More

    ಕಟಾವಿಗೆ ಬಂದ ಭತ್ತ ನೀರುಪಾಲು

    ಹೊಳೆಹೊನ್ನೂರು: ಗ್ರಾಮಾಂತರದಲ್ಲಿ ಬೇಸಿಗೆ ಹಂಗಾಮಿನ ಭತ್ತದ ಕಟಾವು ಭರದಿಂದ ನಡೆಯುತ್ತಿದೆ. ಆದರೆ ವಾರದಿಂದ ಸುರಿಯುತ್ತಿರುವ ಮಳೆಯಿಂದ ಕಟಾವಿಗೆ ಹಿನ್ನಡೆಯಾಗಿದೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಗಾಳಿ ಸಹಿತ ಮಳೆಯಿಂದಾಗಿ ಭತ್ತದ ಪೈರು ನೆಲಕಚ್ಚಿದೆ.

    ಬೇಸಿಗೆಯಲ್ಲಿ ಭತ್ತದ ಬೆಳೆಗೆ ಭದ್ರಾ ಜಲಾಶಯದಿಂದ ನೀರು ನೀಡದ ಕಾರಣ ಬಹುತೇಕ ರೈತರು ಗದ್ದೆಗಳನ್ನು ಪಾಳುಬಿಟ್ಟಿದರು. ನೀರಿನ ಅಲಭ್ಯತೆ ನಡುವೆಯೂ ಅಕ್ಕಪಕ್ಕದ ನೀರಿನ ಮೂಲಗಳಿಂದ ನೀರು ಹಾಯಿಸಿ ಭತ್ತ ಬೆಳೆದಿದ್ದ ರೈತರಿಗೆ ಸುರಿಯುತ್ತಿರುವ ಮಳೆ ನಿದ್ದೆಗೆಡಿಸಿದೆ. ಭದ್ರಾ ಜಲಾಶಯದಿಂದ ಆನ್ ಆ್ಯಂಡ್ ಆ್ ಮಾದರಿಯಲ್ಲಿ ಬಿಟ್ಟ ನೀರನ್ನು ಬಳಸಿಕೊಂಡು ಬೆಳೆದಿದ್ದ ಭತ್ತದ ಫಸಲು ಉತ್ತಮವಾಗಿತ್ತು. ಆದರೆ ಕಟಾವಿನ ಸಮಯದಲ್ಲಿ ಗಾಳಿ-ಮಳೆ ಹೊಡೆತಕ್ಕೆ ಸಿಲುಕಿದೆ.
    ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಕಳೆದೆರಡು ವರ್ಷಗಳಿಂದ ಭತ್ತ ಬೆಳೆಯುವ ಪ್ರಮಾಣ ಗಣನೀಯವಾಗಿ ಕುಸಿದಿದೆ. ಬಹುತೇಕ ಗದ್ದೆಗಳು ಅಡಕೆ ತೋಟಗಳಾಗಿ ಮಾರ್ಪಟ್ಟಿವೆ. ಭದ್ರಾ ಡ್ಯಾಂನಿಂದ ಈ ಬಾರಿ ನೀರು ಬಿಡಲ್ಲ ಎಂದ ಕಾರಣ ಮತ್ತಷ್ಟು ಗದ್ದೆಗಳನ್ನು ಪಾಳುಬಿದ್ದವು. ಕೆಲ ರೈತರು ಮನೆ ಬಳಕೆಗಾದರೂ ಆಗುತ್ತದೆ ಎಂದುಕೊಂಡು ಕೊಳವೆಬಾವಿ ನೀರು ಬಳಸಿಕೊಂಡು ಭತ್ತ ಬೆಳೆದಿದ್ದರು. ಆದರೆ ಎಡೆಬಿಡದೆ ಸುರಿಯುತ್ತಿರುವ ಮಳೆ ರೈತರ ನಿರೀಕ್ಷೆ ಹುಸಿಗೊಳಿಸಿದೆ.
    ಪಟ್ಟಣ ಸಮೀಪದ ಹೊಳೆಹನಸವಾಡಿ, ಬೇಡರಹೊಸಹಳ್ಳಿ, ಹೊಳೆಹಟ್ಟಿ, ಹೊಳಲೂರು, ಮಡಕೆ ಚೀಲೂರು, ಕಲ್ಲಿಹಾಳ್, ತಟ್ಟೆಹಳ್ಳಿ, ಮಾರಶೆಟ್ಟಿಹಳ್ಳಿ, ತಿಮ್ಮಲ್ಲಾಪುರ, ನಾಗತಿಬೆಳಗಲು, ವೆಂಕಟಾಪುರ ಗ್ರಾಮಗಳ ಸುತ್ತಮುತ್ತಲಿನ ಗದ್ದೆಗಳಲ್ಲಿ ಕಟಾವಿಗೆ ಬಂದಿದ ಭತ್ತ ಸಂಪೂರ್ಣ ನೆಲಕಚ್ಚಿದೆ. ಭತ್ತದ ಗದ್ದೆಗಳಲ್ಲಿ ನಿಂತಿರುವ ನೀರನ್ನು ಹೊರಹಾಕಲು ಹರಸಾಹಸ ಪಡುತ್ತಿದ್ದಾರೆ. ಮಳೆ ಬಿಡುವು ನೀಡದಿದ್ದರೆ ಗದ್ದೆಯಲ್ಲೇ ಭತ್ತ ಮೊಳಕೆಯೊಡೆಯುತ್ತವೆ.
    ಮೇವು ಸಹ ಸಿಗಲ್ಲ:
    ಬಹುತೇಕ ರೈತರು ರಾಸುಗಳಿಗೆ ಭತ್ತದ ಹುಲ್ಲು ಸಿಗುತ್ತದೆಂಬ ನಿರೀಕ್ಷೆಯಲ್ಲಿದರು. ಆದರೆ ಗದ್ದೆಗಳಲ್ಲಿ ನೀರು ನಿಂತರುವುದರಿಂದ ಹುಲ್ಲು ಕೊಳೆಯುತ್ತಿದೆ. ನೀರಿರುವ ಗದ್ದೆಗಳಲ್ಲಿ ಕೊಯ್ಲಿಗೆ ಯಂತ್ರಗಳನ್ನು ಬಳಸಿದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ. ಭತ್ತದ ಹುಲ್ಲು ಕೆಸರಿನಲ್ಲಿ ಹುದುಗಿ ಹೋಗಿ ಬಾಚಿಕೊಳುವುದಕ್ಕೂ ಬಾರದಂತಾಗುತ್ತದೆ.
    ತೋಟಗಳ ಚೇತರಿಕೆ:
    ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಹದ ಮಳೆ ಸುರಿಯುತ್ತಿರುವುದರಿಂದ ಅಡಕೆ ತೋಟಗಳು ಚೇತರಿಸಿಕೊಂಡಿವೆ. ಆಫ್ ಆ್ಯಂಡ್ ಆನ್ ಪದ್ಧತಿಯಲ್ಲಿ ಭದ್ರಾ ಜಲಾಶಯದಿಂದ ಮೂರು ತಿಂಗಳು ನೀರು ನೀಡಿ ಕಳೆದ ಹದಿನೈದು ದಿನಗಳಿಂದ ನಾಲೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಕೊಳವೆ ಬಾವಿಗಳಲ್ಲೂ ನೀರು ಬತ್ತಿದೆ. ಜೂನ್ ತಿಂಗಳಿನಲ್ಲಿ ಮಳೆ ಬಾರದಿದ್ದರೆ ಅಡಕೆ ಬೆಳೆಗಾರರ ಸಂಕಷ್ಟ ತೀವ್ರವಾಗಲಿದೆ. ಆದರೆ ವಾರದಿಂದ ಸುರಿಯುತ್ತಿರುವ ಮಳೆ ಬೆಳೆಗಾರರಲ್ಲಿ ನೆಮ್ಮದಿ ಮೂಡಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts