More

    ಜಿಲ್ಲಾಡಳಿತ ಭವನ ಎದುರು ಅನಿರ್ದಿಷ್ಟಾವಧಿ ಧರಣಿ

    ಬಾಗಲಕೋಟೆ: ವಿರೋಧದ ಮಧ್ಯೆಯೂ ಹಲಕುರ್ಕಿ ಗ್ರಾಮದಲ್ಲಿ ಭೂಸ್ವಾಧೀನ ವಿರೋಧಿಸಿ ಗ್ರಾಮದ ರೈತರು ಜಿಲ್ಲಾಡಳಿತ ಭವನ ಎದುರು ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ. ರಾತ್ರಿಯೂ ಪ್ರತಿಭಟನೆ ಮುಂದುವರಿದಿತ್ತು.

    ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಹಲಕುರ್ಕಿ ಗ್ರಾಮಸ್ಥರು, ಸರ್ಕಾರ ಹಾಗೂ ಸಚಿವ ಮುರುಗೇಶ ನಿರಾಣಿ ವಿರುದ್ಧ ಘೋಷಣೆ ಕೂಗಿದರು. ನಂತರ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಅವರಿಗೆ ಮನವಿ ಸಲ್ಲಿಸಿದರು. ಬಳಿಕ ಧರಣಿ ಆರಂಭಿಸಿದರು.

    ಕೆಐಎಡಿಬಿ ಕೈಗಾರಿಕೆ ವಲಯ ಮತ್ತು ವಿಮಾನ ನಿಲ್ದಾಣಕ್ಕೆ ಭೂಸ್ವಾಧೀನ ಮಾಡಿಕೊಳ್ಳಬಾರದು. ನೀರಾವರಿ ಯೋಜನೆಗೆ ಒಳಪಡಬೇಕಿದ್ದ ಭೂಮಿಯನ್ನು ಕೈಗಾರಿಕಾ ವಲಯಕ್ಕೆ ಪಡೆದು ಎಸ್‌ಸಿ, ಎಸ್‌ಟಿ ರೈತರು ಹೆಚ್ಚಾಗಿರುವ ನಮಗೆ ಅನ್ಯಾಯ ಮಾಡುತ್ತಿದ್ದಾರೆ. ಸರ್ಕಾರ ಒಂದು ಕಡೆ ಶೋಷಿತರಿಗೆ ಭೂಮಿ ನೀಡಬೇಕೆಂದು ಹೇಳುತ್ತದೆ. ಆದರೆ ಇಲ್ಲಿ ಎಸ್ಸಿ,ಎಸ್ಟಿ ಜನಾಂಗದ ರೈತರು ಭೂಮಿ ಕಳೆದುಕೊಳ್ಳಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಹೋರಾಟಗಾರ ಮುಖಂಡ ಪ್ರಕಾಶ ನಾಯ್ಕರ ಮಾತನಾಡಿ, ಸರ್ಕಾರ ನಮ್ಮ ಅಹವಾಲು ಸ್ವೀಕರಿಸಿಲ್ಲ. ಬಾದಾಮಿ ಶಾಸಕ ಸಿದ್ದರಾಮಯ್ಯ ಅವರೂ ನಮ್ಮ ಕೂಗು ಕೇಳಿಲ್ಲ. ಸಚಿವ ಮುರುಗೇಶ ನಿರಾಣಿ ಉದ್ದೇಶ ಪೂರ್ವಕವಾಗಿ ನಮ್ಮ ಭೂಮಿಯನ್ನು ಕಸಿದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

    ಬಾಗಲಕೋಟೆ ಡಿಸಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸುತ್ತಿರುವ ರೈತರು ಟ್ರಾೃಕ್ಟರ್‌ನಲ್ಲಿ ಕಟ್ಟಿಗೆ, ಒಲೆ, ತರಕಾರಿ ತಂದು ಅಡುಗೆ ಮಾಡಿ ಫಲಾವ ಸಿದ್ಧಪಡಿಸಿ ಸ್ಥಳದಲ್ಲಿ ಊಟ ಮಾಡಿದರು. ಪೊಲೀಸರು, ಅಧಿಕಾರಿಗಳು ಮನವೊಲಿಕೆಗೆ ಮುಂದಾದರೂ ರೈತರು ಒಪ್ಪಲಿಲ್ಲ. ಗ್ರಾಮದ 2000 ಎಕರೆ ಭೂಮಿ ಭೂಸ್ವಾಧೀನ ಕೈ ಬಿಡಬೇಕು. ವಿಮಾನ ನಿಲ್ದಾಣ, ಕಾರ್ಖಾನೆಗಳ ಸ್ಥಾಪನೆಗೆ ಅವಕಾಶ ನೀಡಬಾರದು. ಇಲ್ಲವಾದಲ್ಲಿ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದರು.

    ಯಲ್ಲಪ್ಪ ಹೆಗಡೆ, ಅಂದಾನಿಗೌಡ ಪಾಟೀಲ, ಶಂಕ್ರಪ್ಪ ಶಾಸನ್ನವರ, ಸಿದ್ದಪ್ಪ ಬಳಗಾನೂರ ನೇತೃತ್ವ ವಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts