More

    ಸದ್ಯದಲ್ಲೇ ಹೊಸ ಪೊಗರು; ಆಕ್ಷೇಪಾರ್ಹ ದೃಶ್ಯಗಳನ್ನು ಕತ್ತರಿಸಲು ಒಪ್ಪಿಗೆ

    ಬೆಂಗಳೂರು: ‘ಪೊಗರು’ ಚಿತ್ರದಲ್ಲಿ ಬ್ರಾಹ್ಮಣ ಸಮುದಾಯವನ್ನು ಅವಮಾನಿಸಿರುವ ಹಿನ್ನೆಲೆಯಲ್ಲಿ ಬ್ರಾಹ್ಮಣರ ಕ್ಷಮೆ ಕೇಳಬೇಕು ಎಂಬ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ, ಭಾನುವಾರವೇ ‘ವಿಜಯವಾಣಿ’ ಜತೆಗೆ ಮಾತನಾಡುವ ಸಂದರ್ಭದಲ್ಲಿ ನಿರ್ದೇಶಕ ನಂದಕಿಶೋರ್ ಕ್ಷಮೆ ಕೇಳಿದ್ದರು. ಮಂಗಳವಾರ, ಇನ್ನೊಮ್ಮೆ ಕ್ಷಮೆ ಕೇಳುವುದರ ಜತೆಗೆ, ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡುವುದಕ್ಕೆ ಒಪ್ಪಿಕೊಂಡಿದ್ದಾರೆ. ಬ್ರಾಹ್ಮಣರನ್ನು ಚಿತ್ರದಲ್ಲಿ ಅವಮಾನಿಸಿರುವ ಹಿನ್ನೆಲೆಯಲ್ಲಿ ಚಿತ್ರತಂಡದವರು ಕ್ಷಮೆ ಕೇಳಬೇಕು ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ಎರಡು ದಿನಗಳ ಹಿಂದೆಯೇ ಒತ್ತಾಯಿಸಿತ್ತು. ಮಂಗಳವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬಂದು ದೂರು ನೀಡುವುದರ ಜತೆಗೆ, ಚಿತ್ರತಂಡದವರು ಈ ಕೂಡಲೇ ಬಂದು ಕ್ಷಮಾಪಣೆ ಕೇಳಬೇಕು ಎಂದು ಸಮುದಾಯದವರು ಆಗ್ರಹಿಸಿದ್ದರು. ಕೊನೆಗೆ, ಅಭಿವೃದ್ಧಿ ಮಂಡಳಿಯ ಕಚೇರಿಗೇ ಹೋದ ನಂದಕಿಶೋರ್, ಬ್ರಾಹ್ಮಣ ಸಮುದಾಯವರ ಕ್ಷಮೆ ಕೋರಿದ್ದಾರೆ.

    ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ‘ನಾನು ಈಗಾಗಲೇ ಕ್ಷಮೆ ಕೇಳಿದ್ದೇನೆ. ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳುವುದಾಗಿ ಹೇಳಿದ್ದೇನೆ. ಆಕ್ಷೇಪಾರ್ಹ ದೃಶ್ಯಗಳನ್ನು ಕಿತ್ತು ಹಾಕುವುದರ ಜತೆಗೆ, ಸೂಕ್ತ ತಾಂತ್ರಿಕ ಬದಲಾವಣೆಗಳನ್ನು ಮಾಡಿಕೊಂಡು ಇನ್ನೊಮ್ಮೆ ಸೆನ್ಸಾರ್ ಮಾಡಿಸಿ, ಅಪ್​ಲೋಡ್ ಮಾಡಬೇಕು. ಇದಕ್ಕೆ ಸ್ವಲ್ಪ ಸಮಯಾವಕಾಶ ಬೇಕು. ಎಷ್ಟು ಬೇಗ ಸಾಧ್ಯವಾಗುತ್ತದೋ, ಅಷ್ಟು ಬೇಗ ಆಗಿರುವ ತಪ್ಪನ್ನು ಸರಿಪಡಿಸುವ ಪ್ರಯತ್ನ ಮಾಡುತ್ತೇನೆ. ನನಗೆ ಯಾವುದೇ ಸಮುದಾಯವನ್ನು ಅವಹೇಳನ ಮಾಡುವ ಉದ್ದೇಶ ಇಲ್ಲ. ಈ ಸಮುದಾಯದವರು ಮುಗ್ಧರು ಮತ್ತು ಅವರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಹೇಳುವ ಪ್ರಯತ್ನ ಮಾಡಿದ್ದೇನೆಯೇ ಹೊರತು, ಕೀಳಾಗಿ ತೋರಿಸುವ ಉದ್ದೇಶವಿಲ್ಲ’ ಎಂದು ಹೇಳಿದ್ದಾರೆ.

    13 ದೃಶ್ಯಗಳಿಗೆ ಕತ್ತರಿ: ‘ಪೊಗರು’ ಚಿತ್ರದಲ್ಲಿ 13 ದೃಶ್ಯಗಳಲ್ಲಿ ಬ್ರಾಹ್ಮಣರನ್ನು ಅವಹೇಳನಕಾರಿಯಾಗಿ ತೋರಿಸಲಾಗಿದ್ದು, ಕೆಲವು ದೃಶ್ಯಗಳನ್ನು ಕತ್ತರಿಸುವುದರ ಜತೆಗೆ, ಕೆಲವು ಸಂಭಾಷಣೆಗಳನ್ನು ಮ್ಯೂಟ್ ಮಾಡಬೇಕು ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಸದಸ್ಯರು ವಾಣಿಜ್ಯ ಮಂಡಳಿಗೆ ಆಗ್ರಹಿಸಿದ್ದರು. ಈ ಸಂಬಂಧ, ಮಂಡಳಿಯು ಒಂದು ಸಮಿತಿಯನ್ನು ರಚಿಸಿದ್ದು, ಚಿತ್ರರಂಗದ ಪರವಾಗಿ ನಿರ್ದೇಶಕ ರವಿ ಶ್ರೀವತ್ಸ ಮತ್ತು ನಟಿ-ನಿರ್ದೇಶಕಿ ರೂಪಾ ಅಯ್ಯರ್ ಸಮಿತಿಯಲ್ಲಿದ್ದರು.

    ಶ್ರೀಗಳ ಖಂಡನೆ: ‘ಪೊಗರು’ ಚಿತ್ರದಲ್ಲಿ ಬ್ರಾಹ್ಮಣರನ್ನು ಅವಹೇಳನಕಾರಿಯಾಗಿ ಚಿತ್ರೀಕರಿಸಿರುವುದಕ್ಕೆ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಮತ್ತು ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಖಂಡಿಸಿದ್ದಾರೆ. ಯಾವುದೇ ಸಮುದಾಯದ ಬಗ್ಗೆ ಚಲನಚಿತ್ರ ಮತ್ತು ಕಿರುತೆರೆಯಲ್ಲಿ ಅವಹೇಳಕಾರಿಯಾಗಿ ನಿಂದನೆ ಮಾಡುವುದು ಸರಿಯಲ್ಲ. ಬ್ರಾಹ್ಮಣರನ್ನಷ್ಟೇ ಅಲ್ಲ, ಯಾವುದೇ ಜಾತಿ, ಸಮುದಾಯಗಳನ್ನು ನಿಂದಿಸುವ ಅಥವಾ ಅವಮಾನಿಸುವ ಪ್ರವೃತ್ತಿ ಸಲ್ಲದು. ಈ ಮೂಲಕ ಮನರಂಜನೆ ನೀಡುತ್ತೇವೆ ಎಂಬ ಭ್ರಮೆಯಿಂದ ಚಿತ್ರರಂಗ ಹೊರಬರಬೇಕು ಎಂದು ಹೇಳಿದ್ದಾರೆ.

    ವಿವಾದದಲ್ಲಿ ನಟ ಧೃವ ಸರ್ಜಾ ಅಭಿನಯದ ಪೊಗರು ಸಿನಿಮಾ: ನಿರ್ದೇಶಕ-ನಿರ್ಮಾಪಕರಿಂದ ಕ್ಷಮೆಯಾಚನೆ

    ಇದೇ ಕೊನೆ.. ಮುಂದೆ ಯಾರೂ ಯಾರನ್ನೇ ಅವಹೇಳನ ಮಾಡುವ ಕೆಲಸಕ್ಕೆ ಮುಂದಾಗಬಾರದು: ಪೇಜಾವರಶ್ರೀ

    ಪೊಗರು ಚಿತ್ರದ ವಿರುದ್ಧ ಕಿಡಿಕಾರಿದ ಸಂಸದೆ ಶೋಭಾ ಕರಂದ್ಲಾಜೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts