More

    ವಿಚಾರಣೆಗೆ ಹಾಜರಾಗಲು ನೋಟಿಸ್

    ಮಂಗಳೂರು: ನಗರ ಅಪರಾಧ ಪತ್ತೆದಳ (ಸಿಸಿಬಿ) ಪೊಲೀಸರ ವಿರುದ್ಧ ದಾಖಲಾದ ಐಷಾರಾಮಿ ಕಾರು ಮಾರಾಟ ಆರೋಪ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ತಂಡದ ಇನ್‌ಸ್ಪೆಕ್ಟರ್, ಸಿಬ್ಬಂದಿ ನೇತೃತ್ವದ ಮೂವರ ತಂಡ ಮಂಗಳೂರಿಗೆ ಆಗಮಿಸಿ ವಿಚಾರಣೆಗಾಗಿ ಬೆಂಗಳೂರು ಸಿಐಡಿ ಕಚೇರಿಗೆ ಹಾಜರಾಗುವಂತೆ ಆರೋಪಿಗಳಾದ ನಾಲ್ವರು ಪೊಲೀಸರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

    ಕಾರು ಮಾರಾಟ ಪ್ರಕರಣ ತನಿಖೆಗೆ ಡಿಸಿಪಿ ವಿನಯ್ ಗಾಂವ್ಕರ್ ನೀಡಿದ ವರದಿ ಆಧಾರದಲ್ಲಿ ಸಿಐಡಿ ತಂಡ ನಗರಕ್ಕೆ ಆಗಮಿಸಿ ಪ್ರಕರಣಕ್ಕೆ ಸಂಬಂಧಿಸಿ ಪೂರಕ ಮಾಹಿತಿ ಕಲೆ ಹಾಕಿದೆ. ತನಿಖೆಯ ಮುಂದುವರಿದ ಭಾಗವಾಗಿ ಮುಂದಿನ ವಾರ ಪ್ರಕರಣದ ತನಿಖಾಧಿಕಾರಿ ಸಿಐಡಿ ಎಸ್ಪಿ ರೋಹಿಣಿ ಕಟ್ಟೋಚ್ ನೇತೃತ್ವದ ತಂಡ ಮಂಗಳೂರಿಗೆ ಆಗಮಿಸಿ ತನಿಖೆ ಮುಂದುವರಿಸಲಿದೆ. ಬಳಿಕ ತನಿಖಾಧಿಕಾರಿ ಸಮಗ್ರ ವರದಿಯನ್ನು ಸಿಐಡಿ ಡಿಜಿಗೆ ಸಲ್ಲಿಸಲಿದ್ದು, ರಾಜ್ಯ ಡಿಜಿಪಿ ಪ್ರವೀಣ್ ಸೂದ್‌ಗೆ ಸಲ್ಲಿಕೆಯಾಗಲಿದೆ. ಈ ತನಿಖೆ ಆಧಾರದ ಮೇಲೆ ಕಳಂಕಿತರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

    ಈ ಪ್ರಕರಣದಲ್ಲಿ ಅಂದಿನ ಸಿಸಿಬಿ ಎಸ್‌ಐ ಕಬ್ಬ್ಬಾಳ್‌ರಾಜ್, ನಾರ್ಕೊಟಿಕ್ ಇನ್‌ಸ್ಪೆಕ್ಟರ್ ರಾಮಕೃಷ್ಣ, ಸಿಸಿಬಿ ನೌಕರ ಅಶೀತ್ ಡಿಸೋಜ, ರಾಜಾ ಹಾಗೂ ಪೊಲೀಸ್ ಬ್ರೋಕರ್ ದಿವ್ಯದರ್ಶನ್ ಹೆಸರನ್ನು ವಿಚಾರಣಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ನಾಪತ್ತೆಯಾದ 50 ಲಕ್ಷ ರೂ.ಮೌಲ್ಯದ ಐಷಾರಾಮಿ ಜಾಗ್ವಾರ್ ಕಾರು ಬೆಂಗಳೂರಿನಲ್ಲಿ ಉದ್ಯಮಿಯೊಬ್ಬರ ವಶದಲ್ಲಿದೆ ಎಂಬುದನ್ನು ವರದಿಯಲ್ಲಿ ಹೆಸರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಏನು ಆಗದು ಎಂದ ಕಳಂಕಿತರು!: ಕಾರು ಮಾರಾಟ ಪ್ರಕರಣ ಸಿಐಡಿ ತನಿಖೆಗೆ ಆದೇಶ ಮಾಡುತ್ತಿದ್ದಂತೆ ಕಳೆದ 2 ವರ್ಷಗಳಲ್ಲಿ ಸಿಸಿಬಿ ಪೊಲೀಸರ ಜತೆ ಹಣದ ಡೀಲ್ ನಡೆಸಿದವರಿಗೆ ನಡುಕ ಶುರುವಾಗಿದೆ. ಇಂತಹ ಕುಳಗಳಿಗೆ ಸ್ವತಃ ಕಳಂಕಿತ ಅಧಿಕಾರಿಯೇ ಕರೆ ಮಾಡಿ ‘ನೀವೇನು ಟೆನ್ಶನ್ ಮಾಡಬೇಡಿ, ಈ ಕೇಸ್ ಖಂಡಿತಾ ಬಿದ್ದು ಹೋಗುತ್ತದೆ. ಸಿಐಡಿ ತನಿಖೆಗೆ ಕೈಗೆತ್ತಿಕೊಂಡಾಕ್ಷಣ ಭಯಪಡಬೇಡಿ’ ಎಂದು ವಾಟ್ಸಪ್ ಕರೆ ಮಾಡಿ ಧೈರ್ಯದ ಮಾತು ಹೇಳಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ.

    ಏನಿದು ಕಾರು ಮಾರಾಟ ಪ್ರಕರಣ?: ಜನರಿಗೆ ಹಣ ದ್ವಿಗುಣ ಮಾಡಿಕೊಡುವ ಆಮಿಷವೊಡ್ಡಿ 30 ಕೋಟಿ ರೂ.ವಂಚಿಸಿದ್ದ ಎಲಿಯ ಕನ್‌ಸ್ಟ್ರಕ್ಷನ್ ಆ್ಯಂಡ್ ಬಿಲ್ಡರ್ ಪ್ರೈ.ಲಿ ಸಂಸ್ಥೆ ವಿರುದ್ಧ ಕೇಸ್ ದಾಖಲಾಗಿತ್ತು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಸಿಸಿಬಿ ಪೊಲೀಸರು, ವಂಚನೆ ಪ್ರಕರಣದಲ್ಲಿ ಬಂಧಿತರಾಗಿದ್ದ ಮೂವರು ಆರೋಪಿಗಳಿಂದ ಜಾಗ್ವಾರ್, ಬಿಎಂಡಬ್ಲ್ಯು, ಪೋರ್ಷೆ ಸೇರಿ ಮೂರು ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದಿದ್ದರು. ಜಾಗ್ವಾರ್ ಕಾರನ್ನು ಮಂಗಳೂರಿನ ಸಿಸಿಬಿ ಅಧಿಕಾರಿಗಳು ಮಾರಾಟ ಮಾಡಿದ್ದಾರೆ ಎಂಬುದು ಆರೋಪ. ಪೋರ್ಷೆ ಹಾಗೂ ಬಿಎಂಡಬ್ಲ್ಯು ಕಾರನ್ನು ಸ್ವಂತಕ್ಕೆ ಬಳಸಿಕೊಂಡಿರುವುದನ್ನು ವಿಚಾರಣಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts