More

    ಡಾ. ರಾಜ್ ಕನ್ನಡ ಸಂಸ್ಕೃತಿಯ ಪ್ರತೀಕ: ಡಾ. ಮಹೇಶ ಜೋಶಿ

    ಬೆಂಗಳೂರು: ಕನ್ನಡ ಸಂಸ್ಕೃತಿಯ ಪ್ರತೀಕದಂತಿದ್ದ ವರನಟ ಡಾ. ರಾಜ್‌ಕುಮಾರ್ ಅವರು ತಮ್ಮ ಬದುಕು ಮತ್ತು ಅಭಿಯನದ ಮೂಲಕ ಮಾದರಿಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಬಣ್ಣಿಸಿದ್ದಾರೆ.

    ಡಾ.ರಾಜ್ 95ನೇ ಜಯಂತಿ ಅಂಗವಾಗಿ ಕಸಾಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂತ ಶ್ರೇಷ್ಠರಾದ ಕನಕದಾಸ, ಪುರಂದರದಾಸ, ಸರ್ವಜ್ಞ, ತುಕಾರಾಮ್, ಕಬೀರ ಮೊದಲಾದವರ ಪಾತ್ರಗಳಿಗೆ ಜೀವ ತುಂಬಿದ ರಾಜ್ ಅವರು, ಇಮ್ಮಡಿ ಪುಲಿಕೇಶಿ, ಮಯೂರ, ಶ್ರೀ ಕೃಷ್ಣದೇವರಾಯ ಮೊದಲಾದ ಕನ್ನಡ ನಾಡಿನ ವೀರರನ್ನು ಬೆಳ್ಳಿತೆರೆಯ ಮೂಲಕ ಜೀವಂತವಾಗಿಸಿದವರು. ರಾಮ, ಕೃಷ್ಣ, ನಾರದ ಮೊದಲಾದ ಪುರಾಣ ಪಾತ್ರಗಳಲ್ಲೂ ಅವರ ಅಭಿನಯ ಅಮೋಘ. ಭಕ್ತಿಯಿಂದ ಬಾಂಡ್ ಸಿನಿಮಾವರೆಗೆ, ಕುಂಬಾರನಿಂದ ಚಕ್ರವರ್ತಿಯವರೆಗೆ ಎಲ್ಲ ಮಾದರಿಯ ಪಾತ್ರಗಳಲ್ಲೂ ಅಭಿನಯಿಸುವ ಮೂಲಕ ಕನ್ನಡ ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಸ್ಮರಿಸಿದರು.

    ಕನ್ನಡ ಹೋರಾಟಗಾರ ರಾ.ನಂ. ಚಂದ್ರಶೇಖರ್ ಮಾತನಾಡಿ, ಗೋಕಾಕ್ ಚಳವಳಿ ಸಂದರ್ಭದಲ್ಲಿ ಕನ್ನಡಿಗರಿಗೆ ದೊಡ್ಡ ಭರವಸೆಯಾಗಿ ಬಂದವರು ಡಾ.ರಾಜ್. ಅವರು ಯಾವತ್ತೇ ಹೋರಾಟಕ್ಕೆ ಇಳಿದರೂ ಸರ್ಕಾರ ನಡುಗುತ್ತಿತ್ತು. ಎಂ.ವಿ.ಸೀ. ಅವರ ಅಂತಿಮ ದರ್ಶನ ಪಡೆಯಲು ನಾರು ಮಡಿ ಉಟ್ಟು ಬಂದಿದ್ದ ರಾಜ್ ಕುಮಾರ್ ನಮ್ಮ ನಡುವಿನ ಸಂತ. ಲೌಕಿಕದಲ್ಲಿ ಇದ್ದೂ ಅವರು ಅಲೌಕಿಕದ ನಡೆಯನ್ನು ಸಾಧಿಸಿದ್ದರು ಎಂದು ಅವರ ವ್ಯಕ್ತಿತ್ವ ಕುರಿತು ಸ್ಮರಿಸಿದರು.

    ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕ ಎನ್.ಎಸ್. ಶ್ರೀಧರ ಮೂರ್ತಿ, ಪರಿಷತ್ತಿನ ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗ ಶೆಟ್ಟಿ, ಕೋಶಾಧ್ಯಕ್ಷರಾದ ಪಟೇಲ್ ಪಾಂಡು, ಹಿರಿಯ ಪತ್ರಕರ್ತ ಪ್ರಶಾಂತ್ ಹೆಬ್ಬಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts