More

    ಸಂಪಾದಕೀಯ: ತಲ್ಲಣಗೊಳಿಸಿದ ತಪ್ಪೊಪ್ಪಿಗೆ

    ಬ್ರಿಟನ್​ನ ಆಸ್ಟ್ರಾಜೆನೆಕಾ ಎಂಬ ಔಷಧ ಕಂಪನಿ ಸೋಮವಾರ ನೀಡಿರುವ ತಪ್ಪೊಪ್ಪಿಗೆ ಹೇಳಿಕೆ ಜಗತ್ತಿನಾದ್ಯಂತ ತಲ್ಲಣಕ್ಕೆ ಕಾರಣವಾಗಿದೆ. ಕರೊನಾ ಕಾಲದಲ್ಲಿ ಈ ಕಂಪನಿ ಕೋವಿಶೀಲ್ಡ್ ಮತ್ತು ಇತರ ಕೆಲವು ಲಸಿಕೆಗಳನ್ನು ಭಾರಿ ಪ್ರಮಾಣದಲ್ಲಿ ಉತ್ಪಾದಿಸಿತ್ತು. ಅವುಗಳನ್ನು ಭಾರತವೂ ಒಳಗೊಂಡಂತೆ ಹಲವು ರಾಷ್ಟ್ರಗಳಿಗೆ ಪೂರೈಸಿತ್ತು. ಕೋವಿಡ್ ಹಾವಳಿ ತೀವ್ರವಾಗಿದ್ದರಿಂದ ಬಹಳಷ್ಟು ದೇಶಗಳು ಆ ಲಸಿಕೆಗಳ ಸುರಕ್ಷತೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಖರೀದಿಸಿ, ಕೋಟ್ಯಂತರ ಜನರಿಗೆ ನೀಡಿದ್ದವು. ಕೋವಿಡ್​ನಿಂದಾಗಿ ಅಲ್ಪಾವಧಿಯಲ್ಲಿ ಲಕ್ಷಾಂತರ ಜನರು ಹೃದಯಸ್ತಂಭನ ಮತ್ತಿತರ ಕಾರಣಗಳಿಂದ ಮೃತಪಟ್ಟಾಗ ಸಹಜವಾಗಿಯೇ ಕೆಲವರ ಸಂಶಯದ ಬೆರಳು ಈ ಲಸಿಕೆಗಳತ್ತ ಹೋಗಿತ್ತು. ಭಾರತದಲ್ಲೂ ಹಲವಾರು ಜನರು ಈ ಲಸಿಕೆಗಳಿಂದಲೇ ಸಾವು ಸಂಭವಿಸಿದೆ ಎಂದು ಆರೋಪಿಸಿದ್ದರು. ಆದರೆ ಆ ಬಗ್ಗೆ ಖಚಿತ ವೈಜ್ಞಾನಿಕ-ವೈದ್ಯಕೀಯ ಕಾರಣಗಳನ್ನು ಒದಗಿಸಲು ಸಾಧ್ಯವಾಗಿರಲಿಲ್ಲ. ಸರ್ಕಾರವೂ ಅದನ್ನು ತನಿಖೆಗೊಳಪಡಿಸುವ ಗೋಜಿಗೆ ಹೋಗಿರಲಿಲ್ಲ. ಹಾಗಾಗಿ ಈ ವಿಷಯ ಈವರೆಗೂ ದೇಶಾದ್ಯಂತ, ಅಷ್ಟೇ ಏಕೆ, ಜಗತ್ತಿನಾದ್ಯಂತ ಚರ್ಚಾವಸ್ತುವಾಗಿಯೇ ಉಳಿದಿತ್ತು.

    ಈಗ ದಿಢೀರನೆ ಆಸ್ಟ್ರಾಜೆನೆಕಾ ಕಂಪನಿ, ತನ್ನ ಲಸಿಕೆಗಳಿಂದ ಕೆಲವು ಅಪರೂಪದ ಪ್ರಕರಣಗಳಲ್ಲಿ ಮನುಷ್ಯರ ದೇಹದೊಳಗಿನ ಪ್ಲೇಟ್​ಲೆಟ್​ಗಳ ಸಂಖ್ಯೆ ಕಡಿಮೆಯಾಗಿ ರಕ್ತ ಹೆಪ್ಪುಗಟ್ಟಿ ಸಾವು ಸಂಭವಿಸಿರುವ ಸಾಧ್ಯತೆ ಇದೆ ಎಂದು ಬ್ರಿಟನ್​ನ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದೆ. ಲಸಿಕೆಯಿಂದ ದುಷ್ಪರಿಣಾಮ ಎದುರಿಸಿದ ಸುಮಾರು ಐವತ್ತು ಕುಟುಂಬಗಳು ನ್ಯಾಯಾಲಯದಲ್ಲಿ ದಾವೆ ಹೂಡಿದ್ದವು. ಸುದೀರ್ಘ ವಿಚಾರಣೆಯ ಸಂದರ್ಭದಲ್ಲಿ, ಲಸಿಕೆ ತಯಾರಿಕಾ ವಿಧಾನ, ಪ್ರಯೋಜನಗಳು, ದುಷ್ಪರಿಣಾಮಗಳು ಮುಂತಾಗಿ ಎಲ್ಲದರ ಬಗ್ಗೆ ಸಾಕಷ್ಟು ವಿಚಾರ ವಿಮರ್ಶೆ ನಡೆಸಲಾಗಿದೆ. ಯಾವ ದುಷ್ಪರಿಣಾಮಗಳೂ ಆಗಿಲ್ಲ ಎಂದೇ ವಾದಿಸುತ್ತ ಬಂದಿದ್ದ ಕಂಪನಿ, ಇದೇ ಮೊದಲ ಬಾರಿಗೆ ತಪ್ಪು ಒಪ್ಪಿಕೊಂಡಿದೆ. ಲಸಿಕೆಗಳಿಂದ ಸಾವು ಸಂಭವಿಸಿದ ಆರೋಪ ಸಾಬೀತಾದರೆ, ಸಂತ್ರಸ್ತ ಕುಟುಂಬಗಳಿಗೆ ನೂರಾರು ಕೋಟಿ ರೂ. ಪರಿಹಾರ ನೀಡಬೇಕಾಗುತ್ತದೆ. ಆದರೆ ಈ ಪರಿಹಾರವನ್ನು ಆ ಕಂಪನಿ ನೀಡಬೇಕಾಗಿಲ್ಲ ಎಂಬುದು ಅಚ್ಚರಿಯ ವಿಷಯ. ಏಕೆಂದರೆ, ಕೋವಿಡ್ ಹಾವಳಿ ವಿಪರೀತವಾಗಿದ್ದಾಗ, ಹೆಚ್ಚೆಚ್ಚು ಲಸಿಕೆ ಉತ್ಪಾದಿಸುವ ಅನಿವಾರ್ಯತೆ ಇತ್ತು. ಸಂಶೋಧನೆ ಮಾಡುತ್ತ ಕುಳಿತುಕೊಳ್ಳುವ ವ್ಯವಧಾನ ಇರಲಿಲ್ಲ. ಹಾಗಾಗಿ, ಮುಂದೆ ಎದುರಾಗಬಹುದಾದ ಕಾನೂನು ಸಂಕಷ್ಟಗಳಿಗೆ ತಾನು ಹೊಣೆಯಲ್ಲ ಎಂದು ಈ ಜಾಣ ಕಂಪನಿ ಆಗಲೇ ಬ್ರಿಟನ್ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು! ಹೀಗಾಗಿ ಅಲ್ಲಿನ ಸರ್ಕಾರವೇ ಈಗ ಸಂತ್ರಸ್ತರಿಗೆ ಪರಿಹಾರ ನೀಡಬೇಕಾದ ಅನಿವಾರ್ಯತೆ ಎದುರಾಗಬಹುದು.

    ಕೋವಿಡ್​ನಿಂದ ಭಾರತದಲ್ಲಿಯೂ ಸಾವುಗಳು ಸಂಭವಿಸಿದ್ದವು. ಅದರಲ್ಲಿ ಕಡಿಮೆ ವಯಸ್ಸಿನವರೂ ಸಾಕಷ್ಟಿದ್ದರು. ಕೋವಿಶೀಲ್ಡ್ ಲಸಿಕೆಯನ್ನು ಭಾರತದಲ್ಲಿ ಕೋಟ್ಯಂತರ ಜನರಿಗೆ ನೀಡಲಾಗಿತ್ತು. ಸಾವುಗಳಿಗೆ ಲಸಿಕೆ ಕಾರಣವೇ ಎಂಬ ಬಗ್ಗೆ ಇಲ್ಲಿಯೂ ವೈಜ್ಞಾನಿಕ ಅಧ್ಯಯನ ನಡೆಯಬೇಕಿದೆ. ಕೇಂದ್ರ ಸರ್ಕಾರ ಆದಷ್ಟು ಶೀಘ್ರ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಿದೆ.

    ಮಾಜಿ ಡಿಸಿಎಂ ಮನೀಶ್ ಸಿಸೊಡಿಯಾ ಮತ್ತಷ್ಟು ದಿನ ಜೈಲಿನಲ್ಲೇ: 2ನೇ ಬಾರಿಗೆ ಜಾಮೀನು ಅರ್ಜಿ ವಜಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts