More

    ಹೊಸೂರ ಗ್ರಾಮಕ್ಕಿಲ್ಲ ಚರಂಡಿ ವ್ಯವಸ್ಥೆ

    ಡಾ.ರೇವಣಸಿದ್ದಪ್ಪ ಕುಳ್ಳೂರ ರಾಮದುರ್ಗ

    ಗ್ರಾಮೀಣ ಪ್ರದೇಶಗಳ ಸ್ವಚ್ಛತೆಗಾಗಿ ಸರ್ಕಾರ ಕೋಟ್ಯಂತರ ರೂಪಾಯಿ ಮೀಸಲಿಟ್ಟರೂ ಜನಪ್ರತಿನಿಧಿಗಳು ಹಾಗೂ ಸ್ಥಳಿಯ ಅಧಿಕಾರಿಗಳ ರ್ನಿಲಕ್ಷ$್ಯದಿಂದ ಸುಗಮವಾಗಿ ಸಂಚರಿಸದಂಥ ವಾತಾವರಣ ಮಳೆಗಾಲ ಬರುತ್ತಿದ್ದಂತೆ ಉಗಮವಾಗಿ ಬಿಡುತ್ತದೆ. ರಾಮದುರ್ಗ ತಾಲೂಕಿನ ಹೊಸೂರ ಗ್ರಾಮದ ಪರಿಸ್ಥಿತಿ ಸ್ಪಷ್ಟ ನಿದರ್ಶನ ಒದಗಿಸುತ್ತದೆ.

    ರಾಮದುರ್ಗ ತಾಲೂಕಿನಿಂದ ಸುಮಾರು 32 ಕಿಮೀ ದೂರದ ಕದಾಂಪುರ (ಸಾಲಹಳ್ಳಿ) ಗ್ರಾಪಂ ವ್ಯಾಪ್ತಿಯ ಹೊಸೂರ ಗ್ರಾಮದ ರಸ್ತೆ ಮೇಲೆ ಹರಿಯುತ್ತಿರುವ ಮೋರಿ ನೀರಿನಲ್ಲೇ ಜನರು ನಡೆದಾಡುವ ದುಸ್ಥಿತಿ ನಿರ್ಮಾಣವಾಗಿದೆ. ಇದೀಗ ಮಳೆಗಾಲ ಆರಂಭವಾಗಿರುವುದರಿಂದ ಅಲ್ಲಿನ ನಿವಾಸಿಗಳಿಗೆ ನಿತ್ಯರೋದನ ಎದುರಾಗಿದೆ. ಅವರ ಗೋಳನ್ನು ಯಾವ ಗ್ರಾಪಂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೇಳದ್ದರಿಂದ ಅಸಮಾಧಾನ ಹೊಗೆಯಾಡುತ್ತಿದೆ.
    ಹಳೇ ಗ್ರಾಮಕ್ಕೆ ಹೊಂದಿಕೊಂಡಿರುವ ಜನತಾ ಪ್ಲಾಟ್​ನಲ್ಲಿ ಅವೈಜ್ಞಾನಿಕವಾಗಿ ಸಿಸಿ ರಸ್ತೆ ಮಾಡಲಾಗಿದ್ದು, ರಸ್ತೆ ಮೇಲಿನ ಮೋರಿ ನೀರು ಚರಂಡಿ ತಲುಪುವ ವ್ಯವಸ್ಥೆ ಇಲ್ಲದಂತಾಗಿದೆ. ಅಲ್ಲದೆ ಆ ನೀರು ಗ್ರಾಮಕ್ಕೆ ಹೊಂದಿಕೊಂಡಿರುವ ರೈತನೋರ್ವನ ಜಮೀನಿಗೆ ನುಗ್ಗುತ್ತಿದ್ದು, ತೊಂದರೆಯಾಗುತ್ತಿದೆ. ಅಲ್ಲದೆ ಕೆಲ ಮನೆಗಳ ಸುತ್ತ ನೀರು ನಿಂತು ಮನೆಗಳು ಕುಸಿಯತೊಡಗಿವೆ ಎಂದು ಅಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.


    ರೋಗದ ಭೀತಿ: ಅಲ್ಲಲ್ಲಿ ನೀರು ನಿಂತು ದುರ್ವಾಸನೆ ಬರತೊಡಗಿದೆ. ಸೊಳ್ಳೆಗಳ ಕಾಟ ಹೇಳತೀರದಾಗಿದೆ. ಮಲೇರಿಯಾ, ಕಾಲರಾದಂತಹ ರೋಗಗಳು ಹರಡುವ ಭೀತಿಯಲ್ಲಿಯೇ ಜನತೆ ವಾಸ ಮಾಡಬೇಕಾಗಿದೆ. ಅಂಥ ಗಲೀಜು ನೀರಿನಲ್ಲಿ ವೃದ್ಧರು ಹಾಗೂ ಚಿಕ್ಕ ಮಕ್ಕಳು ಕಾಲು ಜಾರಿ ಬೀಳುತ್ತಿದ್ದಾರೆ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ.


    ಚರಂಡಿ ವ್ಯವಸ್ಥೆ ಇಲ್ಲ: ಸುಮಾರು 800&1000 ಮನೆ ಹೊಂದಿರುವ ಬಹುದೊಡ್ಡ ಗ್ರಾಮದಲ್ಲಿ ಚರಂಡಿ ವ್ಯವಸ್ಥೆಯೇ ಇಲ್ಲದಿರುವುದು ಮಾತ್ರ ವಿಪರ್ಯಾಸದ ಸಂಗತಿ. ಇನ್ನಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಎಚ್ಚೆತ್ತು ಗ್ರಾಮದಲ್ಲಿ ಚರಂಡಿ ನಿರ್ಮಿಸಿ ಜನರಿಗೆ ಅನುಕೂಲ ಕಲ್ಪಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.


    ಚರಂಡಿ ನಿರ್ಮಿಸುವಂತೆ ಗ್ರಾಪಂ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಗೋಳು ಕೇಳುವವರು ಯಾರೂ ಇಲ್ಲದಾಗಿದೆ. ಸಮಸ್ಯೆ ಬಗೆಹರಿಸದೆ ಇದ್ದರೆ ಗ್ರಾಮಸ್ಥರು ಸೇರಿಕೊಂಡು ಹೋರಾಟ ಮಾಡಬೇಕಾಗುತ್ತದೆ.
    | ಮುತ್ತನಗೌಡ ಪಾಟೀಲ, ಹೊಸೂರ ಗ್ರಾಮಸ್ಥ

    ಹೊಸೂರ ಗ್ರಾಮದ ಸಮಸ್ಯೆ ನನ್ನ ಗಮನಕ್ಕೆ ಬಂದಿಲ್ಲ. ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳುತ್ತೇನೆ.

    |ಬಸವರಾಜ ಐನಾಪುರ, ರಾಮದುರ್ಗ ತಾಪಂ ಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts