More

    ಜನರು ಮರೆತ ನಂತರ ಮುಚ್ಚಿ ಹಾಕುವ ತಂತ್ರ

    ಹುಬ್ಬಳ್ಳಿ : ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣವನ್ನು ಜನರು ಮೂರೋ ಅಥವಾ ಆರೋ ತಿಂಗಳ ನಂತರ ಮರೆತ ಬಳಿಕ ಮುಚ್ಚಿ ಹಾಕುವ ಪ್ರಯತ್ನವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ನಡೆಸಿದೆ ಎಂದು ಪ್ರತಿ ಪಕ್ಷ ನಾಯಕ ಆರ್. ಅಶೋಕ ಆರೋಪಿಸಿದ್ದಾರೆ.

    ನೇಹಾ ತಂದೆ ನಿರಂಜನ ಹಿರೇಮಠ ಮನೆಗೆ ಮಂಗಳವಾರದಂದು ಭೇಟಿ ನೀಡಿ, ಸಾಂತ್ವನ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಆರ್. ಅಶೋಕ, ಹತ್ಯೆ ಪ್ರಕರಣದ ತನಿಖೆ ಮಾಡುವವರು ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆಯಬೇಕಿತ್ತು. ಆದರೆ, ಜ್ಯುಡಿಷಿಯಲ್ ಕಸ್ಟಡಿಗೆ ಏಕೆ ಪಡೆಯಲಾಯಿತು ? ಎಂದು ಪ್ರಶ್ನಿಸಿದರು.

    ಈ ಬಗ್ಗೆ ಗೃಹ ಸಚಿವರು ಮತ್ತು ಪೊಲೀಸ್ ಇಲಾಖೆಗೆ ಸಾಮಾನ್ಯ ಜ್ಞಾನ ಇರಬೇಕಿತ್ತು. ಇಂಥ ಕೊಲೆ ನಡೆದಾಗ ಹೆಚ್ಚು ಜಾಗೃತರಾಗಿ ಇರಬೇಕಿತ್ತು. ಆರೋಪಿ ಫಯಾಜ್​ನನ್ನು ರಕ್ಷಿಸಲು ಯಾರಾದರೂ ಸಲಹೆಗಳನ್ನು ಕೊಟ್ಟಿರಬಹುದೇ ? ಎಂದು ಶಂಕೆ ವ್ಯಕ್ತಪಡಿಸಿದರು.

    ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಿಯಾದ ದಾಖಲೆಗಳನ್ನು ಪೊಲೀಸರು ಸಂಗ್ರಹಿಸಬೇಕಿತ್ತು. ಕಳೆದ ಹತ್ತಾರು ದಿನಗಳಿಂದ ಆರೋಪಿ ಯಾರೊಂದಿಗೆ ಸಂರ್ಪದಲ್ಲಿ ಇದ್ದ? ಆತನಿಗೆ ಬಂದ ಫೋನ್ ಕರೆಗಳ ವಿವರಗಳನ್ನು ಏಕೆ ಸಂಗ್ರಹಿಸಿಲ್ಲ ? ಆತ ಮಾದಕ ದ್ರವ್ಯ ಸೇವಿಸಿದ್ದನೇ ? ಕೆಎಫ್​ಡಿ, ಪಿಎಫ್​ಐನಂತಹ ಸಮಾಜ ವಿರೋಧಿ ಸಂಘಟನೆಗಳೊಂದಿಗೆ ಆತನಿಗೆ ಸಂಪರ್ಕ ಇತ್ತೇ ? ಎಂಬೆಲ್ಲ ಮಾಹಿತಿಯನ್ನು ಸಂಗ್ರಹಿಸಬೇಕಿತ್ತು ಎಂದು ಹೇಳಿದರು.

    ವಿದ್ಯಾರ್ಥಿನಿ ನೇಹಾ ಹತ್ಯೆ ಖಂಡಿಸಿ ಅಮೆರಿಕ, ಲಂಡನ್​ನಲ್ಲಿಯೂ ಪ್ರತಿಭಟನೆಗಳು ನಡೆಯುತ್ತಿವೆ. ಈ ಪ್ರಕರಣದಲ್ಲಿ ಆರೋಪಿ ಬಚಾವ್ ಆಗಲು ಪೊಲೀಸ್ ಇಲಾಖೆ ಹಾಗೂ ಸರ್ಕಾರವೇ ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪಿಸಿದರು.

    ಈ ಕೊಲೆಯ ಹಿಂದೆ ಯಾರು ಇದ್ದಾರೆ ? ಕೊಲೆಗೆ ಬಳಸಿದ ಆಯುಧ ಎಲ್ಲಿಂದ ಖರೀದಿ ಮಾಡಲಾಗಿದೆ ಎಂಬ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಬೇಕಿತ್ತು. ಆರೋಪಿಯ ಇಡಿ ಕುಟುಂಬದ 20 ವರ್ಷಗಳ ಹಿನ್ನೆಲೆ ಏನು ? ಅವರಿಗೆ ಯಾರೊಂದಿಗೆ ಸಂಬಂಧ ಇದೆ ಎಂಬ ಮಾಹಿತಿ ಸಂಗ್ರಹ ಮಾಡಬೇಕಿತ್ತು ಎಂದರು.

    ಇದೊಂದು ವಿಶೇಷ ಪ್ರಕರಣವಾಗಿದ್ದರೂ ಲವ್ ಜಿಹಾದ್ ಎಂದರೆ ತಮ್ಮ ಸರ್ಕಾರಕ್ಕೆ ಅಂಟಿಕೊಳ್ಳಬಹುದಾದ ಕೆಟ್ಟ ಹೆಸರುತಪ್ಪಿಸಲು ಕಾಂಗ್ರೆಸ್ ಸರ್ಕಾರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಮಾಡಿಲ್ಲ ಹಾಗೂ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆದಿಲ್ಲ ಎಂದು ಆರೋಪಿಸಿದರು. ನೊಂದ ಕುಟುಂಬ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿದರೆ ಸರ್ಕಾರ ಸಿಬಿಐಗೆ ವಹಿಸಬೇಕಿತ್ತು. ಕುಟುಂಬದವರು ಸಿಐಡಿಗೆ ಅಥವಾ ಎಸ್​ಐಟಿಗೆ ತನಿಖೆ ಜವಾಬ್ದಾರಿ ಕೊಡಿ ಎಂದರೂ ಕೊಡಬೇಕಿತ್ತು. ಇದು ಸಾಮಾನ್ಯ ಜ್ಞಾನ ಎಂದು ತಿಳಿಸಿದರು.

    ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ಮಹೇಶ ಟೆಂಗಿನಕಾಯಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts