More

    ಕಾರ್ಡ್ ಇದ್ದೋರೆಲ್ಲ ಕಾರ್ಮಿಕರಲ್ಲ: ಅಸಂಘಟಿತ ವಲಯದಲ್ಲಿ ಅಕ್ರಮ; ಅನರ್ಹರಿಗೂ ಸರ್ಕಾರಿ ಸೌಲಭ್ಯ

    | ಅರವಿಂದ ಅಕ್ಲಾಪುರ / ಕೇಶವಮೂರ್ತಿ ವಿ.ಬಿ. ಶಿವಮೊಗ್ಗ/ಹಾವೇರಿ

    ಅಸಂಘಟಿತರಾಗಿರುವ ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿರುವವರಿಗೆ ಅನುಕೂಲವಾಗಲಿ ಎಂದು ಸರ್ಕಾರ ಕಾರ್ವಿುಕ ಕಾರ್ಡ್ ವಿತರಿಸುತ್ತದೆ. ಆದರೆ ಇಲ್ಲಿ ಸಂಘಟಿತ ಅಕ್ರಮ ನಡೆದಿದೆ. ಜೀವನದಲ್ಲಿ ಎಂದೂ ಮರಳು, ಸಿಮೆಂಟ್ ಮುಟ್ಟದವರ ಬಳಿಯೂ ಕಾರ್ವಿುಕ ಕಾರ್ಡ್ ಇವೆ.

    ಕುವೆಂಪು ವಿವಿಯಲ್ಲಿ ರ್ಯಾಂಕ್ ಪಡೆದವರು, ಕೃಷಿ ಜಮೀನು ಹೊಂದಿದ ಸಣ್ಣ ಹಿಡುವಳಿದಾರರು, ಪದವೀಧರರ ಬಳಿಯೂ ಕಾರ್ವಿುಕ ಕಾರ್ಡ್ ಇದೆ. ಹೀಗೆ ಅನರ್ಹರಿಗೂ ಕಾರ್ವಿುಕ ಮಂಡಳಿ ಸವಲತ್ತು ದೊರೆಯುತ್ತಿರುವುದರಿಂದ ರಾಜ್ಯದಲ್ಲಿ ಕಾರ್ವಿುಕ ಕಾರ್ಡ್ ಹೊಂದಿದವರ ಸಂಖ್ಯೆ 31 ಲಕ್ಷಕ್ಕೆ ಏರಿಕೆಯಾಗಿದೆ. ಕಳೆದ ಎರಡು ಮೂರು ವರ್ಷಗಳಲ್ಲಿ ಕಾರ್ವಿುಕ ಕಾರ್ಡ್ ಪಡೆಯುವವರ ಸಂಖ್ಯೆ ದಿಢೀರ್ ಹೆಚ್ಚಾಗಿರುವುದು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ವಿುಕರ ಕಲ್ಯಾಣ ಮಂಡಳಿಗೆ ಸವಾಲಾಗಿದೆ. ತಡವಾಗಿ ಎಚ್ಚೆತ್ತುಕೊಂಡಿರುವ ಮಂಡಳಿ ಅನರ್ಹ ಕಾರ್ಡ್​ಗಳ ಪತ್ತೆಗೆ ಮುಂದಾಗಿದೆ. ಜ.25ರಿಂದ ಅಕ್ರಮ ಕಾರ್ಡ್ ರದ್ದತಿಗೆ ಅಭಿಯಾನ ಆರಂಭಿಸಿರುವ ಮಂಡಳಿ ಇದನ್ನು ಫೆ.25ರವರೆಗೂ ಮುಂದುವರಿಸಲು ತೀರ್ವನಿಸಿದೆ. ಆದರೆ, ಅಕ್ರಮ ಎಸಗಿದವರನ್ನು ಪತ್ತೆ ಮಾಡುವುದು ಅಷ್ಟು ಸಲೀಸಲ್ಲ. ಇದುವರೆಗೆ ಎಷ್ಟು ಅಕ್ರಮ ಕಾರ್ಡ್​ಗಳ ಪತ್ತೆಯಾಗಿದೆ ಎಂಬ ಮಾಹಿತಿಯೂ ಮಂಡಳಿ ಅಧಿಕಾರಿಗಳ ಬಳಿಯಿಲ್ಲ. ಕಾರ್ವಿುಕ ಮಂಡಳಿಯ ಸವಲತ್ತುಗಳು ಈಗಾಗಲೇ ಅನೇಕ ಅನರ್ಹರ ಪಾಲಾಗಿದೆ.

    ಸ್ಥಳ ಪರಿಶೀಲನೆಯಿಲ್ಲ: ಅರ್ಜಿ ಸಲ್ಲಿಸಿದವರ ದಾಖಲೆಗಳ ಆಧಾರದಲ್ಲೇ ಅವರಿಗೆ ಕಾರ್ಡ್ ನೀಡಲಾಗುತ್ತದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕೆಂಬ ನಿಯಮವಿಲ್ಲ. ಹೀಗಾಗಿ ಅರ್ಜಿಯಲ್ಲಿ ತುಂಬಿರುವ ಅಂಶಗಳು, ಆಧಾರ್ ಕಾರ್ಡ್ ಪರಿಗಣಿಸಿ ಕಾರ್ವಿುಕ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಅನರ್ಹರಿಗೆ ಸೌಲಭ್ಯ ಸಿಗಲು ಇದು ಮುಖ್ಯ ಕಾರಣ.

    ನಕಲಿ ದಾಖಲೆ ಸೃಷ್ಟಿಸಿ ಕಟ್ಟಡ ಕಾರ್ವಿುಕರಿಗೆ ನೀಡುವ ಕಾರ್ಡಗಳನ್ನು ಪಡೆದಿರುವ ಕುರಿತು ಗೊತ್ತಾಗಿದೆ. ಇವುಗಳ ಪತ್ತೆಗಾಗಿ ಫೆ. 25ರವರೆಗೆ ಬೃಹತ್ ಆಂದೋಲನ ನಡೆಸಲಾಗುತ್ತಿದೆ.

    | ಶಿವರಾಮ ಹೆಬ್ಬಾರ ಕಾರ್ವಿುಕ ಸಚಿವ

    ಕರೊನಾ ಮೊದಲ ಅಲೆಯಲ್ಲಿ ಮಂಡಳಿಯಿಂದ ದಿನಸಿ ಕಿಟ್, ಆರ್ಥಿಕ ನೆರವು ನೀಡಿದ ಬಳಿಕ ಹೆಚ್ಚಿನ ಸವಲತ್ತು ದೊರೆಯುತ್ತದೆ ಎಂಬ ಕಾರಣಕ್ಕೆ ಎರಡನೇ ಅಲೆ ವೇಳೆ ಅನೇಕರು ಕಾರ್ವಿುಕ ಕಾರ್ಡ್ ಪಡೆದರು. ಇವರಲ್ಲಿ ಅನರ್ಹರೂ ನುಸುಳಿಕೊಂಡಿದ್ದಾರೆ. ಅವರ ಪತ್ತೆ ಅಷ್ಟು ಸುಲಭವಲ್ಲ ಎಂಬುದು ನಮ್ಮ ಅನುಭವಕ್ಕೂ ಬಂದಿದೆ ಎನ್ನುತ್ತಾರೆ, ಹೆಸರು ಹೇಳಲಿಚ್ಛಿಸದ ಕಾರ್ವಿುಕ ಕಲ್ಯಾಣ ಮಂಡಳಿ ಅಧಿಕಾರಿ.

    ಕೋಟ್ಯಂತರ ರೂ. ಸಂಗ್ರಹ: ಕಟ್ಟಡ ಕಾರ್ವಿುಕರ ಅಭಿವೃದ್ಧಿಗಾಗಿ ಸರ್ಕಾರದಿಂದ ಶೇ. 1 ಉಪಕರ (ಸೆಸ್) ಸಂಗ್ರಹಿಸಲಾಗುತ್ತಿದೆ. ಖಾಸಗಿಯವರ 10 ಲಕ್ಷ ರೂ. ಮೇಲ್ಪಟ್ಟ ಪ್ರತಿಯೊಂದು ಕಟ್ಟಡ ನಿರ್ಮಾಣ ಕಾಮಗಾರಿಯಿಂದ ಹಾಗೂ ಸರ್ಕಾರದ ಎಲ್ಲ ಕಾಮಗಾರಿಯಿಂದ ಶೇ.1 ಸೆಸ್ ಪಡೆಯಲಾಗುತ್ತಿದೆ. ಈ ಹಣದಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ವಿುಕರ ಕಲ್ಯಾಣ ಮಂಡಳಿ ಬೊಕ್ಕಸದಲ್ಲಿ ಸಾವಿರಾರು ಕೋಟಿ ರೂಪಾಯಿ ಸಂಗ್ರಹವಾಗಿದೆ. ಈ ಹಣದಿಂದಲೇ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.

    ಸಡಿಲ ನಿಯಮಾವಳಿ ಕಾರಣ: ಅಕ್ರಮ ಕಾರ್ಡ್ ವಿತರಣೆಯಲ್ಲಿ ಅಧಿಕಾರಿಗಳ ಪಾತ್ರವೇನಿಲ್ಲ. ಇದಕ್ಕೆ ಕಾರಣವಾಗಿರುವುದು ಸರ್ಕಾರದ ಸಡಿಲ ನಿಯಮಾವಳಿಗಳು. ಕಳೆದ ಒಂದು ವರ್ಷದಲ್ಲಿ ಕನಿಷ್ಠ 90 ದಿನ ಯಾವುದಾದರೂ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದರೆ ಅಂಥವರು ಕಾರ್ವಿುಕ ಕಾರ್ಡ್​ಗೆ ಅರ್ಜಿ ಸಲ್ಲಿಸಬಹುದು. 18 ರಿಂದ 60 ವರ್ಷದವರು ಕಾರ್ವಿುಕ ಕಾರ್ಡ್ ಪಡೆಯಲು ಅರ್ಹರು. ಕೆಲ ಮನೆಗಳಲ್ಲಿ ಒಬ್ಬಿಬ್ಬರು ಮಾತ್ರ ಕಟ್ಟಡ ನಿರ್ವಣದಲ್ಲಿ ಕಾರ್ವಿುಕರಾಗಿರುತ್ತಾರೆ. ಆದರೆ, ಇಡೀ ಕುಟುಂಬದ ಸದಸ್ಯರ ಬಳಿ ಕಾರ್ವಿುಕ ಕಾರ್ಡ್​ಗಳಿವೆ.

    ಹಾವೇರಿ ಜಿಲ್ಲೆಯಲ್ಲಿ ಹೆಚ್ಚು ಅನಧಿಕೃತ ಕಾರ್ಡ್?: ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ ಉಸ್ತುವಾರಿ ಹೊಂದಿರುವ ಹಾವೇರಿ ಜಿಲ್ಲೆಯಲ್ಲಿ ಎರಡೂವರೆ ಲಕ್ಷ ಕಟ್ಟಡ ಕಾರ್ವಿುಕರ ಕಾರ್ಡಗಳು ಚಾಲ್ತಿಯಲ್ಲಿವೆ. ಇದರಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಅಕ್ರಮ ಕಾರ್ಡಗಳಿವೆ ಎಂದು ಮೂಲಗಳು ತಿಳಿಸಿವೆ.

    ಸವಲತ್ತು ಮರಳಿಸಲು ನೋಟಿಸ್!: ಈಗ ಅನರ್ಹರ ಪತ್ತೆಗೆ ಮುಂದಾಗಿರುವ ಕಾರ್ವಿುಕ ಇಲಾಖೆ ಅಂತಹ ಕಾರ್ಡ್​ಗಳಿದ್ದರೆ ಇಲಾಖೆಗೆ ಮರಳಿಸುವಂತೆ ಸಾರ್ವಜನಿಕ ಸ್ಥಳದಲ್ಲಿ ಅರಿವು ಮೂಡಿಸುತ್ತಿದೆ. ಅನರ್ಹರು ಕಾರ್ವಿುಕ ಕಾಡ್​ನಿಂದ ಹೆಚ್ಚಿನ ಸವಲತ್ತು ಪಡೆದಿದ್ದರೆ ಅದನ್ನು ಮರಳಿಸುವಂತೆ ತಿಳಿಸುತ್ತಿದೆ. ಆದರೆ, ಈ ಪ್ರಯತ್ನ ಎಷ್ಟರ ಮಟ್ಟಿಗೆ ಕೈಗೂಡಲಿದೆ ಎಂಬುದೇ ಪ್ರಶ್ನೆ.

    ಪಕ್ಷ ಸಂಘಟನೆಗೆ ಬಳಕೆ!: ಕರೊನಾ ಒಂದನೇ ಅಲೆ ವೇಳೆ ಕಾರ್ವಿುಕ ಕಲ್ಯಾಣ ಮಂಡಳಿಯಿಂದ ನೀಡಿದ ಸೌಲಭ್ಯ ಗಮನಿಸಿದ ರಾಜಕೀಯ ಪಕ್ಷಗಳು 2ನೇ ಅಲೆ ಹೊತ್ತಿಗೆ ಪಕ್ಷದ ಬೆಂಬಲಿಗರು, ಮತದಾರರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ವಿುಕ ಕಾರ್ಡ್ ಕೊಡಿಸಿದರು. ಕೆಲ ಸಂಘಟನೆಗಳು ಪ್ರತಿಷ್ಠೆಗಾಗಿ ಒಂದಿಷ್ಟು ಹೆಸರು ಸೇರುವಂತೆ ನೋಡಿಕೊಂಡರು. ಪ್ರಮುಖ ಪಕ್ಷಗಳಲ್ಲಿ ಪ್ರತ್ಯೇಕವಾಗಿ ಕಾರ್ವಿುಕ ವಿಭಾಗವೂ ಇದೆ. ಅದರ ಮೂಲಕ ಕಾರ್ವಿುಕ ಕಾರ್ಡ್ ಪಕ್ಷ ಸಂಘಟನೆಗೂ ಬಳಕೆಯಾಗುತ್ತಿರುವುದು ವಿಪರ್ಯಾಸ.

    ಕಾರ್ಡ್ ಹೊಂದಿದವರಿಗೆ ಸೌಲಭ್ಯಗಳೇನು?

    • 3 ವರ್ಷ ಸದಸ್ಯರಾಗಿದ್ದವರು 60 ವರ್ಷ ಪೂರೈಸಿದಲ್ಲಿ ಮಾಸಿಕ 2,000 ರೂ. ಪಿಂಚಣಿ
    • ಕಾರ್ವಿುಕ ಮೃತನಾದರೆ ಅವರ ನಾಮಿನಿಗೆ ಪಿಂಚಣಿ ಸೌಲಭ್ಯ
    • 5 ಲಕ್ಷ ರೂ.ವರೆಗೆ ಅಪಘಾತ ಪರಿಹಾರ
    • ಸಾಮಗ್ರಿ ಕಿಟ್, ಮಕ್ಕಳ ಮದುವೆಗೆ ಸಹಾಯ
    • ವಸತಿ ನಿರ್ವಣಕ್ಕೆ 2 ಲಕ್ಷ ರೂ. ಮುಂಗಡ
    • ತಾಯಿ ಲಕ್ಷ್ಮೀ ಬಾಂಡ್, ಅಂತ್ಯಕ್ರಿಯೆಗೆ ನೆರವು
    • ಕಾರ್ವಿುಕರ ಮಕ್ಕಳಿಗೆ ಎಲ್​ಕೆಜಿಯಿಂದ ಉನ್ನತ ವ್ಯಾಸಂಗದವರೆಗೆ ಸಹಾಯ
    • ಐಐಟಿ, ಐಐಎಂ ಮುಂತಾದ ಶಿಕ್ಷಣ ಪಡೆ ಯುವವರಿಗೆ ಪೂರ್ಣ ಬೋಧನಾ ಶುಲ್ಕ

    ಅತಿಯಾದ ಸ್ಮಾರ್ಟ್​ಫೋನ್ ಬಳಕೆಯಿಂದ ದೃಷ್ಟಿ ಕಳೆದುಕೊಂಡ ಮಹಿಳೆ; ಏನಿದು ಸ್ಮಾರ್ಟ್​ಫೋನ್​ ವಿಷನ್ ಸಿಂಡ್ರೋಮ್?

    ಭೀಕರ ಅಪಘಾತ: ಕೆಟ್ಟು ನಿಂತಿದ್ದ ಕ್ಯಾಂಟರ್​ಗೆ ಬುಲೆಟ್ ಡಿಕ್ಕಿ, ಯುವಕ-ಯುವತಿ ಸ್ಥಳದಲ್ಲೇ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts