಡಿದ ಬಳಿಕ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಮತ್ತು ಕಾಂಗ್ರೆಸ್​ನ ವಿನೋದ ಅಸೂಟಿ ಮಧ್ಯೆ ನೇರ ಫೈಟ್ ಎದುರಾಗಿದ್ದು, ಪ್ರಲ್ಹಾದ ಜೋಶಿ ಕ್ಷೇತ್ರದಲ್ಲಿ ಹೊಸ ದಾಖಲೆ ಬರೆಯುವ ಉಮೇದಿಯಲ್ಲಿದ್ದಾರೆ.

    ಜಾತಿ ಅಸ್ತ್ರವನ್ನು ಮುಂದಿಟ್ಟುಕೊಂಡು ದಿಂಗಾಲೇಶ್ವರ ಸ್ವಾಮೀಜಿ ಬಿಜೆಪಿ ಮತ ಸೆಳೆಯುವ ಮುಖೇನ ಪ್ರಲ್ಹಾದ ಜೋಶಿ ಅವರನ್ನು ಪ್ರಸಕ್ತ ಚುನಾವಣೆಯಲ್ಲಿ ಕಟ್ಟಿಹಾಕುವ ಪ್ರಯತ್ನಕ್ಕೆ ಕೈಹಾಕಿದ್ದರು. ಆದರೆ, ಆರಂಭದಲ್ಲಿ ಅವರನ್ನು ಈ ಕಾರ್ಯಕ್ಕೆ ಹುರಿದುಂಬಿಸಿದವರೇ ಒಬ್ಬೊಬ್ಬರಾಗಿ ಅವರಿಂದ ದೂರವಾದರು. ಇನ್ನು ಕಣದಲ್ಲಿ ಇದ್ದರೆ ಉಳಿಗಾಲವಿಲ್ಲ ಎಂದು ಭಾವಿಸಿ ಸ್ವಾಮೀಜಿ ನಾಮಪತ್ರ ಹಿಂತೆಗೆದುಕೊಂಡರು.

    ಸ್ವಾಮೀಜಿ ಅವರನ್ನು ಕಣಕ್ಕಿಳಿಸುವುದರ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಬಿಜೆಪಿಗರು ಆರೋಪಿಸಿದ್ದರು. ಆದರೆ, ತಾವು ಸ್ವತಂತ್ರ ಅಭ್ಯರ್ಥಿ ಎಂದು ಸ್ವಾಮೀಜಿ ಹೇಳಿಕೊಂಡಿದ್ದರು. ನಾಮಪತ್ರ ವಾಪಸ್ ಪಡೆದುಕೊಂಡ ಬಳಿಕ ದಿಂಗಾಲೇಶ್ವರ ಸ್ವಾಮೀಜಿ ಅವರು ಕಾಂಗ್ರೆಸ್ ಮುಖಂಡ ಮೋಹನ ಲಿಂಬಿಕಾಯಿ ಮನೆಯಲ್ಲಿಯೇ ಪತ್ರಿಕಾಗೋಷ್ಠಿ ಹಾಗೂ ಸಭೆ ನಡೆಸಿ ನಾಮಪತ್ರ ಹಿಂತೆಗೆದುಕೊಳ್ಳಲು ಕಾರಣವೇನು ಎಂಬುದನ್ನು ಹೇಳಿದ್ದರು. ಈ ವೇಳೆ ಸಚಿವ ಸಂತೋಷ ಲಾಡ್ ಸಹ ಇದ್ದರು. ತನ್ಮೂಲಕ ಸ್ವಾಮೀಜಿ ರಾಜಕೀಯ ರಂಗ ಪ್ರವೇಶಕ್ಕೆ ಕಾಂಗ್ರೆಸ್​ನ ನಂಟಿತ್ತು ಎನ್ನುವ ಮಾತುಗಳಿಗೆ ಪುಷ್ಟಿ ಸಿಕ್ಕಿತ್ತು. ಕಣದಿಂದ ಹಿಂದೆ ಸರಿದ ಬಳಿಕವೂ ದಿಂಗಾಲೇಶ್ವರರ ಬೆಂಬಲ ಪಡೆಯುವ ಹವಣಿಕೆಯನ್ನು ಕಾಂಗ್ರೆಸ್ ಮಾಡಿದ್ದು ಸುಳ್ಳಲ್ಲ. ಆದರೆ, ಸ್ವಾಮೀಜಿ ಮಾತ್ರ ಕಾಂಗ್ರೆಸ್​ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ಇದೀಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆಯೇ ನೇರ ಹಣಾಹಣಿ ಇದೆ.

    ಪ್ರಚಾರದ ವಿಷಯದಲ್ಲಿ ಬಿಜೆಪಿ ಪಡೆಯೇ ಮುಂದಿದೆ. ನಗರ ಮತದಾರರು ಪ್ರಲ್ಹಾದ ಜೋಶಿ ಅವರನ್ನು ಬಿಟ್ಟು ಕದಲುವಂತೆ ಕಾಣುತ್ತಿಲ್ಲ. ಕಳೆದ ಬಾರಿ 2.05 ಲಕ್ಷ ಮತಗಳ ಅಂತರದಿಂದ ಸಚಿವರಾಗಿದ್ದ ವಿನಯ ಕುಲಕರ್ಣಿ ಅವರನ್ನೇ ಸೋಲಿಸಿದ್ದರಿಂದ ಈ ಸಲ ಅಂತರ ಮತ್ತಷ್ಟು ಹೆಚ್ಚಲಿದೆ ಎನ್ನುವ ಲೆಕ್ಕಾಚಾರ ಜೋಶಿ ಅವರದ್ದು. ಹೀಗಾಗಿ ಜೋಶಿ ಪಡೆ ಜೋಷ್​ನಲ್ಲಿದೆ.

    ನೇಹಾ ಪ್ರಕರಣ ಬಿಜೆಪಿಗೆ ಲಾಭ: ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣ ಬಿಜೆಪಿಗೆ ಲಾಭ ತಂದುಕೊಟ್ಟಿದ್ದು ಸುಳ್ಳಲ್ಲ. ಮದುವೆಯಾಗಲು ನಿರಾಕರಿಸಿದ್ದರಿಂದಲೇ ಆರೋಪಿ ಫಯಾಜ್ ಕೊಲೆ ಮಾಡಿದ್ದು, ಇದು ಲವ್ ಜಿಹಾದ್​ನ ಇನ್ನೊಂದು ರೂಪ ಎಂದು ವಿದ್ಯಾರ್ಥಿ ಹಾಗೂ ಹಿಂದು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಬಿಜೆಪಿ ಮುಖಂಡರು ನೇಹಾಳ ಕುಟುಂಬದ ಜತೆ ನಿಂತರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಾ. ಜಿ. ಪರಮೇಶ್ವರ ನೀಡಿದ ಹೇಳಿಕೆಗಳು ನೇಹಾಳ ತಂದೆ, ಕಾಂಗ್ರೆಸ್ ಕಾಪೋರೇಟರ್ ನಿರಂಜನ ಹಿರೇಮಠ ಅವರನ್ನು ಘಾಸಿಗೊಳಿಸಿದವು. ಅಂತಿಮವಾಗಿ ಸಿಎಂ ಕ್ಷಮೆ ಕೇಳುವ ಪ್ರಸಂಗವೂ ಬಂತು. ಬಯಸದೇ ಇದ್ದರೂ ಈ ಸಂಗತಿ ಬಿಜೆಪಿಗೆ ಪ್ಲಸ್ ಆಗಿದ್ದು ಸತ್ಯ.

    ದಾಖಲೆಯ ಹುಮ್ಮಸ್ಸಿನಲ್ಲಿ: ನಾಲ್ಕು ಬಾರಿ ಗೆದ್ದು ಐದನೇ ಬಾರಿಯೂ ಗೆಲುವಿನ ನಗು ಬೀರುವ ಹುಮ್ಮಸ್ಸಿನಲ್ಲಿದ್ದಾರೆ ಪ್ರಲ್ಹಾದ ಜೋಶಿ. ಈ ಕ್ಷೇತ್ರದಿಂದ ಕಾಂಗ್ರೆಸ್​ನ ಡಿ.ಕೆ. ನಾಯ್ಕರ್ ನಾಲ್ಕು ಬಾರಿ ಗೆದ್ದಿದ್ದರು. ಪ್ರಲ್ಹಾದ ಜೋಶಿ ನಾಲ್ಕು ಬಾರಿ ಗೆದ್ದು ಈ ದಾಖಲೆ ಸರಿಗಟ್ಟಿದ್ದಾರೆ. ಇದೀಗ ಐದನೇ ಸಲ ಗೆದ್ದರೆ ಹೊಸ ದಾಖಲೆ ಸೃಷ್ಟಿ ಆಗಲಿದೆ.

    ನವಲಗುಂದಕ್ಕೆ ಸೀಮಿತ: ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಜೋಶಿ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಿದಂತೆ ಪ್ರಚಾರ ನಡೆಸುತ್ತಿದ್ದಾರೆ. ಇದಕ್ಕೆ ಹೋಲಿಸಿದಾಗ ಕಾಂಗ್ರೆಸ್​ನ ಪ್ರಚಾರ ಅಬ್ಬರ ಕಾಣದಾಗಿದೆ. ನವಲಗುಂದದವರಾದ ವಿನೋದ ಅಸೂಟಿ ಅಲ್ಲಿಗೇ ಸೀಮಿತರಾಗಿದ್ದಾರೆ. ಹುಬ್ಬಳ್ಳಿ-ಧಾರವಾಡ ನಗರಕ್ಕಂತೂ ಅವರು ಇನ್ನೂ ಅಪರಿಚಿತರಂತೆಯೇ ಇರುವುದು ಬಿಜೆಪಿಗೆ ಲಾಭ ತಂದುಕೊಟ್ಟಿದೆ.

    ಪ್ರಲ್ಹಾದ ಜೋಶಿಗೆ ಅಭಿವೃದ್ಧಿ ಬಲ: ಐಐಟಿ, ಐಐಐಟಿ, ಹುಬ್ಬಳ್ಳಿ-ಧಾರವಾಡ ರೈಲು ನಿಲ್ದಾಣಗಳ ಅಭಿವೃದ್ಧಿ, ಫಾರೆನ್ಸಿಕ್ ಲ್ಯಾಬ್, ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢರ ನಾಮಕರಣ, ಹುಬ್ಬಳ್ಳಿ-ಧಾರವಾಡ ಬೈಪಾಸ್​ಅನ್ನು ಆರುಪಥ ಮಾರ್ಗವಾಗಿಸುತ್ತಿರುವುದು; ವಿಜಯಪುರ, ಗದಗ, ಬೆಂಗಳೂರು, ಕಾರವಾರ ಹೈವೆ ಸಂರ್ಪಸುವ ಹಾಫ್ ರಿಂಗ್​ರೋಡ್ ನಿರ್ವಣ, ಕಾಂಕ್ರೀಟ್ ರಸ್ತೆಗಳ ನಿರ್ವಣ, ಹುಬ್ಬಳ್ಳಿಯಲ್ಲಿ ಫ್ಲೈ ಓವರ್ ನಿರ್ವಣ, 1,400 ಕೋಟಿ ರೂ. ವೆಚ್ಚದಲ್ಲಿ ಜಿಲ್ಲೆಯ ಪ್ರತಿ ಹಳ್ಳಿಯ ಪ್ರತಿ ಮನೆಗೆ ಮಲಪ್ರಭಾ ನೀರು ಪೂರೈಕೆ ಯೋಜನೆ ಜಾರಿಗೆ ತಂದಿರುವುದು, ಶಾಲೆಗಳಿಗೆ ಬಣ್ಣ ಮಾಡಿಸಿರುವುದು, ಸ್ಮಾರ್ಟ್​ಸಿಟಿ ಯೋಜನೆ, ಮನೆ ಮನೆಗೆ ಗ್ಯಾಸ್ ಪೈಪ್​ಲೈನ್, ವಿಮಾನ ನಿಲ್ದಾಣ ಮೇಲ್ದರ್ಜೆಗೇರಿಸಿರುವುದು ಸೇರಿ ಅನೇಕ ಅಭಿವೃದ್ಧಿ ಕಾರ್ಯಗಳ ಪ್ರೊಗ್ರೆಸ್ ಕಾರ್ಡ್ ಮುಂದಿಟ್ಟುಕೊಂಡು ಪ್ರಲ್ಹಾದ ಜೋಶಿ ಮತ ಯಾಚಿಸುತ್ತಿದ್ದಾರೆ. ವಿನೋದ ಅಸೂಟಿ ಕಾಂಗ್ರೆಸ್​ನ ಗ್ಯಾರಂಟಿಗಳನ್ನು ನೆಚ್ಚಿಕೊಂಡಿದ್ದಾರೆ. ಬೆರಳು ತೋರಿಸಿ ಹೇಳುವಂಥ ಅಭಿವೃದ್ಧಿ ಕೆಲಸಗಳು ರಾಜ್ಯ ಸರ್ಕಾರದಿಂದ ಆಗದೆ ಇರುವುದು ಅಭ್ಯರ್ಥಿಗೆ ಋಣಾತ್ಮಕವಾಗಿಯೇ ಇರುವಂತೆ ಕಾಣುತ್ತದೆ.

    ಜಾತಿ ಅಸ್ತ್ರಕ್ಕೆ ಪ್ರತ್ಯಸ್ತ್ರ: ಕ್ಷೇತ್ರದಲ್ಲಿ ಜಾತಿಯು ಗೆಲುವಿಗೆ ಕಾರಣವಾಗಿರುವ ಉದಾಹರಣೆ ಇಲ್ಲ. ಹಿಂದುತ್ವ ಹಾಗೂ ಬಿಜೆಪಿಯ ಬಲವೇ ಪ್ರಲ್ಹಾದ ಜೋಶಿ ಅವರನ್ನು ನಾಲ್ಕು ಬಾರಿ ಗೆಲ್ಲಿಸಿಕೊಂಡು ಬಂದಿದೆ. ಈ ಬಾರಿ ಲಿಂಗಾಯತ ಜಾತಿ ಅಸ್ತ್ರವನ್ನು ಕಾಂಗ್ರೆಸ್ ಹಾಗೂ ದಿಂಗಾಲೇಶ್ವರ ಸ್ವಾಮೀಜಿ ಪ್ರಯೋಗ ಮಾಡಿದ್ದರು. ಆದರೆ, ಅಸ್ತ್ರ ಗುರಿ ತಲುಪಿಲ್ಲ. ಶಾಸಕರಾದ ಬಸವರಾಜ ಬೊಮ್ಮಾಯಿ, ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ ಪ್ರತ್ಯಸ್ತ್ರ ಪ್ರಯೋಗಿಸಿ ಜೋಶಿ ಬೆನ್ನಿಗೆ ನಿಂತಿದ್ದಾರೆ. ಡಾ. ವಿಜಯ ಸಂಕೇಶ್ವರ, ಬಿ.ಎಸ್. ಯಡಿಯೂರಪ್ಪ, ಚಕ್ರವರ್ತಿ ಸೂಲಿಬೆಲೆ, ರಾಷ್ಟ್ರೀಯ ನಾಯಕರಾದ ಅಮಿತ್ ಷಾ, ಜೆ.ಪಿ. ನಡ್ಡಾ… ಹೀಗೆ ಗಣ್ಯರ ಬೃಹತ್ ಪಡೆಯೇ ಕ್ಷೇತ್ರದಲ್ಲಿ ಸಂಚರಿಸಿ ಜನರ ಮನ ಗೆಲ್ಲುತ್ತಿದ್ದಾರೆ. ಹೀಗಾಗಿ ಆರಂಭಿಕ ಹಂತದಲ್ಲಿ ಸದ್ದು ಮಾಡಿದ್ದ ಜಾತಿ ವಿಷಯ ಈಗ ಗೌಣವಾಗಿದೆ.

    ಅಶ್ಲೀಲ ಚಿತ್ರಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಫೋಟೋ ಮಾರ್ಫಿಂಗ್: ಎಫ್​​ಐಆರ್ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts