More

    ಪಾಂಡ್ಯ ಸಹೋದರರು, ಕಿಶನ್ ನಡೆಗೆ ಬಿಸಿಸಿಐ ಅತೃಪ್ತಿ: ದೇಶೀಯ ಟೂರ್ನಿಗಿಂತ ಐಪಿಎಲ್‌ಗೆ ಹೆಚ್ಚಿನ ಆದ್ಯತೆ

    ನವದೆಹಲಿ: ಪ್ರತಿಷ್ಠಿತ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ರಾಜ್ಯದ ತಂಡದ ಪರ ಕಣಕ್ಕಿಳಿಯದೆ ಮುಂಬರುವ ಐಪಿಎಲ್ ಆವೃತ್ತಿ ಗಮನದಲ್ಲಿರಿಸಿಕೊಂಡು ಅಭ್ಯಾಸ ನಡೆಸುತ್ತಿರುವ ಟೀಮ್ ಇಂಡಿಯಾದ ಆಟಗಾರರ ನಡೆಗೆ ಬಿಸಿಸಿಐ ಅತೃಪ್ತಿ ಹೊಂದಿದ್ದು, ಆಟಗಾರರಿಗೆ ಎಚ್ಚರಿಕೆತ ಸಂದೇಶ ರವಾನಿಸಿದೆ ಎನ್ನಲಾಗಿದೆ.

    ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಆರಂಭಕ್ಕೆ ಮುನ್ನ ದಿಢೀರನೆ, ಮಾನಸಿಕ ಆರೋಗ್ಯದ ನೆಪನೀಡಿ ತವರಿಗೆ ಮರಳಿದ್ದ ಟೀಮ್ ಇಂಡಿಯಾದ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್, ಆಲ್ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ ಸಹೋದರರು ಸದ್ಯ ಭಾರತದ ತಂಡದಿಂದ ಹೊರಗುಳಿದಿದ್ದು, ದೇಶೀಯ ಕ್ರಿಕೆಟ್‌ಗಿಂತ ಐಪಿಎಲ್‌ಗೆ ಆದ್ಯತೆ ನೀಡುತ್ತಿರುವ ಬಗ್ಗೆ ವರದಿಗಳು ಗಮನಿಸಿರುವ ಬಿಸಿಸಿಐ ಆಟಗಾರರಿಗೆ ನೋಟಿಸ್ ನೀಡಿದ್ದು, ರಣಜಿ ಟ್ರೋಫಿ ಏಳನೇ ಸುತ್ತಿನಲ್ಲಿ ರಾಜ್ಯ ತಂಡಗಳ ಪರ ಆಡುವಂತೆ ಸೂಚಿಸಿದೆ. ಟೀಮ್ ಇಂಡಿಯಾ ಕೋಚ್ ದ್ರಾವಿಡ್ ಸೂಚನೆಯ ನಡುವೆಯೂ ಜಾರ್ಖಂಡ್ ರಾಜ್ಯದ ರಣಜಿ ಪಂದ್ಯಗಳಿಂದ ಹೊರಗುಳಿಯುತ್ತಲೇ ಬಂದಿರುವ ಇಶಾನ್ ಕಿಶನ್ ಸದ್ಯ ಬರೋಡದ ಕಿರಣ್ ಮೋರೆ ಅಕಾಡೆಮಿಯಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಸಹೋದರರು ಜತೆಗೆ ಅಭ್ಯಾಸ ನಡೆಸುತ್ತಿದ್ದಾರೆ ಎನ್ನಲಾಗಿದೆ. ಪಾಂಡ್ಯ ಸಹೋದರರು ದೇಶೀಯ ಟೂರ್ನಿಯಲ್ಲಿ ಬರೋಡ ತಂಡವನ್ನು ಪ್ರತಿನಿಧಿಸಲಿದ್ದಾರೆ.

    ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ನೇತೃತ್ವದ ಮಂಡಳಿಯು, ಕ್ರಿಕೆಟಿಗರು ರಾಷ್ಟ್ರೀಯ ತಂಡದ ಕರ್ತವ್ಯದಲ್ಲಿ ಇಲ್ಲದಿದ್ದರೆ ರಣಜಿ ಟ್ರೋಫಿಯಲ್ಲಿ ತಮ್ಮ ರಾಜ್ಯ ತಂಡಕ್ಕಾಗಿ ಆಡಲು ನಿರ್ದೇಶನ ನೀಡಿದ್ದು, ಮುಂದಿನ ದಿನಗಳಲ್ಲಿ, ಎಲ್ಲ ಆಟಗಾರರು ರಾಷ್ಟ್ರೀಯ ಕರ್ತವ್ಯದಲ್ಲಿ ಇಲ್ಲದಿರುವವರೆಗೆ ರಣಜಿ ಟ್ರೋಫಿಯಲ್ಲಿ ತಮ್ಮ ರಾಜ್ಯ ತಂಡಕ್ಕೆ ಆಡಲು ಬಿಸಿಸಿಐ ಮೂಲಕ ತಿಳಿಸಲಾಗುವುದು. ಯಾವುದೇ ಆಟಗಾರರು ಗಾಯಗೊಂಡಿದ್ದರೆ ಅಥವಾ ಎನ್‌ಸಿಎಯ ಪುನಶ್ಚೇತನ ಶಿಬಿರದಲ್ಲಿದದ್ದರೆ ಮಾತ್ರ ರಣಜಿ ಪಂದ್ಯಗಳಿಂದ ವಿನಾಯಿತಿ ನೀಡಲಾಗುತ್ತದೆ ಎಂದು ವರದಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts