More

    ಎಮರ್ಜಿಂಗ್​ ಟೂರ್ನಿಯಲ್ಲಿ ಸೀನಿಯರ್ಸ್​ ಆಡಿಸಿದ ಪಾಕ್​! ಮೋಸ ಹೋಯಿತೇ ಭಾರತ?

    ಕೊಲಂಬೊ: ಶ್ರೀಲಂಕಾದಲ್ಲಿ ನಡೆದ ಎಮರ್ಜಿಂಗ್​ ಏಷ್ಯಾಕಪ್​ ಏಕದಿನ ಕ್ರಿಕೆಟ್​ ಟೂರ್ನಿಯಲ್ಲಿ ಯಶ್​ ಧುಲ್​ ಸಾರಥ್ಯದ ಭಾರತ ಎ ತಂಡ ಫೈನಲ್​ವರೆಗೂ ಅಜೇಯವಾಗಿ ಮುನ್ನಡೆದಿತ್ತು. ಆದರೆ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಪಾಕಿಸ್ತಾನ ಎ ತಂಡದ ವಿರುದ್ಧ ಪರಾಭವಗೊಂಡು ನಿರಾಸೆ ಅನುಭವಿಸಿತು. ಎಮರ್ಜಿಂಗ್​ ಏಷ್ಯಾಕಪ್​ನಲ್ಲಿ ಸಾಮಾನ್ಯವಾಗಿ 23 ವಯೋಮಿತಿ ಆಟಗಾರರ ತಂಡವನ್ನು ಆಡಿಸಲಾಗುತ್ತದೆ. ಹೆಸರೇ ಹೇಳುವಂತೆ ಇದು ಉದಯೋನ್ಮುಖರ ಟೂರ್ನಿ. ಇದರಂತೆ ಭಾರತ ಯುವ ತಂಡವನ್ನು ಕಳುಹಿಸಿತ್ತು. ಆದರೆ ಪಾಕಿಸ್ತಾನ ಕೆಲ ಹಿರಿಯ ಆಟಗಾರರನ್ನು ಒಳಗೊಂಡ ತಂಡದೊಂದಿಗೆ ಆಡಿತು. ಇದರಿಂದಾಗಿ ಯುವ ಆಟಗಾರರೊಂದಿಗೆ ಆಡಿದ ಭಾರತ ತಂಡ ಪ್ರಶಸ್ತಿ ವಂಚಿತವಾಗಬೇಕಾಯಿತು.

    ಟೂರ್ನಿಯ ಲೀಗ್​ನಲ್ಲಿ 3 ಪಂದ್ಯಗಳನ್ನು ಸುಲಭವಾಗಿ ಗೆದ್ದಿದ್ದ ಭಾರತ, ಸೆಮೀಸ್​ನಲ್ಲೂ ಬಾಂಗ್ಲಾದೇಶ ಎ ತಂಡದ ಸವಾಲು ಹಿಮ್ಮೆಟ್ಟಿಸಿತು. ಇದಲ್ಲದೆ ಲೀಗ್​ ಹಂತದಲ್ಲಿ ಪಾಕ್​ ಎ ವಿರುದ್ಧ ಸುಲಭ ಜಯ ಸಾಧಿಸಿತ್ತು. ಆದರೆ ಫೈನಲ್​ನಲ್ಲಿ ಭಾರತದ ಎಲ್ಲ ಶ್ರಮ ವ್ಯರ್ಥಗೊಂಡಿತು. ಇತ್ತೀಚೆಗೆ ಮಹಿಳೆಯರ ಎಮರ್ಜಿಂಗ್​ ಏಷ್ಯಾಕಪ್​ನಲ್ಲಿ ಪ್ರಶಸ್ತಿ ಗೆದ್ದಿದ್ದ ಭಾರತ, ಪುರುಷರ ವಿಭಾಗದಲ್ಲೂ ಅದನ್ನು ಪುನರಾವರ್ತಿಸುವಲ್ಲಿ ಎಡವಿತು.

    ಭಾರತ ಟೂರ್ನಿಯಲ್ಲಿ ಎಲ್ಲ 23 ವರ್ಷಕ್ಕಿಂತ ಕೆಳಗಿನ ಆಟಗಾರರನ್ನು ಆಡಿಸಿತು. ಹೀಗಾಗಿ ಭಾರತದ ಕೆಲ ಪ್ರಮುಖ ಆಟಗಾರರು ದೇಶೀಯ ಟೂರ್ನಿಯಲ್ಲೇ ಉಳಿದರು. ಆದರೆ, ಈ ಬಾರಿ ಪಾಕ್​ ಜತೆಗೆ ಬಾಂಗ್ಲಾ, ಶ್ರೀಲಂಕಾ, ಅಫ್ಘಾನಿಸ್ತಾನ ತಂಡಗಳು ಕೆಲ ಹಿರಿಯ ಆಟಗಾರರನ್ನು ಆಡಿಸಿದವು. ಫೈನಲ್​ ಪಂದ್ಯದಲ್ಲಿ ಪಾಕಿಸ್ತಾನ ಪರ ಶತಕ ಸಿಡಿಸಿದ ತಯ್ಯಬ್​ ತಾಹಿರ್​ ವಯಸ್ಸು 30 ವರ್ಷ. ಇದಲ್ಲದೆ, ರಾಷ್ಟ್ರೀಯ ತಂಡದ ಪರ ಆಡಿದ 7 ಆಟಗಾರರು ಪಾಕ್​ ತಂಡದಲ್ಲಿದ್ದರೆ, ಭಾರತ ಎ ತಂಡದಲ್ಲಿ ಟೀಮ್​ ಇಂಡಿಯಾ ಪರ ಆಡಿದ ಒಬ್ಬ ಆಟಗಾರನೂ ಇರಲಿಲ್ಲ. ಪಾಕ್​ ತಂಡದಲ್ಲಿದ್ದ ಮೊಹಮದ್​ ವಾಸಿಂ ಜೂನಿಯರ್​ ಈಗಾಗಲೆ ಎಲ್ಲ 3 ಪ್ರಕಾರದಲ್ಲಿ ರಾಷ್ಟ್ರೀಯ ತಂಡದ ಪರ ಆಡಿದ್ದರು.

    ಎಮರ್ಜಿಂಗ್​ ಏಷ್ಯಾಕಪ್​ನಲ್ಲಿ ಆಡಿದ ಪಾಕ್​ ತಂಡದ ಆಟಗಾರರ ಸರಾಸರಿ ವಯಸ್ಸು 23.2 ವರ್ಷ ಆಗಿತ್ತು. ಅಂದರೆ ಪಾಕ್​ ತಂಡ 23 ವಯೋಮಿತಿಯ ನಿಯಮವನ್ನು ಬಹುತೇಕ ಮೀರಿತ್ತು. ಇದಲ್ಲದೆ ಫೈನಲ್​ ಪಂದ್ಯದಲ್ಲಿ ಅಂಪೈರ್​ಗಳ ಕೆಲ ಅನುಮಾನಾಸ್ಪದ ತೀರ್ಪುಗಳೂ ಭಾರತಕ್ಕೆ ಹಿನ್ನಡೆಯಾದವು. ಇನ್ನು ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡ ಭಾರತದ ನಿರ್ಧಾರವೂ ಲೆಕ್ಕಾಚಾರವನ್ನು ತಪ್ಪಿಸಿತು. ಈ ಮುನ್ನ 2013ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ಎಮರ್ಜಿಂಗ್​ ಏಷ್ಯಾಕಪ್​ನಲ್ಲಿ ಕೊನೆಯದಾಗಿ ಪ್ರಶಸ್ತಿ ಗೆದ್ದಿದ್ದ ಭಾರತ ತಂಡದಲ್ಲಿ ಆಗ ಸೂರ್ಯಕುಮಾರ್​ ಯಾದವ್​, ಕೆಎಲ್​ ರಾಹುಲ್​, ಅಕ್ಷರ್​ ಪಟೇಲ್​, ಜಸ್​ಪ್ರೀತ್​ ಬುಮ್ರಾ ಅವರಂಥ ಆಟಗಾರರಿದ್ದರು. ಅವರು ಬಳಿಕ ರಾಷ್ಟ್ರೀಯ ತಂಡ ಸೇರಲು ಈ ಟೂರ್ನಿ ನೆರವಾಗಿತ್ತು. ಹೀಗಾಗಿ ಭಾರತ ಈ ಬಾರಿ ಪ್ರಶಸ್ತಿ ವಂಚಿತವಾದರೂ, ಟೂರ್ನಿಯಲ್ಲಿ ಆಡಿದ ಯುವ ಆಟಗಾರರಿಗೆ ಅಪಾರ ಅನುಭವ ಲಭಿಸಿರುವುದು ಟೀಮ್​ ಇಂಡಿಯಾಗೆ ಭವಿಷ್ಯದಲ್ಲಿ ನೆರವಾಗುವುದು ಖಚಿತವೆನ್ನಬಹುದು.

    ಆಸೀಸ್​ ಕ್ರಿಕೆಟಿಗ ಮ್ಯಾಕ್ಸ್​ವೆಲ್​ ಪತ್ನಿಗೆ ಹಿಂದು ಸಂಪ್ರದಾಯದಂತೆ ಸೀಮಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts