More

    ಆಹಾರ, ಜೀವನ ಕ್ರಮ ಬದಲಾಗಲಿ

    ಬಾಗಲಕೋಟೆ : ಆಧುನಿಕತೆಯಿಂದ ಮಾನವ ಕುಲಕ್ಕೆ ಜಡತ್ವ ಆವರಿಸಿಕೊಳ್ಳುತ್ತಿದೆ. ಇದರಿಂದ ಕೋವಿಡ್‌ನಂತಹ ನಾನಾ ರೋಗಗಳು ಹೆಚ್ಚಾಗಿವೆ. ದೇಹ, ಬದುಕಿಗಿಂತ ಕಾಯಕ ಪ್ರಜ್ಞೆ ಹೆಚ್ಚಾಗಬೇಕು. ಆಹಾರ, ಜೀವನದ ಪದ್ಧತಿ ಬದಲಾಗದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಚಿತ್ರದುರ್ಗದ ಶಿವಮೂರ್ತಿ ಮುರುಘ ರಾಜೇಂದ್ರ ಸ್ವಾಮೀಜಿ ಹೇಳಿದರು.

    ನವನಗರದ ತೋಟಗಾರಿಕೆ ವಿಶ್ವವಿದ್ಯಾಲಯ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತೋಟಗಾರಿಕೆ ಮೇಳದ ಸಮಾರೋಪ ಸಮಾರಂಭದಲ್ಲಿ ಗೂಗಲ್ ಮೀಟ್ ಮೂಲಕ ಅವರು ಮಾತನಾಡಿದರು.

    ಯಾಂತ್ರಿಕ ಜೀವನದಿಂದ ಶರೀರ ರೋಗಗಳ ತಾಣವಾಗಿದೆ. ಇದಕ್ಕೆ ಉತ್ತಮ ಉದಾಹರಣೆ ಕೋವಿಡ್ ಸೋಂಕು. ಎಸಿ ಕೊಠಡಿಯಲ್ಲಿ ಕುಳಿತವರಿಗೆ ಸೋಂಕು ತಗುಲಿತು. ಮಳೆ, ಚಳಿ, ಬಿಸಿಲು ಎನ್ನದೆ ದುಡಿಮೆ ಮಾಡುತ್ತಿರುವ ಶ್ರಮಿಕರಿಗೆ ಸೋಂಕು ತಗುಲಿಲ್ಲ. ಕೇವಲ ವೇಷ, ಭೂಷಣಕ್ಕೆ ಮಾರು ಹೋದರೆ ಇಂತಹ ದುಸ್ಥಿತಿ ಮಾನವ ಜನಾಂಗಕ್ಕೆ ತಪ್ಪಿದಲ್ಲ. ಬ್ಯೂಟಿಗಿಂತ ಡ್ಯೂಟಿ ಪ್ರಜ್ಞೆ ಬಗ್ಗೆ ಹೆಚ್ಚು ಆದ್ಯತೆ ನೀಡಬೇಕು. ದೇಹ ಹಾಗೂ ಜೀವನ ಚಲನ ಶೀಲತೆಯಿಂದ ಕೂಡಿರಬೇಕಾದರೆ ದೈಹಿಕ ಕಸರತ್ತು ಮಾಡಬೇಕು. ತೋಟಗಾರಿಕೆ ಬೆಳೆಗಳಾದ ಹಣ್ಣು, ತರಕಾರಿ, ಗಡ್ಡೆ, ಗೆನಸು, ಸೋಪ್ಪು ಸೇವಿಸಬೇಕು ಎಂದು ಸಲಹೆ ನೀಡಿದರು.

    ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮಗೌಡ ಬೆಳಗುರ್ಕಿ ಮಾತನಾಡಿ, ಅನ್ನದಾತರು ಮಣ್ಣಲ್ಲಿ ದುಡಿಮೆ ಮಾಡ್ತಾರೆ ಚನ್ನಗಿ ಕುಳಿತು ಉಣ್ಣುವದಿಲ್ಲ ಎನ್ನುವುದು ಕಟು ಸತ್ಯ. ಇಂದು ಭೌತಿಕ ದುಡಿಮೆ ಮಾಡುವ ಬಗ್ಗೆ ನಾವು ಯೋಚನೆ ಮಾಡುತ್ತಿಲ್ಲ. ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ. ದೇಶ ಸ್ವಾತಂತ್ರೃಗೊಂಡಾಗ 33 ಕೋಟಿ ಜನ ಸಂಖ್ಯೆ ಇತ್ತು, ದೊಡ್ಡ ಪ್ರಮಾಣದಲ್ಲಿ ಆಹಾರದ ಕೊರತೆ ಇತ್ತು. ಬೇರೆ ದೇಶಗಳಿಂದ ಆಹಾರಧಾನ್ಯ ಆಮದು ಅನಿವಾರ್ಯವಾಗಿತ್ತು. ಹಸಿರು ಕ್ರಾಂತಿ ಬಳಿಕ ದೇಶದಲ್ಲಿ ಆಹಾರ ಉತ್ಪಾದನೆ ಲಕ್ಷಾಂತರ ಮೆಟ್ರಿಕ್ ಟನ್ ವರೆಗೆ ತಲುಪಿದೆ. ಬೇರೆ ದೇಶಗಳಿಗೆ ರಫ್ತು ಮಾಡುತ್ತಿದ್ದೇವೆ. ದೇಶದಲ್ಲಿ ಪ್ರತಿಯೊಬ್ಬರಿಗೆ ಆಹಾರ ಸೂಕ್ತ ಪ್ರಮಾಣದಲ್ಲಿ ಸಿಗುತ್ತಿದೆ. ಆದರೇ ಅನ್ನದಾತರ ಸಂಕಷ್ಟ ಮಾತ್ರ ಇಂದಿಗೂ ಕೊನೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಬ್ರಿಟಿಷರ ಕಾಲದಿಂದಲು ರೈತರ ತಾವು ಬೆಳೆದ ಫಸಲಿನ ಬೆಲೆ ನಿರ್ಧಾರ ಮಾಡಲು ಸಾಧ್ಯವಾಗುತ್ತಿಲ್ಲ. ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ವಸ್ತುಗಳ ಬೆಲೆ ನಿರ್ಧರಿಸುತ್ತಾರೆ. ಆದರೇ ರೈತರು ಕಷ್ಟಪಟ್ಟು ಬೆಳೆದ ಫಸಲಿನ ಬೆಲೆಯನ್ನು ಕೊಳ್ಳುವವನು ನಿರ್ಧರಿಸುತ್ತಿದ್ದಾನೆ. ಅಲ್ಲದೆ ಪ್ರಕೃತಿ ಆಧಾರದ ಮೇಲೆ ಬೆಳೆಗಳನ್ನು ಬೆಳೆಯುವ ಕಾಲ ಮುಗಿದು ಹೋಗಿದೆ. ಮಾರುಕಟ್ಟೆ ಆಧಾರದ ಮೇಲೆ ಬೆಳೆ ಬೆಳೆಯುವ ಪದ್ಧತಿ ಆರಂಭಗೊಂಡಿದೆ. ಇದರಿಂದ ಕೃಷಿ ಕ್ಷೇತ್ರದಲ್ಲಿ ಏರಿಳಿತವಾಗುತ್ತಿದೆ ಎಂದ ಅವರು, ಕೃಷಿ, ತೋಟಗಾರಿಕಾ ವಿಜ್ಞಾನಿಗಳು ಸಮಗ್ರವಾಗಿ ಸಂಶೋಧನೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

    ಜಿಲ್ಲಾಧಿಕಾರಿ ಕೆ.ರಾಜೇಂದ್ರ, ಎಸ್ಪಿ ಲೋಕೇಶ ಜಗಲಾಸರ್, ಸಿಇಒ ಟಿ.ಭೂಬಾಲನ್, ಬೆಂಗಳೂರು ಕೃಷಿ ವಿವಿ ಕುಲಪತಿ ರಾಜೇಂದ್ರ ಪ್ರಸಾದ್, ಬೀದರ ಪಶು ವಿವಿ ಡಾ.ಎಚ್.ಡಿ.ನಾರಾಯಣಸ್ವಾಮಿ, ತೋವಿವಿ ವಿಶ್ರಾಂತ ಕುಲಪತಿ ಡಾ.ಡಿ.ಎಲ್.ಮಹೇಶ್ವರಯ್ಯ, ತೋವಿವಿ ಕುಲಪತಿ ಕೆ.ಎಂ.ಇಂದಿರೇಶ ಸೇರಿದಂತೆ ಇತರರು ಇದ್ದರು.

    ತೋಟಗಾರಿಕಾ ಬೆಳೆಗಳಿಂದ ಅನ್ನದಾತರ ಆರ್ಥಿಕ ಅಭಿವೃದ್ಧಿ ಸಾಧ್ಯವಾಗುತ್ತದೆ. ಕೇಂದ್ರ ಸರ್ಕಾರ ರೈತರ ಶ್ರೇಯೋಭಿವೃದ್ಧಿಗಾಗಿ ಕಿಸಾನ್ ಸಮ್ಮಾನ್, ಫಸಲ್ ಬೀಮಾ, ಅಟಲ್ ಪೆನ್‌ಷನ್ ಸೇರಿದಂತೆ ನಾನಾ ಯೋಜನೆ ಜಾರಿಗೆ ತಂದಿದೆ. ರೈತರು ಸರ್ಕಾರದ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು.
    – ಪಿ.ಸಿ.ಗದ್ದಿಗೌಡರ ಸಂಸದ ಬಾಗಲಕೋಟೆ

    ರಾಜ್ಯದ ಉಳಿದ ವಿಶ್ವ ವಿದ್ಯಾಲಯಗಳಿಗೆ ಹೋಲಿಕೆ ಮಾಡಿದಲ್ಲಿ ತೋಟಗಾರಿಕಾ ವಿವಿಗೆ ಅನುದಾನ ನೀಡುವಲ್ಲಿ ತಾರತಮ್ಯವಾಗುತ್ತಿದೆ. ದೇಶದಲ್ಲಿ ಶೇ.70 ಕೃಷಿಕರು ಇದ್ದರು ಸಹ ಕೃಷಿ, ತೋಟಗಾರಿಕಾ ವಿವಿಗಳಿಗೆ ಶೇ.0.7 ಅನುದಾನ ಸಿಗುತ್ತಿಲ್ಲ. ಸಿಬ್ಬಂದಿ ಕೊರತೆ ಇದೆ. ಇದರಿಂದ ಸಂಶೋಧನೆ, ಹೊಸ ಆವಿಷ್ಕಾರಕ್ಕೆ ಹಿನ್ನಡೆಯಾಗುತ್ತಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು.
    – ಡಾ.ಎಸ್.ಬಿ.ದಂಡಿನ ತೋವಿವಿ ವಿಶ್ವಾಂತ ಕುಲಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts