More

    ಏಕಪಕ್ಷೀಯವಾಗಿ ಭೂ ಸ್ವಾಧೀನ ಸಲ್ಲ

    ಮಾನ್ವಿ: ಲೋಕೋಪಯೋಗಿ ಇಲಾಖೆ ಹಾಗೂ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಿಂದ ರಾಯಚೂರು ಬಳಿಯ ಕಲ್ಮಲಾ ಜಂಕ್ಷನ್‌ನಿಂದ ಸಿಂಧನೂರುವರೆಗಿನ ಹೆದ್ದರಿಯನ್ನು ಮೇಲ್ದರ್ಜೆಗೇರಿಸಲು ವಶಪಡಿಸಿಕೊಂಡಿರುವ ಜಮೀನಿನ ಪರಿಹಾರವನ್ನು ರೈತರಿಗೆ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಒತ್ತಾಯಿಸಿದರು.

    ನೀರಮಾನ್ವಿ ಗ್ರಾಮದ ರೇಣುಕಾ ಯಲ್ಲಮ್ಮದೇವಿ ಕಲ್ಯಾಣ ಮಂಟಪದಲ್ಲಿ ಭೂಸಂತ್ರಸ್ತ ರೈತರ ಸಭೆಯಲ್ಲಿ ಶನಿವಾರ ಮಾತನಾಡಿದರು. ರಾಯಚೂರು-ಗಿಣಿಗೇರಾ ಹೆದ್ದಾರಿಯಲ್ಲಿ 78.45 ಕಿ.ಮೀ. ಮಾರ್ಗವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗೆ 2023ರ ಏ.19 ರಂದು ಅಧಿಸೂಚನೆ ಹೊರಡಿಸಿದೆ. ಚತುಷ್ಪಥ ರಸ್ತೆಗೆ ಎಡ ಮತ್ತು ಬಲಕ್ಕೆ ತಲಾ 100 ಅಡಿ ಅಗಲ ಗುರುತಿಸಲಾಗಿದ್ದು, ರಸ್ತೆ ಹಾದು ಹೋಗುವ ಜಮೀನುಗಳ ರೈತರಿಗೆ ಮಾಹಿತಿ, ನೋಟಿಸ್ ನೀಡಿಲ್ಲ. ಪರಿಹಾರ ನೀಡದೆ ರಸ್ತೆ ಕಾಮಗಾರಿ ನಡೆಸಲು ಮುಂದಗಿರುವುದು ಖಂಡನೀಯ ಎಂದರು.

    ರಾಯಚೂರು ತಾಲೂಕಿನ ಹುಣಸಿಹಾಳಹುಡ ಗ್ರಾಮದಲ್ಲಿ 8 ಎಕರೆ, ರಾಂಪುರದಲ್ಲಿ 4, ಮಮದಾಪುರದಲ್ಲಿ 2, ಸಿರವಾರ ತಾಲೂಕಿನ ಕಲ್ಲೂರಿನಲ್ಲಿ 50, ಮಾನ್ವಿ ತಾಲೂಕಿನ ಕುರ್ಡಿಯಲ್ಲಿ 11, ಬೆಟ್ಟದೂರಿನಲ್ಲಿ 15, ನೀರಮಾನ್ವಿಯಲ್ಲಿ 25, ಕಪಗಲ್‌ನಲ್ಲಿ 28, ಮಾನ್ವಿಯಲ್ಲಿ 9 ಸೇರಿ ಒಟ್ಟು 155 ಎಕರೆ ಜಮೀನು ಸ್ವಾಧೀನವಾಗಲಿದೆ ಎಂದು ಮಾಹಿತಿ ನೀಡಿದರು.

    ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹಾಗೂ ಶಾಸಕರು ಜಮೀನು ಕಳೆದುಕೊಳ್ಳಲಿರುವ ರೈತರೊಂದಿಗೆ ಚರ್ಚೆ ನಡೆಸಿ ಸರ್ಕಾರದಿಂದ ಪರಿಹಾರ ಕಲ್ಪಿಸಬೇಕು ಎಂದು ಚಾಮರಸ ಮಾಲಿಪಾಟೀಲ್ ಒತ್ತಾಯಿಸಿದರು.

    ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್, ಉಪಾಧ್ಯಕ್ಷ ಬೂದಯ್ಯಸ್ವಾಮಿ, ಕಾರ್ಯದರ್ಶಿ ಲಿಂಗಾರೆಡ್ಡಿಗೌಡ, ಯಂಕಪ್ಪ ಕಾರುಬಾರಿ, ರೈತರಾದ ಮಲ್ಲಿಕಾರ್ಜುನಗೌಡ ಪೋತ್ನಾಳ, ಶರಣಬಸವ ಬೆಟ್ಟದೂರು, ಬಸನಗೌಡ ಮಲ್ಲಿನಮಡುಗು, ಬುಡ್ಡುಸಾಬ್, ರಾಮಣ್ಣ್ಣ ಅರಕೇರಿ, ಬಸವರಾಜ ಗವಿಗಟ್ಟು, ಬಸವರಾಜಗೌಡ ಪೋತ್ನಾಳ, ಭೀಮಣ್ಣ ಸಿದ್ದಯ್ಯಸ್ವಾಮಿ, ಹಾಜಿ ಮುಸ್ತಾಫಾ, ರಾಘವೇಂದ್ರರಾವ್, ಗುಡೂಸಾಬ್, ಆಂಜನೇಯ ನಾಯಕ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts