More

    ಮಿತವಾದ ಮಾತಿನಿಂದ ಎಲ್ಲರಿಗೂ ಹಿತ

    Hello Doctor ಮೊನ್ನೆ ನಮ್ಮ ಹತ್ತಿರದ ಸಂಬಂಧಿ ಬಂದಿದ್ದ. ಆತ 26ರ ಯುವಕ. ಸಾಫ್ಟ್​ವೇರ್ ಇಂಜಿನಿಯರ್. ಕೈ ತುಂಬಾ ಸಂಬಳ. ಆಗಾಗ್ಗೆ ವಿದೇಶ ಪ್ರವಾಸ. ಪ್ರಸ್ತುತ ಬೆಂಗಳೂರಲ್ಲಿ ವಾಸ. ಬಾಲ್ಯದಿಂದಲೂ ಆತ ಮುಂಗೋಪಿ. ಎದುರಿರುವರು ಯಾರು? ಏನು? ಎತ್ತ ಇದ್ಯಾವುದನ್ನು ಲೆಕ್ಕಿಸದೆ ಬಿರುಸಿನ ಮಾತಗಳನ್ನಾಡುವವನು. ಈ ಕಾರಣಕ್ಕೆ ಹಲವು ಬಾರಿ ಈತನಿಗೆ ಅವಮಾನವೂ ಆಗಿದೆ. ಇದರಿಂದ ಅವನಿಗೆ ಅಸಮಾಧಾನ. ಅಷ್ಟೇ ಏಕೆ ಮಾನಸಿಕ ನೆಮ್ಮದಿಯ ಅವಸಾನ. ಇದನ್ನು ಗಮನಿಸಿದ ನಾನು ಯಾಕೆ ಏನಾಯ್ತು? ಇಷ್ಟೊಂದು ಡಿಪ್ರೆಶನ್​ಗೆ ಹೋದಿದ್ದೇಕೆ? ಎಂದು ಕೇಳಿದೆ.

    ಅದಕ್ಕೆ ಆತನ ಉತ್ತರ ನನ್ನ ನಿರೀಕ್ಷೆಯಂತೆಯೇ ಇತ್ತು. ಹೌದು, ಆತನ ಮುಂಗೋಪವೇ ಆತನಿಗೆ ಮುಳುವಾಗಿತ್ತು. ಹೆತ್ತವರು, ನೆರೆ ಹೊರೆಯವರು, ಸ್ನೇಹಿತರು ಎನ್ನದೆ ಎಲ್ಲರೊಡನೆ ಸಿಟ್ಟಿನ ಭರದಲ್ಲಿ ಏನೇನೋ ಮಾತನಾಡಿದ್ದರ ಪರಿಣಾಮ ಎಲ್ಲರೂ ಆತನಿಂದ ದೂರವಾಗಿದ್ದರು. ಅಷ್ಟೇ ಏಕೆ ಕಚೇರಿಯಲ್ಲಿ ಸಹೋದ್ಯೋಗಿಗಳು ಈತನ ಮಾತಿನಿಂದ ಬೇಸತ್ತು ಮೇಲಧಿಕಾರಿಗಳಿಗೆ ದೂರು ನೀಡಿಯಾಗಿತ್ತು. ಇದನ್ನು ಆತ ನನ್ನೆದುರು ವಿವರವಾಗಿ ಹೇಳಿದ. ನಾನು ಬೇಕು ಅಂತಲೇ ಹಾಗೆ ಮಾತನಾಡುವುದಿಲ್ಲ. ಆದರೆ ಅದು ಹಾಗಾಗಿಬಿಡುತ್ತದೆ. ಬೇರೊಬ್ಬರು ಆಡುವ ಮಾತು ಕೇಳಿಸಿಕೊಳ್ಳುವಷ್ಟು ವ್ಯವಧಾನ ನನ್ನಲ್ಲಿಲ್ಲ ಎಂದ.

    ಇದಕ್ಕೆ ಪ್ರತಿಯಾಗಿ ನಾನು ಆತನಿಗೆ ಮಾತಿನ ಮೌಲ್ಯದ ಬಗ್ಗೆ ತಿಳಿ ಹೇಳಿದೆ. ಬಾಯಿಂದ ಜಾರಿದ ಮಾತು ಕೈಯಿಂದ ಜಾರಿದ ಅವಕಾಶ, ಕಳೆದುಹೋದ ಸಮಯ ಎಂದಿಗೂ ಮರಳುವುದಿಲ್ಲ ಎನ್ನುವುದು ಸುಳ್ಳಲ್ಲ. ನಿನ್ನ ಸಿಟ್ಟಿನ ಮಾತುಗಳಿಂದ ಆದ ಬೇಸರಕ್ಕೆ ಎಲ್ಲರೂ ನಿನ್ನಿಂದ ದೂರವಾದರು. ನೀನಾಡಿದ ಮಾತು ಮರಳಿ ಬರುವುದಿಲ್ಲ. ಕ್ಷಮಿಸಿ ಎಂದು ಕೇಳಿದರೆ ಅವರು ಅದನ್ನು ಒಪ್ಪುವ ಸ್ಥಿತಿಯಲ್ಲಿಲ್ಲ. ಅದಕ್ಕೆ ಹೇಳೋದು ಮಾತು ಆಡಿದರೆ ಮುತ್ತಿನಂತಿರಬೇಕು. ಮಾತೇ ಮುತ್ತು ಮಾತೇ ಮೃತ್ಯು. ಮಾತು ಸ್ವಚ್ಛವಾಗಿರಬೇಕು. ಶಾಂತವಾಗಿರಬೇಕು. ಇದನ್ನೇ ನಮ್ಮಬಸವಣ್ಣನವರು

    ‘ನುಡಿದರೆ ಮುತ್ತಿನ ಹಾರದಂತಿರಬೇಕು/ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು/ ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕು/ ನುಡಿದರೆ ಲಿಂಗಮೆಚ್ಚಿ ಅಹುದಹುದೆನಬೇಕು’ ಎಂದು ಮಾತಿನ ಮರ್ಮ ತಿಳಿಸಿದ್ದಾರೆ. ಮಾತೆಂಬುದು ಕಾಮಧೇನುವಿದ್ದಂತೆ. ಒಳ್ಳೆಯ ಮಾತು ಇಷ್ಟಾರ್ಥವನ್ನು ಕೊಡುತ್ತದೆ. ದುಡುಕಿನ ಮಾತು ಅಥವಾ ಕೆಟ್ಟು ಮಾತು ಎಲ್ಲವನ್ನೂ ಕಸಿಯುತ್ತದೆ. ಅದಕ್ಕೆ ನಮ್ಮ ಹಿರಿಯರು ‘ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ’ ಎಂದಿರುವುದು.

    ಅನಗತ್ಯವಾಗಿ ಆಡುವ ಮಾತು ಕೂಡ ಅಪಾಯವೇ. ಇದನ್ನೇ ಅಸ್ಕಿಹಾಳದ ಗೋವಿಂದದಾಸರು ‘ಹೇಳುವುದರೊಳಗೆ ಕಾಲ ಕಳೆಯಿತೋ ಮಾಡುವುದ್ಯಾವಗಲೇ ಮನವೇ’ ಎಂದು ಬಲು ಅರ್ಥಗರ್ಭಿತವಾಗಿ ಹೇಳಿದ್ದಾರೆ. ನಾವಾಡುವ ನುಡಿ ಅಥವಾ ಮಾತು ಅರ್ಥಹೀನವಾಗಿರಬಾರದು. ಮತ್ತೊಬ್ಬರ ಮನಸ್ಸು ನೋಯಿಸುವಂತಿರಬಾರದು. ಅಪ್ರಿಯವಾಗಿರಬಾರದು. ಇನ್ನೊಬ್ಬರ ಮರ್ಯಾದೆಗೆ ಧಕ್ಕೆ ತರುವ ಚಾಟಿಯಾಗಿರಬಾರದು. ದುಃಖದಲ್ಲಿರುವವರಿಗೆ ಧೈರ್ಯ ತುಂಬುವಂತಿರಬೇಕು. ಸಾಂತ್ವನ ಹೇಳುವಂತಿರಬೇಕು. ನಮ್ಮ ಮಾತು ನಮ್ಮ ವ್ಯಕ್ತಿತ್ವವನ್ನು ಪ್ರತಿನಿಧಿಸುತ್ತದೆ. ಬಿಂಬಿಸುತ್ತದೆ. ಆಡುವ ಎಲ್ಲವೂ ಮಾತಾಗಲಾರವು. ಮಾತು ಮಾತು ಮಥಿಸಿ ಬಂತು ನಾದದ ನವನೀತ ಎಂದು ವರಕವಿ ಡಾ. ದ.ರಾ. ಬೇಂದ್ರೆಯವರು ಮಾತಿನ ಮಹತ್ವ ಮತ್ತು ಮೌಲ್ಯ ಸಾರಿದ್ದಾರೆ.

    ನಮ್ಮ ಕೃತಿಗಳೇ ಮಾತಾಗಬೇಕು ಹೊರತು ಮಾತೇ ಸಾಧನೆಯಾಗಬಾರದು. ಇನ್ನೂ ಹೆಚ್ಚಿಗೆ ಹೇಳಬೇಕೆಂದರೆ ನಮ್ಮ ಕವಿ ಸರ್ವಜ್ಞ ತನ್ನ ತ್ರಿಪದಿಯಲ್ಲಿ ‘ಆಡದೆ ಮಾಡುವನು ರೂಢಿಯೊಳಗೆ ಉತ್ತಮನು, ಆಡಿ ಮಾಡುವನು ಮಧ್ಯಮನು, ಆಡಿಯೂ ಮಾಡದವ ಅಧಮನು’ ಎಂದಿದ್ದಾನೆ ಸರ್ವಜ್ಞ. ಮಾತು ಅಭಿವ್ಯಕ್ತಿಯ ಪ್ರತೀಕ. ಸೃಜನಶೀಲತೆ ಬಿಂಬಿಸುವ ಒಂದು ಮಾಧ್ಯಮ. ಸುಮ್ಮ ಸುಮ್ಮನೆ ಅನರ್ಥವಾಗಿ ಆಯುಷ್ಯ ಕರಗಿಸುವ ಬಾಯಿಚಪಲಕ್ಕೆ ಆಡುವ ಮಾತಿನಿಂದ ಮನುಷ್ಯ ಅಧೋಗತಿಗೆ ಹೋಗುತ್ತಾನೆ. ನೈತಿಕವಾಗಿ ಕುಸಿಯುತ್ತಾನೆ ಎಂದೆಲ್ಲಾ ಆತನಿಗೆ ಮಾತಿನ ಮಹತ್ವ ಮತ್ತು ಮಹಿಮೆ ಕುರಿತು ಹೇಳಿದೆ. ಆಗ ಅವನಿಗೆ ತನ್ನ ತಪ್ಪಿನ ಅರಿವಾಯಿತು. ಕಾಲ ಇನ್ನೂ ಮಿಂಚಿಲ್ಲ. ಈಗಲಾದರೂ ಮಾತಿನ ಧಾಟಿ ಬದಲಾಯಿಸಿ ನೋಡು. ದೂರವಾದವರೆಲ್ಲರೂ ಮತ್ತೆ ನಿನ್ನ ಬಳಿ ಬರುತ್ತಾರೆ. ಎಲ್ಲರೊಡನೆ ಬೆರೆತು ಬಾಳು. ಖಿನ್ನತೆಯೂ ಇರುವುದಿಲ್ಲ. ಆತಂಕವೂ ಇರುವುದಿಲ್ಲ ಎಂದು ಆಪ್ತಸಲಹೆ ನೀಡಿದೆ. ಅದು ಅವನಿಗೆ ಮನವರಿಕೆ ಆಯಿತು. ಅದನ್ನು ಚಾಚೂ ತಪ್ಪದೆ ಪಾಲಿಸಿದ ಆತ ಇಂದು ಮಾತಿನ ಮೇಲೆ ಹಿಡಿತ ಸಾಧಿಸಿ ತನ್ನ ವೃತ್ತಿ ಹಾಗೂ ವೈಯಕ್ತಿಕ ಜೀವನದಲ್ಲೂ ಸಾಧನೆಯತ್ತ ಹೆಜ್ಜೆ ಹಾಕುತ್ತಿದ್ದಾನೆ.

    ಅಶ್ಲೀಲ ಚಿತ್ರಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಫೋಟೋ ಮಾರ್ಫಿಂಗ್: ಎಫ್​​ಐಆರ್ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts