More

    ಜಾನಪದ ಸಂಸ್ಕೃತಿ ಉಳಿಸಿಕೊಳ್ಳಿ

    ಮೂಡಿಗೆರೆ: ಕನ್ನಡ ಭಾಷೆಗೆ ಪೂರಕವಾಗಿ ಜಾನಪದ ಸಂಸ್ಕೃತಿ ನಶಿಸದಂತೆ ಕಾಪಾಡಿಕೊಳ್ಳಬೇಕು ಎಂದು ತೋಟಗಾರಿಕೆ ಮಹಾವಿದ್ಯಾಲಯದ ಪ್ರಭಾರ ಡೀನ್ ಶ್ರೀನಿವಾಸ ಹೇಳಿದರು.

    ಮಂಗಳವಾರ ತೋಟಗಾರಿಕಾ ಕಾಲೇಜಿನಲ್ಲಿ ಕನ್ನಡ ಜಾನಪದ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಹಿರಿಯರ ಪ್ರತಿ ಹೆಜ್ಜೆಯೂ ಜಾನಪದ ಸಂಸ್ಕೃತಿಗೆ ಹತ್ತಿರವಾಗಿತ್ತು. ರೈತರು ಕೃಷಿ ಮಾಡುವಾಗ ಜಾನಪದ ಹಾಡುಗಳನ್ನು ಕಟ್ಟಿದರು. ಗದ್ದೆ ನಾಟಿ, ಕಳೆ ಕೀಳುವಾಗ ಕಾರ್ಮಿಕ ಮಹಿಳೆಯರು ಸೋಬಾನೆ ಪದ ಹಾಡಿ ಜಾನಪದ ಸಂಸ್ಕೃತಿಗೆ ಇನ್ನಷ್ಟು ಮೆರುಗು ನೀಡುತ್ತಿದ್ದರು. ಕೃಷಿಕರು ಬಳಸುತ್ತಿದ್ದ ವಸ್ತುಗಳು, ಉಡುಗೆ ತೊಡುಗೆಗಳೆಲ್ಲವೂ ಜಾನಪದ ಸಂಸ್ಕೃತಿಯನ್ನು ಬಿಂಬಿಸುತ್ತಿದ್ದವು. ಜಗತ್ತು ಆಧುನಿಕತೆಗೆ ತಿರುಗಿದ್ದರಿಂದ ಜಾನಪದ ಸಂಸ್ಕೃತಿ ಕಾಪಾಡಿಕೊಳ್ಳುವವರು ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
    ತಾಲೂಕು ಕನ್ನಡ ಜಾನಪದ ಪರಿಷತ್ ಅಧ್ಯಕ್ಷೆ ಎಚ್.ಟಿ.ಭಾನುಮತಿ ಮಾತನಾಡಿ, ಹಿರಿಯರು ಮರೆಯಾದಂತೆ ಜಾನಪದ ಪ್ರಕಾರಗಳು ಮರೆಯಾಗುತ್ತಿವೆ. ಹಿರಿಯರ ಮಾರ್ಗದರ್ಶನ ಕಡೆಗಣಿಸದೆ ಜಾನಪದ ಸಂಸ್ಕೃತಿಗೆ ಪುನಶ್ಚೇತನ ನೀಡಲು ಯುವ ಜನಾಂಗ ಉತ್ಸಾಹ ತೋರಬೇಕು. ಮಲೆನಾಡು ಭಾಗದಲ್ಲಿ ಜಾನಪದ ಶೈಲಿಗೆ ಕೊರತೆ ಇಲ್ಲವೆಂಬಂತೆ ಭತ್ತದ ಗದ್ದೆ, ಕಾಫಿ, ಅಡಕೆ, ಬಾಳೆ, ಕಾಳುಮೆಣಸಿನ ತೋಟ, ಬೆಟ್ಟದಿಂದ ಧುಮುಕುವ ನೀರು, ರಮಣೀಯ ಸ್ಥಳಗಳು, ನದಿ, ಕೆರೆ ಇತ್ಯಾದಿ ಮಾತ್ರವಲ್ಲದೆ ಮನೆಯಲ್ಲಿ ಶೇಖರಿಸಿಟ್ಟಿರುವ ಭತ್ತ ಅಳತೆಯ ಕೊಳಗ, ಚಾಮರ, ದೀವಟಿಗೆ, ಒನಕೆ, ಬೀಸುವಕಲ್ಲು, ಕುಚ್ಚ, ಪತ್ರೆ, ಕಳಸಪಾತ್ರೆ, ದೀಪದ ಕಂಬ, ಸೇರು, ಪಾವು ಇತ್ಯಾದಿಗಳೆಲ್ಲವೂ ಜಾನಪದ ವಸ್ತುಗಳು. ಆಧುನಿಕತೆ ಭರಾಟೆಯಲ್ಲಿ ಜಾನಪದ ಕಡೆಗಣಿಸದೆ ಚಿಗುರುವಂತೆ ಮಾಡಬೇಕು ಎಂದು ತಿಳಿಸಿದರು.
    ತೋಟಗಾರಿಕಾ ಕಾಲೇಜಿನ ವಿದ್ಯಾರ್ಥಿಗಳಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಂಚಿಹೊನ್ನಮ್ಮ ಮಹಿಳಾ ಸಾಂತ್ವನ ಕೇಂದ್ರದ ಅಧ್ಯಕ್ಷೆ ಟಿ.ಕಮಲಾಕ್ಷಿ, ಕೃಷಿ ವಿಸ್ತರಣಾ ವಿಭಾಗದ ಸಹ ಪ್ರಾಧ್ಯಾಪಕ ಡಾ. ಭರತ್‌ಕುಮಾರ್, ನಿವೃತ್ತ ಪ್ರಾಧ್ಯಾಪಕ ಎಂ.ಕೆ.ದೇವರಾಜಮೂರ್ತಿ, ಕಸಾಪ ಹೋಬಳಿ ಘಟಕದ ಅಧ್ಯಕ್ಷ ಎಂ.ಎಸ್.ನಾಗರಾಜ್, ಡಾ. ಕೆ.ವಿದ್ಯಾ, ನವ್ಯಶ್ರೀ, ವಶಿಷ್ಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts