More

    ಭೂಕಂಪಕ್ಕೆ ನಲುಗಿದ ಅಫ್ಘಾನಿಸ್ತಾನ: 2000ಕ್ಕೂ ಹೆಚ್ಚು ಸಾವು, ಮನೆಯೊಳಗೆ ಹೋಗಲು ಭಯಪಡುತ್ತಿರುವ ಜನ!

    ಕಾಬೂಲ್​: ಅಫ್ಘಾನಿಸ್ತಾನದ ಹೆರಾತ್ ನಗರದಲ್ಲಿ ಶನಿವಾರ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ ಏರಿಕೆಯಾಗಿದ್ದು, 2000ಕ್ಕೂ ಅಧಿಕ ಮಂದಿ ಪ್ರಾಕೃತಿಕ ವಿಕೋಪಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೆ, ತಾಲಿಬಾನ್​ ಸರ್ಕಾರ ವಿಶ್ವದ ನೆರವು ಸಹ ಕೋರಿದೆ.

    ತಾಲಿಬಾನ್​ ಸರ್ಕಾರದ ಮಾಹಿತಿ ಮತ್ತು ಸಂಸ್ಕೃತಿ ಸಚಿವಾಲಯದ ವಕ್ತಾರ ಅಬ್ದುಲ್​ ವಾಹಿದ್​ ರಯಾನ್ ಹೇಳುವಂತೆ ಎರಡು ದಶಕಗಳಲ್ಲೇ ಇದು ಅತ್ಯಂತ ಅಪಾಯಕಾರಿ ಭೂಕಂಪನವಾಗಿದೆ. ಪೂರ್ವ ಅಫ್ಘಾನಿಸ್ತಾನದ ಹೆರಾತ್​ನಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದ್ದು, ಸುಮಾರು 6 ಗ್ರಾಮಗಳು ನಾಶವಾಗಿವೆ. ಅವಶೇಷಗಳ ಅಡಿಯಲ್ಲಿ ನೂರಾರು ನಾಗರಿಕರು ಸಿಲುಕಿದ್ದು, ತುರ್ತು ನೆರವಿಗೆ ವಾಹಿದ್​ ರಯಾನ್​ ಕರೆ ನೀಡಿದ್ದಾರೆ.

    ಸುಮಾರು 465 ಮನೆಗಳು ಸಂಪೂರ್ಣ ನಾಶವಾಗಿದ್ದು, 135 ಮನೆಗಳಿಗೆ ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದ್ದು, ಅವಶೇಷಗಳ ಅಡಿಯಲ್ಲಿ ಸಾಕಷ್ಟು ಜನರು ಸಿಲುಕಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

    ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆಯ ಭೂಕಂಪ ಹೆರಾತ್ ನಗರದಿಂದ 40 ಕಿಲೋ ಮೀಟರ್ ವಾಯವ್ಯದಲ್ಲಿ ಕೇಂದ್ರೀಕೃತವಾಗಿತ್ತು ಎಂದು ಅಮೆರಿಕದ ಭೂಸರ್ವೆಕ್ಷಣಾ ಇಲಾಖೆ ತಿಳಿಸಿದೆ. ಇದಾದ ಬಳಿಕ 5.5, 4.7, 6.3, 5.9 ಮತ್ತು 4.9 ತೀವ್ರತೆಯ ಐದು ಪಶ್ಚಾತ್ ಕಂಪನಗಳು ಸಂಭವಿಸಿವೆ. ಬೆಳಿಗ್ಗೆ 11 ಗಂಟೆ ಹೊತ್ತಿಗೆ ಭೂಕಂಪದ ಅನುಭವವಾಗುತ್ತಲೇ ಮಕ್ಕಳು, ಮಹಿಳೆಯರು ಆದಿಯಾಗಿ ಜನರು ಮನೆಗಳು ಹಾಗೂ ಅಂಗಡಿಗಳಿಂದ ಹೊರಗೆ ಓಡಿ ಬಂದರು ಎಂದು ತಾಲಿಬಾನ್ ಸರ್ಕಾರದ ವಕ್ತಾರ ತಿಳಿಸಿದ್ದಾರೆ. ಭೂಕಂಪನದಿಂದ ಗುಡ್ಡಗಾಡು ಪ್ರದೇಶಗಳಲ್ಲಿ ಕುಸಿತವಾಗಿದ್ದು, ಹೆಚ್ಚು ಪ್ರಾಣ ಹಾನಿ ಸಂಭವಿಸಿರುವ ಸಾಧ್ಯತೆ ಇದೆ.

    ಇದನ್ನೂ ಓದಿ: Success Story; ಟಾಯ್ಲೆಟ್ ಕ್ಲೀನ್ ಮಾಡಿದ್ದ ವ್ಯಕ್ತಿ ಈಗ ಚಿತ್ರವೊಂದಕ್ಕೆ 100 ಕೋಟಿ ರೂ. ಸಂಭಾವನೆ ಪಡೆಯುವ ಸೂಪರ್‌ಸ್ಟಾರ್‌

    ಮತ್ತಷ್ಟು ಭೂಕಂಪಗಳು ಉಂಟಾಗಬಹುದು ಎಂಬ ಆತಂಕದಿಂದ ಎಲ್ಲ ಜನರು ಮನೆಗಳಿಂದ ಆಚೆ ಬಂದಿದ್ದಾರೆ. ಮನೆಗಳು, ಕಚೇರಿಗಳು ಮತ್ತು ಅಂಗಡಿಗಳೆಲ್ಲ ಖಾಲಿ ಖಾಲಿಯಾಗಿವೆ. ನನ್ನ ಕುಟುಂಬ ಮತ್ತು ನಾನು ನಮ್ಮ ಮನೆಯ ಒಳಗಡೆ ಇದ್ದೆವು. ನಾವು ಭೂಕಂಪನವನ್ನು ಅನುಭವಿಸಿದೆವು. ಈ ವೇಳೆ ಜೋರಾಗಿ ಕೂಗಿಕೊಂಡು ಮನೆಯಿಂದ ಆಚೆ ಬಂದೆವು. ಮತ್ತೆ ಮನೆ ಒಳಗೆ ಹೋಗಲು ಭಯವಾಗುತ್ತಿದೆ ಎಂದು ಹೆರಾತ್ ನಗರದ ನಿವಾಸಿ ಅಬ್ದುಲ್ ಶಾಕೋರ್ ಸಮಾದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಅಫ್ಘಾನಿಸ್ತಾನದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯು ಆಸ್ಪತ್ರೆಗಳಿಗೆ ಗಾಯಾಳುಗಳನ್ನು ಸ್ಥಳಾಂತರಿಸಲು 12 ಆಂಬ್ಯುಲೆನ್ಸ್ ಕಾರುಗಳನ್ನು ಝೆಂಡಾ ಜಾನ್‌ಗೆ ಕಳುಹಿಸಿದೆ ಎಂದು ಹೇಳಿದೆ. ಭೂಕಂಪನದ ಬೆನ್ನಲ್ಲೇ ಟೆಲಿಫೋನ್​ ಸಂಪರ್ಕ ಕಡಿತಗೊಂಡಿದ್ದು, ಸಂಕಷ್ಟದಲ್ಲಿ ಇರುವವರನ್ನು ಸಂಪರ್ಕಿಸಲು ಕಠಿಣವಾಗುತ್ತಿದೆ. ಹೆರಾತ್​ ನಗರದಲ್ಲಿ ನೂರಾರು ಜನರು ತಮ್ಮ ಮನೆಗಳು ಮತ್ತು ಕಚೇರಿಗಳನ್ನು ತೊರೆದು ರಸ್ತೆ ಮೇಲೆ ನಿಂತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. (ಏಜೆನ್ಸೀಸ್​)

    ಅತ್ತಿಬೆಲೆ ಪಟಾಕಿ ಗೋದಾಮು ದುರಂತ; ಮೃತರ ಸಂಖ್ಯೆ 15ಕ್ಕೆ ಏರಿಕೆ

    ಮನ್‌ಮುಲ್‌ ತುಪ್ಪ ಹಾಗೂ ಖೋವಾ ತಯಾರಿಕಾ ಘಟಕಕ್ಕೆ ಬೆಂಕಿ!

    ನಿತಿನ್ ಗಡ್ಕರಿಗೆ ಬೆದರಿಕೆ ಕರೆ; ಜೈಲಿನಲ್ಲಿ ತಂತಿ ನುಂಗಿದ ಆರೋಪಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts