More

    ದ.ಕ. ಹೊಸ ಪ್ರಕರಣ ಇಲ್ಲ

    ದ.ಕ. ಜಿಲ್ಲೆಯಲ್ಲಿ ಒಂದು ಕರೊನಾ ಸಾವು ಉಂಟಾದ ಮರುದಿನ ಸೋಮವಾರ ಯಾವುದೇ ಹೊಸ ಪ್ರಕರಣ ವರದಿಯಾಗಿಲ್ಲ. ಮನೆಗಳಲ್ಲಿ ಕ್ವಾರಂಟೈನ್ ಆದವರ ಸಂಖ್ಯೆಯೂ 47ಕ್ಕೆ ಇಳಿಕೆಯಾಗಿದೆ. 6026 ಮಂದಿ ತಮ್ಮ 28 ದಿನಗಳ ಕ್ವಾರಂಟೈನ್ ಪೂರ್ತಿಗೊಳಿಸಿದ್ದಾರೆ.

    ಸೋಮವಾರ 56 ಮಂದಿಯ ಸ್ಕ್ರೀನಿಂಗ್ ನಡೆಸಲಾಗಿದ್ದರೆ, ಇದುವರೆಗೆ ತಪಾಸಣೆಗೊಳಗಾದವರ ಸಂಖ್ಯೆ 39,182 ತಲುಪಿದೆ. ಪ್ರಸ್ತುತ ವೆನ್ಲಾಕ್‌ನಲ್ಲಿ ಯಾರೂ ಕ್ವಾರಂಟೈನ್‌ನಲ್ಲಿಲ್ಲ. ಎನ್‌ಐಟಿಕೆ ಸುರತ್ಕಲ್‌ನಲ್ಲಿ ಹೊಸದಾಗಿ 34 ಮಂದಿಯನ್ನು (ಬಂಟ್ವಾಳ ಪ್ರಕರಣ ಸಂಬಂಧಿಸಿ) ಕ್ವಾರಂಟೈನ್ ಮಾಡಲಾಗಿದೆ. ಇಎಸ್‌ಐ ಆಸ್ಪತ್ರೆಯಲ್ಲಿ ಪ್ರಸ್ತುತ 15 ಮಂದಿ ಇದ್ದಾರೆ. ಇದುವರೆಗೆ 1286 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದ್ದು, ಅದರಲ್ಲಿ 892ರ ವರದಿ ಬಂದಿದೆ. ಸೋಮವಾರ 255 ಸ್ಯಾಂಪಲ್ ಕಳುಹಿಸಿದ್ದು, ಸ್ವೀಕರಿಸಲಾದ ಎಲ್ಲ 25 ಸ್ಯಾಂಪಲ್‌ಗಳೂ ನೆಗೆಟಿವ್ ಆಗಿವೆ. ಇನ್ನೂ 394ರ ವರದಿ ಇನ್ನಷ್ಟೇ ಸಿಗಬೇಕಿದೆ.

    81 ಮಂದಿಯದು ನೆಗೆಟಿವ್
    ಉಡುಪಿ: ಜಿಲ್ಲಾಡಳಿತ ಸೋಮವಾರ ಸ್ವೀಕರಿಸಿದ ಎಲ್ಲ 81 ಶಂಕಿತ ಕರೊನಾ ಪ್ರಕರಣಗಳ ವರದಿ ನೆಗೆಟಿವ್ ಬಂದಿದೆ. ಉಸಿರಾಟದ ತೊಂದರೆ 3, ಇಲ್‌ನೆಸ್‌ಗೆ ಸಂಬಂಧಿಸಿ 4, ಕೊವಿಡ್-19 ಸೋಂಕಿತರ ಸಂಪರ್ಕಕ್ಕೆ ಒಳಗಾದ 3 ಮಂದಿ ಸೇರಿದಂತೆ ಒಟ್ಟು 10 ಮಂದಿಯ ಮಾದರಿಯನ್ನು ಸೋಮವಾರ ಸಂಗ್ರಹಿಸಲಾಗಿದ್ದು, 5 ಮಂದಿ ಐಸೊಲೇಶನ್ ವಾರ್ಡ್‌ಗೆ ದಾಖಲಾಗಿದ್ದಾರೆ. ಇನ್ನೂ 24 ಮಂದಿಯ ವರದಿ ಬರಲು ಬಾಕಿ ಇದೆ. ಸೋಮವಾರಕ್ಕೆ 16 ಮಂದಿ 28 ದಿನದ ಕ್ವಾರಂಟೈನ್ ಪೂರೈಸಿದ್ದಾರೆ. ಐಸೊಲೇಶನ್ ವಾರ್ಡ್‌ನಿಂದ 29 ಮಂದಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

    ಭಟ್ಕಳ ಗರ್ಭಿಣಿಯ ಕರೊನಾ ನೆಗೆಟಿವ್
    ಉಡುಪಿ: ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಭಟ್ಕಳದ 26 ವರ್ಷದ ಗರ್ಭಿಣಿಯ ಕರೊನಾ ಪರೀಕ್ಷೆ ವರದಿ ನೆಗೆಟಿವ್ ಬಂದಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಡಾ.ಟಿಎಂಎ ಪೈ ಕೊವಿಡ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ನಡೆಯುತ್ತಿದ್ದು, ಸದ್ಯ ಮಹಿಳೆ ಚೇತರಿಸಿಕೊಳ್ಳುತ್ತಿದ್ದಾರೆ. ಶನಿವಾರ ಪರೀಕ್ಷೆಗಾಗಿ ಮಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾದ ಇವರ ಗಂಟಲು ದ್ರವದ ಮೊದಲ ಮಾದರಿಯ ವರದಿ ಸೋಮವಾರ ನೆಗೆಟಿವ್ ಬಂದಿದೆ. ಮಹಿಳೆಯ ಎರಡನೇ ಮಾದರಿ ಪಡೆದು ಪರೀಕ್ಷೆಗಾಗಿ ಮಂಗಳೂರಿಗೆ ಕಳುಹಿಸಲಾಗಿದ್ದು, ಈ ವರದಿ ಮಂಗಳವಾರ ಬರುವ ನಿರೀಕ್ಷೆ ಇದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಕಾಸರಗೋಡಿನ 19 ಮಂದಿ ಗುಣಮುಖ
    ಕಾಸರಗೋಡು: ಕೇರಳದಲ್ಲಿ ಸೋಮವಾರ ಆರು ಮಂದಿಯಲ್ಲಿ ಕೊವಿಡ್-19 ವೈರಸ್ ಕಾಣಿಸಿಕೊಂಡಿದೆ. ಆರೂ ಮಂದಿ ಕಣ್ಣೂರು ಜಿಲ್ಲೆಯವರು. ರಾಜ್ಯದಲ್ಲಿ ಸೋಂಕು ಬಾಧಿಸಿದವರಲ್ಲಿ ಒಟ್ಟು 21ಮಂದಿ ಗುಣಮುಖರಾಗಿದ್ದಾರೆ. ಇವರಲ್ಲಿ 19 ಮಂದಿ ಕಾಸರಗೋಡು, ಇಬ್ಬರು ಆಲಪ್ಪುಳ ಜಿಲ್ಲೆಯವರು. ಸೋಮವಾರ ವೈರಸ್‌ನಿಂದ ಮುಕ್ತಿ ಪಡೆದ 19 ಮಂದಿಯಲ್ಲಿ 15 ಮಂದಿ ಕಾಸರಗೋಡು ಜನರಲ್ ಆಸ್ಪತ್ರೆ, ಇಬ್ಬರು ಪರಿಯಾರಂ ಮೆಡಿಕಲ್ ಕಾಲೇಜು ಹಾಗೂ ಇಬ್ಬರು ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದವರು. ಜಿಲ್ಲೆಯಲ್ಲಿ ಇದುವರೆಗೆ ಸೋಂಕು ಖಚಿತಗೊಂಡಿದ್ದವರಲ್ಲಿ 142 ಮಂದಿ ಗುಣಮುಖರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts