More

    ಹಳೆಯ ಬೇಡಿಕೆಗಳೇ ಈಡೇರಿಲ್ಲ; ಹೊಸ ನಿರೀಕ್ಷೆಗೆ ಕೊನೆ ಇಲ್ಲ!

    ಹಿಂದಿನ ಬಜೆಟ್​ಗಳಲ್ಲಿ ನೀಡಿದ್ದ ಯೋಜನೆಗಳಲ್ಲಿ ಬಹುತೇಕ ಇದುವರೆಗೂ ಈಡೇರಿಲ್ಲ ಎನ್ನುವುದು ಎಲ್ಲೆಡೆ ಇರುವ ಸಾಮಾನ್ಯ ಆರೋಪ. ಆದ್ದರಿಂದ ಹಳೇ ಭರವಸೆಗಳ ಈಡೇರಿಕೆ ಜತೆಗೆ ಹೊಸ ಕೊಡುಗೆಗಳು ಸಿಗುವ ನಿರೀಕ್ಷೆಗಳು ಗರಿಗೆದರಿವೆ. ಆದರೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆಯವ್ಯಯದಲ್ಲಿ ಅದ್ಯಾವ ಕಡೆಗೆ ಪ್ರೀತಿ ತೋರುವರೋ ಎಂಬುದು ಕುತೂಹಲವಾಗಿಯೇ ಉಳಿದಿದೆ.

    ಬೆಂಗಳೂರು ಗ್ರಾಮಾಂತರ

    ಜಿಲ್ಲೆಯಲ್ಲಿ ನೀರಿಗೆ ಪ್ರಮುಖ ಆದ್ಯತೆ ಸಿಗಬೇಕಿದೆ. ವಿಜಯಪುರ ತಾಲೂಕು ಕೇಂದ್ರ ಘೊಷಣೆ ಮಾಡುವಂತೆ 3 ವರ್ಷಗಳಿಂದ ಹೋರಾಟ ನಡೆಯುತ್ತಿದೆೆ. ಜಿಲ್ಲಾಡಳಿತ ಕೇಂದ್ರ ದೇವನಹಳ್ಳಿಗೆ ಸ್ಥಳಾಂತರಗೊಂಡಿದ್ದು, ಇಲ್ಲಿಗೆ ಹೆಚ್ಚಿನ ಅನುದಾನ ಮೀಸಲಿಡಬೇಕಿದೆ. ದೇವನಹಳ್ಳಿ ಪಟ್ಟಣಕ್ಕೆ ಕಾವೇರಿ ನೀರು ಪೂರೈಕೆ, ಕೆಂಪೇಗೌಡರ ಪೂರ್ವಿಕರು ನೆಲೆಸಿದ್ದ ಆವತಿ ಅಭಿವೃದ್ಧಿಗೆ ಹಣ ಮೀಸಲಿಡಬೇಕು ಎಂಬುದು ಜನರ ಒತ್ತಾಸೆಯಾಗಿದೆ. ಹೊಸಕೋಟೆ ಉಪಚುನಾವಣೆ ಪ್ರಚಾರದ ವೇಳೆ ಎಂಟಿಬಿ ನಾಗರಾಜ್ ಗೆದ್ದರೆ ಮೆಟ್ರೋ ರೈಲು, ಹೈಟೆಕ್ ಬಸ್ ನಿಲ್ದಾಣ, ಕಾವೇರಿ ನೀರು ಪೂರೈಕೆ ಮತ್ತಿತರ ಭರವಸೆಯನ್ನು ಸಿಎಂ ಯಡಿಯೂರಪ್ಪ ನೀಡಿದ್ದರು. ಆದರೆ ಉಪಕದನದಲ್ಲಿ ಎಂಟಿಬಿ ಸೋಲು ಅನುಭವಿಸಿದ್ದು, ಸದ್ಯ ಎಂಎಲ್​ಸಿಯಾಗಿ ಸಚಿವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸ ಕೋಟೆಗೆ ಪ್ರತ್ಯೇಕ ಅನುದಾನ ಸಿಗಬಹುದೆಂಬ ನಿರೀಕ್ಷೆ ಇದೆ.

    ಕೋಲಾರ

    ಕೆಜಿಎಫ್ ಚಿನ್ನದ ಗಣಿಗೆ ಸೇರಿದ ಖಾಲಿ ಭೂಮಿಯಲ್ಲಿ ಸೋಲಾರ್ ವಿದ್ಯುತ್ ಉಪಕರಣಗಳ ಘಟಕ, ಅಟಲ್ ಭೂಜಲ ಯೋಜನೆಯಡಿ ಅಂತರ್ಜಲ ವೖದ್ಧಿಗೆ ಅನುದಾನ, ರೈಲ್ವೆ ವರ್ಕ್​ಶಾಪ್ ನಿಮಾಣ, ಕೋಲಾರದಲ್ಲಿ ಕೌಶಲ ಅಭಿವೖದ್ಧಿ ಕೇಂದ್ರ, ನನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆ, ಚಿನ್ನದ ಗಣಿ ಮರುಸ್ಥಾಪನೆ ಸೇರಿ ಈ ಹಿಂದಿನ ಭರವಸೆಗಳು ಈಡೇರಿಕೆಗೆ ಕಾಯುತ್ತಿವೆ. ಇದಲ್ಲದೆ, ಆನೆಗಳ ದಾಳಿ ನಿಯಂತ್ರಣಕ್ಕೆ ಶಾಶ್ವತ ಪರಿಹಾರವಾಗಿ ಬಂಗಾರಪೇಟೆಯ ಕಾಮಸಮುದ್ರ ಗಡಿ ಭಾಗದಲ್ಲಿ ಸೋಲಾರ್ ಫೆನ್ಸಿಂಗ್ ಅಳವಡಿಕೆ ಬೇಡಿಕೆ, ಎಪಿಎಂಸಿಗಳಲ್ಲಿ ಶೀತಲ ಘಟಕ ಸ್ಥಾಪನೆ ಆಗ್ರಹವಿದೆ. ಕೆಸಿ ವ್ಯಾಲಿ ಯೋಜನೆ ಜಾರಿಯಾಗಿದ್ದರೂ, ಮುಳಬಾಗಿಲು ತಾಲೂಕಿನ ಕೆರೆಗಳಿಗೆ ನೀರು ಹರಿದಿಲ್ಲ, ನೀರಿನ ಹರಿವಿನ ಪ್ರಮಾಣ ಹೆಚ್ಚಳ ಜತೆಗೆ ಎರಡನೇ ಹಂತದಲ್ಲಿ 200 ಕೆರೆಗಳಿಗೆ ನೀರು ಹರಿಸಲು ಅಗತ್ಯ ಹಣ ಒದಗಿಸಬೇಕಿದೆ.

    ರಾಮನಗರ

    ಕನಕಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಅಧಿವೇಶನದಲ್ಲೇ ಸಿಎಂ ಒಕೆ ಎಂದಿದ್ದಾರೆ. 2007-08ರ ಬಜೆಟ್​ನಲ್ಲಿ ಘೊಷಣೆಯಾದ ರಾಜೀವ್ ಗಾಂಧಿ ಆರೋಗ್ಯ ವಿವಿ ನಿರ್ಮಾಣ ಯೋಜನೆ ಜಾರಿಯಲ್ಲಿ ಸಚಿವರು ಬಂದು ಹೋಗಿದ್ದು ಬಿಟ್ಟರೆ ಕಟ್ಟಡಗಳು ಮಾತ್ರ ತಲೆ ಎತ್ತಲೇ ಇಲ್ಲ. ಚಿತ್ರೋದ್ಯಮ ವಿಶ್ವವಿದ್ಯಾಲಯ ಸ್ಥಾಪನೆ ಸಹ ನನೆಗುದಿಗೆ ಬಿದ್ದಿದೆ. ರಾಮನಗರದಲ್ಲಿ ಕಲಾ ಗ್ರಾಮ ನಿರ್ವಣ, ನೀರಾವರಿ ಯೋಜನೆಗಳ ಪುನಃಶ್ಚೇತನ ಮತ್ತು ಕಾಲುವೆಗಳ ನವೀಕರಣದಂಥ ಯೋಜನೆಗಳು ಹಾಗೆಯೇ ಉಳಿದಿವೆ. ಕೃಷಿ ಉತ್ಪನ್ನಗಳಿಗೆ ಮೆಗಾ ಮಾರುಕಟ್ಟೆ, ಕಸ ವಿಲೇವಾರಿಗೆ ವೈಜ್ಞಾನಿಕ ಘಟಕಗಳ ಸ್ಥಾಪನೆ, ಕುಡಿಯುವ ನೀರು ಪೂರೈಕೆ ಯೋಜನೆಗಳಿಗೆ ಅನುದಾನ ಬೇಕಾಗಿದೆ. ಅರ್ಕಾವತಿ, ವೃಷಭಾವತಿ ನದಿ ಶುದ್ಧೀಕರಣಕ್ಕೆ ಸರ್ಕಾರ ಧೃಢ ನಿರ್ಧಾರ ತಾಳಬೇಕಿದೆ. ಥೇಮ್್ಸ ಮಾದರಿಯಲ್ಲಿ ಅರ್ಕಾವತಿ ದಡದ ಅಭಿವೃದ್ಧಿಗೆ ಕ್ರಮ, ಮಂಚನಬೆಲೆ ಮತ್ತು ಕಣ್ವ ಜಲಾಶಯಗಳ ಕಾಲುವೆಗಳ ನವೀಕರಣ ಹಾಗೂ ನೀರು ಮತ್ತು ಎಳನೀರು ಘಟಕಗಳ ಸ್ಥಾಪನೆಗೆ ಒತ್ತು ನೀಡಬೇಕಾಗಿದೆ.

    ತುಮಕೂರು

    ಎತ್ತಿನಹೊಳೆ ಯೋಜನೆಗೆ 1500 ಕೋಟಿ ರೂ., ತೆಂಗು ಆಧಾರಿತ ಕೈಗಾರಿಕಾ ಪಾರ್ಕ್, ಕಾಯರ್ ಎಕ್ಸ್​ಪಿರಿಯನ್ಸ್ ಸೆಂಟರ್ ಸ್ಥಾಪನೆಗೆ 5 ಕೋಟಿ ರೂ., ಸರ್ಕಾರಿ ಉಪಕರಣಗಾರ ಹಾಗೂ ತರಬೇತಿ ಕೇಂದ್ರಗಳಿಗೆ 353 ಕೋಟಿ ರೂ. ವೆಚ್ಚದಲ್ಲಿ ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆಗೆ ತುಮಕೂರು ಸೇರಿ 7 ಜಿಲ್ಲೆಗಳನ್ನು ಕಳೆದ ಬಜೆಟ್​ನಲ್ಲಿ ಆಯ್ಕೆ ಮಾಡಲಾಗಿತ್ತು. ಈ ಯೋಜನೆಗಳ್ಯಾವವೂ ಟೇಕಾಫ್ ಆಗಿಲ್ಲ. ಹೇಮಾವತಿ ನಾಲೆ 70 ಕಿ.ಮೀ.ಯಿಂದ 166 ಕಿ.ಮೀ.ವರೆಗೆ ಆಧುನೀಕರಣ ಕಾಮಗಾರಿಗೆ 550 ಕೋಟಿ ರೂ. ಒದಗಿಸಬೇಕಿದೆ. ತುಮಕೂರು ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿಸಿ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಸಂಸ್ಥೆ ಸ್ಥಾಪನೆ, ಗಣಿಬಾಧಿತ ತಿಪಟೂರು ತಾಲೂಕು ಕಿಬ್ಬನಹಳ್ಳಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ತೋಟಗಾರಿಕಾ ಕಾಲೇಜು ಸ್ಥಾಪನೆ, ಕೋಕೊನಟ್ ಟೆಕ್ನಾಲಜಿ ಪಾರ್ಕ್.. ಹೀಗೆ ಪಟ್ಟಿ ದೊಡ್ಡದಿದೆ.

    ಚಿಕ್ಕಬಳ್ಳಾಪುರ

    ಎತ್ತಿನಹೊಳೆ ಮತ್ತು ಎಚ್.ಎನ್.ವ್ಯಾಲಿ ಯೋಜನೆಗಳು ಅನುದಾನ ಕೊರತೆಯಿಂದ ಕುಂಟುತ್ತ ಸಾಗುತ್ತಿವೆ. ಪ್ರತ್ಯೇಕ ನಂದಿ ಪ್ರಾಧಿಕಾರ ರಚನೆ ಮಾಡಿ ವಿಶೇಷ ಅನುದಾನ ಮೀಸಲಿಡುವ ಅಗತ್ಯವಿದೆ. ಬೆಂಗಳೂರು ಉತ್ತರ ವಿವಿ ಕಟ್ಟಡ ನಿರ್ವಣಕ್ಕೆ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಬಳಿ ಅಗತ್ಯ ಭೂಮಿ ಗುರುತಿಸಲಾಗಿದೆ. ಆದರೆ, ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗಿಲ್ಲ. ನಾಲೇಜ್ ಸಿಟಿ ನಿರ್ವಣಕ್ಕೆ ಅನುದಾನ ಬೇಕಾಗಿದೆ. ಗಡಿ ಭಾಗದಲ್ಲಿ ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹ ಮತ್ತು ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸುವ ಬಹುವರ್ಷಗಳ ಬೇಡಿಕೆ ಪುರಸ್ಕರಿಸಬೇಕಿದೆ. ಬಾಗೇಪಲ್ಲಿ ಕ್ಷೇತ್ರದ ಚೇಳೂರು ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರದ ಮಂಚೇನಹಳ್ಳಿಯನ್ನು ಹೊಸ ತಾಲೂಕನ್ನಾಗಿ ಘೊಷಿಸಲಾಗಿದ್ದು, ವಿಶೇಷ ಅನುದಾನದ ಅಗತ್ಯವಿದೆ. ಶಿಡ್ಲಘಟ್ಟ ತಾಲೂಕಿನ ಸಾದಲಿ ಹೋಬಳಿಯನ್ನು ಪ್ರತ್ಯೇಕ ತಾಲೂಕನ್ನಾಗಿ ಘೋಷಿಸಬೇಕೆಂಬ ಒತ್ತಾಯವು ಕೇಳಿ ಬರುತ್ತಿದೆ.

    ಬೆಂಗಳೂರಿಗೆ ಭಾರಿ ಅನುದಾನ?

    ಬೆಂಗಳೂರಿಗೆ ಅಂತಾರಾಷ್ಟ್ರೀಯ ಸೌಲಭ್ಯಗಳನ್ನು ಒದಗಿಸಲು ಮತ್ತು ಎಲ್ಲ ವರ್ಗದ ಜನರಿಗೆ ವಾಸಯೋಗ್ಯ ಒಳಗೊಂಡ ನಗರವನ್ನಾಗಿ ಮಾಡಲು ರಾಜ್ಯ ಬಜೆಟ್​ನಲ್ಲಿ 6 ಸಾವಿರ ಕೋಟಿ ರೂ.ಗಿಂತ ಅಧಿಕ ಅನುದಾನ ನೀಡುವ ನಿರೀಕ್ಷೆಯಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 57 ಸುಸಜ್ಜಿತ ಗುಣಮಟ್ಟದ 247 ಕಾರ್ಯ ನಿರ್ವಹಿಸುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯುವುದು. ವೈಟ್​ಟ್ಯಾಪಿಂಗ್, ಟೆಂಡರ್ ಶ್ಯೂರ್, ರಾಜಕಾಲುವೆ ಅಭಿವೃದ್ಧಿ, ಕೆರೆಗಳ ಪುನಶ್ಚೇತನ, ರಸ್ತೆಗಳ ನಿರ್ವಹಣೆ, ಸ್ಮಾರ್ಟ್ ರ್ಪಾಂಗ್, ಘನ ತ್ಯಾಜ್ಯ ನಿರ್ವಹಣೆ ಸೇರಿ ಚಾಲ್ತಿಯಲ್ಲಿರುವ ಕಾಮಗಾರಿ ಮುಂದುವರಿಸಬೇಕಿದೆ. ಹೀಗಾಗಿ, ಈ ಆಯವ್ಯಯದಲ್ಲಿ 5 ಸಾವಿರ ಕೋಟಿ ರೂ. ಅನುದಾನ ನಿರೀಕ್ಷಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಜಾರಕಿಹೊಳಿ ಸೆಕ್ಸ್​ ಸಿಡಿ ಪ್ರಕರಣ: ಹಲವು ಅನುಮಾನ ಹುಟ್ಟಿಸಿದೆ ಡಾ.ಸುಧಾಕರ್​ ಹೇಳಿಕೆ

    ಬ್ಯಾಂಕ್​ ವ್ಯವಹಾರದ ಬಗ್ಗೆ ಅನುಮಾನ; ಪಿಗ್ಮಿ ಹಣ ಹಿಂದಿರುಗಿಸುವಂತೆ ಮುಗಿಬಿದ್ದ ಖಾತೆದಾರರು

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts