More

    ಬಿಜೆಪಿ ಶಾಸಕನಿಂದ ಲಾಕ್​ಡೌನ್​ ನಿಯಮ ಉಲ್ಲಂಘನೆ; ನನ್ನ ಹುಟ್ಟುಹಬ್ಬಕ್ಕೆ ನೂರಾರು ಜನರನ್ನು ಕಳಿಸಿದ್ದು ಪ್ರತಿಪಕ್ಷ ಎಂಬ ಆರೋಪ

    ವಾರ್ಧಾ: ದೇಶದಲ್ಲಿ ಅತಿಹೆಚ್ಚು ಕರೊನಾ ಸೋಂಕಿತರು ಇರುವುದು ಮಹಾರಾಷ್ಟ್ರದಲ್ಲಿ. ವೈರಸ್​ ಪೀಡಿತರ ಸಂಖ್ಯೆಯಲ್ಲಿ ದಿನೇದಿನೆ ಏರುತ್ತಿದ್ದರೂ ಅದರ ನಡುವೆ ಜನಪ್ರತಿನಿಧಿಗಳೂ ಬೇಜವಾಬ್ದಾರಿಯುತವಾಗಿ ವರ್ತಿಸುತ್ತಿದ್ದಾರಾ ಎಂಬ ಪ್ರಶ್ನೆ ಉದ್ಭವ ಆಗಿದೆ.

    ವಾರ್ಧಾದಲ್ಲಿ ಬಿಜೆಪಿ ಶಾಸಕರೇ ಲಾಕ್​ಡೌನ್​ ನಿಯಮ ಉಲ್ಲಂಘನೆ ಮಾಡಿದ್ದಾರೆ. ತಮ್ಮ ಜನ್ಮದಿನದ ನಿಮಿತ್ತ ಸ್ಥಳೀಯ ಜನರನ್ನು ಮನೆಗೆ ಕರೆಸಿ ರೇಷನ್​ ವಿತರಣೆ ಮಾಡಿದ್ದಾರೆ. ರೇಷನ್​​ಗಾಗಿ ಶಾಸಕರ ಮನೆಯ ಎದುರು ಜನರು ಗುಂಪುಗುಂಪಾಗಿ ಸೇರಿದ್ದರು. ಅಲ್ಲಿ ಯಾವುದೇ ಸಾಮಾಜಿಕ ಅಂತರ ಕಂಡು ಬರಲಿಲ್ಲ.

    ವಾರ್ಧಾದ ಆರ್ವಿ ಕ್ಷೇತ್ರದ ಬಿಜೆಪಿ ಶಾಸಕ ದಾದರಾವ್ ಕೆಚೆ ಅವರು ತಮ್ಮ ಹುಟ್ಟು ಹಬ್ಬದ ನಿಮಿತ್ತ ಜನರಿಗೆ ಗೋಧಿ ಮತ್ತು ಅಕ್ಕಿಯನ್ನು ವಿತರಿಸಿದ್ದಾರೆ.

    ಈ ರೇಷನ್​ಗಾಗಿ 100ಕ್ಕೂ ಹೆಚ್ಚು ಮಂದಿ ಅವರ ಮನೆ ಹೊರಗೆ ಪರಸ್ಪರ ಅಂತರ ಕಾಯ್ದುಕೊಳ್ಳದೆ ಸರತಿ ಸಾಲಿನಲ್ಲಿ ನಿಂತಿದ್ದರು. ಅಲ್ಲಲ್ಲಿ ಗುಂಪಾಗಿ ನಿಂತು ಮಾತನಾಡುತ್ತಿದ್ದರು. ಬಳಿಕ ಪೊಲೀಸರು ಸ್ಥಳಕ್ಕೆ ತೆರಳಿ ಅವರನ್ನೆಲ್ಲ ಚದುರಿಸಿದ್ದಾರೆ. ದೂರದಲ್ಲಿ ನಿಲ್ಲಿ ಎಂದು ಹೇಳಿದ್ದಾರೆ.

    ಆದರೆ ಈ ಘಟನೆ ಬಗ್ಗೆ ಬಿಜೆಪಿ ಎಂಎಲ್​ಎ ಬೇರೆಯದೇ ಕತೆ ಹೇಳಿದ್ದಾರೆ. ನಾನು ಪ್ರತಿವರ್ಷವೂ ನನ್ನ ಜನ್ಮದಿನದಂದು ಬಡವರಿಗೆ ರೇಷನ್​ ನೀಡುತ್ತೇನೆ. ಈ ಬಾರಿ 21 ಜನರಿಗೆ ಮಾತ್ರ ರೇಷನ್​ ನೀಡಲು ನಿರ್ಧರಿಸಿದ್ದೆ. ಆದರೆ ಪ್ರತಿಪಕ್ಷ ಇದರಲ್ಲೂ ಪಿತೂರಿ ಮಾಡಿದೆ. 100ಕ್ಕೂ ಹೆಚ್ಚು ಜನರನ್ನು ನಮ್ಮನೆ ಎದುರು ಕಳಿಸಿತ್ತು ಎಂದು ಹೇಳಿ ನುಣುಚಿಕೊಂಡಿದ್ದಾರೆ.

    ಶಾಸಕರ ಮನೆಯ ಎದುರು ನೂರಾರು ಜನರು ರೇಷನ್​ಗಾಗಿ ನಿಂತಿದ್ದ ಫೋಟೋ ಎಲ್ಲೆಡೆ ವೈರಲ್​ ಆಗಿದೆ. ಪ್ರಧಾನಿ ಮೋದಿ ಸೇರಿ ಹಲವು ಪ್ರಮುಖ ನಾಯಕರು ಕರೊನಾ ವಿರುದ್ಧ ಹೋರಾಟಕ್ಕೆ ಅರಿವು ಮೂಡಿಸುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸಾರಿಸಾರಿ ಹೇಳುತ್ತಿದ್ದಾರೆ. ಆದರೆ ಹೀಗೆ ಜವಾಬ್ದಾರಿ ಸ್ಥಾನದಲ್ಲಿ ಇರುವವರೇ ಅದನ್ನು ಪಾಲಿಸದಿದ್ದರೆ ಹೇಗೆಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts