More

    ಅನಧಿಕೃತ ಜಾಗಗಳ ಸರ್ವೇಗೆ ಮುಂದಾದ ಅಧಿಕಾರಿಗಳು

    ಕೊಲ್ಹಾರ: ಕೊಲ್ಹಾರ ಪಟ್ಟಣದಲ್ಲಿ ಪುನರ್ವಸತಿ ಅಧಿಕಾರಿಗಳ ಕಚೇರಿಗೆ ಆಲಮಟ್ಟಿಯಿಂದ ಹಂಚಿಕೆಯಾದ ನಿವೇಶನಗಳನ್ನು ಖುದ್ದಾಗಿ ತಪಾಸಿಸಲು ವಿಜಯಪುರ ಜಿಲ್ಲಾಧಿಕಾರಿಗಳ ಹಾಗೂ ಬಾಗಲಕೋಟೆಯ ಮಹಾ ವ್ಯವಸ್ಥಾಪಕರ ಕಚೇರಿ ಆದೇಶದ ಮೇರೆಗೆ ಉನ್ನತ ಅಧಿಕಾರಿಗಳ ತಂಡವು ಕೊಲ್ಹಾರ ಪಟ್ಟಣಕ್ಕೆ ಮಂಗಳವಾರ ಆಗಮಿಸಿ ಸರ್ವೇ ಕಾರ್ಯ ಕೈಗೊಂಡಿದೆ.

    ಬಸವನಬಾಗೇವಾಡಿ ಮತಕ್ಷೇತ್ರದ ಶಾಸಕ ಶಿವಾನಂದ ಪಾಟೀಲರ ಪತ್ರವನ್ನು ಉಲ್ಲೇಖಿಸಿ ಕೊಲ್ಹಾರ ಪುನರ್ವಸತಿ ಕೇಂದ್ರದಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಹಾಗೂ ಉದ್ಯಾನಗಳನ್ನು ನಿರ್ಮಿಸುವುದಕ್ಕಾಗಿ ಖುಲ್ಲಾ ಜಾಗಗಳನ್ನು ಮೀಸಲಿಡಲಾಗಿತ್ತು. ಆ ನಿವೇಶನಗಳನ್ನು ಅವುಗಳ ಉದ್ದೇಶ ಬದಲಾಯಿಸಿ ವಾಣಿಜ್ಯ ಮತ್ತು ವಸತಿ ನಿವೇಶನಗಳನ್ನಾಗಿ ಪರಿವರ್ತಿಸಿ ಬೇರೆ ಬೇರೆ ಖಾಸಗಿ ವ್ಯಕ್ತಿಗಳಿಗೆ ಅನಧಿಕೃತವಾಗಿ ಹಂಚಿಕೆ ಮಾಡಿರುವುದಾಗಿ ತಿಳಿಸಿದ್ದಾರೆ. ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟ ಜಾಗಗಳ ಉದ್ದೇಶ ಬದಲಾಯಿಸಿ ನಿವೇಶನಗಳನ್ನಾಗಿ ಪರಿವರ್ತಿಸಿ ಕಾನೂನುಬಾಹಿರವಾಗಿ ಹಕ್ಕುಪತ್ರ ವಿತರಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಶಾಸಕರು ಸೂಚಿಸಿದ ಪ್ರಕಾರ ಬಾಗಲಕೋಟೆ ಮಹಾ ವ್ಯವಸ್ಥಾಪಕರು ಪುನರ್ವಸತಿ ಮತ್ತು ಪುನರ್‌ನಿರ್ಮಾಣ ಇಲಾಖೆಯಿಂದ ತನಿಖಾ ತಂಡವು ಭೌತಿಕವಾಗಿ ತಪಾಸಣೆ ಕಾರ್ಯಕ್ಕೆ ಚಾಲನೆ ನೀಡಿದ್ದು, 15 ರಿಂದ 20 ದಿನ ಸರ್ವೇಯರ ಮೂಲಕ ಮೂಲ ನಕ್ಷೆ ಆಧಾರವಾಗಿ ಸರ್ವೇ ಕಾರ್ಯ ಮಾಡಲಾಗುವುದು ಎಂದು ತಪಾಸಣೆ ತಂಡದ ಮುಖ್ಯಸ್ಥರಾದ ಸೋಮಲಿಂಗ ಗೆಣ್ಣೂರ ಸುದ್ದಿಗಾರರಿಗೆ ತಿಳಿಸಿದರು.

    ಕೊಲ್ಹಾರ ಪುನರ್ವಸತಿ ಕೇಂದ್ರದಲ್ಲಿ ಹಲವಾರು ವರ್ಷಗಳಿಂದ ಸಾರ್ವಜನಿಕ ಉಪಯೋಗಕ್ಕಾಗಿ ಮೀಸಲಿಟ್ಟ ಜಾಗಗಳು ಖಾಸಗಿ ವ್ಯಕ್ತಿಗಳ ಪಾಲಾಗಿ ಅನಧಿಕೃತ ಕಟ್ಟಡಗಳು, ಶೆಡ್‌ಗಳು ಕಾನೂನು ಬಾಹಿರವಾಗಿ ನಿರ್ಮಾಣವಾಗುತ್ತಿವೆ. ಮೂಲ ಸಂತ್ರಸ್ತರ ಅವಲಂಬಿತ ಕುಟುಂಬಗಳಿಗೆ ನಿವೇಶನಗಳು ದೊರೆಯದೆ ಹಲವಾರು ಸಂತ್ರಸ್ತರು ಪುನರ್ವಸತಿ ಇಲಾಖೆ ಕಚೇರಿಗಳಿಗೆ ಅಲೆದಾಡಿ ಸುಸ್ತಾಗಿದ್ದಾರಲ್ಲದೆ, ಒಬ್ಬೊಬ್ಬ ವ್ಯಕ್ತಿಗೆ ಹಲವಾರು ನಿವೇಶನಗಳನ್ನು ಹಂಚಿಕೆ ಮಾಡಿರುವುದನ್ನು ಕೊಲ್ಹಾರದ ಜನತೆ ಜಿಲ್ಲಾಧಿಕಾರಿಗಳಿಗೆ, ಆಯುಕ್ತರ ಹಾಗೂ ಮಹಾ ವ್ಯವಸ್ಥಾಪಕರ ಕಚೇರಿಗೆ ಹಲವು ಬಾರಿ ದೂರು ಸಲ್ಲಿಸಿದರ ಪ್ರಯುಕ್ತ ತನಿಖಾ ತಂಡ ಆಗಮಿಸಿರುವುದು ಸಂತಸದ ವಿಷಯ. ಅಧಿಕಾರಿಗಳು ಯಾರ ಮುಲಾಜಿಗೂ ಒಳಗಾಗದೆ ನ್ಯಾಯ ದೊರಕಿಸಲು ಪ್ರಯತ್ನಿಸಬೇಕೆಂದು ಹೆಸರು ಹೇಳಲು ಇಚ್ಛಿಸಿದ ಸಾರ್ವಜನಿಕರು ಸುದ್ದಿಗಾರರೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

    ಆಲಮಟ್ಟಿ ಪುನರ್ವಸತಿ ಕೇಂದ್ರದಲ್ಲಿರುವ ಕೊಲ್ಹಾರ ಪಟ್ಟಣದ ಮೂಲ ರಜಿಸ್ಟರ್‌ಗಳ ಝರಾಕ್ಸ್ ದಾಖಲೆಗಳನ್ನು ಎರಡು ವರ್ಷಗಳ ಹಿಂದೆ ಪುನರ್ವಸತಿ ಅಧಿಕಾರಿಗಳಾಗಿದ್ದ ಮಲ್ಲಿಕಾರ್ಜುನ ನೇತೃತ್ವದಲ್ಲಿ ಅಧಿಕೃತವಾಗಿ ಹಸ್ತಾಂತರವಾಗಿದ್ದು, ಅದರಂತೆ ಉತಾರೆ ವಿತರಣೆ ಕೂಡ ನಡೆದಿತ್ತು. ತದನಂತರ ಬಂದ ಆಲಮಟ್ಟಿಯ ಪುನರ್ವಸತಿ ಹಿಂದಿನ ವಿಷಯ ನಿರ್ವಾಹಕ ರಾಜಕುಮಾರ ಸಾವಳಗಿ ಮಧ್ಯವರ್ತಿಗಳಿಗೆ ಬೇಕಾಬಿಟ್ಟಿಯಾಗಿ ಮೂಲ ರಜಿಸ್ಟರ್‌ಗಳನ್ನು ನೀಡಿ ತಿದ್ದುಪಡಿ ಮಾಡುವ ಮೂಲಕ ಅನೇಕ ಎಡೆಮಾಡಿದ್ದಾರೆ.

    ತಪಾಸಣೆ ತಂಡ

    ವಿಶೇಷ ಜಿಲ್ಲಾಧಿಕಾರಿಗಳ ಸಮೂಹ ವ್ಯವಸ್ಥಾಪಕರು, ಭೂಸ್ವಾಧೀನ ಅಧಿಕಾರಿ ಸೋಮಲಿಂಗ ಗೆಣ್ಣೂರ ನೇತೃತ್ವದ ಇಸ್ಮಾಯಿಲ್ ಶಿರಹಟ್ಟಿ, ಶಿವಾನಂದ ಸಾಗರ, ಎಂ.ಎನ್.ಚೋರಗಸ್ತಿ, ಎಸ್.ಟಿ.ಬಬಲೇಶ್ವರ ಅವರನ್ನು ಒಳಗೊಂಡ ತಪಾಸಣೆ ತಂಡವು ಕೊಲ್ಹಾರ ಪಟ್ಟಣಕ್ಕೆ ಆಗಮಸಿದೆ. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರವಿ ಶಿರಗುಪ್ಪಿ ಹಾಗೂ ಸ್ಥಳೀಯ ಆಡಳಿತ ಸಿಬ್ಬಂದಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts