More

    ಉಳ್ಳಾಲಕ್ಕೆ ದರ್ಗಾ ಬಾವಿಯೇ ಆಪತ್ಬಾಂಧವ: ಗ್ರಾಮಗಳಿಗೆ ಟ್ಯಾಂಕರ್ ನೀರು: ಜಲಜೀವನವೂ ಫೇಲ್!

    ಅನ್ಸಾರ್ ಇನೋಳಿ ಉಳ್ಳಾಲ

    ಈ ಬಾರಿಯೂ ಉಳ್ಳಾಲದಲ್ಲಿ ನೀರಿನ ಸಮಸ್ಯೆ ಆರಂಭವಾಗಿದೆ. ಗ್ರಾಮೀಣ ಭಾಗದಲ್ಲಿ ಸಮಸ್ಯೆ ಇಲ್ಲದಿದ್ದರೂ ಉಳ್ಳಾಲದಲ್ಲಿ ಗಂಭೀರವಾಗಿದೆ. ತಲಪಾಡಿಯಲ್ಲಿ ಜಲಜೀವನ ಮಿಷನ್ ಇಂಜಿನಿಯರ್ ನೀಡಿದ ಭರವಸೆ ಹುಸಿಯಾಗಿದೆ. ಉಳ್ಳಾಲಕ್ಕೆ ದರ್ಗಾ ಬಾವಿ ಮತ್ತೆ ಆಸರೆಯಾಗಿದೆ.
    ಬಾಳೆಪುಣಿ, ಕೊಣಾಜೆ, ನರಿಂಗಾನ, ಪಜೀರು, ಮಂಜನಾಡಿ ಗ್ರಾಮಗಳ ಕೆಲವು ಭಾಗಗಳಿಗೆ ಟ್ಯಾಂಕರ್ ಮೂಲಕ, ತಲಪಾಡಿಯಲ್ಲಿ ಸ್ವಚ್ಛ ವಾಹಿನಿ ಬಳಸಿ ಟ್ಯಾಂಕ್ ಮೂಲಕ ಹಾಗೂ ಉಳ್ಳಾಲ, ಕೋಟೆಕಾರು, ಸೋಮೇಶ್ವರದ 12 ವಾರ್ಡ್‌ಗಳಲ್ಲಿ 9 ಟ್ಯಾಂಕರ್‌ಗಳ ಮೂಲಕ 62 ಟ್ರಿಪ್ ನೀರು ಪೂರೈಕೆ ಮಾಡಲಾಗುತ್ತಿದೆ.

    ಎಲ್ಲಿಗೆ ಎಷ್ಟು ನೀರು?: ಕೆ.ಸಿ.ರೋಡು, ಕೆ.ಸಿ.ನಗರ, ಪೂಮಣ್ಣು, ಪೂಜಾರ ಕಾಂಪೌಂಡ್‌ನಲ್ಲಿರುವ 12 ಮನೆಗಳಿಗೆ ನೀರು ಹೋಗುತ್ತಿದೆ. ಈ ಪ್ರಕ್ರಿಯೆ ಮಾರ್ಚ್ 19ರಿಂದ ಆರಂಭಗೊಂಡಿದೆ. ಬಟ್ಟಪ್ಪಾಡಿಯಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಪೈಪ್ ಒಡೆಯುವ ಸಮಸ್ಯೆ ಮುಂದುವರಿದಿದೆ. 15 ದಿನಗಳಲ್ಲಿ ನೀರು ಒದಗಿಸುತ್ತೇವೆಂದು ಫೆ.22ರಂದು ನಡೆದಿದ್ದ ಗ್ರಾಮಸಭೆಯಲ್ಲಿ ಜಲಜೀವನ ಯೋಜನೆಯ ಇಂಜಿನಿಯರ್ ನೀಡಿದ ಭರವಸೆ ಭರವಸೆಯಾಗಿಯೇ ಉಳಿದಿದೆ. ಕೊಣಾಜೆ ಗ್ರಾಮದ ತಾರಿಪಾಡಿ ಸೈಟ್‌ನಲ್ಲಿ ಜಲಮೂಲವೇ ಇಲ್ಲದೆ ಸಮಸ್ಯೆ ಎದುರಾಗಿದ್ದು ಪ್ರತಿದಿನ 14 ಸಾವಿರ ಲೀಟರ್ ಕೊಡಲಾಗುತ್ತಿದೆ.

    ಪಜೀರು ಗ್ರಾಮದಲ್ಲಿ ದಿನಕ್ಕೆ ಮೂರು ಸಾವಿರ ಲೀಟರ್‌ನ ನಾಲ್ಕು ಟ್ಯಾಂಕರ್‌ಗಳಲ್ಲಿ ಫೆಬ್ರವರಿಯಿಂದ ಕಂಬಳಪದವು ಮಾರ್ಚ್‌ನಿಂದ ಬೆಂಗೋಡಿಪದವಿಗೆ ನೀರು ಪೂರೈಸಲಾಗುತ್ತಿದೆ. ಬಾಳೆಪುಣಿ ಗ್ರಾಮದ ಕುಕ್ಕುದಕಟ್ಟೆ, ಮೋಂಟುಗೋಳಿಗೆ ಪ್ರತಿದಿನ ಎರಡು ಟ್ಯಾಂಕರ್‌ಗಳಲ್ಲಿ 14 ಸಾವಿರ ಲೀಟರ್ ನೀರು ಪೂರೈಕೆ ಫೆ.16ರಂದೇ ಆರಂಭಗೊಂಡಿದೆ. ಬಂಗಾರುಗುಡ್ಡೆಯಲ್ಲಿ 35 ಮನೆಗಳಿದ್ದು ಪಂಚಾಯಿತಿಯಿಂದ ನೀರಿನ ಸಂಪರ್ಕ ಇಲ್ಲ. ಇಲ್ಲಿನ ಎರಡು ಮನೆಗಳಿಗೆ ಮಾರ್ಚ್ 23ರಿಂದ ಎರಡು ದಿನಕ್ಕೊಮ್ಮೆ ಮೂರು ಸಾವಿರ ಲೀಟರ್ ನೀರು ಪೂರೈಕೆಯಾಗುತ್ತಿದೆ.

    ನರಿಂಗಾನ ಗ್ರಾಮದ ಮೋರ್ಲ ಮತ್ತ ತೌಡುಗೋಳಿಗೆ ಮಾರ್ಚ್ 15ರಿಂದ ಒಂದು ಟ್ಯಾಂಕರ್ ಬಳಸಿ ಆರು ಸಾವಿರ ಹಾಗೂ ಪೊಟ್ಟೊಳಿಕೆ, ಮೊಂಟೆಪದವಿಗೆ ಫೆ.6ರಿಂದಲೇ ಮೂರು ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಆರಂಭಗೊಂಡಿದೆ.

    ಸೋಮೇಶ್ವರ ಪುರಸಭಾ ವ್ಯಾಪ್ತಿಯ ಕೆಲವೆಡೆ ಕೊಳವೆ ಬಾವಿಗಳ ನಿರ್ಮಾಣ ಆಗಿರುವುದರಿಂದ ಕಳೆದ ವರ್ಷದಷ್ಟು ಸಮಸ್ಯೆ ಇಲ್ಲ. ವಾರ್ಡ್ 22ರ ಕುದ್ರು ಮತ್ತು ಕಜೆಗೆ ಎರಡು ಟ್ರಿಪ್, ವಾರ್ಡ್ 21 ಮೇರ್ಲಗುಡ್ಡೆಯಲ್ಲಿ ಬಾವಿಯ ನೀರು ಉಪ್ಪು ಬರುವ ಕಾರಣ ಟ್ಯಾಂಕರ್ ನೀರು ನೀಡಲಾಗುತ್ತಿದೆ. ವಾರ್ಡ್ 10 ಕುಂಪಲ ಸರಳಾಯ ಕಾಲನಿಯಲ್ಲಿ ಮೂರು ಸಾವಿರ ಲೀಟರ್‌ನಂತೆ ವಾರಕ್ಕೆರಡು ದಿನ ನೀರು ಪೂರೈಕೆ ಮಾರ್ಚ್ 15ರಿಂದ ಆರಂಭಗೊಂಡಿದೆ.

    ತಲಪಾಡಿಯಲ್ಲಿ ಚಾಣಾಕ್ಷ ನಡೆ

    ತಲಪಾಡಿ ಗ್ರಾಮದ ಕೆಲವು ಕಡೆ ನೀರಿನ ಸಮಸ್ಯೆ ಇದೆ. ಇಲ್ಲೆಲ್ಲ ಮನೆಗಳಲ್ಲಿ ಬಾವಿಯಿದೆ. ದುಬಾರಿ ವೆಚ್ಚಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಟ್ಯಾಂಕರ್ ಬದಲು ಸ್ವಚ್ಛ ವಾಹಿನಿ ಆಟೋ ಟೆಂಪೋದಲ್ಲಿ ಸಾವಿರ ಲೀಟರ್ ಸಾಮರ್ಥ್ಯದ ಎರಡು ಟ್ಯಾಂಕ್‌ಗಳ ಮೂಲಕ ನೀರು ಕೊಂಡಾಣ ನಡುಕುಮೇರು ಖಾಸಗಿ ಬಾವಿಯಿಂದ ನೀರು ತೆಗೆದು ಪೂರೈಸಲಾಗುತ್ತಿದ್ದು ಪ್ರತಿದಿನ ಹತ್ತು ಟ್ರಿಪ್ ಮಾಡಲಾಗುತ್ತಿದೆ.

    ಉಳ್ಳಾಲದಲ್ಲಿ ಸಮಸ್ಯೆ ಗಂಭೀರ

    ಸಮುದ್ರ, ಹಲವು ನದಿಗಳನ್ನು ಹೊಂದಿರುವ ಉಳ್ಳಾಲದಲ್ಲಿ ಈ ಬಾರಿಯೂ ಸಮಸ್ಯೆ ಗಂಭೀರವಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ನಗರಸಭೆ ಸಮೀಪದಲ್ಲಿರುವ ಉಳ್ಳಾಲ ದರ್ಗಾದ ಬಾವಿಯ ನೀರು ಆಶ್ರಯವಾಗಿದೆ. ಮಾರ್ಚ್ 4ರಿಂದಲೇ ನೀರು ಪೂರೈಕೆ ಆರಂಭಗೊಂಡಿದ್ದು ಎರಡು ದಿನಕ್ಕೊಮ್ಮೆ 40ರಿಂದ 50 ಟ್ಯಾಂಕರ್‌ಗಳಲ್ಲಿ 1.50 ಲಕ್ಷ ಲೀಟರ್ ನೀರು ಪೂರೈಸಲಾಗುತ್ತಿದೆ. ದರ್ಗಾ ಮುಂಭಾಗದಲ್ಲಿರುವ ಬಾವಿಯ ನೀರು ಹೆಚ್ಚಿನ ಪ್ರಮಾಣದಲ್ಲಿ ತೆಗೆದ ಕಾರಣ ಕೆಂಪು ನೀರು ಕಾಣಿಸಿಕೊಂಡಿದೆ. ಇದರಿಂದ ಈ ನೀರನ್ನೇ ನಂಬಿರುವ ಬಂಡಿಕೊಟ್ಯ, ಅಲೇಕಳ, ಮಿಲ್ಲತ್ ನಗರ, ಹಳೆಕೋಟೆ ಭಾಗದ ಜನರಿಗೆ ಸಮಸ್ಯೆಯಾಗಿದೆ. ವಾರ್ಡ್ 17-ತ್ರೈಬಿತ್ತಿಲು ಕಲ್ಲಾಪು, ಪಡ್ಪು, ಹೊಸಕುದ್ರು, ಅಜ್ಜನಕಟ್ಟೆ, ಕಲ್ಲಾಪು, ಪಾದೆ, ಪಟ್ಲ ಶಾಲೆ ಹಿಂದೆ, ಅಂಗನವಾಡಿ ಬಳಿ ವಾರ್ಡ್ 19- ಬಬ್ಬುಕಟ್ಟೆ, ಜಮಾಲ್ ಕಾಂಪೌಂಡ್, ಮುದರಣ್ಣ ಓಣಿ, ಈರನಗರ, ತಾರಿಪಡ್ಪು, ವಾರ್ಡ್6- ಕಕ್ಕೆತೋಟ, ಸಾದುಹಿತ್ಲು , ಸೀನಾ ಕಾಂಪೌಂಡ್, ಅಳೇಕಲ, ಸೆಸರ್ ಕಲ, ವಾರ್ಡ್ 14- ಹೊಯಿಗೆಹಿತ್ಲು, ಮಂಚಿಲ, ಕಟ್ಟತಲೆ. ವಾರ್ಡ್ 15- ಕಲ್ಲಾಪು, ಹಿದಾಯತ್ ನಗರ, ವಾರ್ಡ್ 31- ಕಾಪಿಕಾಡ್ ಇಲ್ಲೆಲ್ಲ ಪ್ರತಿದಿನ 300-350 ಮನೆಗಳಿಗೆ ನೀರು ಪೂರೈಕೆ ಆಗುತ್ತಿದೆ. ಈ ನಡುವೆ ದರ್ಗಾ ಮುಂಭಾಗದ ಬಾವಿ ನೀರು ಕೆಂಪಾಗಿರುವ ಕಾರಣ ಬಳಕೆಯ ಪ್ರಶ್ನೆ ಎದ್ದು ಸಮಸ್ಯೆಯಾಗಿದೆ.

    ತೆರೆದ ಬಾವಿಗಿಲ್ಲ ನರೇಗಾ ಯೋಜನೆ!

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೈಯಕ್ತಿಕ ನೆಲೆಯಲ್ಲಿ ಸಾಕಷ್ಟು ತೆರೆದ ಬಾವಿಗಳಿವೆ. ನಿರ್ವಹಣೆ ಸಹಿತ ಇತರ ಕೊರತೆಯಿಂದ ಹಲವರು ಬಾವಿಗಳನ್ನೇ ಮುಚ್ಚಿದ್ದರೆ, ಹಲವು ಬಾವಿಗಳು ಪಾಳು ಬಿದ್ದಿವೆ. ಕೊಳವೆ ಬಾವಿಗಿಂತ ತೆರೆದ ಬಾವಿ ನೀರು ಆರೋಗ್ಯಕರ ಆಗಿರುವುದರಿಂದ ವೈಯಕ್ತಿಕ ನೆಲೆಯಲ್ಲಿ ತೆರೆದ ಬಾವಿ ನಿರ್ವಹಣೆಗೆ ಸರ್ಕಾರ ನರೇಗಾ ಯೋಜನೆಯಡಿ ಅನುದಾನ ನೀಡಬೇಕೆನ್ನುವ ಬೇಡಿಕೆ ಮುಂದಿಟ್ಟು 2019ರಲ್ಲೇ ಜನಶಿಕ್ಷಣ ಟ್ರಸ್ಟ್ ವತಿಯಿಂದ ಮುಖ್ಯಮಂತ್ರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರು ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಮುಖ್ಯಮಂತ್ರಿಯ ಉಪಕಾರ್ಯದರ್ಶಿಗಳಿಂದ ದ.ಕ. ಜಿಲ್ಲಾ ಪಂಚಾಯಿತಿಗೆ ಪತ್ರ ಬರೆದಿರುವ ಬಗ್ಗೆ ಉತ್ತರ ಬಂದಿದ್ದರೂ ಅದಿನ್ನೂ ಕಡತದಲ್ಲೇ ಇದೆ.

    ಉಳ್ಳಾಲಕ್ಕೆ ದರ್ಗಾ ಬಾವಿಯೇ ಆಪತ್ಬಾಂಧವ: ಗ್ರಾಮಗಳಿಗೆ ಟ್ಯಾಂಕರ್ ನೀರು: ಜಲಜೀವನವೂ ಫೇಲ್!

    ನೀರು ಸಮಸ್ಯೆ ಪರಿಹಾರಕ್ಕೆ ಟ್ಯಾಂಕರ್ ನೀರು ಪರಿಹಾರವಲ್ಲ. ದ.ಕ.ದಲ್ಲಿ ಹಲವೆಡೆ ತೆರೆದ ಬಾವಿಗಳಿದ್ದು ಸರ್ಕಾರದ ನರೇಗಾದಿಂದ ಅನುದಾನ ನೀಡಿ ಆಯಾ ಸಮಯಕ್ಕೆ ನಿರ್ವಹಣೆಗೆ ವ್ಯವಸ್ಥೆ ಮಾಡಬೇಕು. ಇದರಿಂದ ಪ್ರತಿವರ್ಷ ಟ್ಯಾಂಕರ್ ನೀರು ಪೂರೈಕೆ ಸಮಸ್ಯೆ ತಡೆಯಬಹುದು.
    -ಶೀನ ಶೆಟ್ಟಿ
    ಮಾಜಿ ಒಂಬುಡ್ಸ್‌ಮನ್, ನರೇಗಾ

    ಉಳ್ಳಾಲ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ನಗರಸಭೆ ವ್ಯವಸ್ಥೆ ಮಾಡಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಸಮಸ್ಯೆ ಹೆಚ್ಚಾಗುವ ಆತಂಕ ಇದ್ದು ಇನ್ನಷ್ಟು ವ್ಯವಸ್ಥೆ ಅಗತ್ಯ. ಬಹುಗ್ರಾಮ ಕುಡಿಯುವ ನೀರು ಯೋಜನೆಯಿಂದ ಶಾಶ್ವತ ಪರಿಹಾರ ಸಿಗಲಿದ್ದು ಇದರ ಪ್ರಯೋಜನ ಮುಂದಿನ ವರ್ಷ ಸಿಗುವ ನಿರೀಕ್ಷೆ ಇದೆ.
    -ಸುರೇಶ್ ಭಟ್ನಗರ
    ಸದಸ್ಯ, ಧಾರ್ಮಿಕ ಪರಿಷತ್

    ಕಳೆದ ಹಲವು ವರ್ಷಗಳಿಂದ ಬೇಸಿಗೆ ಸಮಯದಲ್ಲಿ ಉಳ್ಳಾಲ ಭಾಗದಲ್ಲಿ ನೀರಿನ ಸಮಸ್ಯೆ ಸಾಮಾನ್ಯವಾಗಿದೆ. ಈ ಸಂದರ್ಭ ಉಳ್ಳಾಲ ನಗರಸಭೆಯಿಂದ ಅಗತ್ಯವಿರುವಲ್ಲಿ ಪೂರೈಸುವ ನೀರು ದರ್ಗಾ ಬಾವಿಯದ್ದಾಗಿದೆ. ಈ ಬಾವಿಯಲ್ಲಿ ಇದುವರೆಗೂ ನೀರು ಕಡಿಮೆಯಾಗಿಲ್ಲ ಎನ್ನುವುದು ವಿಶೇಷ. ವಿದ್ಯುತ್ ಬಿಲ್ ಕೂಡಾ ದರ್ಗಾದಿಂದಲೇ ಪಾವತಿಸುತ್ತಾ ಬರಲಾಗಿದೆ.
    -ನಜೀರ್ ಬಾರ್ಲಿ
    ಸಾಮಾಜಿಕ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts