More

    ಕೈ, ಕಮಲ ಪ್ರಾಬಲ್ಯದ ಮಧ್ಯೆ ಬಿಆರ್​ಎಸ್ ದುರ್ಬಲ?

    | ರಾಘವ ಶರ್ಮ ನಿಡ್ಲೆ, ನವದೆಹಲಿ

    ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ (ಬಿಆರ್​ಎಸ್), ಲೋಕಸಭೆ ಚುನಾವಣೆಯಲ್ಲೂ ತೀವ್ರ ಹಿನ್ನಡೆ ಅನುಭವಿಸುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಚಂದ್ರಶೇಖರ ರಾವ್ ಪುತ್ರಿ, ವಿಧಾನಪರಿಷತ್ ಸದಸ್ಯೆ ಕೆ. ಕವಿತಾ ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಆರೋಪಿಯಾಗಿ ತಿಹಾರ್ ಜೈಲು ಸೇರಿದ ಬೆನ್ನಲ್ಲೇ ಪಕ್ಷದ ಸಂಘಟನೆ ಕೂಡ ದಿನದಿಂದ ದಿನಕ್ಕೆ ದುರ್ಬಲಗೊಳ್ಳುತ್ತಿದ್ದು, ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಅನೇಕ ನಾಯಕರು, ಕಾರ್ಯಕರ್ತರು ಕಾಂಗ್ರೆಸ್ ಮತ್ತು ಬಿಜೆಪಿ ಸೇರಿಕೊಂಡಿರುವುದು ಕೂಡ ಪಕ್ಷಕ್ಕೆ ಭಾರೀ ತಲೆನೋವಾಗಿ ಪರಿಣಮಿಸಿದೆ.

    ‘ರಾಜ್ಯದಲ್ಲಿ ಬಿಜೆಪಿ-ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿವೆ’ ಎಂದು ಚಂದ್ರಶೇಖರ ರಾವ್ ಎಷ್ಟೇ ಹೇಳಿದರೂ, ಅದನ್ನು ನಂಬುವ ಸ್ಥಿತಿಯಲ್ಲಿ ಮತದಾರರಿಲ್ಲ ಎನ್ನುವುದು ವಾಸ್ತವ. ರಾಜ್ಯದಲ್ಲಿ 10 ವರ್ಷಗಳ ಕಾಲ ಅಧಿಕಾರದಲ್ಲಿದ್ದು, ಗಮನಸೆಳೆಯುವ ರೀತಿಯಲ್ಲಿ ಅಧಿ ಕಾರ ನಿರ್ವಹಿಸುವ ಬದಲು, ಕೆಸಿಆರ್ ಅವರ ಸ್ವಜನಪಕ್ಷಪಾತ ಧೋರಣೆ, ಕುಟುಂಬ ರಾಜಕೀಯ, ಭ್ರಷ್ಟಾ ಚಾರ ಆರೋಪಗಳೇ ರಾಜಕೀಯ ಕುಸಿತಕ್ಕೆ ದಾರಿ ಮಾಡಿವೆ. ಹೀಗಾಗಿ, ಹಾಲಿ ಲೋಕಸಭೆ ಚುನಾವಣೆ ಕಾಂಗ್ರೆಸ್ ವರ್ಸಸ್ ಬಿಜೆಪಿ ಎಂದೇ ಬಿಂಬಿತವಾಗುತ್ತಿದೆ.

    2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 3, ಬಿಜೆಪಿ 4 ಮತ್ತು ಎಐಎಂಐಎಂ ಪಕ್ಷ 1 ಸೀಟುಗಳನ್ನು ಗೆದ್ದಿದ್ದರೆ, ಬಿಆರ್​ಎಸ್ 9 ಸೀಟುಗಳನ್ನು ತನ್ನದಾಗಿಸಿಕೊಂಡಿತ್ತು. ಆದರೆ, ಬಿಆರ್​ಎಸ್ ರಾಜಕೀಯ ಶಕ್ತಿ ಎಷ್ಟರಮಟ್ಟಿಗೆ ಕುಸಿದಿದೆ ಎಂದರೆ, ಈ ಬಾರಿ ಒಂದು ಸೀಟನ್ನೂ ಗೆಲ್ಲುವುದು ಕಷ್ಟ ಎನ್ನಲಾಗುತ್ತಿದೆ. ಕೇವಲ 3 ಕ್ಷೇತ್ರಗಳಲ್ಲಷ್ಟೇ ಬಿಆರ್​ಎಸ್​ನ ಹಾಲಿ ಸಂಸದರು ಮರುಸ್ಪರ್ಧೆಯಲ್ಲಿದ್ದು, ಉಳಿದೆಲ್ಲೆಡೆ ಹೊಸ ಮುಖಗಳಿಗೆ ಅವಕಾಶ ಸಿಕ್ಕಿದೆ. ಆದರೆ ಅವರ ಗೆಲ್ಲುವ ಸಾಮರ್ಥ್ಯದ ಬಗ್ಗೆ ಅನುಮಾನಗಳಿವೆ.

    ರೇವಂತ ರೆಡ್ಡಿ ಜನಪ್ರಿಯತೆ: ಕಾಂಗ್ರೆಸ್ ಪಕ್ಷದ ಜನಪ್ರಿಯ ನಾಯಕರಾಗಿ ಹೊರಹೊಮ್ಮಿರುವ ಮುಖ್ಯಮಂತ್ರಿ ರೇವಂತ ರೆಡ್ಡಿ, ಪಕ್ಷದ ಸ್ಟಾರ್ ಪ್ರಚಾರಕರಂತೆ ರಾಜ್ಯಾದ್ಯಂತ ಎಡೆಬಿಡದೆ ಪ್ರಚಾರ ಮಾಡುತ್ತಿದ್ದಾರೆ. ಟಿಕೆಟ್ ಹಂಚಿಕೆಯಲ್ಲೂ ರೆಡ್ಡಿ ಮಾತಿಗೆ ಹೆಚ್ಚು ಮಾನ್ಯತೆ ಸಿಕ್ಕಿದೆ. ರಾಜ್ಯದಲ್ಲಿರುವ ಶೇಕಡ 13ರಷ್ಟು ಮುಸ್ಲಿಂ ಜನಸಂಖ್ಯೆಯಲ್ಲಿ ಬಹುಪಾಲು ಮಂದಿ, ಬಿಜೆಪಿಗೆ ಪ್ರಬಲ ಪ್ರತಿಸ್ಪರ್ಧಿ ಎನಿಸಿರುವ ಕಾಂಗ್ರೆಸ್​ನ್ನು ಬೆಂಬಲಿಸುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ. ಏತನ್ಮಧ್ಯೆ, ಬಿಆರ್​ಎಸ್-ಬಿಜೆಪಿ ಮಧ್ಯೆ 5 ಕ್ಷೇತ್ರಗಳಲ್ಲಿ ಒಳ ಒಪ್ಪಂದ ನಡೆದಿದೆ ಎಂದು ಆರೋಪಿಸಿರುವ ರೇವಂತ ರೆಡ್ಡಿ, ಮಹಬೂಬ್​ನಗರ, ಚೆವೆಲ್ಲಾ, ಮಲ್ಕಜ್ಗಿರಿ, ಭೋಂಗೀರ್ ಮತ್ತು ಝುಹೀರಾಬಾದ್ ಕ್ಷೇತ್ರಗಳಲ್ಲಿ ಬಿಆರ್​ಎಸ್ ಉದ್ದೇಶಪೂರ್ವಕವಾಗಿಯೇ ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಬಿಜೆಪಿಗೆ ಪರೋಕ್ಷವಾಗಿ ನೆರವಾಗುತ್ತಿದೆ ಎಂದು ಹೇಳಿದ್ದಾರೆ. ದೆಹಲಿ ಅಬಕಾರಿ ಹಗರಣದಲ್ಲಿ ಕವಿತಾ ಜೈಲಿನಲ್ಲಿರುವುದರಿಂದ, ಬಿಜೆಪಿ ನೆರವು ಸಿಕ್ಕರೆ ಕವಿತಾಗೆ ಜಾಮೀನು ಕೊಡಿಸಬಹುದು ಎಂದೇ ಕೆಸಿಆರ್ ಈ ರೀತಿಯಲ್ಲಿ ‘ಉಡುಗೊರೆ’ ನೀಡುತ್ತಿದ್ದಾರೆ ಎಂದು ರೇವಂತ ರೆಡ್ಡಿ ಆರೋಪಿಸಿದ್ದಾರೆ.

    ಸಿಕಂದರಾಬಾದ್ ಗೆಲ್ತಾರಾ ಕಿಶನ್ ರೆಡ್ಡಿ?: ಕೇಂದ್ರ ಸಚಿವ, ಬಿಜೆಪಿ ನಾಯಕ ಕಿಶನ್ ರೆಡ್ಡಿ ಸಿಕಂದರಾಬಾದ್ ಲೋಕಸಭೆಯಿಂದ ಸ್ಪರ್ಧಿಸುತ್ತಿದ್ದಾರೆ. ಅವರಿಗೆ ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರ್ಪಡೆಯಾಗಿರುವ ಬಿಆರ್​ಎಸ್​ನ ಕೈರತಾಬಾದ್ ಶಾಸಕ ದಾನಮ್ ನಾಗೇಂದರ್, ಕಾಂಗ್ರೆಸ್ ಅಭ್ಯರ್ಥಿಯಾಗಿ ಸವಾಲೊಡ್ಡಿದ್ದಾರೆ. ಬಿಆರ್​ಎಸ್ ಪಕ್ಷ ತನ್ನ ಸಿಕಂದರಾಬಾದ್ ಶಾಸಕ ಪದ್ಮರಾವ್ ಗೌಡ್​ರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಈ ಕ್ಷೇತ್ರ ಬಹುತೇಕ ನಗರ ಭಾಗಗಳನ್ನು ಹೊಂದಿರುವುದರಿಂದ ಬಿಜೆಪಿ ಬೆಂಬಲಿಗ ಮತವರ್ಗ ಹೆಚ್ಚಾಗಿ ಕಾಣುತ್ತಿದೆ. 2014 ಮತ್ತು 2019ರಲ್ಲಿ ಬಿಜೆಪಿ ಈ ಸ್ಥಾನ ಗೆದ್ದುಕೊಂಡಿದ್ದರಿಂದ ಈ ಬಾರಿ ಹ್ಯಾಟ್ರಿಕ್ ಸಾಧನೆಯ ತವಕದಲ್ಲಿದೆ. 2014ರಲ್ಲಿ ಬಂಡಾರು ದತ್ತಾತ್ರೇಯ (ಈಗ ಹರಿಯಾಣ ರಾಜ್ಯಪಾಲ) ಮತ್ತು 2019ರಲ್ಲಿ ಕಿಶನ್ ರೆಡ್ಡಿ ಇಲ್ಲಿಂದ ವಿಜಯಿಯಾಗಿದ್ದರು. ದಾನಮ್ ನಾಗೇಂದರ್ ಸ್ಪರ್ಧೆಗೆ ಕಾಂಗ್ರೆಸ್​ನ ಸ್ಥಳೀಯ ನಾಯಕರು, ಕಾರ್ಯಕರ್ತರಿಂದ ವಿರೋಧವಿತ್ತು. ಚುನಾವಣೆ ಪ್ರಚಾರದಲ್ಲೂ ಸಹಕಾರ ಸಿಗುತ್ತಿಲ್ಲ ಎಂದು ನಾಗೇಂದರ್ ಹೇಳಿಕೊಂಡಿದ್ದಾರೆ.

    ಕೈ, ಕಮಲ ಪ್ರಾಬಲ್ಯದ ಮಧ್ಯೆ ಬಿಆರ್​ಎಸ್ ದುರ್ಬಲ?

    ಪ್ರಚಾರ ತಂತ್ರ: ಪ್ರಧಾನಮಂತ್ರಿ ನರೇಂದ್ರ ಮೋದಿ ಜನಪ್ರಿಯತೆಯನ್ನೇ ನೆಚ್ಚಿಕೊಂಡಿರುವ ಬಿಜೆಪಿ, ಕೇಂದ್ರದಲ್ಲಿ ಉತ್ತಮ ಆಡಳಿತದ ಭರವಸೆ ನೀಡುತ್ತಿದೆ. 10 ವರ್ಷಗಳ ಒಟ್ಟಾರೆ ನಿರ್ವಹಣೆ, ಹಲವು ಐತಿಹಾಸಿಕ ಕ್ರಮಗಳು ಸೇರಿದಂತೆ ಸದೃಢ ಆಡಳಿತಕ್ಕಾಗಿ ಮೋದಿಯನ್ನು ಆಯ್ಕೆ ಮಾಡಿ ಎಂಬ ಪ್ರಚಾರ ರಾಜ್ಯದೆಲ್ಲೆಡೆ ಕಾಣುತ್ತಿದೆ. ಕರ್ನಾಟಕದಲ್ಲಿ ತನ್ನ ಗ್ಯಾರಂಟಿ ಯೋಜನೆಗಳನ್ನೇ ಮುಂದಿಟ್ಟುಕೊಂಡು ಮತದಾರರನ್ನು ಸೆಳೆಯಲು ಯತ್ನಿಸಿದಂತೆ, ತೆಲಂಗಾಣದಲ್ಲೂ ಕಾಂಗ್ರೆಸ್ ಸಿಎಂ ರೇವಂತ ರೆಡ್ಡಿ ತಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ. ಈ ಎರಡೂ ರಾಜ್ಯಗಳು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುತ್ತಿರುವುದರಿಂದ ಬಿಜೆಪಿಗೆ ಗ್ಯಾರಂಟಿಯೇ ಸವಾಲಾಗಿ ಪರಿಣಮಿಸಿದ್ದು, ಬಿಜೆಪಿ ಮೋದಿ ಗ್ಯಾರಂಟಿಯ ರಾಜಕೀಯ ನಿರೂಪಣೆ ತೇಲಿಬಿಡುತ್ತಿದೆ.

    ಕೈ, ಕಮಲ ಪ್ರಾಬಲ್ಯದ ಮಧ್ಯೆ ಬಿಆರ್​ಎಸ್ ದುರ್ಬಲ?

    ಮೂರನೇ ಚುನಾವಣೆ: ತೆಲಂಗಾಣ ಪ್ರತ್ಯೇಕ ರಾಜ್ಯವಾದ ಬಳಿಕ ನಡೆಯುತ್ತಿರುವ ಮೂರನೇ ಲೋಕಸಭೆ ಚುನಾವಣೆ ಇದಾಗಿದ್ದು, ಕಳೆದೆರಡೂ ಚುನಾವಣೆಗಳಲ್ಲಿ ಮೊದಲನೇ ಸ್ಥಾನದಲ್ಲಿದ್ದ ಬಿಆರ್​ಎಸ್ ಈ ಬಾರಿ ಮೂರನೇ ಸ್ಥಾನಕ್ಕಿಳಿಯುವ ಅಪಾಯದಲ್ಲಿದೆ. ಮಾಜಿ ಸಿಎಂ ಕೆ. ಚಂದ್ರಶೇಖರ್ ರಾವ್ ಪ್ರತ್ಯೇಕ ತೆಲಂಗಾಣಕ್ಕಾಗಿ ಹಲವು ವರ್ಷಗಳ ಹೋರಾಟ ನಡೆಸಿದ ಪರಿಣಾಮ ಹೊಸ ರಾಜ್ಯ ಉದಯವಾಗಿತ್ತು. ಹೊಸ ರಾಜ್ಯದ ಹೊಸ ನಾಯಕ ಎಂದು ಅಂದು ಕೆಸಿಆರ್​ನ್ನು ಬಿಗಿದಪ್ಪಿಕೊಂಡಿದ್ದ ರಾಜ್ಯದ ಮತದಾರರು, ಒಂಭತ್ತೇ ವರ್ಷದಲ್ಲಿ ಕೆಸಿಆರ್ ಮತ್ತು ಕುಟುಂಬವನ್ನು ಮನೆಗೆ ಕಳಿಸಿದ್ದಲ್ಲದೆ, ಕಾಂಗ್ರೆಸ್​ನ್ನು ಮತ್ತೆ ಅಪ್ಪಿಕೊಂಡಿದ್ದಾರೆ.

    ಕೈ, ಕಮಲ ಪ್ರಾಬಲ್ಯದ ಮಧ್ಯೆ ಬಿಆರ್​ಎಸ್ ದುರ್ಬಲ?

    ಪಕ್ಷಾಂತರ ಪರ್ವ: ರಾಜ್ಯದಲ್ಲಿ ಒಟ್ಟು 17 ಲೋಕಸಭೆ ಕ್ಷೇತ್ರಗಳಿದ್ದು, ಬಿಜೆಪಿ ಎಲ್ಲ ಸೀಟುಗಳಲ್ಲೂ ಅಭ್ಯರ್ಥಿಗಳನ್ನು ಹಾಕಿದೆ. ಕೇಸರಿಪಡೆಯ ಅರ್ಧಕ್ಕರ್ಧ ಅಭ್ಯರ್ಥಿಗಳು ಬಿಆರ್​ಎಸ್ ಹಿನ್ನೆಲೆಯವರಾಗಿದ್ದಾರೆ. ಅದೇ ರೀತಿ, ಬಿಆರ್​ಎಸ್​ನ ಕೆಲ ಸಂಸದರು ಮತ್ತು ಶಾಸಕರು ಕೂಡ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಒಟ್ಟು 14 ಸೀಟುಗಳನ್ನು ಗೆಲ್ಲಬೇಕೆಂದು ಕಾಂಗ್ರೆಸ್ ಗುರಿ ಇಟ್ಟುಕೊಂಡಿದ್ದರೂ, 9 ಸೀಟು ಗೆಲ್ಲುವ ಸಾಧ್ಯತೆಗಳ ಬಗ್ಗೆ ಚರ್ಚೆಯಾಗುತ್ತಿದೆ. ಬಿಜೆಪಿ ತನ್ನ 4 ಸೀಟುಗಳನ್ನು 8ಕ್ಕೆ ವಿಸ್ತರಿಸುವ ಲೆಕ್ಕಾಚಾರದಲ್ಲಿದೆ. ಹೈದರಾಬಾದ್​ನಲ್ಲಿ ಬಿಜೆಪಿಯ ಮಾಧವಿ ಲತಾ ಎಐಎಂಐಎಂನ ಅಸಾದುದ್ದೀನ್ ಓವೈಸಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿದ್ದರೂ, ಮುಸ್ಲಿಂ ಬಾಹುಳ್ಯವುಳ್ಳ ಈ ಕ್ಷೇತ್ರದಲ್ಲಿ ಓವೈಸಿಗೆ ಹೆಚ್ಚು ಅವಕಾಶ ಎಂಬ ಮಾತುಗಳಿವೆ. 2018ರ ವಿಧಾನಸಭೆ ಚುನಾವಣೆಯಲ್ಲಿ 1 ಶಾಸಕ ಸ್ಥಾನ, ಶೇ.6.98 ಮತಗಳನ್ನು ಹೊಂದಿದ್ದ ಬಿಜೆಪಿ, 2023ರಲ್ಲಿ ಶೇ.13.90 ಮತ ಪ್ರಮಾಣದೊಂದಿಗೆ 8 ಶಾಸಕ ಸ್ಥಾನಗಳನ್ನು ಹೊಂದಿದೆ.

    ಅಶ್ಲೀಲ ಚಿತ್ರಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಫೋಟೋ ಮಾರ್ಫಿಂಗ್: ಎಫ್​​ಐಆರ್ ದಾಖಲು

    ಮಾಜಿ ಡಿಸಿಎಂ ಮನೀಶ್ ಸಿಸೊಡಿಯಾ ಮತ್ತಷ್ಟು ದಿನ ಜೈಲಿನಲ್ಲೇ: 2ನೇ ಬಾರಿಗೆ ಜಾಮೀನು ಅರ್ಜಿ ವಜಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts