More

    ಇಮ್ರಾನ್ ಎಫೆಕ್ಟ್ | ಪಾಕ್ ಪ್ರಧಾನಿ ಮನೆ ಮೇಲೆ ಪೆಟ್ರೋಲ್​ ಬಾಂಬ್ ದಾಳಿ!

    ಲಾಹೋರ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್​ ಬೆಂಬಲಿಗರು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಲಾಹೋರ್ ನಿವಾಸದ ಮೇಲೆ ಬುಧವಾರ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸರ ಪ್ರಕಾರ, ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ 500ಕ್ಕೂ ಹೆಚ್ಚು ಸದಸ್ಯರು ಬುಧವಾರ ಮುಂಜಾನೆ ಪ್ರಧಾನಿಯವರ ಮಾಡೆಲ್ ಟೌನ್ ಲಾಹೋರ್ ನಿವಾಸವನ್ನು ತಲುಪಿದರು ಮತ್ತು ಅಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿದರು.

    “ಅವರು ಪ್ರಧಾನಿ ಮನೆಯೊಳಗೆ ಪೆಟ್ರೋಲ್ ಬಾಂಬ್‌ಗಳನ್ನು ಎಸೆದರು” ಎಂದು ಪಂಜಾಬ್ ಪೊಲೀಸ್‌ನ (ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ) ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದರು.

    ದುಷ್ಕರ್ಮಿಗಳು ದಾಳಿ ನಡೆಸಿದಾಗ ಕಾವಲುಗಾರರು ಮಾತ್ರ ಪ್ರಧಾನಿ ಮನೆಯಲ್ಲಿದ್ದರು. ಅವರು ಅಲ್ಲಿದ್ದ ಪೊಲೀಸ್ ಠಾಣೆಗೂ ಬೆಂಕಿ ಹಚ್ಚಿದ್ದಾರೆ. “ಪೊಲೀಸರ ಭಾರೀ ತುಕಡಿ ಅಲ್ಲಿಗೆ ತಲುಪುತ್ತಿದ್ದಂತೆ, ಇಮ್ರಾನ್ ಖಾನ್ ಪರ ಪ್ರತಿಭಟನಾಕಾರರು ಅಲ್ಲಿಂದ ನಿರ್ಗಮಿಸಿದರು” ಎಂದು ಪೊಲೀಸರು ಹೇಳಿದರು.

    ಪ್ರಧಾನಿ ನಿವಾಸಕ್ಕೆ ಬರುವ ಮುನ್ನವೂ ದಾಂಧಲೆ!

    ಪ್ರಧಾನಿ ನಿವಾಸವನ್ನು ತಲುಪುವ ಮೊದಲು, ಮಾಡೆಲ್ ಟೌನ್‌ನಲ್ಲಿರುವ ಆಡಳಿತಾರೂಢ ಪಿಎಂಎಲ್-ಎನ್ ಸೆಕ್ರೆಟರಿಯೇಟ್ ಮೇಲೆ ದಾಳಿ ಮಾಡಿ, ಅಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಅಷ್ಟೇ ಅಲ್ಲದೇ ಅಲ್ಲಿದ್ದ ತಡೆಗೋಡೆಗಳಿಗೂ ಬೆಂಕಿ ಹಚ್ಚಿದರು ಎನ್ನಲಾಗಿದೆ.

    ಪಂಜಾಬ್‌ನಲ್ಲಿ ಮಂಗಳವಾರ ಮತ್ತು ಬುಧವಾರದಂದು ಕಳೆದ ಎರಡು ದಿನಗಳಲ್ಲಿ ಪ್ರತಿಭಟನಾಕಾರರು 14 ಸರ್ಕಾರಿ ಸ್ಥಾಪನೆಗಳು/ಕಟ್ಟಡಗಳು ಮತ್ತು 21 ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮಂಗಳವಾರ, ಪ್ರತಿಭಟನಾಕಾರರು ಲಾಹೋರ್‌ನಲ್ಲಿರುವ ಕಾರ್ಪ್ಸ್ ಕಮಾಂಡರ್ ಹೌಸ್ ಅನ್ನು ದೋಚಿದ ನಂತರ ಬೆಂಕಿ ಹಚ್ಚಿದ್ದರು.

    ಭೂ ವರ್ಗಾವಣೆ ಭ್ರಷ್ಟಾಚಾರ ಪ್ರಕರಣದಲ್ಲಿ ಇಮ್ರಾನ್ ಖಾನ್ ಅವರನ್ನು ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ (ಎನ್‌ಎಬಿ) ಬಂಧಿಸಿದ ಹಿನ್ನೆಲೆಯಲ್ಲಿ ಲಾಹೋರ್ ಮತ್ತು ಪಂಜಾಬ್‌ನ ಇತರ ಹಲವಾರು ನಗರಗಳಲ್ಲಿ ಬುಧವಾರ ಪರಿಸ್ಥಿತಿ ಉದ್ವಿಗ್ನವಾಗಿತ್ತು.

    ಇಮ್ರಾನ್ ಖಾನ್ ಬೆಂಬಲಿಗರು ಮತ್ತು ಭದ್ರತಾ ಪಡೆಗಳ ನಡುವಿನ ಹಿಂಸಾತ್ಮಕ ಘರ್ಷಣೆಗಳು ನಡೆಯುತ್ತಿದ್ದು ಇದರಿಂದಾಗಿ ಪಾಕಿಸ್ತಾನದಾದ್ಯಂತ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದು ಸುಮಾರು 300 ಜನರು ಗಾಯಗೊಂಡಿದ್ದಾರೆ. ಪಾಕ್ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಸೇನೆಯನ್ನು ನಿಯೋಜಿಸಲಾಗಿದ್ದು ಹಾಗೆಯೇ ಪಂಜಾಬ್, ಖೈಬರ್ ಪಖ್ತುನ್ಖ್ವಾ ಮತ್ತು ಬಲೂಚಿಸ್ತಾನ್ ಪ್ರಾಂತ್ಯಗಳಲ್ಲಿ ಬುಧವಾರ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಆದೇಶ ಹೊರಡಿಸಲಾಗಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts